ವಿದ್ಯಾಭ್ಯಾಸಕ್ಕೆ ಅಮೆರಿಕ ಕಂಪೆನಿ ನೆರವು

7

ವಿದ್ಯಾಭ್ಯಾಸಕ್ಕೆ ಅಮೆರಿಕ ಕಂಪೆನಿ ನೆರವು

Published:
Updated:

ಬೆಂಗಳೂರು: ರಾಜ್ಯದ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅಮೆರಿಕದ ಮನಿಗ್ರಾಂ ಕಂಪೆನಿಯು 50 ಲಕ್ಷ ರೂಪಾಯಿಗಳ ನೆರವನ್ನು ನಗರದ ವಾತ್ಸಾಲಯ ಚಾರಿಟಬಲ್ ಟ್ರಸ್ಟ್‌ಗೆ ನೀಡಿದೆ.ಬುಧವಾರ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮನಿಗ್ರಾಂ ಕಂಪೆನಿಯ ಹಿರಿಯ ಪ್ರಾದೇಶಿಕ ನಿರ್ದೇಶಕ ಹರ್ಷ ಲಂಬಾ ಅವರು ವಾತ್ಸಾಲಯ ಚಾರಿಟಬಲ್ ಟ್ರಸ್ಟ್‌ನ ಕಾರ್ಯಕಾರಿ ನಿರ್ದೇಶಕಿ ಮೇರಿ ಪಾಲ್ ಅವರಿಗೆ ಚೆಕ್ ಹಸ್ತಾಂತರಿಸಿದರು.ಮೇರಿ ಪಾಲ್ ಮಾತನಾಡಿ, `ಟ್ರಸ್ಟ್ ಸುಮಾರು ವರ್ಷಗಳಿಂದ ಹೆಣ್ಣುಮಕ್ಕಳಿಗಾಗಿ ಕಾರ್ಯನಿರ್ವಹಿಸುತ್ತಿದೆ. ಓದಲು ಆರ್ಥಿಕವಾಗಿ ಕಷ್ಟವಿರುವ ಹೆಣ್ಣುಮಕ್ಕಳು ಮತ್ತು ಅನಾಥ ಮಕ್ಕಳನ್ನು ಪೋಷಿಸುತ್ತಿದೆ. ದತ್ತು ಕೇಂದ್ರಗಳನ್ನು ಸ್ಥಾಪಿಸಿ ಹೆಣ್ಣುಮಕ್ಕಳನ್ನು ದತ್ತು ಪಡೆಯುವವರಿಗಾಗಿ ಸಹಾಯ ಮಾಡುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ~ ಎಂದು ವಿವರಿಸಿದರು.`ಮನಿಗ್ರಾಂ ನೀಡಿರುವ ಹಣವನ್ನು ಆರು ಪ್ರೌಢಶಾಲೆಗಳ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಉಪಯೋಗಿಸಲಾಗುವುದು. ಬೆಂಗಳೂರಿನ ಕಲೊನೆಲ್ ಹಿಲ್ ಪ್ರೌಢಶಾಲೆ, ಕನ್‌ಸರ್ನ್ಸ್ ಯೂನಿವರ್ಸ್ ಪ್ರತಿಷ್ಠಾನ ಮತ್ತು ಸೆಂಟ್ ಚಾರ್ಲ್ಸ್ ಕನ್ನಡ ಪ್ರೌಢಶಾಲೆ, ರಾಯಚೂರಿನ ಮುರಾನಪುರ ಶಾಲೆ ಹಾಗೂ ರಾಯಚೂರು ಪ್ರೌಢಶಾಲೆ, ಕೊಪ್ಪಳದ ಕೊಪ್ಪಳ ಪ್ರೌಢಶಾಲೆಯ ಒಟ್ಟು 300 ಬಾಲಕಿಯರ ವಿದ್ಯಾಭ್ಯಾಸಕ್ಕೆ ನೆರವು ಒದಗಿಸಲಾಗುವುದು. ಅವರಿಗೆ ಸಮವಸ್ತ್ರ, ಪುಸ್ತಕಗಳು ಮತ್ತು ಇತರೆ ಪಠ್ಯ ಉಪಕರಣಗಳನ್ನು ಒದಗಿಸಲಾಗುವುದು~ ಎಂದರು.ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಮಾತನಾಡಿ `ಮಾನವೀಯತೆ ಕಡಿಮೆಯಾಗುತ್ತಿರುವ ಸಮಾಜದಲ್ಲಿ ಮನಿಗ್ರಾಂ ಪ್ರತಿಷ್ಠಾನ ಮತ್ತು ವಾತ್ಸಾಲಯ ಚಾರಿಟಬಲ್ ಟ್ರಸ್ಟ್ ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ. ಅದರಲ್ಲೂ ಹೆಣ್ಣುಮಕ್ಕಳ ಶಿಕ್ಷಣದ ಬಗ್ಗೆ ದುಡಿಯುತ್ತಿರುವುದು ಒಳ್ಳೆಯ ಕೆಲಸವಾಗಿದೆ~ ಎಂದರು.

`ಹೆಣ್ಣುಮಕ್ಕಳೇ ನಿಜವಾದ ಶಕ್ತಿಯಾಗಿದ್ದಾರೆ. ಅವರನ್ನು ಕಡೆಗಣಿಸಬೇಡಿ. ಅವರಿಗೆ ಶಿಕ್ಷಣ ನೀಡಿದರೆ, ಅವರು ಇಡೀ ಮನೆಯನ್ನು ಬೆಳಗುತ್ತಾರೆ. ಅವರಿಗೆ ಶಿಕ್ಷಣ ನಿರಾಕರಿಸುವುದು ಒಂದು ಅಪರಾಧವಾಗಿದೆ~ ಎಂದು ಹೇಳಿದರು. ಲಂಬಾ ಮಾತನಾಡಿ, `ಬಾಲಕಿಯರಿಗೆ ಹಲವು ಕಾರಣಗಳಿಗಾಗಿ ಶಿಕ್ಷಣವನ್ನು ನಿರಾಕರಿಸಲಾಗುತ್ತದೆ.ಅವರಿಗೆ ಸಮವಸ್ತ್ರದ ಕೊರತೆ ಮತ್ತು ಸರಿಯಾದ ಪಠ್ಯಪುಸ್ತಕಗಳಿಲ್ಲದಿರುವುದು ಅವರು ಶಾಲೆಗೆ ಗೈರು ಹಾಜರಾಗಲು ಪ್ರಮುಖ ಕಾರಣವೆಂದು ಪರಿಗಣಿಸಲಾಗಿದೆ~ ಎಂದರು. `ಈ ನಿಟ್ಟಿನಲ್ಲಿ ಕೆಲವು ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಿ, ಬಾಲಕಿಯರು ಶಾಲೆ ತೊರೆಯದಂತೆ ಮಾಡುವ ಸಲುವಾಗಿ ಕಂಪೆನಿಯು ಆರ್ಥಿಕ ನೆರವನ್ನು ನೀಡುತ್ತಿದೆ~ ಎಂದರು.ಮನಿಗ್ರಾಂ ಹಣ ವರ್ಗಾವಣೆಯ ಕಂಪೆನಿಯಾಗಿದ್ದು, ಅಮೆರಿಕ ಮತ್ತು ಕೆನಡಾದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ವಿಶ್ವದ 196 ದೇಶಗಳಲ್ಲಿನ ಗ್ರಾಹಕರಿಗೆ ಹಣ ವರ್ಗಾವಣೆಯ ಸೇವೆಯನ್ನು ಆಯಾ ಪ್ರದೇಶದ ಅಂಚೆ ಕಚೇರಿಗಳು ಮತ್ತು ಹಣಕಾಸು ಸಂಸ್ಥೆಗಳ ಮೂಲಕ ಒದಗಿಸುತ್ತಿದೆ. ಬೆಂಗಳೂರಿನಲ್ಲಿ ಮೊದಲ ಬಾರಿಗೆ ತನ್ನ ಶಾಖೆಯನ್ನು ಆರಂಭಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry