ವಿದೇಶಿ ಪ್ರವಾಸಿಗರ ಗಮನ ಸೆಳೆದ ವಾದ್ಯಗೋಷ್ಠಿ

7

ವಿದೇಶಿ ಪ್ರವಾಸಿಗರ ಗಮನ ಸೆಳೆದ ವಾದ್ಯಗೋಷ್ಠಿ

Published:
Updated:

 ಬಳ್ಳಾರಿ: ಮಹಾಶಿವರಾತ್ರಿ ಅಂಗವಾಗಿ ಸ್ಥಳೀಯ ನವಕರ್ನಾಟಕ ಯುವಶಕ್ತಿ ಸಂಘಟನೆ ನಗರದ ದೊಡ್ಡ ಮಾರುಕಟ್ಟೆ ಬಳಿ ಸೋಮವಾರ ಅಹೋರಾತ್ರಿ `ಗಾನ ಮಂಜರಿ~ ಕಾರ್ಯಕ್ರಮ ಏರ್ಪಡಿಸಿತ್ತು.ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಜಿ.ಮಹಾಲಿಂಗಯ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಘಟನೆಯು ಜನಸಾಮಾನ್ಯರ ಸಮಸ್ಯೆಗಳ ಪರಿಹಾರಕ್ಕೆ ಹೋರಾಟ ಹಮ್ಮಿಕೊಳ್ಳುವುದರ ಜತೆಗೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವ ಮೂಲಕ  ಕಲೆಗೆ ಪ್ರೋತ್ಸಾಹ ನೀಡುವಂತಹ ಮಹತ್ವದ ಕಾರ್ಯ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.ಗಡಿ ಭಾಗದಲ್ಲಿರುವ ಬಳ್ಳಾರಿಯಲ್ಲಿನ ಕನ್ನಡಿಗರನ್ನು ಒಗ್ಗೂಡಿಸುವಲ್ಲಿ ಸಾಂಸ್ಕೃತಿಕ ಸಮಾರಂಭಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆಯಲ್ಲದೆ, ಕನ್ನಡ ನಾಡು- ನುಡಿಗೆ ಸೇವೆ ಸಲ್ಲಿಸುತ್ತಿವೆ ಎಂದು ಅರಿವು ಸಂಘಟನೆಯ ಮುಖಂಡ ಸಿರಿಗೇರಿ ಪನ್ನರಾಜ್ ಅಭಿಪ್ರಾಯಪಟ್ಟರು.ಗಡಿನಾಡಿನಲ್ಲಿ ಕನ್ನಡ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ನಿರಂತರವಾಗಿ ನಡೆಯುವಂತಾಗಬೇಕು ಎಂದು ಅವರು ಹೇಳಿದರು.ಪಾಲಿಕೆ ಸದಸ್ಯ ವಿ.ಎಸ್.ಮರಿದೇವಯ್ಯ, ಕಥೆಗಾರ ವೆಂಕಟೇಶ್ ಉಪ್ಪಾರ್,  ಜಾನೆಕುಂಟೆ ಸಣ್ಣಬಸವರಾಜ್, ಎಂ.ನಾರಾಯಣರಾವ್, ಲಕ್ಷ್ಮಿನಾರಾಯಣ, ಟಿ.ಡಿ. ಪಂಪಾಪತಿ, ಸ್ವಾಮಿ ವಿವೇಕಾನಂದ ಯುವಕ ಸಂಘದ ಪಿ.ಗಾದೆಪ್ಪ ಮತ್ತಿತರರು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿನಿ ಅರ್ಚನಾ ಕೊಂಡಕುಂದಿ, ರೈಲ್ವೆ ಅಧಿಕಾರಿ ವೀರಭದ್ರಯ್ಯ ಮತ್ತು ಪತ್ರಿಕಾ ಛಾಯಗ್ರಾಹಕ ಟಿ.ರಾಜನ್ ಅವರನ್ನು ಸಂಘಟನೆ ವತಿಯಿಂದ ಸನ್ಮಾನಿಸಲಾಯಿತು. ಕೆ.ವಿ. ನಾಗಿರೆಡ್ಡಿ ಕಾರ್ಯಕ್ರಮ ನಿರೂಪಿಸಿದರು. ಚಂದ್ರಶೇಖರ ಆಚಾರ್ ಸ್ವಾಗತಿಸಿದರು. ಕೇಣಿ ಬಸವರಾಜ್ ವಂದಿಸಿದರು.

ನಂತರ ಗಾಯಕ ಎನ್.ಎಸ್. ಶ್ರೀನಿವಾಸ್ ಮತ್ತು ತಂಡದವರಿಂದ ನಡೆದ `ಗಾನಮಂಜರಿ~ ಕಾರ್ಯಕ್ರಮ ಜನಮನ ರಂಜಿಸಿತು.ಮೊಳಗಿದ ಝೇಂಕಾರ

ಸಿರುಗುಪ್ಪ: ಪಟ್ಟಣದಲ್ಲಿ ಅಹೋರಾತ್ರಿ ನಡೆದ ಶಿವರಾತ್ರಿಯ ಜಾಗರಣೆಯಲ್ಲಿ ಸಂಗೀತದ ಝೇಂಕಾರ ಮೊಳಗಿತು.

ಇಲ್ಲಿಯ ಅಭಯಾಂಜನೇಯ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಜಾಗರಣೆಯ ಅಂಗವಾಗಿ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಕಲಾವಿದರ ತಂಡ ಪ್ರಸ್ತುತ ಪಡಿಸಿದ ಶಾಸ್ತ್ರೀಯ ಗಾಯನ, ಸುಗಮ ಸಂಗೀತ, ದಾಸರ, ತತ್ವಪದ, ವಚನ,  ಭಜನೆ ಭಕ್ತರ ಮೈಮನ ಮರೆಯುವಂತೆ ಮಾಡಿತು.ಧಾರವಾಡದ ಭಾರ್ಗವಿ ಗುಡಿಯವರು ಶಿವನ ಆರಾಧನೆಯ  ಧವಳ ಗಂಗಾಧರ ಮಹಾಲಿಂಗ... ಎಂಬ ದಾಸರಪದಗಳನ್ನು ಮನೋಜ್ಞವಾಗಿ ಹಾಡಿದರಲ್ಲದೇ ಸುಗಮ ಸಂಗೀತದಲ್ಲಿ ಅನೇಕ ಹಾಡಗಳನ್ನು ಹಾಡಿ ಬೆರಗುಗೊಳಿಸಿದರು.ಗುಲ್ಬರ್ಗದ ಮಹೇಶ್ ಬಡಿಗೇರ, ಪುರಂದರ ಪ್ರಶಸ್ತಿ ಪುರಸ್ಕೃತ ಬಾಗಲಕೋಟೆಯ ಅನಂತ ಕುಲಕರ್ಣಿಯವರು ಶಿವರಾತ್ರಿ ಜಾಗರಣೆಯ ದಾಸರಪದ ಶಿವದರುಶನ ನಮಗಾಯಿತು ಕೇಳಿ ಶಿವರಾತ್ರಿಯಲಿ... ಎಂದು ಹಾಡುತ್ತಿದ್ದಂತೆಯೇ ಮಧ್ಯರಾತ್ರಿಯ ಜಾಗರಣೆಗೆ ಚೈತನ್ಯ ನೀಡಿತು.ಕೃಷ್ಣೇಂದ್ರ ವಾಡೇಕರ್, ಸಂತೋಷ ಗದ್ದಿಕೇರಿ, ಪಂಚಾಕ್ಷರಿ ಹಿರೇಮಠ, ಪ್ರಸನ್ನವೆಂಕಟೇಶ ಕೊರ್ತಿ, ರಾಮಚಂದ್ರ ಬಳ್ಳಾರಿ ಇವರು ಭಕ್ತಿ ಗಾಯನ ಪ್ರಸ್ತುತಪಡಿಸಿದರು. ಖ್ಯಾತ ಕಲಾವಿದ ಶಫೀಕ್‌ಖಾನ್ ಸಿತಾರ್ ನುಡಿಸಿದರೆ,  ರಾಜೇಂದ್ರ ನಾಕೋಡ್ ತಬಲಾ ಸಾಥ್ ನೀಡಿ ಗಮನ ಸೆಳೆದರು. ಮದಿರೆ ಮರಿಸ್ವಾಮಿ, ಪ್ರಶಾಂತಗೌಡ ಹಾರ‌್ಮೋನಿಯಂ ಸಾಥ್ ನೀಡಿದರು.ಕೇಶವಜೋಷಿ ಬೆಂಗಳೂರು, ಚಿದಾನಂದ ಬಡಿಗೇರ, ವಿನಯಕುಲಕರ್ಣಿ, ಜಗನ್ನಾಥ ಕಾಮಾವರಂ ತಬಲಾ ಸಾಥ್ ನೀಡಿದರು. ಗುಲ್ಬರ್ಗದ ಹೇಮಂತ ಅಷ್ಟಗೀಕರ್ ತಾಳವಾದ್ಯ ನುಡಿಸಿದರು. ವಳಬಳ್ಳಾರಿ ಸಿದ್ದಲಿಂಗ ಸ್ವಾಮೀಜಿ, ಕರೇಗುಡ್ಡದ ಮಹಾಂತಲಿಂಗ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕ ಎಂ. ಶಂಕರರೆಡ್ಡಿ ಉದ್ಘಾಟಿಸಿದರು. ಸಂಘಟಕ ಎಂ. ಗೋಪಾಲರೆಡ್ಡಿ ಸ್ವಾಗತಿಸಿದರು. ಶಿವಕುಮಾರ್ ಬಳಿಗಾರ್ ನಿರೂಪಿಸಿದರು.ಸಂಗೀತೋತ್ಸವ: ಸಿರುಗುಪ್ಪದ ಅಮೃತೇಶ್ವರ ದೇವಸ್ಥಾನದ ಆವರಣದಲ್ಲಿ ಮಹಾಶಿವರಾತ್ರಿ ಅಂಗವಾಗಿ ಸೋಮವಾರ  ಆಹೋರಾತ್ರಿ ನಡೆದ ಸಂಗೀತೋತ್ಸವದಲ್ಲಿ ಮುಂಬಯಿನ ಖ್ಯಾತ ಕಲಾ ದಿಗ್ಗಜರು ತಮ್ಮ ವಾದ್ಯ ಮತ್ತು ಗಾಯನ ಸುಧೆ ಹರಿಸಿದರು.ಸಾರಂಗ ವಾದಕ ಸಂಗೀತ ಮಿಶ್ರ, ಮೃದಂಗ ವಾದಕ ಎಲ್. ನಾಥ್, ಕೀಬೋರ್ಡ್ ವಾದಕ ಉಮಂಗ್ ದೋಸಿ, ಕೊಳಲು ವಾದಕ ಮಿಲಂದ್ ಸೆವರೆ, ಹಿಂದುಸ್ತಾನಿ ಗಾಯಕ ಸೋಮನಾಥ ಮಿಶ್ರ ಮತ್ತು ತಬಲಾ ವಾದಕ ಅಮಿತ್ ಮಿಶ್ರ ತಂಡ ವಾದ್ಯಗಳ ಸಂಕಲನದ ಜುಗಲ್ ಬಂದಿಯಲ್ಲಿ ಸಂಗೀತಾಸಕ್ತರ ಮನತಣಿಸಿದರು.ಹಿಂದೂಸ್ತಾನಿ ಗಾಯಕ ಸಿದ್ಧಲಿಂಗಯ್ಯ ಹಿರೇಮಠ, ಗಾಯಕಿ ಧಾರವಾಡದ ರಾಧಾ ದೇಸಾಯಿ, ಗದುಗಿನ ಸಂಜಯ್ ಅಂದ್ರಾಳ್, ವೀರೇಶ್ ಸಾಲಿಮಠ, ಅರುಣ ಪಟ್ಟೇದ್, ಕೀಬೋರ್ಡ್ ವಾದಕ ಅಶ್ವಿನ್ ವಾಲವಾಲ್‌ಕರ್, ತಬಲಾ ವಾದಕ ಕಾರ್ತಿಕ್ ತಂಡ ಶಾಸ್ತ್ರೀಯ ಗಾಯನ, ದಾಸರವಾಣಿ, ವಚನ, ಭಾವಗೀತೆ ಪ್ರಸ್ತುತ ಪಡಿಸಿತು.

ಸಂಗೀತೋತ್ಸವವನ್ನು ಡಿವೈಎಸ್‌ಪಿ ಎನ್. ರುದ್ರಮುನಿ ಉದ್ಘಾಟಿಸಿದರು. ಪತ್ರಕರ್ತ ಚಂದ್ರು ತುರುವಿಹಾಳ, ಪುರಸಭೆ ಮಾಜಿ ಅಧ್ಯಕ್ಷ ಯು.ಅಮರೇಶಪ್ಪ, ಸಿಪಿಐ ಲೋಕೇಶಪ್ಪ ಭಾಗವಹಿಸಿದ್ದರು. ಸಂಗೀತೋತ್ಸವದ ರೂವಾರಿ ಆರ್. ಸದಾಶಿವ ಸ್ವಾಗತಿಸಿದರು. ಲಕ್ಷ್ಮಣ ನಿರೂಪಿಸಿದರು.ಸಂಗೀತ ಸದ್ಭಾವನೆ

ಹೊಸಪೇಟೆ: ನಮ್ಮ ದೇಶದ ಪರಂಪರೆ ಹಾಗೂ ಆಚರಣೆಗಳು ತನ್ನದೆ ಆದ ಮಹತ್ವ ಹೊಂದಿವೆ, ಇಂತಹ ಆಚರಣೆಗಳನ್ನು ಮೈಗೂಡಿಸಿಕೊಂಡು ನಮ್ಮ ಪರಂಪರೆಯನ್ನು ಮುಂದುವರೆಸುವ ಜವಾಬ್ದಾರಿಯನ್ನು ನಾವುಗಳೇಲ್ಲರು ನಿರ್ವಹಿಸಬೇಕು ಎಂದು ಹಂಪಿ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಸಲಹೆ ನೀಡಿದರು.ಮಹಾಶಿವರಾತ್ರಿ ಪ್ರಯುಕ್ತ ಐತಿಹಾಸಿ ಹಂಪಿಯಲ್ಲಿ ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಗಿನ ಜಾವದ ವರೆಗೂ ನಡೆದ ಅಹೋರಾತ್ರಿ ಜಾಗರಣೆ ಕಾರ್ಯಕ್ರಮದ ವಾರ್ಷಿಕ ಸಂಗೀತ ಭಕ್ತಿ ಭಾವನಾ ಉದ್ಘಾಟಿಸಿ ಮಾತನಾಡಿದರು.

ಅಹೋರಾತ್ರಿ ಸಂಗೀತ:  ಶಿವರಾತ್ರಿ ಪ್ರಯುಕ್ತ ಅಹೋರಾತ್ರಿ ಜಾಗರಣೆ ಮತ್ತು ಸಂಗೀತ ಭಕ್ತಿ ಭಾವನೆಯನ್ನು ತಣಿಸಿತು. ಆಸ್ಟ್ರೇಲಿಯಾದ ಡಿಸೆರೂಬೊ, ಆಫ್ರಿಕಾದ ಜಂಬೆ ವಾದ್ಯಗಳ ಮಿಲನದೊಂದಿಗೆ ಇಂಗ್ಲೆಂಡ್ ಕಲಾವಿದ ಸ್ಟೀವ್ ಸಂಗೀತಾಸಕ್ತರಿಗೆ ಹೊಸ ಅನುಭವ ನೀಡಿದರು.ಅಲ್ಲಾಭಕ್ಷಿ ಮತ್ತು ಸ್ವರ್ಣಮುಖಿ ಭರತನಾಟ್ಯ ತಂಡದ ನೃತ್ಯ ಪ್ರದರ್ಶನ, ಟಾಕುರಾಜ ಮೋರಗೆರಿ ವಚನಗಾಯನ, ವೀರೇಶ ರವರ ಭಾವಗೀತೆ, ಮೂರ್ತಾಚಾರ ರಂಗಗೀತೆಗಳು ನೇರದಿದ್ದ ಭಕ್ತಸಾಗರವನ್ನು ಬೆಳಗಿನ ವರೆಗೂ ಅಲುಗಾಡದಂತೆ ಕಟ್ಟಿಹಾಕಿ ಸಂಗೀತ ಲೋಕದಲ್ಲಿ ತೇಲಿಸಿತು.ಗ್ರಾಮ ಪಂ ಅಧ್ಯಕ್ಷ ವಿರೂಪಾಕ್ಷಗೌಡ, ಜಿಪಂ ಸದಸ್ಯ ಅನಿತಾ ಆನಂದ್, ದೇವಸ್ಥಾನದ ಅಧಿಕಾರಿ ಮಹೇಶ, ತಾಪಂ ಸದಸ್ಯ ಭೀಮಾನಾಯ್ಕ ಜಾಗರಣೆಯಲ್ಲಿ ಪಾಲ್ಗೊಂಡಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry