ಭಾನುವಾರ, ಜೂನ್ 13, 2021
23 °C

ವಿಡಿಯೊ ಹುಡುಕಾಟಕ್ಕೆ ಷಫ್ಲರ್

ಕೇಶವ ಜಿ. ಝಿಂಗಾಡೆ Updated:

ಅಕ್ಷರ ಗಾತ್ರ : | |

ವಿವಿಧ ಟೆಲಿವಿಷನ್ ಚಾನೆಲ್‌ಗಳಲ್ಲಿ  ಪ್ರಸಾರವಾಗುವ ನೂರಾರು ಧಾರಾವಾಹಿಗಳಲ್ಲಿ ಅನೇಕರು ದಿನದ ನಿರ್ದಿಷ್ಟ ಸಮಯದಲ್ಲಿ ಕೆಲವನ್ನು, ಕೆಲ ನಿಮಿಷಗಳ ಕಾಲವಾದರೂ ವೀಕ್ಷಿಸಲು ಸಮಯ ಕಳೆಯುತ್ತಾರೆ. ಅದೊಂದು ದಿನನಿತ್ಯದ ಚಟುವಟಿಕೆಗಳಲ್ಲಿ ಒಂದಾಗಿದೆ. ಇಂಟರ್‌ನೆಟ್ ಯುಗದಲ್ಲಿ ವಿಡಿಯೊಗಳಿಗೂ ಈ ಮಾತು ಅನ್ವಯಿಸುತ್ತದೆ.



ಚಾನೆಲ್‌ಗಳ ಧಾರಾವಾಹಿ, ಪ್ರಚಲಿತ ಘಟನೆ, ಸುದ್ದಿ ಆಧಾರಿತ ಕಾರ್ಯಕ್ರಮಗಳಿಗೆ ಹೋಲಿಸಿದರೆ ಅಂತರಜಾಲದಲ್ಲಿ ಹರಿದಾಡುವ ವಿಡಿಯೊ ತುಣುಕುಗಳಿಗಂತೂ ಲೆಕ್ಕವೇ ಇಲ್ಲ. ಅಂತರ್‌ಜಾಲ ಬಳಕೆದಾರರಲ್ಲಿ  ತಮ್ಮ ಬಳಿ ಇರುವ ಮೊಬೈಲ್, ಲ್ಯಾಪ್‌ಟಾಪ್, ಡೆಸ್ಕಟಾಪ್‌ಗಳ ಮೂಲಕ ವೈವಿಧ್ಯಮಯ ವಿಡಿಯೊಗಳ ವೀಕ್ಷಣೆಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ.



ಇಂಟರ್‌ನೆಟ್ ವೀಕ್ಷಕರಿಗಾಗಿಯೇ ಕೆಲ ಟೆಲಿವಿಷನ್ ಸಂಸ್ಥೆಗಳು ಕಾರ್ಯಕ್ರಮ, ಧಾರಾವಾಹಿಗಳನ್ನೂ  ಸಿದ್ಧಪಡಿಸಿ  ಒದಗಿಸುತ್ತಿವೆ.  ಅನೇಕ ಘಟನಾವಳಿಗಳಿಗೆ ಸಂಬಂಧಿಸಿದಂತೆ ವಿಶ್ವದಾದ್ಯಂತ ಇಂಟರ್‌ನೆಟ್‌ಗೆ ಪ್ರತಿ ನಿಮಿಷಕ್ಕೆ  ಅಸಂಖ್ಯ ವಿಡಿಯೊಗಳು ಸೇರ್ಪಡೆಯಾಗುತ್ತಿವೆ.

 

ಆದರೆ, ಅವುಗಳಲ್ಲಿ ಯಾವುದನ್ನು ವೀಕ್ಷಿಸಬೇಕು, ಯಾವುದನ್ನು ನಿರ್ಲಕ್ಷಿಸಬೇಕು ಎನ್ನುವ ವೀಕ್ಷಕನ ಗೊಂದಲಕ್ಕೆ  `ಷಫ್ಲರ್~ ಅಪ್ಲಿಕೇಷನ್ ಕೊನೆ ಹಾಡುತ್ತದೆ. ಕನ್ನಡದವರೇ ಆಗಿರುವ ಸಾಫ್ಟ್‌ವೇರ್ ತಂತ್ರಜ್ಞ ಕಿಶೋರ್ ಎ. ಕೆ. ಸಹ ಸ್ಥಾಪಕರಾಗಿರುವ ಬೆಂಗಳೂರು ಮೂಲದ `ಅಲ್ಥಿಯಾ ಸಿಸ್ಟಮ್ಸ~ ಸಂಸ್ಥೆಯು ಅಂತರ್‌ಜಾಲದಲ್ಲಿನ ವಿಡಿಯೊಗಳ ವೀಕ್ಷಣೆಗೆ ನೆರವಾಗುವ `ಷಫ್ಲರ್~ ಅಪ್ಲಿಕೇಷನ್ ಅಭಿವೃದ್ಧಿಪಡಿಸಿದೆ.



ಯೂಟೂಬ್ ಮತ್ತಿತರ ಜನಪ್ರಿಯ ಸಾಮಾಜಿಕ ಸಂಪರ್ಕ ತಾಣಗಳಲ್ಲಿ ಪ್ರತಿ ಕ್ಷಣಕ್ಕೆ ಸೇರ್ಪಡೆಯಾಗುವ ಲಕ್ಷಾಂತರ ವಿಡಿಯೊಗಳಲ್ಲಿ ವ್ಯಕ್ತಿಗತ ಅಭಿರುಚಿ, ಇಷ್ಟಾನಿಷ್ಟ ಆಧರಿಸಿದ ನಿರ್ದಿಷ್ಟ ಮತ್ತು ಆಯ್ದ ವಿಡಿಯೊಗಳನ್ನು ಮಾತ್ರ ವೀಕ್ಷಿಸಲು                `ಷಫ್ಲರ್~ ಸೌಲಭ್ಯ (ಅಪ್ಲಿಕೇಷನ್) ನೆರವಾಗುತ್ತದೆ. ಇಂಟರ್‌ನೆಟ್‌ನಲ್ಲಿ  ವಿಡಿಯೊಗಳನ್ನು ವೀಕ್ಷಿಸುವುದನ್ನೂ ಇದು  ಸುಲಭಗೊಳಿಸುತ್ತದೆ.



ಷಫ್ಲರ್ ಅಪ್ಲಿಕೇಷನ್, ವ್ಯಕ್ತಿಗತ ಅಭಿರುಚಿಗಳಿಗೆ ಪೂರಕವಾದ ವಿಡಿಯೊಗಳನ್ನಷ್ಟೇ ಒದಗಿಸುವ ವಿಶಿಷ್ಟ ಕೆಲಸ ಮಾಡುತ್ತದೆ. ವ್ಯಕ್ತಿಗೆ ಇಷ್ಟವಾದ ವಿಡಿಯೊಗಳನ್ನು ಶೋಧಿಸಲು ಕಡಿಮೆ ಸಮಯ ಒದಗಿಸುವುದರ ಜತೆಗೆ, ವಿಡಿಯೊಗಳನ್ನು ವೀಕ್ಷಿಸಲು ಹೆಚ್ಚು ಸಮಯ ಕಳೆಯಲು, ಸ್ನೇಹಿತರು, ಹಿತೈಷಿಗಳು ಮತ್ತು  ಸಮಾನ ಮನಸ್ಕರ ಜತೆ ಹಂಚಿಕೊಳ್ಳಲೂ  ನೆರವಾಗುತ್ತದೆ.



ವಿಡಿಯೊಗಳೇ ವೀಕ್ಷಕರನ್ನು ಅವರವರ ಇಷ್ಟಾನಿಷ್ಟಗಳಿಗೆ ಪೂರಕವಾಗಿ ಹುಡುಕಿಕೊಂಡು ಬರುವ ಸೌಲಭ್ಯ ಇದಾಗಿದೆ. ಡೆಸ್ಕಟಾಪ್, ಲ್ಯಾಪ್‌ಟಾಪ್, ಐಫೋನ್,  ಆಯ್ದ ಸ್ಮಾರ್ಟ್‌ಫೋನ್,  ಐಪ್ಯಾಡ್‌ಗಳಲ್ಲಿ ಈ ಸೌಲಭ್ಯ ಬಳಸಿಕೊಳ್ಳಬಹುದು. ನೋಕಿಯಾ ಸ್ಮಾರ್ಟ್‌ಫೋನ್‌ಗಳಿಗಾಗಿ ಈ ಸೌಲಭ್ಯವನ್ನು ಇನ್ನೂ ಅಭಿವೃದ್ಧಿಪಡಿಸಬೇಕಾಗಿದೆ.



ಷಫ್ಲರ್ ಸೌಲಭ್ಯವು ಸಾಮಾಜಿಕ ಸಂಪರ್ಕ ತಾಣಗಳಲ್ಲಿನ ವಿಡಿಯೊ ಜಾಲಾಡುವ ಅತ್ಯಂತ ಸಮರ್ಥ ವೇದಿಕೆಯಾಗಿದೆ ಎಂದು ಕಿಶೋರ್ ಹೇಳುತ್ತಾರೆ.



ಹೊಸದಾಗಿ ಆರಂಭಗೊಂಡಿದ್ದ ಸಾಫ್ಟ್‌ವೇರ್ ಸಂಸ್ಥೆಯೊಂದರಿಂದ 2008ರಲ್ಲಿನ ಆರ್ಥಿಕ ಹಿಂಜರಿಕೆ ಸಂದರ್ಭದಲ್ಲಿ ಹೊರ ಬಂದ ಕಿಶೋರ್, ಏನಾದರೂ ಹೊಸದು ಮಾಡಬೇಕು ಎನ್ನುವ ತುಡಿತದಿಂದ ಸಮಾನ ಮನಸ್ಕರ ನೆರವಿನಿಂದ ಅಲ್ಥಿಯಾ ಸಿಸ್ಟಮ್ಸ ಸಂಸ್ಥೆ ಸ್ಥಾಪಿಸಿದರು.



ದೇಶಿ ಸಾಫ್ಟ್‌ವೇರ್ ಸಂಸ್ಥೆಗಳು ಸಾಫ್ಟ್‌ವೇರ್ ಸೇವೆ ಒದಗಿಸುತ್ತಿವೆ. ಆದರೆ, ಉತ್ಪನ್ನ ಅಭಿವೃದ್ಧಿಪಡಿಸುವ ಬಗ್ಗೆ ಹೆಚ್ಚಿನ ಸಂಸ್ಥೆಗಳು ತಲೆಕೆಡಿಸಿಕೊಂಡಿಲ್ಲ. ನಮ್ಮಲ್ಲಿಯೇ ಅತ್ಯುತ್ತಮ ಉತ್ಪನ್ನ ಅಭಿವೃದ್ಧಿಪಡಿಸಿ, ಇಡೀ ವಿಶ್ವಕ್ಕೆ ಪೂರೈಸುವ ಕನಸು ನನಸು ಮಾಡಲು ಕಿಶೋರ್ ಮತ್ತವರ ತಂಡ ಧೈರ್ಯದಿಂದ ಮುನ್ನುಗಿತು. ವಹಿವಾಟು ಹಿನ್ನೆಲೆಯ   ಮೈಕ್ರೊಸಾಫ್ಟ್‌ನ ನಿರ್ದೇಶಕರೊಬ್ಬರು ಕೂಡ ಇವರ ಜತೆ ಕೈ ಜೋಡಿಸಿದರು. 2009 ಜೂನ್‌ನಲ್ಲಿ ಸಂಸ್ಥೆ ಅಸ್ತಿತ್ವಕ್ಕೆ ಬಂದಿತು.



ಆರಂಭದಲ್ಲಿ ಸಂಸ್ಥೆಯ ಸ್ವರೂಪ, ವಹಿವಾಟಿನ ಬಗ್ಗೆ ಮೂಡಿದ ಸಂದೇಹ ನಿವಾರಣೆಗಾಗಿ ಅಲ್ಥಿಯಾದ ತಂತ್ರಜ್ಞರು  ನಿರ್ದಿಷ್ಟ ಉತ್ಪನ್ನ  ಅಭಿವೃದ್ಧಿಪಡಿಸಲು ಮುಂದಾದರು. ಉತ್ಪನ್ನ ನೋಡಿದವರು ಬೆನ್ನುತಟ್ಟಿದಾಗ ಇವರ  ಆತ್ಮವಿಶ್ವಾಸ ಹೆಚ್ಚಿತು. ಆರಂಭದಲ್ಲಿ ರೂ.1 ಕೋಟಿಗಳಷ್ಟು ಬಂಡವಾಳ ತೊಡಗಿಸಲಾಯಿತು. ಇಂಟೆಲ್ ಕ್ಯಾಪಿಟಲ್ ಕೂಡ 30 ಲಕ್ಷ ಡಾಲರ್‌ಗಳಷ್ಟು (ರೂ.15 ಕೋಟಿ) ಬಂಡವಾಳ ತೊಡಗಿಸಿತು.



ಗುಣಮಟ್ಟದ ವಿಡಿಯೊಗಳ ವೀಕ್ಷಣೆಗೆ ಗರಿಷ್ಠ ವೇಗದ ಇಂಟರ್‌ನೆಟ್ ಸಂಪರ್ಕ ಅಗತ್ಯ. ಹೀಗಾಗಿ ಗರಿಷ್ಠ ಬ್ಯಾಂಡ್‌ವಿಡ್ತ್ ಇರುವ ಮತ್ತು `ತ್ರೀಜಿ~ ಬಳಕೆ ಹೆಚ್ಚಿರುವ ದೇಶಗಳಲ್ಲಿ `ಷಫ್ಲರ್~ ಸೌಲಭ್ಯ ಹೆಚ್ಚಿನ ಸಂಖ್ಯೆಯಲ್ಲಿ ಬಳಕೆಯಲ್ಲಿ ಇದೆ. ಇಲ್ಲಿ ಬಳಕೆದಾರರು ವಿಡಿಯೊ ವೀಕ್ಷಿಸಲು ದುಡ್ಡು ಕೊಡುವ ಅಗತ್ಯ ಇಲ್ಲ. ಫೇಸ್‌ಬುಕ್ ಅಥವಾ ಟ್ವಿಟರ್‌ನಲ್ಲಿ ಖಾತೆ ಇದ್ದವರು shufflr.tv  ತಾಣದಲ್ಲಿ ಹೆಸರು ನೋಂದಾಯಿಸಬೇಕಾಗುತ್ತದೆ.



ಸದ್ಯಕ್ಕೆ ವಿಡಿಯೊ ಹಂಚಿಕೊಳ್ಳುವ ತಾಣ `ಯುಟೂಬ್~ನಲ್ಲಿ  1 ನಿಮಿಷಕ್ಕೆ 60 ಗಂಟೆಗಳ ಕಾಲ ವೀಕ್ಷಿಸುವಷ್ಟು ವಿಡಿಯೊಗಳು ಸೇರ್ಪಡೆಯಾಗುತ್ತಿವೆ. ಅನೇಕ ಟೆಲಿವಿಷನ್  ಕಂಪನಿಗಳು - ಇಂಟರ್‌ನೆಟ್ ವೀಕ್ಷಕರಿಗಾಗಿಯೇ ಕಾರ್ಯಕ್ರಮ ತಯಾರಿಸುತ್ತಿವೆ.



ಅವೆಲ್ಲವೂ ವಿಡಿಯೊ ರೂಪದಲ್ಲಿ ಇಂಟರ್‌ನೆಟ್‌ನಲ್ಲಿ ಹರಿದಾಡುತ್ತವೆ. ಅನೇಕರಿಗೆ ಇಂಟರ್‌ನೆಟ್‌ನಲ್ಲಿ  ಉತ್ತಮ ವಿಡಿಯೊಗಳು ಇವೆ ಎನ್ನುವುದೂ ಗೊತ್ತಿಲ್ಲ. ಇನ್ನೂ ಕೆಲವರು ಇಂಟರ್‌ನೆಟ್‌ನಲ್ಲಿ ವೈವಿಧ್ಯಮಯ ವಿಡಿಯೊಗಳ ವೀಕ್ಷಣೆಗೆ ನಿರ್ದಿಷ್ಟ ಸಮಯವನ್ನೇ ಮೀಸಲು ಇಟ್ಟಿದ್ದಾರೆ. ಅವರಿಗಾಗಿಯೇ ಈ `ಷಫ್ಲರ್~ ಸೌಲಭ್ಯ ಅಭಿವೃದ್ಧಿಪಡಿಸಲಾಗಿದೆ.  ಟ್ಯಾಬ್ಲೆಟ್‌ನಲ್ಲಿಯೂ ಈ ಸೌಲಭ್ಯವನ್ನು  ಮುಂದಿನ ತಿಂಗಳು ಪರಿಚಯಿಸಲಾಗುತ್ತಿದೆ ಎಂದು ಕಿಶೋರ್ ಹೇಳುತ್ತಾರೆ.



ವಿಡಿಯೊ ವೀಕ್ಷಿಸುವಾಗ ಮಧ್ಯದಲ್ಲಿ ಜಾಹೀರಾತು ಪ್ರಸಾರದ ಮೂಲಕ, ವಿಡಿಯೊದ ಟ್ರೈಲರ್ ನೋಡಿ ಪೂರ್ಣ ಪ್ರಮಾಣದ ವಿಡಿಯೊ ವೀಕ್ಷಿಸಲು ಬಯಸುವ, ದೂರಸಂಪರ್ಕ ಸೇವಾ ಸಂಸ್ಥೆಗಳ ಗ್ರಾಹಕರಿಗೆ ಮಾಸಿಕ ದರದಲ್ಲಿ ಸೌಲಭ್ಯ ಒದಗಿಸುವುದರ ಮೂಲಕ ಸಂಸ್ಥೆ ವರಮಾನದ ಮೂಲ ಕಂಡುಕೊಳ್ಳುತ್ತಿದೆ ಎನ್ನುತ್ತಾರೆ ಅವರು.



ಘಟನೆ, ಸ್ಥಳ, ಅಭಿರುಚಿ, ದೇಶ- ಕಾಲ ಮತ್ತಿತರ ದತ್ತಾಂಶ ಆಧರಿಸಿ ವಿಡಿಯೊ ತಲುಪಿಸುವ ವಿಶಿಷ್ಟ ವ್ಯವಸ್ಥೆ ಇದಾಗಿದೆ. ಒಂದೆಡೆ ವೀಕ್ಷಿಸಿದ ಅಥವಾ ವೀಕ್ಷಿಸಲು ಆಯ್ಕೆ ಮಾಡಿಕೊಳ್ಳುವ  (`ಕ್ಯು~ ಮಾಡಿದ) ವಿಡಿಯೊಗಳು ಫೋನ್, ಟ್ಯಾಬ್ಲೆಟ್, ಟಿವಿ ಮತ್ತು ಕಂಪ್ಯೂಟರ್ - ನಾಲ್ಕೂ ಕಡೆಗಳಲ್ಲಿ `ಕ್ಯು~ ಆಗುವುದರಿಂದ ವೀಕ್ಷಣೆಗೆ ಸುಲಭವಾಗಲಿದೆ. ಪ್ರತಿ ತಿಂಗಳು 10 ಲಕ್ಷ ವೀಕ್ಷಕರು `ಷಫ್ಲಲ್ ಡಾಟ್ ಟಿವಿ~ಗೆ ಸೇರ್ಪಡೆಗೊಳ್ಳುತ್ತಿದ್ದಾರೆ. 



ಸಾಫ್ಟ್‌ವೇರ್ ಸೇವೆಯಲ್ಲಿ ಭಾರತ ಮುಂಚೂಣಿಯಲ್ಲಿ ಇದೆ, ಆದರೆ, ಉತ್ಪನ್ನ ಅಭಿವೃದ್ಧಿಪಡಿಸುವಲ್ಲಿ ತುಂಬಾ ಹಿಂದೆ ಇದೆ. ಸೇವೆಗಳಿಗೆ ಸಂಬಂಧಿಸಿದಂತೆ ಸಾಫ್ಟ್‌ವೇರ್ ಒದಗಿಸಿದರೆ ಕೆಲಸದ ದಿನದಿಂದಲೇ ವರಮಾನ ಬರುತ್ತದೆ. ಆದರೆ, ಉತ್ಪನ್ನ ಅಭಿವೃದ್ಧಿ ವಿಷಯದಲ್ಲಿ ಆರಂಭದಲ್ಲಿ ವರಮಾನ ಇರಲಾರದು. ನಂತರದ ವರ್ಷಗಳಲ್ಲಿ ವರಮಾನ ಹರಿದು ಬರುತ್ತದೆ. ಅಲ್ಲಿಯವರೆಗೆ ಕಾಯಬೇಕಷ್ಟೆ ಎನ್ನುತ್ತಾರೆ ಅವರು.



ಸದ್ಯಕ್ಕೆ ಸಂಸ್ಥೆಯಲ್ಲಿ 20 ಸಿಬ್ಬಂದಿ ತಂತ್ರಜ್ಞರು ಕಾರ್ಯನಿರ್ವಹಿಸುತ್ತಿದ್ದಾರೆ. ಶೀಘ್ರದಲ್ಲಿಯೇ ಸಿಬ್ಬಂದಿ ಸಂಖ್ಯೆಯನ್ನು  40 -45ಕ್ಕೆ ಹೆಚ್ಚಿಸಲಾಗುವುದು. ಅಮೆರಿಕದಲ್ಲಿ ಇರುವ ಸಹ ಸ್ಥಾಪಕರೊಬ್ಬರು ವಹಿವಾಟು ಅಭಿವೃದ್ಧಿ ಹೊಣೆ ನಿಭಾಯಿಸುತ್ತಿದ್ದಾರೆ.



ಮುಂಬರುವ ದಿನಗಳಲ್ಲಿ ಮೊಬೈಲ್, ಐಫೋನ್, ಲ್ಯಾಪ್‌ಟಾಪ್, ಡೆಸ್ಕ್‌ಟಾಪ್‌ಗಳಲ್ಲಿ ವಿಡಿಯೊಗಳ ವೀಕ್ಷಣೆ ಹೆಚ್ಚಲಿದೆ. ಅದಕ್ಕೆ  `ಷಫ್ಲರ್‌ಡಾಟ್‌ಟಿವಿ~ ಅನ್ನೇ ಬಳಕೆದಾರರು ಹೆಚ್ಚಾಗಿ ನೆಚ್ಚಿಕೊಳ್ಳಬೇಕು. ಗೂಗಲ್, ಫೇಸ್‌ಬುಕ್‌ನಂತೆ ಸಂಸ್ಥೆ ಬೆಳೆಸಬೇಕು ಎನ್ನುವ ಮಹತ್ವಾಕಾಂಕ್ಷೆಯೂ ಕಿಶೋರ್ ಅವರಿಗೆ ಇದೆ.    

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.