ಸೋಮವಾರ, ನವೆಂಬರ್ 18, 2019
27 °C

`ವಿದೇಶದಲ್ಲಿದ್ದರೂ ಭಾರತೀಯರಾಗಿರಬೇಕು'

Published:
Updated:

ಜಮಖಂಡಿ: ಸಂಶೋಧನೆ ಮತ್ತು ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳಿದರೂ ಸಹ ಭಾರತೀಯನಂತೆ ಚಿಂತನೆ ಮಾಡಬೇಕು. ಭಾರತೀಯನಂತೆ ವರ್ತಿಸಬೇಕು. ಭಾರತೀಯನಾಗಿರಬೇಕು ಎಂದು ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಡಾ.ಟಿ.ಆರ್. ಸುಬ್ರಮಣ್ಯ ಹೇಳಿದರು.ಸ್ಥಳೀಯ ಬಿಎಲ್‌ಡಿಇಎ ಕಾಲೇಜು ಐತಿಹಾಸಿಕ ದರ್ಬಾರ ಹಾಲ್‌ನಲ್ಲಿ ಶನಿವಾರ ಏರ್ಪಡಿಸಿದ್ದ ಕಾಲೇಜಿನ ಪ್ರಸಕ್ತ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಒಕ್ಕೂಟ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯ ಕ್ರಮದಲ್ಲಿ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ಯಾವುದೇ ಉನ್ನತ ಹುದ್ದೆಯನ್ನು ಅಲಂಕರಿಸಿದರೂ ಸಹ ತಂದೆ- ತಾಯಿಗಳನ್ನು, ಆತ್ಮೀಯ ಸ್ನೇಹಿತರನ್ನು, ಶಿಕ್ಷಕರನ್ನು ಎಂದೂ ಮರೆಯಬಾರದು. ಯಾರು ಗುರು-ಹಿರಿಯ ರನ್ನು ಗೌರವಿಸುವುದಿಲ್ಲವೋ ಅವರು ಜೀವನದಲ್ಲಿ ಮುಂದೆ ಬರಲು ಸಾಧ್ಯವಿಲ್ಲ. ಶಿಸ್ತು, ಶ್ರದ್ಧೆ, ಸಮರ್ಪಣಾಭಾವ ಮೈಗೂಡಿಸಿಕೊಂಡಾಗ ಮಾತ್ರ ಜೀವನದಲ್ಲಿ ಸಫಲತೆ ಸಾಧ್ಯ ಎಂದರು.ಬಿಎಲ್‌ಡಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಪ್ರೊ.ಎಸ್.ಎಚ್. ಲಗಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ಥಳೀಯ ಬಿಎಲ್‌ಡಿಇಎ ಕಾಲೇಜು ಇದೇ ಶೈಕ್ಷಣಿಕ ವರ್ಷದಲ್ಲಿ 50 ವರ್ಷಗಳ ತನ್ನ ಸಾರ್ಥಕ ಸೇವೆಯನ್ನು ಪೂರೈಸಿರುವ ಪ್ರಯುಕ್ತ 2013- 14ನೇ ಶೈಕ್ಷಣಿಕ ವರ್ಷದಲ್ಲಿ ಸುವರ್ಣ ಮಹೋತ್ಸವ ಆಚರಿಸಿ ಕೊಳ್ಳಲಿದೆ ಎಂದರು.ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಪಿ.ಎಸ್. ಹಿರೇಮಠ, ವಿದ್ಯಾರ್ಥಿ ಪ್ರತಿನಿಧಿಗಳಾದ ಬಸವರಾಜ ಹುನ್ನೂರ, ಶಿವಶಂಕರ ಕಾಳೆ ವೇದಿಕೆಯಲ್ಲಿದ್ದರು.

ಡಿ.ಪುಷ್ಪಾ ಹಾಗೂ ಸಂಗಡಿಗರು ಪ್ರಾರ್ಥನೆ ಗೀತೆ ಹಾಡಿದರು. ರಾಜೇಶ್ವರಿ ಪಾಟೀಲ ಹಾಗೂ ಸಂಗಡಿಗರು ಸ್ವಾಗತ ಗೀತೆ ಹಾಡಿದರು.ಪ್ರಾಚಾರ್ಯ ಡಾ.ಎಸ್.ಎಸ್. ಸುವರ್ಣಖಂಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಟಿ.ಪಿ. ಗಿರಡ್ಡಿ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿ ಒಕ್ಕೂಟದ ಕಾರ್ಯಾಧ್ಯಕ್ಷ ಪ್ರೊ. ಬಿ.ಎಸ್. ದೇಸಾಯಿ, ಕ್ರೀಡಾ ವಿಭಾಗದ ಉಪಾಧ್ಯಕ್ಷ ಡಾ.ಎಸ್.ಜಿ. ಹಿರೇಮಠ ಕ್ರೀಡಾ ವರದಿ ಸಾದರ ಪಡಿಸಿದರು. ಪ್ರೊ. ಬಿ.ಐ. ಕರಲಟ್ಟಿ, ಕೆ.ಎಂ. ಶಿರ ಹಟ್ಟಿ, ವಿ.ಎಲ್. ನಾರಾಯಣಪುರ, ಪ್ರೊ. ಎಸ್.ಬಿ.ಕಮತಿ ನಿರೂಪಿಸಿದರು. ಭಾಗ್ಯಶ್ರೀ ನಾರಾಯಣಪುರ ವಂದಿಸಿದರು.ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದತ್ತಿನಿಧಿ ಶಿಷ್ಯವೇತನ ವಿತರಣೆ, ಪ್ರತಿಭಾ ಪುರಸ್ಕಾರ, ವಿಶೇಷ ಸಾಧಕರ ಸನ್ಮಾನ ಕಾರ್ಯಕ್ರಮ ಇದೇ ಸಂದರ್ಭದಲ್ಲಿ ಜರುಗಿತು.

ಪ್ರತಿಕ್ರಿಯಿಸಿ (+)