ಭಾನುವಾರ, ಆಗಸ್ಟ್ 18, 2019
23 °C
ಸ್ನೊಡೆನ್‌ಗೆ ಆಶ್ರಯ ನೀಡಿದರೆ `ಸ್ನೇಹಿತ'ನಿಗೆ ಅಹಿತ- ಸಲ್ಮಾನ್

ವಿದೇಶಾಂಗ ನೀತಿಗೆ ಜನಾಭಿಪ್ರಾಯ ಸಂಗ್ರಹ

Published:
Updated:

ಬೆಂಗಳೂರು: ವಿದೇಶಾಂಗ ನೀತಿಗಳನ್ನು ಯಾರೋ ದೆಹಲಿಯಲ್ಲಿ ಕುಳಿತು ರೂಪಿಸುವುದಲ್ಲ. ನೀತಿಗಳನ್ನು ರೂಪಿಸುವಲ್ಲಿ ಸಾರ್ವಜನಿಕರ ಪಾತ್ರವೂ ಪ್ರಮುಖವಾಗಿದೆ. ಈ ಕಾರ್ಯದಲ್ಲಿ ಜನರ ಅಭಿಪ್ರಾಯ ಹಾಗೂ ಸಲಹೆಗಳನ್ನು ಪಡೆಯಲು ವಿದೇಶಾಂಗ ಸಚಿವಾಲಯ ಮೊದಲ ಬಾರಿಗೆ ಮುಂದಾಗಿದೆ ಎಂದು ಕೇಂದ್ರ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ತಿಳಿಸಿದರು.ವಿದೇಶಾಂಗ ಸಚಿವಾಲಯವು ನಗರದ ಖಾಸಗಿ ಹೋಟೆಲ್‌ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತ-ಪಾಕಿಸ್ತಾನ ಮತ್ತು ಭಾರತ-ಚೀನಾ ನಡುವಿನ ಗಡಿ ಸಮಸ್ಯೆ, ಆಫ್ರಿಕ ಜತೆಗಿನ ಆರ್ಥಿಕ ಸಂಬಂಧ, ಈಜಿಪ್ಟ್ ಹಾಗೂ ಇರಾಕ್‌ಗಳಲ್ಲಿ ನಡೆಯುತ್ತಿರುವ ಆಂತರಿಕ ಕಲಹಗಳ ಬಗ್ಗೆ ಮಾಹಿತಿ ನೀಡಿದರು.ವಿದೇಶಾಂಗ ನೀತಿಗಳ ಬಗ್ಗೆ ಮಾಹಿತಿ ದೊರೆಯುವ ಅಂತರಜಾಲ ತಾಣಗಳಿಗೆ  ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭೇಟಿ ನೀಡಿ ಬೇಕಾದ ಮಾಹಿತಿಯನ್ನು ಪಡೆಯಬಹುದು. ಜೊತೆಗೆ ನೀತಿಗಳನ್ನು ರೂಪಿಸಲು ತಮ್ಮ ಸಲಹೆ, ನೀತಿಗಳ ಬಗ್ಗೆ ತಮ್ಮ ಅಭಿಪ್ರಾಯ ಮತ್ತು ಟೀಕೆಗಳನ್ನು ನೀಡಬೇಕು ಎಂದು ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಭಾಗವಹಿಸಿದ್ದ ಇತರರಿಗೆ ಪ್ರಶ್ನೆ ಕೇಳಲು ಅವಕಾಶ ಕಲ್ಪಿಸಲಾಗಿತ್ತು. ಈ ಸಮಯದಲ್ಲಿ ವಿದ್ಯಾರ್ಥಿನಿಯೊಬ್ಬರು ಧ್ರುವ ಪ್ರದೇಶಗಳಲ್ಲಿ ಅಮೆರಿಕ ಹಾಗೂ ಕೆನಡಾ ದೇಶಗಳು ನಡೆಸುತ್ತಿರುವ ಸೇನಾ ಚಟುವಟಿಕೆ ಜಾಗತಿಕ ತಾಪಮಾನದ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಇದರ ಬಗ್ಗೆ ಭಾತರದ ನಿಲುವು ಏನು?  ಎಂದು ಪ್ರಶ್ನಿಸಿದರು. ಅದಕ್ಕೆ ಸರಿಯಾಗಿ ಉತ್ತರಿಸದ ಸಚಿವರು ಅಲ್ಲಿ ಭಾರತವೂ ಸಂಶೋಧನೆಗಳನ್ನು ನಡೆಸುತ್ತಿದ್ದು, ಹವಾಮಾನ ವೈಪರೀತ್ಯದಿಂದ ಅಲ್ಲಿ ಇಡೀ ವರ್ಷವೆಲ್ಲಾ ಉಳಿಯಲು ಸಾಧ್ಯವಾಗುತ್ತಿಲ್ಲ ಎಂದರು.ಅಸಮರ್ಪಕ ಉತ್ತರ: ಅಮೆರಿಕದ ಎಡ್ವರ್ಡ್ ಸ್ನೊಡೆನ್‌ಗೆ ಭಾರತ ಆಶ್ರಯ ನೀಡಲು ನಿರಾಕರಿಸಿದ ಬಗ್ಗೆ ವಿದ್ಯಾರ್ಥಿಯೊಬ್ಬರು ಕೇಳಿದ ಪ್ರಶ್ನೆಗೆ ಅಸಮಾಧಾನದಿಂದಲೇ ಉತ್ತರಿಸಿದ ಸಲ್ಮಾನ್ ಖುರ್ಷಿದ್, ಅವರಿಂದ ಭಾರತಕ್ಕೆ ಮಹತ್ತರವಾದ ಕೊಡುಗೆ ಏನು ದೊರೆತಿಲ್ಲ. ಅಲ್ಲದೆ ಸ್ನೇಹಿತನಿಗೆ ಅಹಿತವಾದ ಕೆಲಸವನ್ನು ಯಾರೂ ಮಾಡುವುದಿಲ್ಲ ಎಂದು ಹೇಳಿದರು.  ಭಾರತದ ಗಡಿಯಲ್ಲಿ ಚೀನಾ ಅತಿಕ್ರಮ ಪ್ರವೇಶ ಮಾಡಿದರೂ ಈ ಸಂಬಂಧ ನಿರ್ಧಾರ ತೆಗೆದುಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಳ್ಳಲಾಗುತ್ತದೆ ಎಂದು ನಿವೃತ್ತ ಸೇನಾ ಅಧಿಕಾರಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಇಂತಹ ಸಮಸ್ಯೆಗಳಿಗೆ ಕೇವಲ ನಾವೇ ನಿರ್ಧಾರ ತೆಗೆದುಕೊಳ್ಳುವುದಾದರೆ ಅದು ಕೆಲವೇ ಗಂಟೆಗಳಲ್ಲಿ ನಿರ್ಧಾರವಾಗುತ್ತದೆ.  ಆಫ್ರಿಕಾದಿಂದ ಭಾರತಕ್ಕೆ ವಿದ್ಯಾಭ್ಯಾಸಕ್ಕಾಗಿ ಬರುವ ವಿದ್ಯಾರ್ಥಿಗಳು ವೀಸಾ ಸಮಸ್ಯೆ ಎದುರಿಸುತ್ತಿರುವ ಬಗ್ಗೆ ವಿದ್ಯಾರ್ಥಿಯೊಬ್ಬರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಮಸ್ಯೆಗಳನ್ನು ವಿವರವಾಗಿ ಪತ್ರದ ಮೂಲಕ ತಲುಪಿಸಿದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.ಅಮೆರಿಕದ ಜತೆಗೆ ವೃತ್ತಿಪರ ವೀಸಾ ಪಡೆಯಲು ಸಮಸ್ಯೆ ಎದುರಿಸುತ್ತಿರುವುದಾಗಿ ಕರ್ನಾಟಕದ ಜನತೆ ದೂರುತ್ತಿದ್ದರೆ, ಕೇರಳ ಮೂಲದವರು ಅರಬ್ ರಾಷ್ಟ್ರಗಳಲ್ಲಿ ಉದ್ಯೋಗ ಪಡೆದು ಪರದಾಡುತ್ತಿರುವ ಜನತೆ ಬಗ್ಗೆ ಚಿಂತೆಗೆ ಒಳಗಾಗಿದ್ದಾರೆ. ಹೀಗೆ ಪ್ರತಿಯೊಬ್ಬರೂ ತಮ್ಮದೇ ಆದ ನಿರ್ದಿಷ್ಟ ಸಮಸ್ಯೆಗಳನ್ನು ಮುಂದಿಡುತ್ತಿದ್ದಾರೆ. ಆದರೆ ಯಾರೂ ಅಂತರ ರಾಷ್ಟ್ರಿಯ ಮಟ್ಟದಲ್ಲಿ ನಮ್ಮ ದೇಶ ಯಾವ ಸ್ಥಾನವನ್ನು ಅಲಂಕರಿಸಬೇಕು ಎಂಬುದರ ಬಗ್ಗೆ ಚಿಂತನೆ ಮಾಡುತ್ತಿಲ್ಲ. ಮೊದಲು ದೇಶದ ಜನರು ಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕಿದೆ ಎಂದು ಮನವಿ ಮಾಡಿದರು.ಪ್ರಾರಂಭದಲ್ಲಿ ಮಾತನಾಡಿದ ಆಹಾರ ಮತ್ತು ನಾಗರಿಕ ಸಚಿವ ದಿನೇಶ್ ಗುಂಡೂರಾವ್, ಅಮೆರಿಕದ ವೃತ್ತಿಪರ ವೀಸಾ ಪಡೆಯಲು ಸಮಸ್ಯೆಯಾಗುತ್ತಿದೆ. ಈ ಸಂಬಂಧ ಐ.ಟಿ ಸಂಸ್ಥೆಗಳಿಗಂದ ಸಾಕಷ್ಟು ದೂರುಗಳು ಬರುತ್ತಿವೆ. ವಿದೇಶಾಂಗ ಇಲಾಖೆ ಇತ್ತ ಗಮನಹರಿಸಿ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಮನವಿ ಮಾಡಿದರು. ಶಾಸಕ ಎನ್.ಎ. ಹ್ಯಾರಿಸ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ  ಎಸ್.ವಿ. ರಂಗನಾಥ್, ಹಿರಿಯ ಅಧಿಕಾರಿಗಳು ಮತ್ತು ನಗರದ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Post Comments (+)