ಗುರುವಾರ , ಮೇ 13, 2021
39 °C

ವಿದ್ಯಾನಗರದಲ್ಲಿ ಅಭಿವೃದ್ಧಿ ಮರೀಚಿಕೆ

ಪ್ರಜಾವಾಣಿ ವಾರ್ತೆ/ ಗಣಂಗೂರು ನಂಜೇಗೌಡ Updated:

ಅಕ್ಷರ ಗಾತ್ರ : | |

ಶ್ರೀರಂಗಪಟ್ಟಣ:  `ವಿದ್ಯಾನಗರ' ಎಂಬ ಹೆಸರು ಕೇಳಿದರೆ ಎಂತಹವರಿಗೂ ಗೌರವ ಭಾವ ಮೂಡುತ್ತದೆ. ಆದರೆ ತಾಲ್ಲೂಕಿನ ಅಚ್ಚಪ್ಪನಕೊಪ್ಪಲು ಗ್ರಾಮ ಸಮೀಪದ ವಿದ್ಯಾನಗರ ಗ್ರಾಮದಲ್ಲಿ ಒಂದೇ ಒಂದು ರಸ್ತೆಯೂ ಅಭಿವೃದ್ಧಿ ಆಗಿಲ್ಲ ಎಂದರೆ ನಿಮಗೆ ಅಚ್ಚರಿಯಾಗಬಹುದು.ಹೌದು! ಈ ಊರಿನಲ್ಲಿ ಡಾಂಬರ್, ಸಿಮೆಂಟ್ ರಸ್ತೆ ಇರಲಿ, ಮಣ್ಣಿನ ರಸ್ತೆಯೂ ಇಲ್ಲ. ಎಲ್ಲವೂ ಕಾಡಿನ ನಡುವೆ ಕಾಣುವ ಕಾಲು ಹಾದಿಯಂತಹ ಕಿರಿದಾದ ರಸ್ತೆಗಳೇ.  ಮಣ್ಣಿನ ರಸ್ತೆಯ ಇಕ್ಕೆಲಗಳಲ್ಲಿ ಕಳೆ ಗಿಡಗಳು ಬೆಳೆದಿವೆ. ಹೆಜ್ಜೆ ಹೆಜ್ಜೆಗೂ ಓತಿಕ್ಯಾತ, ಚೇಳುಗಳು ಕಾಣ ಸಿಗುತ್ತವೆ. ಮನೆಗಳಿಗೆ ಹಾವು ನುಗ್ಗುವುದು ಇಲ್ಲಿ ಸಾಮಾನ್ಯ ಸಂಗತಿ.ರಸ್ತೆಯೇ ಇಲ್ಲ ಎಂದ ಮೇಲೆ ಚರಂಡಿಯ ಅಗತ್ಯವಾದರೂ ಏನು? ಎಂಬ ಕಾರಣಕ್ಕೋ ಏನೋ ಇಲ್ಲಿ ಚರಂಡಿಯನ್ನು ನಿರ್ಮಿಸಿಲ್ಲ. ಮನೆಯ ಸ್ನಾನದ ಮನೆಯ ನೀರು ಮನೆಯ ಮುಂದೆಯೇ ನಿಲ್ಲುತ್ತದೆ. ಕುಡಿಯುವ ನೀರಿನ ಬೀದಿ ನಲ್ಲಿಗಳ ಬಳಿ ಮಲಿನ ನೀರು ಮಡುಗಟ್ಟುತ್ತದೆ. ಕೂಲಿ ಅರಸಿ ಎಲ್ಲಿಂದಲೋ ಬಂದವರು ತಾವು ಸಿಕ್ಕ ಕಡೆ ನೆಲೆಯೂರಿದ್ದಾರೆ. ಹಾಗಾಗಿ ಈ ಊರು ಅಕ್ಷರಶಃ ಗುಡ್ಡಗಾಡಿನಂತೆ ಕಾಣುತ್ತದೆ. ಇಲ್ಲಿ ಯೋಜನಾಬದ್ಧವಾಗಿ ಮನೆಗಳನ್ನು ಕಟ್ಟದ ಕಾರಣ ಹಕ್ಕಿಪಿಕ್ಕಿ ಜನರು ವಾಸಿಸುವ ವಠಾರದಂತೆ ಗೋಚರಿಸುತ್ತದೆ.ಗ್ರಾಮದಲ್ಲಿ 70ಕ್ಕೂ ಹೆಚ್ಚು ಕುಟುಂಬಗಳು ನೆಲೆ ನಿಂತಿವೆ. ಈ ಪೈಕಿ 15ಕ್ಕೂ ಹೆಚ್ಚು ಕುಟಂಬಗಳ ಜನರು ಇನ್ನೂ ಗುಡಿಸಲುಗಳಲ್ಲಿ ವಾಸ ಮಾಡುತ್ತಿದ್ದಾರೆ. ವಿದ್ಯಾನಗರದ ಯಾರೊಬ್ಬರಿಗೂ ಇಲ್ಲಿ  ಜಮೀನು ಇಲ್ಲ. ಎಲ್ಲರೂ ಕೂಲಿಯನ್ನೇ ನೆಚ್ಚಿಕೊಂಡು ಹೊಟ್ಟೆ ಹೊರೆಯಬೇಕು. ಕೆಲವರಿಗೆ ಅಶ್ರಯ ಮನೆ ಕೊಟ್ಟಿರುವುದನ್ನು ಹೊರತುಪಡಿಸಿದರೆ ಸರ್ಕಾರ ಸವಲತ್ತುಗಳು ಸಿಕ್ಕಿಲ್ಲ. `ಅಂಗಡಿ, ಪಶುಪಾಲನೆ. ಟೈಲರಿಂಗ್ ಇತರ ಸ್ವಉದ್ಯೋಗ ಕೈಗೊಳ್ಳಲು ಸರ್ಕಾರದ ನೆರವು ಸಿಕ್ಕಿಲ್ಲ.ಕುಡಿಯುವ ನೀರು ಸರಬರಾಜು ಮಾಡುವ ಮೋಟಾರ್ ಕೆಟ್ಟರೆ ವಾರವಾದರೂ ಅದನ್ನು ರಿಪೇರಿ ಮಾಡುವುದಿಲ್ಲ. ಅಂಗನವಾಡಿ ಕೇಂದ್ರ ಸಹ ಇಲ್ಲಿಲ್ಲ' ಎಂದು ಗ್ರಾಮದ ಶ್ರೀನಿವಾಸ್, ಕಾಳಮ್ಮ, ಸಿಕಂದರ್ ಇತರರು ತಮ್ಮೂರಿನ ಸಮಸ್ಯೆಯ ಪಟ್ಟಿಯನ್ನು ನೀಡುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.