ಬುಧವಾರ, ನವೆಂಬರ್ 13, 2019
23 °C

ವಿತ್ತೀಯ ಕೊರತೆ ತಗ್ಗಿಸಲು ಸರ್ಕಾರ ಬದ್ಧ: ಚಿದಂಬರಂ

Published:
Updated:

ಟೊರಾಂಟೊ (ಪಿಟಿಐ): ವಿತ್ತೀಯ ಕೊರತೆ ಅಂತರವನ್ನು  2016-17ರ ವೇಳೆಗೆ ಒಟ್ಟಾರೆ ರಾಷ್ಟ್ರೀಯ ಉತ್ಪನ್ನದ (ಜಿಡಿಪಿ) ಶೆ 3ಕ್ಕೆ ತಗ್ಗಿಸಲು ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಹೇಳಿದರು.ಭಾರತ-ಕೆನಡಾ ವ್ಯಾಪಾರ ಮಂಡಳಿ ಇಲ್ಲಿ ಆಯೋಜಿಸಿದ್ದ ಚಹಾಕೂಟದಲ್ಲಿ ಅವರು ಮಾತನಾಡಿದರು.ವಿತ್ತೀಯ ಕೊರತೆ ಹೆಚ್ಚುತ್ತಿರುವುದರಿಂದ ಭಾರತದಲ್ಲಿ ಬಂಡವಾಳ ತೊಡಗಿಸಲು ವಿದೇಶಿ ಹೂಡಿಕೆದಾರರು ಹಿಂದೇಟು ಹಾಕುತ್ತಿದ್ದಾರೆ  ಎನ್ನುವುದನ್ನು ಅವರು ಅಲ್ಲಗಳೆದರು. 2008ರ ಜಾಗತಿಕ ಆರ್ಥಿಕ ಹಿಂಜರಿತದ ನಂತರ ಸರ್ಕಾರ ಹಲವು ಉತ್ತೇಜನ ಕ್ರಮಗಳನ್ನು ಕೈಗೊಂಡಿವೆ. ಇನ್ನು ಮೂರು ವರ್ಷಗಳಲ್ಲಿ ಅಥವಾ ಅದಕ್ಕಿಂತ ಮೊದಲೇ ವಿತ್ತೀಯ ಕೊರತೆಯು `ಜಿಡಿಪಿ'ಯ ಶೇ 3ಕ್ಕೆ ಇಳಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಕಳೆದ ವರ್ಷ ವಿತ್ತೀಯ ಕೊರತೆಯು `ಜಿಡಿಪಿ'ಯ ಶೇ 5.3ಕ್ಕೆ ಇಳಿಕೆ ಕಂಡಿದೆ. ಇನ್ನು ಎರಡು ಮೂರು ತಿಂಗಳಲ್ಲಿ 2012-13ನೇ ಸಾಲಿನ ಪರಿಷ್ಕೃತ ಅಂಕಿ ಅಂಶಗಳು ಪ್ರಕಟಗೊಳ್ಳಲಿದ್ದು ಇದು    ಶೇ 5.1ಕ್ಕೆ ತಗ್ಗಲಿದೆ  ಎಂದು ವಿಶ್ವಾಸ ವ್ಯಕ್ತಪಡಿಸಿದರು.ವಿತ್ತೀಯ ಕೊರತೆ ಮತ್ತು ಹಣದುಬ್ಬರ ನಿಧಾನವಾಗಿ ಸರ್ಕಾರದ ನಿಯಂತ್ರಣಕ್ಕೆ ಬರುತ್ತಿವೆ. ಜಾಗತಿಕ ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ   ತಗೆದುಕೊಂಡ  ಹೆಚ್ಚುವರಿ ಉತ್ತೇಜನ  ಕ್ರಮಗಳಿಂದ ಇವೆರಡು ಸರ್ಕಾರದ ನಿಯಂತ್ರಣದಿಂದ ತಪ್ಪಿಹೋಗಿದ್ದವು ಎಂದು ಚಿದಂಬರಂ ಹೇಳಿದರು.

ಅನಿಲ: ಹೊಸ ನೀತಿ

ತೈಲ ಮತ್ತು ನೈಸರ್ಗಿಕ ಅನಿಲ ದರವನ್ನು ಸರ್ಕಾರಿ ನಿಯಂತ್ರಣದಿಂದ ಮುಕ್ತಗೊಳಿಸುವ ಕುರಿತು ಪರಿಶೀಲನೆ ನಡೆಯುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಹೇಳಿದ್ದಾರೆ.

`ಉತ್ಪಾದನೆ ಹಂಚಿಕೆ ಮಾದರಿ'ಯಡಿ ತೈಲ, ಅನಿಲ ನಿಕ್ಷೇಪ ಪತ್ತೆ ಮತ್ತು ತಯಾರಿಕೆ ಕ್ಷೇತ್ರಗಳಲ್ಲಿ  ಶೇ 100ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಅವಕಾಶ ಕಲ್ಪಿಸಲಾಗಿದೆ. ಈ ಮಾದರಿಯಡಿ ಕಂಪೆನಿಗಳು ತಾವು ತೊಡಗಿಸಿದ ಬಂಡವಾಳ ಸಂಪೂರ್ಣವಾಗಿ ಕೈಗೆ ಬಂದ ನಂತರ ಸರ್ಕಾರದ ಜತೆ ಲಾಭಾಂಶ ಹಂಚಿಕೊಳ್ಳಬೇಕು.

ಇದರ ಬದಲಿಗೆ ಪ್ರಧಾನಿ ಆರ್ಥಿಕ ಸಲಹಾ ಸಮಿತಿ ಅಧ್ಯಕ್ಷ ಸಿ. ರಂಗರಾಜನ್ ನೇತೃತ್ವದ ಸಮಿತಿ ನೀಡಿರುವ ಶಿಫಾರಸಿನ ಅನ್ವಯ ಹೊಸ ನೀತಿ ಜಾರಿಗೆ ತರಲು ಸರ್ಕಾರ ಉದ್ದೇಶಿಸಿದೆ. ಇದರಡಿ ತೈಲ ಮತ್ತು ಅನಿಲ ಕಂಪೆನಿಗಳು ತಯಾರಿಕೆ ಪ್ರಾರಂಭಿಸಿದ ಮೊದಲ ದಿನದಿಂದಲೇ ಸರ್ಕಾರದ ಜತೆ ವರಮಾನ ಹಂಚಿಕೊಳ್ಳಬೇಕು.

ಅಷ್ಟೇ ಅಲ್ಲ,  ಯಾವ ಕಂಪೆನಿ ಹೆಚ್ಚು ಷೇರುಗಳನ್ನು ಖರೀದಿಸುತ್ತದೆಯೋ ಅಂತಹ ಕಂಪೆನಿಗೆ ಮಾತ್ರ ತೈಲ, ಅನಿಲ ತಯಾರಿಕೆಗೆ ಪರವಾನಗಿ ಲಭಿಸುತ್ತದೆ. 5 ವರ್ಷಗಳ ಅವಧಿಗೆ ನೈಸರ್ಗಿಕ ಅನಿಲಕ್ಕೆ ಮಾರುಕಟ್ಟೆ ಆಧರಿಸಿದ ಬೆಲೆ ನಿಗದಿಪಡಿಸಬೇಕು ಎಂದೂ ರಂಗ    ರಾಜನ್ ಸಮಿತಿ ಶಿಫಾರಸು ಮಾಡಿದೆ.

ಪ್ರತಿಕ್ರಿಯಿಸಿ (+)