ಗುರುವಾರ , ಜುಲೈ 29, 2021
24 °C

ವಿದೇಶಿ ಕೋಚ್‌ ಏಕೆ ಬೇಕು ಗೊತ್ತಾ...?

ಕೆ.ಓಂಕಾರ ಮೂರ್ತಿ Updated:

ಅಕ್ಷರ ಗಾತ್ರ : | |

ನಿಮಗೆ ಒಂದು ವಿಷಯ ಗೊತ್ತಿರಬಹುದು. ಭಾರತ ಕ್ರಿಕೆಟ್‌ ತಂಡದ ಆಯ್ಕೆ ವಿಷಯದಲ್ಲಿ ಗ್ಯಾರಿ ಕರ್ಸ್ಟನ್‌ ಯಾವತ್ತೂ ತಲೆ ಹಾಕಿರಲಿಲ್ಲ. ನಾಯಕ ದೋನಿ ಬರೆಯುತ್ತಿದ್ದ ಅಂತಿಮ ಹನ್ನೊಂದು ಮಂದಿ ಹೆಸರುಗಳಿಗೆ ಸಹಿ ಹಾಕಿ ಕಳುಹಿಸುತ್ತಿದ್ದರು ಅಷ್ಟೆ.ಪದೇಪದೇ ವೈಫಲ್ಯ ಅನುಭವಿಸುತ್ತಿದ್ದ ವೀರೇಂದ್ರ ಸೆಹ್ವಾಗ್‌ ತಮ್ಮ ಬ್ಯಾಟಿಂಗ್‌ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು ಎಂದು ಭಾರತದ ಮಾಜಿ ಆಟಗಾರರು ಸೇರಿದಂತೆ ಪ್ರಮುಖರು ಬೊಬ್ಬೆ ಹಾಕುತ್ತಿದ್ದರು. ಆದರೆ ಇದೇ ರೀತಿ ಶೈಲಿಯನ್ನು ಮುಂದುವರಿಸು ಎಂದು ವೀರೂಗೆ ಹೇಳಿದ್ದು ಕರ್ಸ್ಟನ್‌.ಅಕಸ್ಮಾತ್‌ ಆ ಸ್ಥಾನದಲ್ಲಿ ಒಬ್ಬ ಭಾರತದ ಕೋಚ್‌ ಇದ್ದಿದ್ದರೆ ಈ ರೀತಿ ಆಗುತ್ತಿತ್ತಾ? ಖಂಡಿತ ಅಸಾಧ್ಯ. ಇದು ಭಾರತದ ಕ್ರಿಕೆಟ್‌ನ ಇತಿಹಾಸದ ಪುಟಗಳನ್ನು ಬಿಚ್ಚಿದರೆ ಗೊತ್ತಾಗುತ್ತಾ ಹೋಗುತ್ತದೆ.ವಾಂಖೇಡೆ ಕ್ರೀಡಾಂಗಣದಲ್ಲಿ ಭಾರತ ವಿಶ್ವಕಪ್‌ ಗೆದ್ದಾಗ ಆಟಗಾರರು ಗುರು ಗ್ಯಾರಿಯನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ್ದು ಏಕೆ ಎಂಬುದು ಈಗ ಗೊತ್ತಾಗಿರಬಹುದು. ಅಷ್ಟೇ ಏಕೆ? ಭಾರತದ ಪ್ರತಿ ಕ್ರಿಕೆಟ್‌ ಪ್ರೇಮಿ ಕರ್ಸ್ಟನ್‌ ಅವರನ್ನು ಇಷ್ಟಪಟ್ಟಿದ್ದರು.ಭಾರತದ ಕ್ರಿಕೆಟ್‌ ಮಟ್ಟಿಗೆ ಸ್ವದೇಶದ ಕೋಚ್‌ ಯಾವತ್ತೂ ಯಶಸ್ವಿಯಾಗಲೇ ಇಲ್ಲ.ಬಿಷನ್‌ ಸಿಂಗ್‌ ಬೇಡಿ, ಅಂಶುಮಾನ್‌ ಗಾಯಕ್‌ವಾಡ್‌, ಮದನ್‌ ಲಾಲ್‌, ಕಪಿಲ್‌ ದೇವ್‌ ಅವಧಿಯಲ್ಲಿ ತಂಡ ಪ್ರದರ್ಶನಕ್ಕಿಂತ ವಿವಾದಗಳಿಂದಲೇ ಹೆಚ್ಚು ಸುದ್ದಿಯಾಗಿತ್ತು.`ಇಡೀ ತಂಡವನ್ನು ಸಮುದ್ರಕ್ಕೆ ಎಸೆಯಬೇಕು~ ಎಂದು ಬೇಡಿ ಹೇಳಿದ್ದು ಇನ್ನೂ ನೆನಪಿದೆ. ಕಪಿಲ್‌ ಕಣ್ಣೀರಿಡುತ್ತಾ ಕೋಚ್‌ ಹುದ್ದೆಯನ್ನು ಬಿಟ್ಟು ಹೋಗಿದ್ದರು. ಒಂದು ಮಾತು ಹೇಳದೇ ಬೌಲಿಂಗ್‌ ಕೋಚ್‌ ವೆಂಕಟೇಶ್‌ ಪ್ರಸಾದ್‌, ಫೀಲ್ಡಿಂಗ್‌ ಕೋಚ್‌ ರಾಬಿನ್‌ ಸಿಂಗ್‌ ಅವರನ್ನು ಬಿಸಿಸಿಐ ಕಿತ್ತು ಹಾಕಿತ್ತು. ಮೊದಲ ವಿದೇಶಿ ಕೋಚ್‌ ಜಾನ್‌ ರೈಟ್‌ ನಂತರವೇ ಭಾರತ ತಂಡ ಯಶಸ್ಸಿನ ಹಾದಿ ಹಿಡಿದಿದ್ದು.ಈ ಬಾರಿಯೂ ವಿದೇಶಿ ಕೋಚ್‌ ಆಯ್ಕೆ ಮಾಡಿರುವುದಕ್ಕೆ ಅಪಸ್ವರ ಎದ್ದಿದೆ. ಆದರೆ ಕರ್ಸ್ಟನ್‌ ಅವರನ್ನು ಹೊಗಳಿದವರು ಈ ರೀತಿ ಮಾತುಗಳನ್ನು ಹೇಳುತ್ತಿದ್ದರಲ್ಲ ಎಂಬುದು ಅಚ್ಚರಿ. `ತಂಡದಲ್ಲಿ ಹೆಚ್ಚು ಮಂದಿ ಆಟಗಾರರು ಹಿಂದಿ ಮಾತನಾಡುವವರು ಇದ್ದಾರೆ. ಹಾಗಾಗಿ ಭಾರತದವರೇ ಕೋಚ್‌ ಆಗಬೇಕಿತ್ತು~ ಎಂದಿದ್ದಾರೆ.

 

ಕರ್ಸ್ಟನ್‌ ಕೋಚ್‌ ಆಗಿದ್ದಾಗ ಹಿಂದಿ ಮಾತನಾಡುವ ಆಟಗಾರರು ಇರಲಿಲ್ಲವೇ? ಅವರೆಲ್ಲಾ ಯಶಸ್ಸು ಕಾಣಲಿಲ್ಲವೇ? ಅವರ ಈ ಮಾತಿನಲ್ಲೇ ರಾಜಕೀಯ ಎದ್ದು ಕಾಣುತ್ತಿದೆ. ಹಾಗಾದರೇ, ದಕ್ಷಿಣ ಭಾರತದ ಆಟಗಾರರು ತಂಡದಲ್ಲಿಲ್ಲವೇ? ಅವರೆಲ್ಲರಿಗೂ ಹಿಂದಿ ಮಾತನಾಡಲು ಬರುತ್ತಾ?ಸ್ವದೇಶದ ಕೋಚ್‌ಗಳಿದ್ದರೆ ಆಟಗಾರರು ಮುಕ್ತವಾಗಿ ಆಡಲು ಅಸಾಧ್ಯ. ಸಣ್ಣ ಪ್ರಮಾಣದಲ್ಲಾದರೂ ಅಲ್ಲಿ ರಾಜಕೀಯ ಸದ್ದು ಮಾಡಿಯೇ ಮಾಡುತ್ತದೆ. ಆಟಗಾರರ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಯಾಗುತ್ತದೆ. ಆಯ್ಕೆಯಲ್ಲೂ ತಲೆ ಹಾಕುತ್ತಾರೆ. ಆಗ ನಾಯಕ ಮುಕ್ತ ನಿರ್ಧಾರ ತೆಗೆದುಕೊಳ್ಳಲು ಕಷ್ಟ. ತಮಗೂ ಹೆಚ್ಚು ಪ್ರಚಾರ ಸಿಗಬೇಕೆಂದು ಬಯಸುತ್ತಾರೆ. ಜೊತೆಗೆ ವಿದೇಶಿ ಪಿಚ್‌ಗಳ ಮರ್ಮ ಭಾರತದ ಕೋಚ್‌ಗಳಿಗೆ ಅಷ್ಟಾಗಿ ಗೊತ್ತಿಲ್ಲ. ಫಿಟ್‌ನೆಸ್‌ ಬಗ್ಗೆ ಅವರಿಗೆ ಹೆಚ್ಚು ಮಾಹಿತಿ ಇಲ್ಲ.ವಿದೇಶಿ ಕೋಚ್‌ಗಳಾದರೆ ತಟಸ್ಥರಾಗಿರುತ್ತಾರೆ. ತೆರೆಮರೆಯಲ್ಲಿಯೇ ಕೆಲಸ ಮಾಡುತ್ತಾರೆ. ಆಟಗಾರರು ಮುಕ್ತವಾಗಿ ಯೋಚಿಸಲು ಅವಕಾಶ ಕೊಡುತ್ತಾರೆ. ಅವರ ಅಭಿಪ್ರಾಯಗಳಿಗೆ ಮನ್ನಣೆ ನೀಡುತ್ತಾರೆ. ಅಷ್ಟೇ ಶಿಸ್ತಿನಿಂದ ಇರುತ್ತಾರೆ. ಇದಕ್ಕೆ ಕರ್ಸ್ಟನ್‌ ಕೋಚಿಂಗ್‌ ವೈಖರಿಯೇ ಸಾಕ್ಷಿ.ಡಂಕನ್‌ ಫ್ಲೆಚರ್‌ ಶ್ರೇಷ್ಠ ಆಟಗಾರ ಅಲ್ಲ. ಅಸಲಿಗೆ ಅವರು ಟೆಸ್ಟ್‌ ಆಡಲೇ ಇಲ್ಲ. ಆದರೆ ಸಚಿನ್‌, ದ್ರಾವಿಡ್‌, ಲಕ್ಷ್ಮಣ್‌ ಅವರು ಆಡಿರುವ ಟೆಸ್ಟ್‌ ಪಂದ್ಯಗಳನ್ನು ಒಟ್ಟು ಸೇರಿಸಿದರೆ 400ರ ಗೆರೆ ದಾಟುತ್ತದೆ. ಇಂತಹ ಒಬ್ಬ ಕೋಚ್‌ ಭಾರತದ ಆಟಗಾರರಿಗೆ ಯಾವ ರೀತಿ ಮಾರ್ಗದರ್ಶನ ನೀಡುತ್ತಾನೆ ಎನ್ನುವ ಪ್ರಶ್ನೆ ಉದ್ಭವಿಸಬಹುದು. ಅವರು ಆಡಿದ್ದು ಕೇವಲ 6 ಏಕದಿನ ಪಂದ್ಯ ಅಷ್ಟೆ.ಗ್ರೇಗ್‌ ಚಾಪೆಲ್‌ ಕ್ರಿಕೆಟ್‌ ಕಂಡ ಶ್ರೇಷ್ಠ ಆಟಗಾರ. ಆದರೆ ಅವರು ಕೋಚ್‌ ಆಗಿದ್ದ ಕಾಲದಲ್ಲಿ ಭಾರತ ತಂಡ ಯಶಸ್ಸು ಕಂಡಿದ್ದು ಕಡಿಮೆ. ಹಾಗಾಗಿ ಒಬ್ಬ ಯಶಸ್ವಿ ಆಟಗಾರ ಯಶಸ್ವಿ ಕೋಚ್‌ ಆಗುತ್ತಾನೆ ಎನ್ನುವುದು ಸುಳ್ಳು. ವಿಶ್ವ ಶ್ರೇಷ್ಠ ಬ್ಯಾಟ್ಸ್‌ಮನ್‌ ಸಚಿನ್‌ಗೆ ನಾಯಕತ್ವ ನೀಡಿದಾಗ ಎಡವಿದ್ದು ಎಲ್ಲರಿಗೂ ಗೊತ್ತೇ ಇದೆ. ಹಾಗೇ, ಫ್ಲೆಚರ್‌ಗೆ ಕ್ರಿಕೆಟ್‌ ಆಡಿದ ಅನುಭವ ಕಡಿಮೆ ಇರಬಹುದು. ಆದರೆ ಯಶಸ್ವಿ ಕೋಚ್‌ ಎಂಬ ಪಟ್ಟ ಅವರ ಜೊತೆಯಲ್ಲಿದೆ.ಕುಸಿದು ಹೋಗಿದ್ದ ಇಂಗ್ಲೆಂಡ್‌ ತಂಡವನ್ನು ಮತ್ತೆ ಕಟ್ಟುವಲ್ಲಿ ಡಂಕನ್‌ ಪಾತ್ರ ಅಪಾರ.2005ರಲ್ಲಿ ಆ್ಯಷಸ್‌ ಸರಣಿ ಗೆದ್ದ ಆ ಕ್ಷಣವನ್ನು ಯಾವತ್ತಾದರೂ ಮರೆಯಲು ಸಾಧ್ಯವೇ? ಇಂಗ್ಲೆಂಡ್‌ ತಂಡದ ಮಾಜಿ ನಾಯಕರಾದ ನಾಸೀರ್‌ ಹುಸೇನ್‌ ಹಾಗೂ ಮೈಕಲ್‌ ವಾನ್‌ ಇವತ್ತಿಗೂ ಫ್ಲೆಚರ್‌ ಅವರನ್ನು ಸ್ಮರಿಸುತ್ತಾರೆ.ಗುಣಗಾನ ಮಾಡುತ್ತಾರೆ. ವಿಶೇಷವೆಂದರೆ ಕರ್ಸ್ಟನ್‌ಗೆ ಒಂದು ಕಾಲದಲ್ಲಿ ಮಾರ್ಗದರ್ಶನ ನೀಡಿದ್ದು ಫ್ಲೆಚರ್‌. ಇವರನ್ನು ಭಾರತ ತಂಡದ ಕೋಚ್‌ ಆಗಿ ನೇಮಿಸಬಹುದು ಎಂದು ಬಿಸಿಸಿಐಗೆ ಹೇಳಿದ್ದು ಕರ್ಸ್ಟನ್‌.ನಿಜ, ಕರ್ಸ್ಟನ್‌ ಅವರಂತೆ 62 ವರ್ಷ ವಯಸ್ಸಿನ ಫ್ಲೆಚರ್‌ ಭಾರತ ತಂಡದ ಆಟಗಾರರೊಂದಿಗೆ ಅಭ್ಯಾಸದ ವೇಳೆ ಫುಟ್‌ಬಾಲ್‌ ಆಡಲಾರರು. ಅವರೇನಿದ್ದರೂ  `ಆರ್ಮ್‌ ಚೇರ್‌~ ಕೋಚ್‌. ಎಸಿ ಕೊಠಡಿಯಲ್ಲಿ ಲ್ಯಾಪ್‌ ಟಾಪ್‌ ಹಿಡಿದು ಎದುರಾಳಿ ತಂಡವನ್ನು ಸೋಲಿಸುವ ಬಗ್ಗೆ ತಂತ್ರ ರೂಪಿಸುವ ತರಬೇತುದಾರ.ಒಬ್ಬ ಕೋಚ್‌ ಖಂಡಿತ ರನ್‌ ಗಳಿಸಲಾರ, ವಿಕೆಟ್‌ ಪಡೆಯಲಾರ. ಆದರೆ ಭಾರತ ತಂಡದಲ್ಲಿ ಈಗ ಇರುವ ಪ್ರತಿಭೆಗಳಿಗೆ ಸಾಣೆ ಹಿಡಿಯಬೇಕು ಅಷ್ಟೆ. ಅವರನ್ನು ಸರಿಯಾದ ದಾರಿಯಲ್ಲಿ ಕರೆದುಕೊಂಡು ಹೋಗಲು ಒಬ್ಬ ಮಾರ್ಗದರ್ಶಕ ಬೇಕು.ನೆಟ್ಸ್‌ನಲ್ಲಿ ಸಚಿನ್‌, ಸೆಹ್ವಾಗ್‌ ಜೊತೆ ಮಾತನಾಡಲು ಸೂಕ್ತ ವ್ಯಕ್ತಿಬೇಕು.

ಹೊಸ ಆಟಗಾರರನ್ನು ರೂಪಿಸುವುದು ಫ್ಲೆಚರ್‌ ಮುಂದಿನ ಸವಾಲು. ಸಚಿನ್‌, ದ್ರಾವಿಡ್‌, ಲಕ್ಷ್ಮಣ್‌ ಅವರ ಸ್ಥಾನಕ್ಕೆ     ಬ್ಯಾಟ್ಸ್‌ಮನ್‌ಗಳನ್ನು ತಯಾರಿಸುವುದು ಇವರ ಪ್ರಮುಖ ಕೆಲಸ. ಜೊತೆಗೆ ವೇಗಿಗಳ ಸಮಸ್ಯೆಯನ್ನು ಭಾರತ ಎದುರಿಸುತ್ತಿದೆ.ಇದರೆಲ್ಲದರ ನಡುವೆ ಭಾರತದ ಮಾಧ್ಯಮಗಳು ಹಾಗೂ ಕ್ರಿಕೆಟ್‌ ಅಭಿಮಾನಿಗಳ ಒತ್ತಡವನ್ನು ನಿಭಾಯಿಸುವುದು ಡಂಕನ್‌ ಮುಂದಿರುವ ಸವಾಲು.ಅತ್ಯುತ್ತಮ ನಾಯಕ ದೋನಿ ಇದ್ದಾರೆ. ಸಚಿನ್‌ ಅವರಂತಹ ವಿಶ್ವ ಶ್ರೇಷ್ಠ ಆಟಗಾರ ಇದ್ದಾರೆ. ಶ್ರೇಷ್ಠ ಆಕ್ರಮಣಕಾರಿ ಬ್ಯಾಟ್ಸ್‌ಮನ್‌ ಸೆಹ್ವಾಗ್‌ ಇದ್ದಾರೆ. ಗಂಭೀರ್‌, ಕೊಹ್ಲಿ, ರೈನಾ, ಚೇತೇಶ್ವರ ಪೂಜಾರ ಅವರಂತಹ ಯುವ ಆಟಗಾರರಿದ್ದಾರೆ. ಟೆಸ್ಟ್‌ನಲ್ಲಿ ಅಗ್ರಸ್ಥಾನದಲ್ಲಿದೆ. ಏಕದಿನ ಕ್ರಿಕೆಟ್‌ನಲ್ಲಿ ಎರಡನೇ ರ್ಯಾಂಕ್‌ ಹೊಂದಿದೆ. ಎಲ್ಲಕ್ಕಿಂತ ಮುಖ್ಯವಾಗಿ ಭಾರತ ತಂಡ ವಿಶ್ವ ಚಾಂಪಿಯನ್‌.ಹಾಗಾಗಿ ಕರ್ಸ್ಟನ್‌ ನಿರ್ಮಿಸಿದ ಹಾದಿಯಲ್ಲಿ ನಡೆಯುವುದಷ್ಟೆ ಜಿಂಬಾಬ್ವೆಯ ಫ್ಲೆಚರ್‌ ಕೆಲಸ. ಅದೊಂದು ದೊಡ್ಡ ಸವಾಲು ಕೂಡ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.