ವಿದ್ಯಾಭ್ಯಾಸದ ಒತ್ತಡ: ವಿದ್ಯಾರ್ಥಿ ನೇಣಿಗೆ ಶರಣು

7

ವಿದ್ಯಾಭ್ಯಾಸದ ಒತ್ತಡ: ವಿದ್ಯಾರ್ಥಿ ನೇಣಿಗೆ ಶರಣು

Published:
Updated:
ವಿದ್ಯಾಭ್ಯಾಸದ ಒತ್ತಡ: ವಿದ್ಯಾರ್ಥಿ ನೇಣಿಗೆ ಶರಣು

ಬೆಂಗಳೂರು: ವಿದ್ಯಾಭ್ಯಾಸದ ಒತ್ತಡ ತಾಳಲಾರದೆ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗಿರಿನಗರದಲ್ಲಿ ಸೋಮವಾರ ರಾತ್ರಿ ನಡೆದಿದೆ.ಪಿಇಎಸ್ ತಾಂತ್ರಿಕ ಶಿಕ್ಷಣ ಸಂಸ್ಥೆ ಕಾಲೇಜಿನ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್ ವಿಭಾಗದ ಮೂರನೇ ಸೆಮಿಸ್ಟರ್ ವಿದ್ಯಾರ್ಥಿ ಪ್ರಣಯ್ ಕುಮಾರ್ (20) ಆತ್ಮಹತ್ಯೆ ಮಾಡಿಕೊಂಡವರು. ಕಾಲೇಜು ಕ್ಯಾಂಪಸ್‌ನಲ್ಲೇ ಇರುವ ವಿದ್ಯಾರ್ಥಿ ನಿಲಯದಲ್ಲಿ ನೆಲೆಸಿದ್ದ ಅವರು ರಾತ್ರಿ ನೇಣು ಹಾಕಿಕೊಂಡಿದ್ದಾರೆ. ಮಂಗಳವಾರ ಬೆಳಿಗ್ಗೆ ಎಂಟು ಗಂಟೆ ಸುಮಾರಿಗೆ ಸ್ನೇಹಿತರು ಪ್ರಣಯ್ ಅವರನ್ನು ಮಾತನಾಡಿಸಲು ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.`ಪ್ರಣಯ್ ಆತ್ಮಹತ್ಯೆ ಪತ್ರ ಬರೆದಿಟ್ಟಿಲ್ಲ. ಆದರೆ ಆತನ ಸ್ನೇಹಿತರು ಹೇಳಿರುವ ಪ್ರಕಾರ ಆತನಿಗೆ ವಿದ್ಯಾಭ್ಯಾಸದ ಒತ್ತಡ ಇತ್ತು. ಆತ ಎರಡನೇ ಸೆಮಿಸ್ಟರ್‌ನ ಒಂದು ವಿಷಯದಲ್ಲಿ ಅನುತ್ತೀರ್ಣನಾಗಿದ್ದ. ಆದ್ದರಿಂದ ಆತ ಯಾವಾಗಲೂ ಒತ್ತಡದಲ್ಲಿ ಇರುತ್ತಿದ್ದ. ಇದೇ ಕಾರಣಕ್ಕೆ ಆತ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ~ ಎಂದು ದಕ್ಷಿಣ ವಿಭಾಗದ ಡಿಸಿಪಿ ಸೋನಿಯಾ ನಾರಂಗ್ `ಪ್ರಜಾವಾಣಿ~ಗೆ ತಿಳಿಸಿದರು.`ಘಟನೆ ಸಂಬಂಧ ಅಸಹಜ ಸಾವು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆತನ ಪೋಷಕರು ಬಿಹಾರದಲ್ಲಿದ್ದಾರೆ. ನಗರದಲ್ಲೇ ಇರುವ ಆತನ ಸಂಬಂಧಿಕರ ಒಪ್ಪಿಗೆ ಪಡೆದು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ. ಸಂಬಂಧಿಕರು ಶವವನ್ನು ಬಿಹಾರಕ್ಕೆ ಕೊಂಡೊಯ್ಯಲಿದ್ದಾರೆ~ ಎಂದು ಅವರು ಮಾಹಿತಿ ನೀಡಿದರು.ವಿದ್ಯಾರ್ಥಿ ನಿಲಯದ ಕೊಠಡಿಯಲ್ಲಿ ಗೆಳೆಯನ ಜತೆ ವಾಸವಿದ್ದ ಪ್ರಣಯ್, ಕೆಲ ದಿನಗಳ ಹಿಂದೆ ಪ್ರತ್ಯೇಕ ಕೊಠಡಿಗೆ ಸ್ಥಳಾಂತರಗೊಂಡಿದ್ದ. ಅಲ್ಲಿ ಆತ ಒಬ್ಬನೇ ಉಳಿದುಕೊಂಡಿದ್ದ. ರಾತ್ರಿ ಜತೆಗೆ ಊಟ ಮಾಡಿದ ಆತ ಕೊಠಡಿಗೆ ಹೋಗಿ ಮಲಗಿದ್ದ ಎಂದು ಸ್ನೇಹಿತರು ತಿಳಿಸಿದ್ದಾರೆ.ವಿದ್ಯಾರ್ಥಿಗಳ ಪ್ರತಿಭಟನೆ: ಪ್ರಣಯ್ ಸಾವಿಗೆ ಕಾಲೇಜು ಆಡಳಿತ ಮಂಡಳಿಯೇ ಕಾರಣ ಎಂದು ಆರೋಪಿಸಿ ನೂರಾರು ವಿದ್ಯಾರ್ಥಿಗಳು ಕಾಲೇಜಿನ ಮುಖ್ಯ ದ್ವಾರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. ಅಂಕ ಗಳಿಕೆ ಮತ್ತು ಹಾಜರಾತಿ ವಿಷಯದಲ್ಲಿ ಒತ್ತಡ ಹೆಚ್ಚಾಗಿದೆ. ಇದೇ ಕಾರಣಕ್ಕೆ ಪ್ರಣಯ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪ್ರತಿಭಟನಾಕಾರರು ದೂರಿದರು.

 

ಕಾಲೇಜಿನ ಮುಖ್ಯ ಕಟ್ಟಡದ ಮೇಲೆ ಕಲ್ಲು ತೂರಾಟ ನಡೆಸಿದ ವಿದ್ಯಾರ್ಥಿಗಳು ಕಿಟಕಿ ಗಾಜುಗಳನ್ನು ಪುಡಿ ಮಾಡಿದರು. ಅಲ್ಲದೇ ಹೂ ಕುಂಡಗಳನ್ನು ಒಡೆದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಆ ನಂತರ ರಾಜ್ಯ ಮೀಸಲು ಪಡೆ ತುಕಡಿಗಳನ್ನೂ ಸ್ಥಳಕ್ಕೆ ಕರೆಸಿಕೊಳ್ಳಲಾಯಿತು. ಪರಿಸ್ಥಿತಿ ಹತೋಟಿ ಮೀರುತ್ತಿದ್ದದ್ದನ್ನು ಮನಗಂಡ ಪೊಲೀಸರು ವಿದ್ಯಾರ್ಥಿಗಳನ್ನು ಬಲವಂತವಾಗಿ ಚದುರಿಸಿದರು.ಒತ್ತಡ ಹಾಕಿಲ್ಲ: `ಎಂಜಿನಿಯರಿಂಗ್ ವಿದ್ಯಾರ್ಥಿ ಪ್ರಣಯ್ ಸಾವು ದುಃಖ ತಂದಿದೆ. ವಿದ್ಯಾರ್ಥಿಗಳ ಮೇಲೆ ನಾವೂ ಒತ್ತಡ ಹೇರಿಲ್ಲ. ಅವರ ಭವಿಷ್ಯದ ದೃಷ್ಟಿಯಿಂದ ಶಿಸ್ತನ್ನು ಪಾಲಿಸಲಾಗುತ್ತಿದೆ. ಶಿಸ್ತನ್ನು ಒತ್ತಡ ಎಂದು ಭಾವಿಸಬಾರದು~ ಎಂದು ಪಿಇಎಸ್‌ಐಟಿ ಕಾಲೇಜಿನ ಅಧ್ಯಕ್ಷ ಪ್ರೊ.ಎಂ.ಆರ್.ದೊರೆಸ್ವಾಮಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry