ವಿಡಿಯೊ ಆಧಾರಿತ ಕೋಚಿಂಗ್ ತಂತ್ರಜ್ಞಾನ: ಹೈಟೆಕ್ ಆಗುವ ಹಂತದಲ್ಲಿ ಕೆಎಸ್‌ಸಿಎ

7

ವಿಡಿಯೊ ಆಧಾರಿತ ಕೋಚಿಂಗ್ ತಂತ್ರಜ್ಞಾನ: ಹೈಟೆಕ್ ಆಗುವ ಹಂತದಲ್ಲಿ ಕೆಎಸ್‌ಸಿಎ

Published:
Updated:
ವಿಡಿಯೊ ಆಧಾರಿತ ಕೋಚಿಂಗ್ ತಂತ್ರಜ್ಞಾನ: ಹೈಟೆಕ್ ಆಗುವ ಹಂತದಲ್ಲಿ ಕೆಎಸ್‌ಸಿಎ

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು (ಕೆಎಸ್‌ಸಿಎ) ತನ್ನ ಅಕಾಡೆಮಿಯ ಕ್ರಿಕೆಟಿಗರಿಗೆ ಹೈಟೆಕ್ ತಂತ್ರಜ್ಞಾನ ಬಳಸಿ ಕೋಚಿಂಗ್ ನೀಡಲು ಮುಂದಾಗಿದೆ. ಇದಕ್ಕಾಗಿ ಬೆಲ್ಜಿಯಂನ `ಯುರೋಪಿಯನ್ ವಿಡಿಯೊ  ಸರ್ವೀಸ್~ (ಇವಿಎಸ್) ಕಂಪೆನಿ ರೂಪಿಸಿರುವ `ಕಾಗ್ನಿಟೀವ್ ವಿಡಿಯೊ ಬೇಸ್ಡ್ ಕೋಚಿಂಗ್~ (ಸಿವಿಬಿಸಿ) ತಂತ್ರಜ್ಞಾನದ ಮೊರೆ ಹೋಗಿದೆ.ತಂತ್ರಜ್ಞಾನ ಬಳಸಿ ವಿಡಿಯೊ ಆಧಾರಿತ ಕೋಚಿಂಗ್ ನೀಡಲು ಮುಂದಾಗಿರುವ ದೇಶದ ಮೊದಲ ಕ್ರಿಕೆಟ್ ಸಂಸ್ಥೆ ಎಂಬ ಹೆಗ್ಗಳಿಕೆಗೆ ಕೆಎಸ್‌ಸಿಎ ಪಾತ್ರವಾಗಿದೆ. ಈ ತಂತ್ರಜ್ಞಾನವನ್ನು ಕರ್ನಾಟಕ ಕ್ರಿಕೆಟ್ ಅಕಾಡೆಮಿ(ಕೆಸಿಎ)ಯಲ್ಲಿ ಅಳವಡಿಸಲಾಗಿದೆ. ಅದಕ್ಕಾಗಿ ಕೋಟ್ಯಂತರ ರೂಪಾಯಿ ವೆಚ್ಚದ ಸಿವಿಬಿಸಿ ಯಂತ್ರ ಖರೀದಿಸಿದೆ.

ಕ್ರೀಡೆಯಲ್ಲಿ ತಂತ್ರಜ್ಞಾನ ಅಳವಡಿಕೆಯಲ್ಲಿ ಆಸಕ್ತಿ ಹೊಂದಿರುವ ಕೆಎಸ್‌ಸಿಎ ಅಧ್ಯಕ್ಷ ಅನಿಲ್ ಕುಂಬ್ಳೆ ಹಾಗೂ ಕಾರ್ಯದರ್ಶಿ ಜಾವಗಲ್ ಶ್ರೀನಾಥ್ ಇದರ ರೂವಾರಿಗಳು. ಐಸಿಸಿ ಮ್ಯಾಚ್ ರೆಫರಿ ಕೂಡ ಆಗಿರುವ ಶ್ರೀನಾಥ್ ಆರೇಳು ತಿಂಗಳಿನಿಂದ ಈ ಬಗ್ಗೆ ಅಧ್ಯಯನ ನಡೆಸಿ ಈ ಹೈಟೆಕ್ ತಂತ್ರಜ್ಞಾನ ಅಳವಡಿಸಲು ಮುಂದಾಗಿದ್ದಾರೆ.ಅಕಾಡೆಮಿ ಅಧ್ಯಕ್ಷ ಜಿ.ಆರ್.ವಿಶ್ವನಾಥ್, ನಿರ್ದೇಶಕ ಸೈಯದ್ ಕಿರ್ಮಾನಿ, ಕೋಚ್‌ಗಳಾದ ಪಿ.ವಿ.ಶಶಿಕಾಂತ್ ಹಾಗೂ ಆರ್.ಅನಂತ್ ಉಸ್ತುವಾರಿಯಲ್ಲಿ ಈ ತಂತ್ರಜ್ಞಾನ ಅಳವಡಿಕೆ ಸದ್ಯದಲ್ಲೇ ಜಾರಿಗೆ ಬರಲಿದೆ.ನೆಟ್ಸ್‌ನಲ್ಲಿ ಅಭ್ಯಾಸ ಮಾಡುವಾಗ ಹೊಸ ಪದ್ಧತಿಯಲ್ಲಿ ದೊಡ್ಡ ಪರದೆಯ ವಿಡಿಯೊ ಅಳವಡಿಸಲಾಗುವುದು. ಅದರಲ್ಲಿ ಬೌಲಿಂಗ್ ಹಾಗೂ ಬ್ಯಾಟಿಂಗ್ ಅಭ್ಯಾಸ ನೇರ ಪ್ರಸಾರವಾಗುತ್ತಿರುತ್ತದೆ.ತಪ್ಪು ಏನು ಎಂಬುದು ತಕ್ಷಣವೇ ಗೊತ್ತಾಗಲಿದೆ. ಆಗ ಕೋಚ್‌ಗಳು ಅದನ್ನು ಆಟಗಾರರಿಗೆ ವಿವರಿಸಲಿದ್ದಾರೆ. ಎಲ್ಲಾ ವಯೋಮಿತಿ ವಿಭಾಗಗಳಲ್ಲಿ ಈ ಪದ್ಧತಿಯನ್ನು ಬಳಸಲಾಗುತ್ತದೆ. ಈ ಬಗ್ಗೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಒಳಾಂಗಣ ನೆಟ್ಸ್‌ನಲ್ಲಿ ಪ್ರಾತ್ಯಕ್ಷಿತೆ ಕೂಡ ಇತ್ತು.`ಹಿಂದೆ ಕೋಚಿಂಗ್ ವಿಧಾನ ವಿಭಿನ್ನವಾಗಿತ್ತು. ಒಬ್ಬ ಬ್ಯಾಟ್ಸ್‌ಮನ್ ಅಥವಾ ಬೌಲರ್‌ನ ಅಂತಿಮ ಫಲಿತಾಂಶ ನೋಡಿ ಅದಕ್ಕೆ ತಕ್ಕಂತೆ ಮಾರ್ಗದರ್ಶನ ನೀಡಲಾಗುತಿತ್ತು. ಆಗ ವ್ಯಕ್ತಿಯ ದೇಹದಲ್ಲಿ ಆಗುತ್ತಿದ್ದ ಬದಲಾವಣೆಗಳು ಹಾಗೂ ದೋಷಗಳು ಗೊತ್ತಾಗುತ್ತಿರಲಿಲ್ಲ.ಕೇವಲ ಕೋಚ್‌ನ ಮಾತು ಆಲಿಸಿ ಆಟಗಾರರು ಬದಲಾವಣೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಕೋಚ್‌ಗಳು ಕೂಡ ತಾವು ಹೇಳಿದ್ದೇ ಸರಿ ಎಂದು ಸಮರ್ಥಿಸಿಕೊಳ್ಳುತ್ತಿದ್ದರು. ಅವರು ಹೇಳಿದ್ದೇ ಸರಿ ಎಂದು ಆಟಗಾರರು ಒಪ್ಪಿಕೊಳ್ಳಬೇಕಿತ್ತು. ಒಬ್ಬೊಬ್ಬ ಕೋಚ್ ಒಂದೊಂದು ರೀತಿ ಹೇಳುತ್ತಿದ್ದರು. ಆಟಗಾರರು ಇದರಿಂದ ಗೊಂದಲಕ್ಕೆ ಒಳಗಾಗುತ್ತಿದ್ದರು~ ಎಂದು ಶ್ರೀನಾಥ್ ಸಾಂಪ್ರದಾಯಿಕ ಕೋಚಿಂಗ್ ವಿಧಾನದ ಬಗ್ಗೆ ಹೇಳಿದರು.`ಆದರೆ ಈಗ ತಂತ್ರಜ್ಞಾನ ಬಳಸಿಕೊಳ್ಳುವ ಮೂಲಕ ತಪ್ಪನ್ನು ಕಂಡುಕೊಳ್ಳಬಹುದು. ಯಾವ ರೀತಿ ಅಭ್ಯಾಸ ಮಾಡುತ್ತಿದ್ದೇವೆ ಎಂಬುದನ್ನು ವಿಡಿಯೊದಲ್ಲಿ ದಾಖಲಿಸಿ ಆಮೇಲೆ ವೀಕ್ಷಿಸಬಹುದು. ಆಗ ಕೋಚ್ ಸಹಾಯ ಬಳಸಿ ಎಲ್ಲಿ ತಪ್ಪು ಸಂಭವಿಸುತ್ತಿದೆ ಎಂಬುದನ್ನು ಪತ್ತೆ ಹಚ್ಚಬಹುದು. ಇದರಲ್ಲಿ ಸಾಕ್ಷಿ ಇರುತ್ತದೆ.ದೇಹದಲ್ಲಿನ ಬದಲಾವಣೆ ಗೊತ್ತಾಗುತ್ತದೆ. ಬದಲಾವಣೆ ಆದ ಮೇಲೆ ಮತ್ತೊಮ್ಮೆ ಅಭ್ಯಾಸ ಮಾಡಿ ಅದನ್ನು ಚಿತ್ರಿಸಿಕೊಂಡು ಹಳೆಯ ವಿಡಿಯೊ ಜೊತೆ ವಿಶ್ಲೇಷಣೆ ಮಾಡಬಹುದು. ಕೆಲವೊಮ್ಮೆ ಕೋಚ್‌ಗಳ ಅಗತ್ಯವೇ ಇರುವುದಿಲ್ಲ. ಏಕೆಂದರೆ ಚಿತ್ರಗಳೇ ಮಾತನಾಡುತ್ತವೆ~ ಎಂದು ಅವರು ವಿವರಿಸಿದರು.ಇದಕ್ಕೂ ಮೊದಲು ಕೂಡ ಕ್ರಿಕೆಟ್‌ನಲ್ಲಿ ತಂತ್ರಜ್ಞಾನವಿತ್ತು. ಆದರೆ ಅದನ್ನು ಹೊರಾಂಗಣ ಕ್ರೀಡಾಂಗಣದಲ್ಲಿ ಅಳವಡಿಸಲು ಸಾಧ್ಯವಾಗುತ್ತಿರಲಿಲ್ಲ. ಮತ್ತು ಗುಣಮಟ್ಟದ ಸಮಸ್ಯೆ ಎದುರಾಗುತಿತ್ತು. ಲ್ಯಾಪ್‌ಟಾಪ್‌ನಲ್ಲಿ ಮಾತ್ರ ಅದನ್ನು ಆಟಗಾರರು ವೀಕ್ಷಿಸಬಹುದಾಗಿತ್ತು.`15-20 ವರ್ಷಗಳ ಹಿಂದೆ ಯಾವುದೇ ತಂತ್ರಜ್ಞಾನವಿರಲಿಲ್ಲ. ಆದಾಗ್ಯೂ ಸುನಿಲ್ ಗಾವಸ್ಕರ್, ಜಿ.ಆರ್.ವಿಶ್ವನಾಥ್ ಸಾವಿರಾರು ರನ್ ಗಳಿಸಿ ಯಶಸ್ವಿಯಾದರು. ಆದರೆ ಬದಲಾವಣೆಗೆ ತಮ್ಮನ್ನು ತೆರೆದುಕೊಳ್ಳಬೇಕು.

 

ಹಿಂದೆ ನಾವು ಎತ್ತಿನ ಗಾಡಿಯಲ್ಲಿ ಪ್ರಯಾಣಿಸುತ್ತಿದ್ದೆವು. ಈಗಲೇ ಅದನ್ನು ಮುಂದುವರಿಸಬೇಕೇ? ಈಗ ತಂತ್ರಜ್ಞಾನವಿಲ್ಲದೇ ಬದುಕು ಇಲ್ಲದಂತಾಗಿದೆ. ಕಲಿಯುವಿಕೆಯನ್ನು ಇದು ಸರಳಗೊಳಿಸಿದೆ~ ಎಂದು ತಂತ್ರಜ್ಞಾನವನ್ನು ಅಳವಡಿಸಲು ಮುಂದಾಗುತ್ತಿರುವ ಕ್ರಮವನ್ನು ಮಾಜಿ ವೇಗಿ ಶ್ರೀನಾಥ್ ಸಮರ್ಥಿಸಿಕೊಂಡರು.`ಹೊಸ ಪದ್ಧತಿಯ ಪ್ರಕಾರ ಒಂದೇ ಪಂದ್ಯದಲ್ಲಿ ಬೌಲರ್ ಹಾಗೂ ಹಾಗೂ ಆತನ ಎಸೆತ ಎದುರಿಸುವ ಬ್ಯಾಟ್ಸ್‌ಮನ್ ಚಿತ್ರವನ್ನು ಏಕಕಾಲದಲ್ಲಿ ವೀಕ್ಷಿಸಬಹುದು. ಪ್ರತಿ ಬಾರಿ ಬೌಲಿಂಗ್ ಮಾಡಲು ಮುಂದಾಗುವಾಗ ಬ್ಯಾಟ್ಸ್‌ಮನ್ ಯಾವ ರೀತಿ ಅದನ್ನು ಎದುರಿಸಲು ಸಿದ್ಧನಾಗುತ್ತಾನೆ ಎಂಬುದನ್ನು ಪತ್ತೆ ಹಚ್ಚಬಹುದು.ಹಾಗೇ ಬೌಲರ್‌ನ ಮನಸ್ಥಿತಿಯನ್ನು ಬ್ಯಾಟ್ಸ್‌ಮನ್ ಅರಿಯಬಹುದು. ಚಿತ್ರ ಕೂಡ ಸ್ಪಷ್ಟವಾಗಿರುತ್ತದೆ. ಅದನ್ನು ಐ-ಪಾಡ್‌ಗೆ ಡೌನ್‌ಲೋಡ್ ಮಾಡಿ ವೀಕ್ಷಿಸಬಹುದು. ಮುಂದಿನ ದಿನಗಳಲ್ಲಿ ರಾಜ್ಯದ ವಿವಿಧ ವಲಯಗಳಿಗೂ ಇದನ್ನು ತೆಗೆದುಕೊಂಡು ಹೋಗಲಾಗುವುದು~ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry