ವಿದಿತ್‌, ಸಹಜ್‌ಗೆ ಜಯ

7
ಚೆಸ್‌: ವಿಶ್ವ ಜೂನಿಯರ್‌ ಚಾಂಪಿಯನ್‌ಷಿಪ್‌

ವಿದಿತ್‌, ಸಹಜ್‌ಗೆ ಜಯ

Published:
Updated:

ಕೊಜಾಯೆಲಿ, ಟರ್ಕಿ (ಪಿಟಿಐ): ಭಾರತದ ಗ್ರ್ಯಾಂಡ್‌ಮಾಸ್ಟರ್‌ಗಳಾದ ವಿದಿತ್‌ ಗುಜರಾತಿ ಮತ್ತು ಸಹಜ್‌ ಗ್ರೋವರ್‌ ಇಲ್ಲಿ ನಡೆಯುತ್ತಿರುವ ವಿಶ್ವ ಜೂನಿಯರ್‌ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಜಂಟಿ ಮುನ್ನಡೆ ಕಾಪಾಡಿಕೊಂಡಿದ್ದಾರೆ.ಭಾನುವಾರ ನಡೆದ ಎರಡನೇ ಸುತ್ತಿನ ಪಂದ್ಯಗಳಲ್ಲಿ ವಿದಿತ್‌ ಲಿಥುವೇನಿಯದ ಥಾಮಸ್‌ ಲರುಸಾಸ್‌ ವಿರುದ್ಧವೂ, ಸಹಜ್‌ ಕಜಕಸ್ತಾನದ ವಾಚೆಸ್ಲಾವ್‌ ಲೊಜ್ನಿಕೋವ್‌ ಎದುರೂ ಗೆಲುವು ಪಡೆದರು.ಆಡಿದ ಎರಡೂ ಪಂದ್ಯಗಳಲ್ಲಿ ಗೆಲುವು ಪಡೆದಿರುವ ಭಾರತದ ಸ್ಪರ್ಧಿಗಳು ಇತರ 15 ಆಟಗಾರರ ಜೊತೆ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಕಪ್ಪು ಕಾಯಿಗಳೊಂದಿಗೆ ಆಡಿದ ವಿದಿತ್‌ ಚಾಣಾಕ್ಷ ನಡೆಗಳ ಮೂಲಕ ಎದುರಾಳಿಯನ್ನು ಮಣಿಸಿದರು.10 ವರ್ಷ ವಯಸ್ಸಿನೊಳಗಿನ ವಿಭಾಗದಲ್ಲಿ ವಿಶ್ವ ಚಾಂಪಿಯನ್‌ ಎನಿಸಿಕೊಂಡಿದ್ದ ಗ್ರೋವರ್‌ ಕೇವಲ 20 ನಡೆಗಳಲ್ಲಿ ಎದುರಾಳಿಯನ್ನು ಮಣಿಸಿದರು. ಚೀನಾದ ಯು ಯಾಂಗ್‌ಯಿ ಭಾರತದ ಎಸ್‌.ಎಲ್‌. ನಾರಾಯಣನ್‌ ಅವರನ್ನು ಮಣಿಸಿದರೆ, ಎಸ್‌.ಪಿ. ಸೇತುರಾಮನ್‌ ಇಟಲಿಯ ಸಿಮೊನ್‌ ಡಿ ಫ್ಲೊಮೆನೊ ಜೊತೆ ಡ್ರಾ ಸಾಧಿಸಿದರು.ಭಾರತದ ಎನ್‌. ಶ್ರೀನಾಥ್‌ ಸ್ಥಳೀಯ ಸ್ಪರ್ಧಿ ಸಾಲಿಹ್‌ ಜೈದಾನ್‌ ಅವರನ್ನು ಮಣಿಸಿ ಪಾಯಿಂಟ್‌ ಖಾತೆ ತೆರೆದರೆ, ದೇಬಶಿಷ್‌ ದಾಸ್‌ ಇಂಗ್ಲೆಂಡ್‌ನ ಸ್ಯಾಮುಯೆಲ್‌ ಫ್ರಾಂಕ್ಲಿನ್‌ ಅವರೊಂದಿಗೆ ಪಾಯಿಂಟ್‌ ಹಂಚಿಕೊಂಡರು.ಆದರೆ ಬಾಲಕಿಯರ ವಿಭಾಗದಲ್ಲಿ ಭಾರತಕ್ಕೆ ನಿರಾಸೆ ಎದುರಾಯಿತು. ಪದ್ಮಿನಿ ರಾವತ್‌  ರ‍್ಯಾಂಕಿಂಗ್‌ನಲ್ಲಿ ತನಗಿಂತ ಕೆಳಗಿನ ಸ್ಥಾನದಲ್ಲಿರುವ ಸ್ಪರ್ಧಿ ಚೀನಾದ ಕ್ಸಿಯಾವೊ ಯಿಯಿ ಕೈಯಲ್ಲಿ ಪರಾಭವಗೊಂಡರೆ, ರುಚಾ ಪೂಜಾರಿ ಚೀನಾದ ಜಾಯ್‌ ಮೊ ಎದುರು ಸೋಲು ಅನುಭವಿಸಿದರು. ಇವಾನಾ ಫುರ್ಟಾಡೊ ಇಂಡೊನೇಷ್ಯದ ಮೆಡಿನಾ ವಾರ್ದಾ ಅಲಿಯಾ ಎದುರು ನಿರಾಸೆ ಅನುಭವಿಸಿದರು.ಜೆ. ಶರಣ್ಯ ಮತ್ತು ಜಿ.ಕೆ. ಮೋನಿಷಾ ಕ್ರಮವಾಗಿ ರಷ್ಯಾದ ಅನ್ನಾ ಸ್ಟೈಜ್‌ಕಿನಾ ಹಾಗೂ ಕೊಲಂಬಿಯದ ಆಂಡ್ರಿಯಾ ಪೌಲಾ ರಾಡ್ರಿಗಸ್‌ ಜೊತೆ ಡ್ರಾ ಸಾಧಿಸಿದರು. ಇದೀಗ ಇಬ್ಬರೂ ತಲಾ 1.5 ಪಾಯಿಂಟ್ ಹೊಂದಿದ್ದಾರೆ.20 ವರ್ಷ ವಯಸ್ಸಿನೊಳಗಿನ ವಿಭಾಗದಲ್ಲಿ ವಿಶ್ವದ ಶ್ರೇಷ್ಠ ಸ್ಪರ್ಧಿ ಯಾರೆಂಬುದನ್ನು ಕಂಡುಕೊಳ್ಳಲು ನಡೆಯುತ್ತಿರುವ ಈ ಟೂರ್ನಿಯಲ್ಲಿ ಇನ್ನೂ 11 ಸುತ್ತುಗಳ ಸ್ಪರ್ಧೆಗಳು ಬಾಕಿಯುಳಿದಿವೆ. ಇಲ್ಲಿ ಚಾಂಪಿಯನ್‌ ಆಗುವ ಸ್ಪರ್ಧಿ ಮುಂದಿನ ವಿಶ್ವಕಪ್‌ನಲ್ಲಿ ಆಡಲು ಅರ್ಹತೆ ಪಡೆಯುವನು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry