ಬುಧವಾರ, ಜನವರಿ 29, 2020
28 °C
ಲಕ್ಷಾಂತರ ಮಂದಿಯ ಆತಿಥ್ಯ ತಾಣ

ವಿದ್ಯಾಗಿರಿಯಲ್ಲೀಗ ಗಂಟುಮೂಟೆ ಕಟ್ಟುವ ಸಮಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂಡುಬಿದಿರೆ: ನಾಲ್ಕು ದಿನಗಳಲ್ಲಿ ಲಕ್ಷಾಂತರ ಮಂದಿಗೆ ಸಾಹಿತ್ಯ, ಸಂಸ್ಕೃತಿಯ  ರಸದೌತಣ ನೀಡಿದ ಆಳ್ವಾಸ್ ವಿಶ್ವನುಡಿಸಿರಿ ವಿರಾಸತ್ ಸಂಭ್ರಮಕ್ಕೆ ಭಾನುವಾರ ತೆರೆಬಿದ್ದಿದೆ. ಸಮ್ಮೇಳನ­ದಲ್ಲಿ ನಾಲ್ಕು ದಿನ ಮಳಿಗೆಗಳನ್ನು ತೆರೆದು ವ್ಯವಹಾರ ನಡೆಸಿದ ವ್ಯಾಪಾರಿಗಳು ಸೋಮ­ವಾರ ತಮ್ಮ ಸರಕು ಸಾಮಾನುಗಳನ್ನು ತುಂಬಿಸಿ­ಕೊಂಡು ಊರಿಗೆ ಹೊರಡುವ ಸಿದ್ಧತೆಯಲ್ಲಿ­ದ್ದುದು ಕಂಡುಬಂತು.ಕನ್ನಡ ನಾಡು, ನುಡಿ ಸಂಸ್ಕೃತಿಯನ್ನು ಪ್ರತಿ­ಬಿಂಬಿಸುವ ರಾಜ್ಯದ ವಿವಿಧೆಡೆಯ ಸುಮಾ­ರು 600 ಮಳಿಗೆಗಳು ಒಂದೆಡೆ­ಯಾದರೆ, ದೇಶದ ಕೃಷಿ ಸಂಸ್ಕೃತಿಯನ್ನು ಬಿಂಬಿಸುವ ಸುಮಾರು 500 ಮಳಿಗೆಗಳನ್ನು ಮತ್ತೊಂದೆಡೆ ಇದ್ದವು. ನಾಲ್ಕು ದಿನ ವ್ಯಾಪಾರ ಮುಗಿಸಿದ ವ್ಯಾಪಾರಿಗಳು ತಮ್ಮ ಮಳಿಗೆಗಳ ಉಳಿದ ಸಾಮಗ್ರಿಗಳನ್ನು  ವಾಹನದಲ್ಲಿ ತುಂಬಿಸಿ ಊರಿಗೆ ಮರಳಲು ಸಿದ್ಧತೆಯಲ್ಲಿದ್ದಾರೆ.ಫಲಪುಷ್ಪ ಮಾರಾಟಕ್ಕೆ ಭರ್ಜರಿ ವ್ಯಾಪಾರ: ಸಮ್ಮೇಳನದ ನಾಲ್ಕು ದಿನಗಳಲ್ಲಿ ಭರ್ಜರಿ ವ್ಯಾಪಾ­ರ ಆಗಿರುವುದು ಫಲಪುಷ್ಪ ಮಾರಾಟ ವ್ಯಾಪಾರಿ­ಗಳಿಗೆ. ಕೃಷಿ ಸಮ್ಮೇಳನದ ಬಳಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಫಲ­ಪುಷ್ಟ ಮಾರಾಟ ಮಳಿಗೆಯೊಂದಕ್ಕೆ  ನಾಲ್ಕು ದಿನ­ಗಳಲ್ಲಿ ರೂ 4 ಲಕ್ಷ ವ್ಯಾಪಾರ ಆಗಿದೆ. ಹಸಿವು ಮತ್ತು ಬಾಯಾರಿಕೆಯನ್ನು ನೀಗಿಸುವ ಕಲ್ಲಂಗಡಿ ವ್ಯಾಪಾರ ಎರಡನೇ ಸ್ಥಾನ ಪಡೆದಿದೆ. ಕಲ್ಲಂಗಡಿ­ಯ ಒಟ್ಟು 8 ಮಳಿಗೆಗಳಿದ್ದು, ವಿರಾಸತ್ ಆವ­ರಣ­ದಲ್ಲಿ ಕುಂಞಿಮೋನು ಅವರ ಕಲ್ಲಂಗಡಿ  ಸ್ಟಾಲ್‌ನಲ್ಲಿ ₨ 2 ಲಕ್ಷ ವ್ಯಾಪಾರ ನಡೆ­ದಿದೆ.ಸಮ್ಮೇಳನ ಮುಗಿದರೂ ನಿಲ್ಲದ ಜನ:  ನುಡಿಸಿರಿ ವಿರಾಸತ್  ಸಮ್ಮೇಳನ ಮುಗಿದರೂ ಸೋಮವಾರವೂ ಜನ ಇಲ್ಲಿಗೆ  ಬಂದು ಕುತೂ­ಹಲ­­ದಿಂದ ವೀಕ್ಷಿಸುತ್ತಿದ್ದರು. ಕುಂದಾಪುರ ಹೆಮ್ಮಾಡಿ­­ಯ ವಿದ್ಯಾರ್ಥಿಗಳು ಸೋಮವಾರ ಸಂಜೆ ವಿದ್ಯಾಗಿರಿ ಕ್ಯಾಂಪಸ್‌ಗೆ ಬಂದು ಇಲ್ಲಿನ ಪರಿಸರ ವೀಕ್ಷಿಸಿದರು.ಸಮ್ಮೇಳನದಲ್ಲಿ ಜನರ ಆಕರ್ಷಣೆಯ ಕೇಂದ್ರ­ವಾಗಿದ್ದ ಪುಷ್ಪಾಲಂಕೃತ ಎರಡು ಆನೆಗಳು ಸೋಮ­ವಾರದವರೆಗೂ ಹಾಗೆಯೇ ಇದ್ದವು. ಕೆಲವರು ಕುತೂಹಲದಿಂದ ಅದರ ಹೂಗಳನ್ನು ಕಿತ್ತು ನೋಡುತ್ತಿದ್ದರು. ಭತ್ತದ ತೆನೆಯ ಮನೆ ಮತ್ತು ಜೋಳದ ಮನೆ ಸೋಮವಾರ ಸಂಜೆ­ಯೊಳಗೆ ತೆರವು ಮಾಡಿ ಸ್ವಚ್ಚಗೊಳಿಸ­ಲಾಗಿದೆ. ಸಮ್ಮೇಳನದ 9 ವೇದಿಕೆಗಳ ಚಪ್ಪರಗಳನ್ನು ಇನ್ನಷ್ಟೇ ತೆಗೆಯಬೇಕಾಗಿದೆ.ಸಮ್ಮೇಳನಕ್ಕೆ ಮುನ್ನ ವೇದಿಕೆ, ವಿದ್ಯಾಗಿರಿ ಆವರಣವನ್ನು ಅಲಂಕಾರ­ಗೊಳಿ­ಸಲು ಅಹರ್ನಿಶಿ ದುಡಿಯುತ್ತಿದ್ದಷ್ಟು ಕಾರ್ಮಿ­ಕ­ರ ಸಂಖ್ಯೆ ಸೋಮವಾರ ಕಂಡು ಬಂದಿ­ಲ್ಲ, ಚಪ್ಪರಗಳನ್ನು ತೆರವುಗೊಳಿಸಿ ಅಲ್ಲಿನ ಸರಕು, ಸಾಮಾನುಗಳನ್ನು ಕೊಂಡೊಯ್ದು ವಿದ್ಯಾಗಿರಿ­ಯನ್ನು ಹಿಂದಿನ ಸ್ಥಿತಿಗೆ ತರಲು ಕನಿಷ್ಠ ಎರಡು ವಾರವಾದರೂ ಬೇಕಾದೀತು ಎಂಬ ಮಾತು ಕೇಳಿಬಂದಿದೆ.

ಪ್ರತಿಕ್ರಿಯಿಸಿ (+)