ವಿದೇಶಕ್ಕೆ ಸ್ಪೀಕರ್ ಬೋಪಯ್ಯ

7

ವಿದೇಶಕ್ಕೆ ಸ್ಪೀಕರ್ ಬೋಪಯ್ಯ

Published:
Updated:
ವಿದೇಶಕ್ಕೆ ಸ್ಪೀಕರ್ ಬೋಪಯ್ಯ

ಬೆಂಗಳೂರು: ಕರ್ನಾಟಕ ಜನತಾ ಪಕ್ಷದ (ಕೆಜೆಪಿ) ಜೊತೆ ಗುರುತಿಸಿಕೊಂಡಿರುವ ಬಿಜೆಪಿಯ ಶಾಸಕರು ತಮ್ಮ ಸ್ಥಾನಕ್ಕೆ ಬುಧವಾರ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಆದರೆ, ಅವರ ರಾಜೀನಾಮೆ ಅಂಗೀಕರಿಸುವ ಅಧಿಕಾರವುಳ್ಳ ವಿಧಾನಸಭೆಯ ಸ್ಪೀಕರ್ ಕೆ.ಜಿ. ಬೋಪಯ್ಯ ಅವರು ಮಂಗಳವಾರ ರಾತ್ರಿ ಸದ್ದಿಲ್ಲದೆ ವಿದೇಶಕ್ಕೆ ತೆರಳಿದ್ದಾರೆ!ಬೆಂಬಲಿಗ ಶಾಸಕರಿಂದ ರಾಜೀನಾಮೆ ಕೊಡಿಸಿ, ಸರ್ಕಾರವನ್ನು ಪದಚ್ಯುತಗೊಳಿಸುವುದು ಕೆಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಯೋಜನೆ. ಆದರೆ ಇದರ ಸುಳಿವು ಪಡೆದಿರುವ ಬಿಜೆಪಿ, ಸ್ಪೀಕರ್ ಬೋಪಯ್ಯ ಅವರನ್ನು ವಿದೇಶ ಪ್ರವಾಸಕ್ಕೆ ಕಳುಹಿಸಿದೆ ಎಂದು ಗೊತ್ತಾಗಿದೆ.

ಬೋಪಯ್ಯ ಅವರು ನೆರೆಯ ನೇಪಾಳಕ್ಕೆ ತೆರಳಿದ್ದಾರೆ ಎಂದು ಬಿಜೆಪಿ ಮೂಲಗಳು ಹೇಳಿವೆ. ವಿಧಾನಮಂಡಲದ ಜಂಟಿ ಅಧಿವೇಶನ ಫೆಬ್ರುವರಿ 4ರಂದು ನಡೆಯಲಿದೆ. ಹೀಗಾಗಿ ಅದಕ್ಕೂ ಮುನ್ನ ಅವರು ರಾಜ್ಯಕ್ಕೆ ವಾಪಸಾಗುವುದು ಅನುಮಾನ.ರಾಜ್ಯ ಸರ್ಕಾರ ಫೆ.8ರಂದು ಬಜೆಟ್ ಮಂಡಿಸಲು ಸಿದ್ಧತೆ ನಡೆಸಿದೆ. ಅಲ್ಲಿಯವರೆಗೂ ಶತಾಯಗತಾಯ ಸರ್ಕಾರ  ಉಳಿಸಿಕೊಳ್ಳುವುದಕ್ಕೆ ಹೆಣೆದ ರಾಜಕೀಯ ತಂತ್ರಗಾರಿಕೆಯ ಭಾಗವಾಗಿ ಬೋಪಯ್ಯ ಅವರನ್ನು ವಿದೇಶಕ್ಕೆ ಕಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಒಂದು ವೇಳೆ ಬಿಎಸ್‌ವೈ ಬೆಂಬಲಿಗ ಶಾಸಕರು ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರಕ್ಕೆ ಬೆಂಬಲ ವಾಪಸ್ ಪತ್ರ ಸಲ್ಲಿಸಿದರೆ `ಅವರನ್ನೆಲ್ಲ ಅನರ್ಹಗೊಳಿಸುವ ಆಲೋಚನೆಯೂ' ಬಿಜೆಪಿಗಿದೆ. ಇದಕ್ಕಾಗಿ ರಾಜ್ಯಪಾಲರಿಗೆ ಪತ್ರ ತಲುಪಿದ ತಕ್ಷಣ ಬೋಪಯ್ಯ ಬೆಂಗಳೂರಿಗೆ ಧಾವಿಸಿ ಬರುವ ಸಾಧ್ಯತೆಗಳೂ ಇವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry