ಬುಧವಾರ, ನವೆಂಬರ್ 13, 2019
22 °C
ದ.ಕ: 1715 ಮತಗಟ್ಟೆ

`ವಿಡಿಯೊ ಕ್ಯಾಮೆರಾ, ವೆಬ್ ಕಾಸ್ಟಿಂಗ್'

Published:
Updated:

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1,657 ಮುಖ್ಯ ಮತಗಟ್ಟೆ ಹಾಗೂ 88 ಆಕ್ಸಿಲರಿ ಮತಗಟ್ಟೆ ಸಹಿತ ಒಟ್ಟು 1715 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ.ಎಲ್ಲ ಮತಗಟ್ಟೆಗಳಿಗೆ ಕೇಂದ್ರೀಯ ಅರೆಸೇನಾ ಪಡೆ (ಸಿಪಿಎಂಎಫ್) ತುಕಡಿ, ಮೈಕ್ರೋ ವೀಕ್ಷಕರನ್ನು ನೇಮಿಸಲಾಗುವುದು. ಕೆಲವೆಡೆ ವಿಡಿಯೊ ಕ್ಯಾಮೆರಾ ಹಾಗೂ ವೆಬ್ ಕಾಸ್ಟಿಂಗ್ ಅಳವಡಿಸುವ ಬಗ್ಗೆಯೂ ಚಿಂತನೆ ನಡೆಯುತ್ತಿದೆ' ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹರ್ಷ ಗುಪ್ತ ತಿಳಿಸಿದರು.ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ಬೆಳ್ತಂಗಡಿಯಲ್ಲಿ ಒಟ್ಟು 232, ಮೂಡುಬಿದ್ರಿಯಲ್ಲಿ 197, ಮಂಗಳೂರು ನಗರ ಉತ್ತರದಲ್ಲಿ 222, ಮಂಗಳೂರು ನಗರ ದಕ್ಷಿಣದಲ್ಲಿ 208, ಮಂಗಳೂರು ಕ್ಷೇತ್ರದಲ್ಲಿ 192, ಬಂಟ್ವಾಳದಲ್ಲಿ 235, ಪುತ್ತೂರಿನಲ್ಲಿ 210 ಹಾಗೂ ಸುಳ್ಯದಲ್ಲಿ 219 ಮತಗಟ್ಟೆಗಳಿರಲಿವೆ. ಸೂಕ್ಷ್ಮತೆ ಪರಿಗಣಿಸಿ ಅಗತ್ಯ ವ್ಯವಸ್ಥೆ ಬಳಸಿಕೊಳ್ಳಲಾಗುವುದು' ಎಂದರು.`ಅರೆಸೇನಾ ತುಕಡಿಗಳನ್ನು ಬಳಸಿಕೊಳ್ಳುತ್ತಿರುವುದರಿಂದ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸುವ ಪ್ರಮೇಯ ಬರುವುದಿಲ್ಲ. ಆದರೂ ಯಾವುದೇ ಕ್ಷೇತ್ರದಲ್ಲಿ ಮತದಾರರು ಯಾವುದೇ ಬಲಪ್ರಯೋಗದ ಭೀತಿ ಎದುರಿಸುತ್ತಿದ್ದರೆ, ಅಲ್ಪಸಂಖ್ಯಾತರನ್ನು ಅಥವಾ ನಿರ್ದಿಷ್ಟ ಸಮುದಾಯದವರನ್ನು ಬೆದರಿಸುವ ಬೆಳವಣಿಗೆ ನಡೆದರೆ ಅಥವಾ ಅಭ್ಯರ್ಥಿಯು ಎದುರಾಳಿಯಿಂದ ಆತಂಕ ಎದುರಿಸುತ್ತಿದ್ದರೆ  ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ.ಯಾವುದೇ ಮತಗಟ್ಟೆಯಲ್ಲಿ ನಿರ್ದಿಷ್ಟ ಅಭ್ಯರ್ಥಿ ಶೇ 75ಕ್ಕಿಂತ ಹೆಚ್ಚು ಮತಗಳನ್ನು ಪಡೆದರೆ ಈ ಬಗ್ಗೆಯೂ ವಿಶೇಷ ಪರಿಶೀಲನೆ ನಡೆಸುತ್ತೇವೆ' ಎಂದರು. ಜಿಲ್ಲಾಧಿಕಾರಿಯ ನಿಯಂತ್ರಣಾ ಕೊಠಡಿಯ ಸಹಾಯ ವಾಣಿಯಲ್ಲಿ (1077) ಇದುವರೆಗೆ 98 ದೂರುಗಳು ದಾಖಲಾಗಿವೆ ಎಂದರು.ಅಣಕು ಮತದಾನ: ಈಗಾಗಲೇ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಸಮಕ್ಷಮದಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ಪರಿಶೀಲಿಸಿ ಮಿಶ್ರಣ ಮಾಡಿ ಚುನಾವಣಾ ಕ್ಷೇತ್ರಗಳಿಗೆ ಹಂಚಿದ್ದೇವೆ. ಇದೇ 26ರಂದು ಚುನಾವಣಾಧಿಕಾರಿಯು ವೀಕ್ಷಕರು ಹಾಗೂ ಆಯಾ ಕ್ಷೇತ್ರದ ಅಭ್ಯರ್ಥಿಗಳ ಸಮ್ಮುಖದಲ್ಲಿ ಮತಯಂತ್ರಗಳ ದ್ವಿತೀಯ ಹಂತದ ಮಿಶ್ರಣ ಮಾಡಿ ಮತಗಟ್ಟೆವಾರು ಹಂಚಿಕೆ ನಡೆಸುವರು.27ರಂದು ಅಭ್ಯರ್ಥಿಗಳ ಸಂಖ್ಯೆ ನಿಗದಿ ಪಡಿಸಿ ಮತಪತ್ರಗಳನ್ನು ಅಳವಡಿಸಿ ಭದ್ರತಾ ಕೊಠಡಿಗಳಲ್ಲಿ ಇಡಲಾಗುವುದು.ಮತದಾನದ ದಿನ ಬೆಳಿಗ್ಗೆ 6 ಗಂಟೆಗೆ ಮತಗಟ್ಟೆ ಅಧಿಕಾರಿ ಅಭ್ಯರ್ಥಿಗಳ ಏಜೆಂಟರ ಸಮ್ಮುಖದಲ್ಲಿ ಅಣಕು ಮತದಾನ ನಡೆಸಿ ಮತ್ತೆ ಯಥಾಸ್ಥಿತಿಗೆ ತಂದ ಬಳಿಕವೇ ಮತಯಂತ್ರವನ್ನು ಬಳಸಲಾಗುವುದು' ಎಂದರು.`ಸರ್ಕಾರಿ, ಅರೆಸರ್ಕಾರಿ ನೌಕರರಿಗೆ ಮಾತ್ರ ಚುನಾವಣಾ ಕಾರ್ಯ'

`ಚುನಾವಣಾ ಪ್ರಕ್ರಿಯೆಯಲ್ಲಿ ಸರ್ಕಾರಿ ಅಥವಾ ಅರೆಸರ್ಕಾರಿ ನೌಕರರಲ್ಲದವರನ್ನು ಸೇವೆಗೆ ಬಳಸಿಕೊಳ್ಳುತ್ತಿಲ್ಲ' ಎಂದು ಜಿಲ್ಲಾಧಿಕಾರಿ ಹರ್ಷಗುಪ್ತ ಸ್ಪಷ್ಟ ಪಡಿಸಿದರು.`ಜಿಲ್ಲೆಯ್ಲ್ಲಲಿ ಚುನಾವಣಾ ಪ್ರಕ್ರಿಯೆಗೆ 8500 ಸಿಬ್ಬಂದಿಯ ಅಗತ್ಯವಿದೆ. 11 ಸಾವಿರ ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ (ಎಚ್‌ಆರ್‌ಎಂಎಸ್) ಪರಿಶೀಲಿಸಿ ಅಧಿಕಾರಿಗಳನ್ನು ನೇಮಿಸಿದ್ದೇವೆ.ಇದೇ 24ರಂದು ಹಾಗೂ 29ರಂದು ಅವರಿಗೆ ಎರಡು ಹಂತಗಳ ತರಬೇತಿ ನಡೆಯಲಿದೆ. ಎಲ್ಲಾ ಮತಗಟ್ಟೆ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ, ಚುನಾವಣಾ ಕರ್ತವ್ಯಕ್ಕೆ ಹಾಜರಾಗುವ ಪೊಲೀಸ್ ಸಿಬ್ಬಂದಿ, ಅಂಗನವಾಡಿ ಕಾಯಕರ್ತರಿಗೂ ಅಂಚೆ ಮತದಾನದ ವ್ಯವಸ್ಥೆ ಕಲ್ಪಿಸಲಾಗುವುದು' ಎಂದು ಅವರು ತಿಳಿಸಿದರು.`ದೂರು ನೀಡಿದರೂ ಕ್ರಮವಿಲ್ಲ'

ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಯೊಬ್ಬರು ಬಾಡೂಟ ಏರ್ಪಡಿಸಿದ ಬಗ್ಗೆ ಸ್ವತಃ ಜಿಲ್ಲಾಧಿಕಾರಿಗೆ, ಪೊಲೀಸ್ ಆಯುಕ್ತರ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪತ್ರಕರ್ತರೊಬ್ಬರು ದೂರಿದರು.`ಬಾಡೂಟ ನೀಡುವ ಮುನ್ನವೇ ಚುನಾವಣಾಧಿಕಾರಿ ಸ್ಥಳ ಪರಿಶೀಲನೆ ನಡೆಸಿ, ಚುನಾವಣೆಯ ಪ್ರಯುಕ್ತ ಬಾಡೂಟ ನೀಡುತ್ತಿಲ್ಲ ಎಂದು ಖಚಿತಪಡಿಸಿಕೊಂಡಿದ್ದಾರೆ' ಎಂದು ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದರು.ದೂರು ನೀಡಿದ ಬಳಿಕ ಕನಿಷ್ಠಪಕ್ಷ ಸ್ಥಳಪರಿಶೀಲನೆಯನ್ನೂ ನಡೆಸದ ಕ್ರಮ ಸರಿಯೇ ಎಂಬ ಪ್ರಶ್ನೆಗೆ ಜಿಲ್ಲಾಧಿಕಾರಿ ಸೂಕ್ತ ಉತ್ತರ ನೀಡಲಿಲ್ಲ.

ಪ್ರತಿಕ್ರಿಯಿಸಿ (+)