ವಿದೇಶಿ ಆಮದು ಸುಂಕ ಏರಿಸಿ

ಬುಧವಾರ, ಜೂಲೈ 17, 2019
24 °C

ವಿದೇಶಿ ಆಮದು ಸುಂಕ ಏರಿಸಿ

Published:
Updated:

ಕನಕಪುರ: ಕೃಷಿ ಪ್ರಧಾನ ಭಾರತದಲ್ಲಿ, ಕೃಷಿ ವಲಯವನ್ನು ಉತ್ತೇಜಿಸುವಂತ ಸಮರ್ಪಕವಾದ ಕೃಷಿ ನೀತಿಯನ್ನು ಇನ್ನೂ ಜಾರಿಗೊಳಿಸಿಲ್ಲವೆಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಪುಟ್ಟಣ್ಣಯ್ಯ ಆರೋಪಿಸಿದರು. ಜಯಕರ್ನಾಟಕ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಮ್ಮಿಕೊಂಡಿದ್ದ ರೇಷ್ಮೆ ಬೆಳೆಗಾರರ ಬೃಹತ್ ಪ್ರತಿಭಟನಾ ರ‌್ಯಾಲಿ ಮತ್ತು ಬಹಿರಂಗ ಸಮಾವೇಶದಲ್ಲಿ ಅವರು ಮಾತನಾಡಿದರು. ಎಲ್ಲಾ ವಲಯಗಳಿಗೂ ರಕ್ಷಣೆ ಹಾಗೂ ಭದ್ರತೆ ನೀಡುವ ಸರ್ಕಾರಗಳು ಶೇಕಡ 75 ರಷ್ಟು ಕೃಷಿಯನ್ನೇ ನಂಬಿರುವ ಭಾರತದಲ್ಲಿ ರೈತರನ್ನು ರಕ್ಷಿಸುವ ಕಾನೂನನ್ನು ರೂಪಿಸಿಲ್ಲ. ಅವರ ಬದುಕಿಗೆ ಭದ್ರತೆ ಒದಗಿಸುವ ಚಿಂತನೆ ನಡೆಸಿಲ್ಲ ಎಂದು ಟೀಕಿಸಿದರು.ಮಾಜಿ ಸಂಸದೆ ತೇಜಸ್ವಿನಿಗೌಡ ಮಾತನಾಡಿ ರೇಷ್ಮೆ ಕೃಷಿಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ರಾಜ್ಯದಲ್ಲಿ  ಮೂರನೇ ಎರಡಷ್ಟು ರೇಷ್ಮೆ ಉತ್ಪಾದನೆಯಾಗುತ್ತಿದೆ. ಬೇಡಿಕೆಯಷ್ಟು ಉತ್ಪತ್ತಿಯಾಗುತ್ತಿಲ್ಲವೆಂಬ ನೆಪವೊಡ್ಡಿ ಕೇಂದ್ರ ಸರ್ಕಾರವು ರೇಷ್ಮೆ ಆಮದಿಗೆ ವಿಧಿಸುತ್ತಿದ್ದ  ತೆರಿಗೆಯನ್ನು ಇಳಿಸಿರುವುದು ರೇಷ್ಮೆ ವಲಯಕ್ಕೆ ದೊಡ್ಡ ಪೆಟ್ಟಾಗಿದೆ. ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಿ ಸರ್ಕಾರ ದ ವತಿಯಿಂದ ರೇಷ್ಮೆ ಖರೀದಿಸುವ ಮೂಲಕ ಸ್ಥಿರಬೆಲೆ ಕಾಪಾಡಬೇಕೆಂದು ಹೇಳಿದರು.ರೈತ ಸಂಘದ ರಾಜ್ಯ ಸಂಚಾಲಕ ಪುಟ್ಟಸ್ವಾಮಿ ಮಾತನಾಡಿ,  ಆರ್ಥಿಕ ಸಂಕಷ್ಟದಿಂದ ಸಾವನಪ್ಪುವ ರೈತರ ಜೀವಗಳಿಗೆ ಇಲ್ಲಿ ಬೆಲೆಯೇ ಇಲ್ಲ.  ರೈತವಲಯಕ್ಕೆ ಎದುರಾಗಿರುವ ಸಂಕಷ್ಟಗಳಿಂದ ಯುವ ಪೀಳಿಗೆ ನಗರಗಳತ್ತ ಮುಖಮಾಡಿ ಗುಳೆ ಹೋಗುತ್ತಿದ್ದಾರೆ.ಇಷ್ಟಾದರೂ ಸರ್ಕಾರಗಳು ರೈತ ಹಾಗೂ ಕೃಷಿಕ್ಷೇತ್ರದ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿಲ್ಲವೆಂದು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು. ಶಿವಗಿರಿ ಕ್ಷೇತ್ರದ ಶ್ರೀ ಅನ್ನದಾನಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.

 

ಜಯಕರ್ನಾಟಕ ಸಂಘಟನೆಯ ರಾಜ್ಯಘಟಕದ ಅಧ್ಯಕ್ಷ ಕುಮಾರಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು.

 ಜಯಕರ್ನಾಟಕ ಸಂಘಟನೆಯ ಕಾರ್ಯಾಧ್ಯಕ್ಷ ಪ್ರಕಾಶ್‌ರೈ, ರಾಧಾಕೃಷ್ಣ, ಜಿಲ್ಲಾಧ್ಯಕ್ಷ ಡಿ.ಜಿ.ಕುಮಾರ್, ಜಿಲ್ಲಾ ಮುಖಂಡ ಕೆ.ವಿ.ಆನಂದ, ಇತರರು ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry