ಶುಕ್ರವಾರ, ಜೂನ್ 25, 2021
22 °C

ವಿದೇಶಿ ಬ್ಯಾಂಕುಗಳಲ್ಲಿ ಅನಧಿಕೃತ ಹಣ: ಭಾರತೀಯರ ಹೆಸರು ಬಹಿರಂಗಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ವಿದೇಶಿ ಬ್ಯಾಂಕ್‌ಗಳಲ್ಲಿ ಅನಧಿಕೃತವಾಗಿ ಹಣ ಇಟ್ಟಿರುವ ಭಾರತೀಯರ ಹೆಸರುಗಳನ್ನು ಬಹಿರಂಗ ಗೊಳಿಸುವಂತೆ ವಿರೋಧ ಪಕ್ಷಗಳು ಗುರುವಾರ ಲೋಕಸಭೆಯಲ್ಲಿ ಕೇಂದ್ರ ಸರ್ಕಾರವನ್ನು ಆಗ್ರಹಿಸಿವೆ.

ರಾಷ್ಟ್ರಪತಿ ಅವರ ಭಾಷಣಕ್ಕೆ ವಂದನಾ ನಿರ್ಣಯ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಶಿರೋಮಣಿ ಅಕಾಲಿದಳ ಮತ್ತು ಬಿಜೆಪಿ ಸದಸ್ಯರು ವಿದೇಶಿ ಬ್ಯಾಂಕ್‌ಗಳಲ್ಲಿ ರಹಸ್ಯವಾಗಿ ಹಣ ಇಟ್ಟವರ ಹೆಸರು ಮತ್ತು ಅದಕ್ಕೆ ಸಂಬಂಧಿಸಿದ ವಿವರಗಳನ್ನು ಬಹಿರಂಗ ಪಡಿಸುವಂತೆ ಕೇಂದ್ರವನ್ನು ಒತ್ತಾಯಿಸಿದರು.

ಇದೇ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಪಕ್ಷೇತರ ಸಂಸತ್ ಸದಸ್ಯರಾದ ಇಂದರ್ ಸಿಂಗ್ ನಾಮ್‌ಧಾರಿ, `ಭಾರತದಲ್ಲಿ ಹೆಚ್ಚಿನ ಮಹಿಳೆಯರು ತಮ್ಮ ಪತಿಯ ಹೆಸರನ್ನು ಹೇಳುವುದಿಲ್ಲ. ಕಪ್ಪು ಹಣದ ವಿಚಾರದಲ್ಲಿ ಕೇಂದ್ರ ಸರ್ಕಾರವು ಅವರ ಹೆಸರುಗಳನ್ನು ಹೇಳುತ್ತಿಲ್ಲ.

ಸರ್ಕಾರ ಮತ್ತು ವಿದೇಶದಲ್ಲಿ ಹಣ ಇಟ್ಟವರ ನಡುವೆ ಇರುವ ಸಂಬಂಧವನ್ನು ತಿಳಿಯಲು ಬಯಸುತ್ತೇನೆ~ ಎಂದು ವ್ಯಂಗ್ಯವಾಗಿ ಹೇಳಿದರು.

ನಾಮ್‌ಧಾರಿ ಅವರ ಮಾತು ಇಡಿ ಸದನದಲ್ಲಿ ನಗೆಯ ಅಲೆಯಲ್ಲಿ ಸೃಷ್ಟಿಸಿತು. ಅಲ್ಲದೇ ಸದಸ್ಯರು ಮೇಜು ತಟ್ಟಿ ನಾಮ್‌ಧಾರಿ ಅವರನ್ನು ಅಭಿನಂದಿಸಿದರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅಕಾಲಿ ದಳದ ಸದಸ್ಯ ರತನ್ ಸಿಂಗ್ ಅಜ್ನಾಲ, `ಹಲವು ಭಾರತೀಯರು ಸುಮಾರು 70,000 ಕೋಟಿ ರೂಪಾಯಿಗಳನ್ನು ವಿದೇಶಿ ಬ್ಯಾಂಕ್‌ಗಳಲ್ಲಿ ಇಟ್ಟಿದ್ದಾರೆ.

ನಾವು ಹೆಸರುಗಳನ್ನು ಬಹಿರಂಗ ಪಡಿಸುವಂತೆ ಪದೇ ಪದೇ ಆಗ್ರಹಿಸುತ್ತಿದ್ದರೂ, ಸರ್ಕಾರ ವಿಳಂಬ ಮಾಡುತ್ತಿದೆ~ ಎಂದು ಆರೋಪಿಸಿದರು.

ದೇವಾಸ್ ಅಂತರಿಕ್ಷ್ ಹಗರಣ ಸೇರಿದಂತೆ ಕೇಂದ್ರ ಸರ್ಕಾರವು ವಿವಿಧ ವಲಯಗಳಲ್ಲಿ ಭಾರಿ ಪ್ರಮಾಣದ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಮತ್ತೊಬ್ಬ ಸದಸ್ಯ ಬಿಜೆಪಿಯ ಬಾಲಕೃಷ್ಣ ಶುಕ್ಲಾ ಆರೋಪಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.