ವಿದೇಶಿ ಆಟಗಾರರ ಒಡನಾಟದ ಸವಿ...

7

ವಿದೇಶಿ ಆಟಗಾರರ ಒಡನಾಟದ ಸವಿ...

Published:
Updated:

ಸ್ಥಳೀಯ ಟೆನಿಸ್ ಆಟಗಾರರಲ್ಲಿ ಆಸಕ್ತಿ ಮೂಡಿಸುವುದು ನಮ್ಮ ಮುಖ್ಯ ಉದ್ದೇಶ. ಗುಲ್ಬರ್ಗ, ಬೀದರ್‌ನಂತ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಟೂರ್ನಿ ಆಯೋಜಿಸುವುದರಿಂದ ಅಲ್ಲಿನ ಜನರಲ್ಲಿ ಟೆನಿಸ್ ಬಗ್ಗೆ ಆಸಕ್ತಿ ಮೂಡುತ್ತದೆ.ವಿದೇಶಿ ಆಟಗಾರರೊಂದಿಗಿನ ಒಡನಾಟದ ಅನುಭವ ಸಿಗುತ್ತದೆ. ಅಂತರರಾಷ್ಟ್ರೀಯ ದರ್ಜೆಯ ಸೌಕರ್ಯ ನಿರ್ಮಾಣವಾಗುತ್ತದೆ. ನೂರಾರು ಮಂದಿಯಲ್ಲಿ ಒಬ್ಬ ಚಾಂಪಿಯನ್ ಸೃಷ್ಟಿಯಾದರೂ ನಮ್ಮ ಶ್ರಮ ಸಾರ್ಥಕ~ಕರ್ನಾಟಕ ಲಾನ್ ಟೆನಿಸ್ ಸಂಸ್ಥೆ (ಕೆಎಸ್‌ಎಲ್‌ಟಿಎ) ಕಾರ್ಯದರ್ಶಿ  ಸಿ.ಎಸ್.ಸುಂದರ್ ರಾಜು.

******

ಒಂದು ಕಾಲದಲ್ಲಿ ಮುಂಬೈ, ದೆಹಲಿ, ಚೆನ್ನೈ, ಕೋಲ್ಕತ್ತ, ಬೆಂಗಳೂರಿಗೆ ಸೀಮಿತವಾಗಿದ್ದ ಪ್ರಮುಖ ಟೆನಿಸ್ ಟೂರ್ನಿಗಳು ಈಗ ಗ್ರಾಮೀಣ ಭಾಗದತ್ತಲೂ ತಲೆಹಾಕುತ್ತಿವೆ. ಅದಕ್ಕೆ ಮೈಸೂರು, ಮಂಡ್ಯ, ಗುಲ್ಬರ್ಗ, ಬೀದರ್‌ನಲ್ಲಿ ಇತ್ತೀಚೆಗೆ ನಡೆದ ವಿಶ್ವ ದರ್ಜೆಯ ಐಟಿಎಫ್ ಟೂರ್ನಿಗಳೇ ಸಾಕ್ಷಿ.ಬೇರೆ ಯಾವುದೇ ರಾಜ್ಯದಲ್ಲಿ ಈ ರೀತಿ ಗ್ರಾಮೀಣ ಭಾಗಗಳ್ಲ್ಲಲಿ ಐಟಿಎಫ್‌ನಂತಹ ಮಹತ್ವದ ಟೂರ್ನಿ ನಡೆದ ಸಾಕ್ಷಿ ಇಲ್ಲ. ಹಾಗಾಗಿ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯ ಕಾರ್ಯ ಶ್ಲಾಘನೀಯ. ಈ ವರ್ಷ ರಾಜ್ಯದ ವಿವಿಧೆಡೆ 6 ಪುರುಷರ ಹಾಗೂ 5 ಮಹಿಳೆಯರ ವಿಭಾಗದ ಐಟಿಎಫ್ ಟೂರ್ನಿ ನಡೆಯುತ್ತಿವೆ.ಥಾಯ್ಲೆಂಡ್‌ನಲ್ಲಿಯೋ, ಸಿಂಗಪುರದ್ಲ್ಲಲೋ, ಇಂಡೊನೇಷ್ಯಾದಲ್ಲೋ ನಡೆಯುವ ಒಂದು ಟೂರ್ನಿಯಲ್ಲಿ ಪಾಲ್ಗೊಳ್ಳಲು ಒಬ್ಬ ಆಟಗಾರನಿಗೆ ಕನಿಷ್ಠ ಒಂದೂವರೆ ಲಕ್ಷ ರೂಪಾಯಿ ಬೇಕಾಗುತ್ತದೆ. ಈಗ ಐಟಿಎಫ್ ಟೂರ್ನಿಗಳು ಕರ್ನಾಟಕದಲ್ಲಿ ನಡೆಯುತ್ತಿರುವುದರಿಂದ ಸ್ಥಳೀಯ ಆಟಗಾರರಿಗೆ ತುಂಬಾ ಅನುಕೂಲವಾಗಿದೆ. ರಾಜಧಾನಿಗಿಂತ ಗ್ರಾಮೀಣ ಪ್ರದೇಶದ ಆಟಗಾರ್ತಿಯರೇ ಈಗ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.ಐಟಿಎಫ್ ಟೂರ್ನಿಗಳಲ್ಲಿ ಆಡಲು ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿ ಆಟಗಾರರು ಹಾಗೂ ಆಟಗಾರ್ತಿಯರು ಆಗಮಿಸುತ್ತಿರುವುದು ವಿಶೇಷ. ಹೆಚ್ಚಿನ ರ‌್ಯಾಂಕ್ ಹೊಂದಿರುವ ಇಂತಹ ಆಟಗಾರರೊಂದಿಗೆ ಒಡನಾಡಲು ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ದೊರೆತಿದೆ.ಟೆನಿಸ್ ಆಟಗಾರ್ತಿಯಾಗಬೇಕೆಂಬ ಕನಸು ಹೊತ್ತಿರುವ ಅದೆಷ್ಟೊ ಮಂದಿಗೆ ಅವರನ್ನು ಸನಿಹದಿಂದ ನೋಡುವ ಅವಕಾಶ ದೊರೆತಿದೆ. ಗುಲ್ಬರ್ಗದಲ್ಲಿ ನಡೆದ ಟೂರ್ನಿ ವೇಳೆ ವಿದೇಶಿ ಆಟಗಾರ್ತಿಯರು ಸ್ಥಳೀಯ ಕ್ರೀಡಾಪಟುಗಳೊಂದಿಗೆ ಬೆರೆತು ಕೆಲ ಸಲಹೆ ಕೂಡ ನೀಡಿದ್ದು ಅದಕ್ಕೆ ಸಾಕ್ಷಿ.`ಗ್ರಾಮೀಣ ಪ್ರದೇಶದಲ್ಲಿ ಟೂರ್ನಿ ನಡೆದಾಗ ಪಂದ್ಯ ವೀಕ್ಷಿಸಲು ಶಾಲಾ ಮಕ್ಕಳನ್ನು ಆಹ್ವಾನಿಸಲಾಗುತ್ತಿದೆ. ಈ ಮೂಲಕ ಅವರಲ್ಲಿ ಆಸಕ್ತಿ ಮೂಡಿಸಲು ಪ್ರಯತ್ನಿಸಲಾಗುತ್ತಿದೆ. ಜೊತೆಗೆ ಟೂರ್ನಿ ವೇಳೆ ಕ್ಲಿನಿಕ್ ಆಯೋಜಿಸಿ ವಿದೇಶಿ ಆಟಗಾರರಿಂದ ಮಾಹಿತಿ ಕೊಡಿಸಲಾಗುತ್ತಿದೆ~ ಎಂದು ಟೂರ್ನಿ ನಿರ್ದೇಶಕ ಸುನಿಲ್ ಯಜಮಾನ್ ಹೇಳುತ್ತಾರೆ.ಬ್ರಿಟನ್‌ನ ಎಮಿಲಿ ವೆಬ್ಲೆ ಸ್ಮಿತ್ (ಚಿತ್ರದಲ್ಲಿರುವವರು), ಕೊರಿಯಾದ ಹೇ ಸಂಗ್ ಕಿಮ್, ಥಾಯ್ಲೆಂಡ್‌ನ ನಪತ್ಸಾಕೊರ್ನ್, ವಾನಾಸುಕ್, ಉಕ್ರೇನ್‌ನ ಒಲೆಕ್ಸಾಂಡ್ರಾ ಕೊರಾಶ್ವಿಲಿ, ಚೀನಾದ ಜೀ ಯಾಂಗ್, ಥಾಯ್ಲೆಂಡ್‌ನ ವಾರುಣ್ಯಾ, ಚೀನಾದ ನಾನ್ ಝಾಂಗ್, ಜಪಾನ್‌ನ ಯುಮಿ ಮಿಯಾಝಕಿ, ಹಾಂಕಾಂಗ್‌ನ ಹೋ ಚಿಂಗ್ ವೂ ಇತ್ತೀಚಿನ ಟೂರ್ನಿಗಳಲ್ಲಿ ಪಾಲ್ಗೊಂಡಿದ್ದ ವಿದೇಶಿ ಆಟಗಾರ್ತಿಯರು.ಗ್ರ್ಯಾನ್‌ಸ್ಲಾಮ್‌ನಲ್ಲಿ ಆಡಿದ ಅನುಭವವುಳ್ಳ ಆಟಗಾರ್ತಿಯರೂ ಇವರಲ್ಲಿ ಕೆಲವರು. ಅವರ ಜೀವನ ಶೈಲಿ, ಆಟದ ರೀತಿ, ಅಭ್ಯಾಸ ನಡೆಸುವ ಪರಿಯನ್ನು ಸನಿಹದಿಂದ ನೋಡುವ ಅವಕಾಶ ಸ್ಥಳೀಯರಿಗೆ ದೊರೆಯುತ್ತಿದೆ. ಲಕ್ಷಂತರ ರೂ. ಖರ್ಚು ಮಾಡಿಕೊಂಡು ವಿದೇಶಕ್ಕೆ ಹೋಗಿ ಆಡಬೇಕಾಗುತ್ತದೆ. ಆದರೆ ಅವರನ್ನು ಇಲ್ಲಿಗೆ ಕರೆಸಿ ಹೆಚ್ಚಿನ ಅನುಭವ ಪಡೆಯಲು ಕೆಎಸ್‌ಎಲ್‌ಟಿಎ ಅವಕಾಶ ಮಾಡಿಕೊಟ್ಟಿದೆ.ಸೌಜನ್ಯಾ ಭವಿಶೆಟ್ಟಿ, ಎತಿ ಮೆಹ್ತಾ, ಬೆಂಗಳೂರಿನ ಜೈನ್ ಕಾಲೇಜ್ ವಿದ್ಯಾರ್ಥಿನಿ ಶಲಕಾ ಉದ್ದೂರು  ಮಂಜುನಾಥ್, ಸ್ಫೂರ್ತಿ ಶಿವಲಿಂಗಯ್ಯ, ಶಲಕಾ ಮಂಜುನಾಥ್,     ನಿಧಿ ಚಿಲುಮು, ಪ್ರಾರ್ಥನಾ ತೋಂಬ್ರೆ ಅವರಂಥ ಆಟಗಾರ್ತಿಯರಿಗೆ ಉತ್ತಮ ಅನುಭವ ಸಿಗುತ್ತಿದೆ.ಇದರಿಂದ ಭಾರತದ ಆಟಗಾರ್ತಿಯರ ರ‌್ಯಾಂಕಿಂಗ್ ಕೂಡ ಸುಧಾರಣೆ ಆಗುತ್ತದೆ. ಜೊತೆಗೆ ಸ್ಥಳೀಯ ಸೌಲಭ್ಯಗಳೂ ಹೆಚ್ಚುತ್ತಿವೆ. ಪ್ರೇಕ್ಷಕರು ಖ್ಯಾತ ಆಟಗಾರ್ತಿಯರ ಆಟದ ಸೊಬಗನ್ನು ಸನಿಹದಿಂದ ಸವಿಯಬಹುದು. ಗುಲ್ಬರ್ಗದಲ್ಲಿ ನಡೆದ ಫೈನಲ್ ಪಂದ್ಯಕ್ಕೆ ಕ್ರೀಡಾಂಗಣ ಕಿಕ್ಕಿರಿದು ತುಂಬಿದ್ದೇ ಸಾಕ್ಷಿ. ಆ ಟೂರ್ನಿಯಲ್ಲಿ 10 ರಾಷ್ಟ್ರಗಳ ಆಟಗಾರ್ತಿಯರು ಪಾಲ್ಗೊಂಡಿದ್ದರು.ಇಂತಹ ಟೂರ್ನಿಗಳನ್ನು ನೋಡುತ್ತಾ ಬೆಳೆಯುವ ಮಕ್ಕಳಲ್ಲಿ ಕ್ರೀಡಾ ಸಂಸ್ಕೃತಿ ಬೆಳೆಯುತ್ತದೆ. ಇಲ್ಲವಾದರೆ ಕ್ರೀಡೆ ಎನ್ನುವುದು ಕೇವಲ ನಗರಕ್ಕೆ ಹಾಗೂ ಶ್ರೀಮಂತರಿಗೆ ಮಾತ್ರ ಮೀಸಲಾಗಿಬಿಡುತ್ತದೆ. ಆಮೇಲೆ ಆಯ್ಕೆಗಳೇ ಇರುವುದಿಲ್ಲ. ಅವರನ್ನೇ ನೆಚ್ಚಿಕೊಂಡು ಇರಬೇಕಾಗುತ್ತದೆ.   

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry