ವಿದೇಶಿ ಸಾಂಸ್ಥಿಕ ಹೂಡಿಕೆ ಪ್ರಭಾವ

7

ವಿದೇಶಿ ಸಾಂಸ್ಥಿಕ ಹೂಡಿಕೆ ಪ್ರಭಾವ

Published:
Updated:

ನವದೆಹಲಿ (ಪಿಟಿಐ): ಡಾಲರ್ ವಿರುದ್ಧ ರೂಪಾಯಿ ವಿನಿಮಯ ಮೌಲ್ಯ ಚೇತರಿಕೆ ಕಂಡರೂ, ವಿದೇಶಿ ಸಾಂಸ್ಥಿಕ ಹೂಡಿಕೆದಾರರ (ಎಫ್‌ಐಐ) ಚಟುವಟಿಕೆ ಗರಿಷ್ಠ ಮಟ್ಟದಲ್ಲಿರುವುದರಿಂದ ಈ ವಾರವೂ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ತೀವ್ರ ಏರಿಳಿತ ಕಾಣುವ ನಿರೀಕ್ಷೆ ಇದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.ಸಿಮೆಂಟ್, ವಾಹನ ಉದ್ಯಮ ಕಂಪೆನಿಗಳು ಆಗಸ್ಟ್ ತಿಂಗಳ ಮಾರಾಟ ಅಂಕಿ ಅಂಶಗಳನ್ನು ಸೋಮವಾರ ಪ್ರಕಟಿಸಲಿವೆ. ಹೀಗಾಗಿ ಈ ವಲಯದ ಷೇರುಗಳ ಮೌಲ್ಯ ಜಿಗಿತ ಕಾಣುವ ನಿರೀಕ್ಷೆ ಇದೆ. ಇನ್ನೊಂದೆಡೆ ರಾಷ್ಟ್ರೀಯ ಷೇರು ಸೂಚ್ಯಂಕ `ನಿಫ್ಟಿ' ಕಳೆದ ವಾರಾಂತ್ಯದಲ್ಲಿ ನಕಾರಾತ್ಮಕವಾಗಿ ಸ್ಪಂದಿಸಿದರೂ ಕೊನೆಯಲ್ಲಿ 5,450 ಅಂಶಗಳನ್ನು ದಾಟಿದೆ. ಈ ವಾರ `ನಿಫ್ಟಿ' 5,500 ಅಂಶಗಳ ಮೇಲೆ ಸ್ಥಿರಗೊಳ್ಳಲಿದೆ ಎಂದು ಬೊನಾಂಜಾ ಪೋರ್ಟ್‌ಪೊಲಿಯೊ ಸಂಸ್ಥೆಯ ಉಪಾಧ್ಯಕ್ಷ ರಾಕೇಶ್ ಗೋಯಲ್ ಅಭಿಪ್ರಾಯಪಟ್ಟಿದ್ದಾರೆ.`ಪ್ರಧಾನಿ ಭರವಸೆಯ ಮಾತುಗಳಿಂದ ರೂಪಾಯಿ ಮೌಲ್ಯ ಚೇತರಿಕೆ ಕಂಡಿದೆ. ಆದರೆ, ಹಣಕಾಸು ಮಾರುಕಟ್ಟೆ ಅಸ್ಥಿರತೆ ಬಗ್ಗೆ ಇನ್ನೂ ಗೊಂದಲ ಮುಂದುವರಿದಿದೆ. ದೇಶದ `ಜಿಡಿಪಿ' ಪ್ರಗತಿ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇ 4.4ಕ್ಕೆ ಕುಸಿತ ಕಂಡಿರುವುದು ಸಹ ವಹಿವಾಟಿನ ಮೇಲೆ ಪ್ರಭಾವ ಬೀರಬಹುದು' ಎಂದು ಅವರು ಹೇಳಿದ್ದಾರೆ. `ಹಣಕಾಸು ಮಾರುಕಟ್ಟೆ ಅಸ್ಥಿರತೆ ತಾತ್ಕಾಲಿಕ. ರೂಪಾಯಿ ಅಪಮೌಲ್ಯದಿಂದ ನಷ್ಟವಾದರೂ ಇನ್ನೊಂದೆಡೆ  ರಫ್ತು ವಹಿವಾಟು ಚುರುಕುಗೊಳ್ಳಲಿದೆ' ಎಂದು ಪ್ರಧಾನಿ ಹೇಳಿರುವುದು ಹೂಡಿಕೆದಾರರ ವಿಶ್ವಾಸ ಹೆಚ್ಚುವಂತೆ ಮಾಡಿದೆ' ಎಂದು ಏಂಜೆಲ್ ಬ್ರೋಕಿಂಗ್ ಸಂಸ್ಥೆ ಹೇಳಿದೆ.ಕಳೆದ ವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮುಂಬೈ ಷೇರುಪೇಟೆಯಿಂದ ರೂ2,000 ಕೋಟಿ ಬಂಡವಾಳ ವಾಪಸ್ ಪಡೆದಿದ್ದಾರೆ. ವಿದೇಶಿ ವಿನಿಮಯ ಒಳಹರಿವು ಹೆಚ್ಚಿಸಲು ಮತ್ತು ಹಣಕಾಸು ಮಾರುಕಟ್ಟೆ ಅಸ್ಥಿರತೆ ತಡೆಯಲು ಭಾರತೀಯ ರಿಸರ್ವ್ (ಆರ್‌ಬಿಐ) ಕೈಗೊಳ್ಳಲಿರುವ ಹೊಸ ಕ್ರಮಗಳ ಕುರಿತು ಸಹ ಹೂಡಿಕೆದಾರರು ಭಾರಿ ಭರವಸೆ ಇಟ್ಟುಕೊಂಡಿದ್ದಾರೆ.  `ಆರ್‌ಬಿಐ'ನ ಹೊಸ ಗವರ್ನರ್ ಆಗಿ ನೇಮಕಗೊಂಡಿರುವ ರಘುರಾಂ ರಾಜನ್ ಸೆ.5ರಂದು ಅಧಿಕಾರ ಸ್ವೀಕರಿಸಲಿದ್ದಾರೆ.`ದೇಶೀಯ ಮಾರುಕಟ್ಟೆಯಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಏರಿಕೆಯಾಗಿರುವುದು ಸಹ ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಸಿರಿಯಾ ಬಿಕ್ಕಟ್ಟಿನಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಇನ್ನಷ್ಟು ತುಟ್ಟಿಯಾಗುವ ನಿರೀಕ್ಷೆ ಇದೆ' ಎಂದೂ ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry