`ವಿದೇಶಗಳಲ್ಲಿ ಕನ್ನಡ ಬೆಳೆಸಲು ನೆರವು ನೀಡಿ'

7
ಮನೆಯಂಗಳದ ಮಾತುಕತೆಯಲ್ಲಿ ಲಿಂಗಣ್ಣ ಮನವಿ

`ವಿದೇಶಗಳಲ್ಲಿ ಕನ್ನಡ ಬೆಳೆಸಲು ನೆರವು ನೀಡಿ'

Published:
Updated:

ಬೆಂಗಳೂರು: `ಹೊರ ದೇಶಗಳಲ್ಲೂ ಕನ್ನಡ ಬೆಳೆಯಲು ರಾಜ್ಯ ಸರ್ಕಾರ ಅಲ್ಲಿನ ಗ್ರಂಥಾಲಯಗಳಿಗೆ, ಸಂಘ ಸಂಸ್ಥೆಗಳಿಗೆ ಪುಸ್ತಕಗಳನ್ನು ಒದಗಿಸಬೇಕು' ಎಂದು ಏಷಿಯಾ ಫೆಸಿಫಿಕ್ ಕನ್ನಡ ಒಕ್ಕೂಟದ ಸಂಸ್ಥಾಪನಾ ಅಧ್ಯಕ್ಷ ಡಾ.ಲಿಂಗಣ್ಣ ಕಲಬುರ್ಗಿ ಹೇಳಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಗರದಲ್ಲಿ ಶನಿವಾರ ಆಯೋಜಿಸಿದ್ದ `ಮನೆಯಂಗಳದಲ್ಲಿ ಮಾತುಕತೆ' ತಿಂಗಳ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.`ಕೆಲಸಕ್ಕೆ ತಕ್ಕಂತೆ ಫಲಿತಾಂಶವು ಇರಬೇಕು. ಹೊರ ದೇಶಗಳಲ್ಲಿ ಕನ್ನಡ ಬೆಳೆಯಲು ಸರ್ಕಾರವು ಕೂಡ ಮುತುವರ್ಜಿ ವಹಿಸಬೇಕು. ಅಲ್ಲಿನ ಕನ್ನಡ ಸಂಘ ಸಂಸ್ಥೆಗಳಿಗೆ ಪ್ರೋತ್ಸಾಹವನ್ನು ನೀಡಬೇಕು' ಎಂದರು.`ಎಲ್ಲರೂ ಬಯಸುವುದು ಸಮಾಜದ ಏಳಿಗೆಯನ್ನು. ಆದರೆ, ಒಂದು ಕೈ ಅಥವಾ ಎರಡು ಕೈಯಿಂದ ಸಮಾಜವನ್ನು ಮುನ್ನಡೆಸಲು ಸಾಧ್ಯವಿಲ್ಲ. ಅದಕ್ಕಾಗಿ ಎಲ್ಲರ ಸಹಕಾರ ಬೇಕಾಗುತ್ತದೆ. ನನಗೆ ಹೊರ ದೇಶಗಳಲ್ಲಿರುವ ಕನ್ನಡಿಗರ ಪ್ರೋತ್ಸಾಹದಿಂದಲೇ ಈ ಕಾರ್ಯಗಳನ್ನು ಮಾಡಲು ಸಾಧ್ಯವಾಗಿದೆ' ಎಂದು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.`ನ್ಯೂಜಿಲೆಂಡ್ ಸರ್ಕಾರ ನನಗೆ ನೀಡಿದ ಜಸ್ಟೀಸ್ ಆಫ್ ಪೀಸ್ ಮತ್ತು ಕ್ವೀನ್ಸ್ ಅವಾರ್ಡ್‌ಗಳಿಗಿಂತ ಇಲ್ಲಿ ನನ್ನ ಜನರ ಮಧ್ಯೆ ರಾಜ್ಯೋತ್ಸವ ಪ್ರಶಸ್ತಿ ಮತ್ತು ಸನ್ಮಾನವನ್ನು ಸ್ವೀಕರಿಸುತ್ತಿರುವುದು ನನಗೆ ಸಂತಸ ತಂದಿದೆ' ಎಂದರು.`ನ್ಯೂಜಿಲೆಂಡ್‌ನ ಜನ ಮತ್ತು ಅಲ್ಲಿನ ಸರ್ಕಾರವು ಯಾವುದೇ ಕೆಲಸ ಕಾರ್ಯಗಳಿಗೆ ಸನ್ಮಾನವನ್ನು ಮಾಡುವುದಿಲ್ಲ. ಅವರು ತೋರಿಸುವ ವಿಶ್ವಾಸವೇ ಗೌರವವಾಗುತ್ತದೆ. ಅಲ್ಲಿನ ಜನರು ಮುಕ್ತ ಸ್ವಭಾವದವರು' ಎಂದರು.`ನ್ಯೂಜಿಲೆಂಡ್‌ನ ಜನ ಸ್ವತಂತ್ರ ಪ್ರವೃತ್ತಿಯವರು. ಸರಳ ಜನರು. ಅಲ್ಲಿ ಸಾಧನೆ ಮಾಡಬೇಕೆಂದು ಬಯಸಿದವರು ಏನಾದರೂ ಸಾಧನೆ ಮಾಡಬಹುದು. ಏಕೆಂದರೆ, ಅಲ್ಲಿ ಸ್ವಚ್ಛವಾದ ಜನರು, ಸ್ವಚ್ಛವಾದ ಮನಸ್ಸುಗಳಿವೆ' ಎಂದರು.`ಏಷಿಯಾ ಫೆಸಿಫಿಕ್ ಕನ್ನಡ ಒಕ್ಕೂಟವು ಸಿಂಗಪುರ, ಮಲೇಷಿಯಾ, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಹಾಂಕಾಂಗ್‌ನಲ್ಲಿ ಕನ್ನಡದ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ದೀಪಾವಳಿ, ರಾಜ್ಯೋತ್ಸವ ಹಬ್ಬಗಳ ಆಚರಣೆಯನ್ನು ಕೂಡ ವಿಭಿನ್ನ ರೀತಿಯಲ್ಲಿ ಆಚರಿಸುತ್ತ ಬಂದಿದೆ' ಎಂದು ಹೇಳಿದರು.`ನನ್ನ ಓದುವ ಆಸಕ್ತಿ ಬೆಳೆಯಲು ಮತ್ತು ನನ್ನ ಗ್ರಂಥಾಲಯ ವಿಜ್ಞಾನ ವ್ಯಾಸಂಗಕ್ಕೆ ಸ್ಫೂರ್ತಿಯಾದವರು ನನ್ನ ಚಿಕ್ಕಪ್ಪ ಎಂ.ಎಂ.ಕಲಬುರ್ಗಿ ಅವರು. ಅಧ್ಯಾಪಕರಾಗಿದ್ದ ಅವರು ಸದಾ ಓದುತ್ತಿದ್ದರು. ಅವರೇ ನನ್ನಲ್ಲಿ ಓದುವ ಮತ್ತು ತಿಳಿಯುವ ಕುತೂಹಲವನ್ನು ಬೆಳೆಸಿದವರು' ಎಂದು ನೆನಪಿಸಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry