ವಿದೇಶಿಯರಿಂದ ಶಿಕ್ಷಕರಿಗೆ ತರಬೇತಿ!

7

ವಿದೇಶಿಯರಿಂದ ಶಿಕ್ಷಕರಿಗೆ ತರಬೇತಿ!

Published:
Updated:

ಶ್ರೀರಂಗಪಟ್ಟಣ: ಪಟ್ಟಣದ ಕ್ಷೇತ್ರ ಸಂಪನ್ಮೂಲ ಕೇದ್ರದಲ್ಲಿ ಶಿಕ್ಷಕರಿಗೆ ಸೋಮವಾರ ಏರ್ಪಡಿಸಿದ್ದ ಬ್ರಿಟಿಷ್ ಕೌನ್ಸಿಲ್ ಟೀಚರ್ ಡೆವಲಪ್‌ಮೆಂಟ್ ಪ್ರೋಗ್ರಾಂ ಸ್ಪೋಕನ್ ಇಂಗ್ಲಿಷ್ ಫೇಸ್-2 ತರಬೇತಿ ಕಾರ್ಯಕ್ರಮದಲ್ಲಿ ವಿದೇಶಿಯರಿಬ್ಬರು ಪಾಲ್ಗೊಂಡು ಮಾರ್ಗದರ್ಶನ ನೀಡಿದರು.ಪ್ರವಾಸಕ್ಕೆಂದು ಇಲ್ಲಿಗೆ ಆಗಮಿಸಿದ್ದ ಇಂಗ್ಲೆಂಡಿನ ಎಂಜಿನಿಯರ್ ಆಂಡ್ರ್ಯೂ ಜೋನಾಥನ್ ಜೇಮ್ಸ ಹಾಗೂ ಅವರ ಗೆಳತಿ ಜರ್ಮನಿಯ ನಿನಾ ಬೆಹ್ರೆಂಡ್ ಅವರನ್ನು ಸಂಪನ್ಮೂಲ ವ್ಯಕ್ತಿ ಕೆಂಪರಾಜು ಹಾಗೂ ಕೆ.ಎನ್.ಪುರುಷೋತ್ತಮ ತರಬೇತಿ ಸ್ಥಳಕ್ಕೆ ಕರೆತಂದರು. ತಮ್ಮ ತಮ್ಮ ದೇಶದಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳಲ್ಲಿ ಇಂಗ್ಲಿಷ್ ಬೋಧಿಸುವ ಕ್ರಮದ ಕುರಿತು ಈ ಜೋಡಿ ಶಿಕ್ಷಕರಿಗೆ ಮಾಹಿತಿ ನೀಡಿತು. ಇಂಗ್ಲಿಷ್ ಪಠ್ಯ ಭಾಗವನ್ನು ಓದುವ ಕಲೆ ಹಾಗೂ ಭಾಷಾಂತರ ಕುರಿತು ಸುಮಾರು 30 ನಿಮಿಷ ಮಾತನಾಡಿದರು. ಇಂಗ್ಲಿಷ್ ಬೋಧಿಸುವ ಶಿಕ್ಷಕರ ತರಬೇತಿ ಉದ್ದೇಶದಿಂದ ಸಿದ್ಧಪಡಿಸಿರುವ ಟೀಚರ್ಸ್‌ ವರ್ಕ್‌ಬುಕ್‌ನಲ್ಲಿರುವ `ಕೃಷ್ಣ ಮತ್ತು ಸುಧಾಮ' ಭಾಗವನ್ನು ಸರಳ ಹಾಗೂ ಸುಲಲಿತವಾಗಿ ವಾಚನ ಮಾಡಿದರು.ಜೋನಾಥನ್ ಜೇಮ್ಸ ತರಬೇತಿಯಲ್ಲಿ ಪಾಲ್ಗೊಂಡಿದ್ದ ಶಿಕ್ಷಕರಿಂದ 5 ನೇ ತರಗತಿಯ 2ನೇ ಸೆಮಿಸ್ಟರ್ ಪಠ್ಯಭಾಗವನ್ನು ವಾಚನ ಮಾಡುವ ಕ್ರಮವನ್ನು ತಿಳಿಸಿಕೊಟ್ಟರು. ತರಬೇತಿಯಲ್ಲಿ ಪಾಲ್ಗೊಂಡಿದ್ದ ಶಿಕ್ಷಕರ ನಡುವೆ ಇಂಗ್ಲಿಷ್ ಪಠ್ಯ ಬೋಧನೆ ಕುರಿತು ನಡೆದ ಸಂವಾದದಲ್ಲಿ ಕೂಡ ನಿನಾ ಬೆಹ್ರೆಂಡ್ ಪಾಲ್ಗೊಂಡಿದ್ದರು. ಜರ್ಮನಿಯಲ್ಲಿರುವ ಶಿಕ್ಷಣ, ಪಾಠ ಬೋಧನೆಯ ಕ್ರಮ ಹಾಗೂ ಪರೀಕ್ಷಾ ಪದ್ಧತಿ ವಿವರಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಸಾಯಿಕೃಪ, ಉಷಾ, ಸರಸ್ವತಿ ಇತರರು ವಿದೇಶಿಯರ ಜತೆ ನಡೆದ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry