ವಿದ್ಯಾರಣ್ಯಪುರ: ಬಾಡಿಗೆ ಆದಾಯಕ್ಕೆ ಪ್ರಶಸ್ತ ಸ್ಥಳ

ಬೆಂಗಳೂರು ಬೆಳೆಯುತ್ತಿದ್ದಂತೆ ಅದರೊಳಗಿನ ನೂರಾರು ಬಡಾವಣೆ, ಸ್ಥಳಗಳ ಪ್ರಾಮುಖ್ಯವೂ ಬದಲಾಗುತ್ತದೆ. ಹಲವು ದೃಷ್ಟಿಯಿಂದ ಪ್ರಾಮುಖ್ಯ ಪಡೆದುಕೊಂಡ ಸ್ಥಳಗಳಲ್ಲಿ ವಿದ್ಯಾರಣ್ಯಪುರವೂ ಒಂದು. ಈ ಸ್ಥಳದ ಸಂಕ್ಷಿಪ್ತ ಮಾಹಿತಿಯನ್ನು ಇಲ್ಲಿ ನೋಡೋಣ.
ವಿದ್ಯಾರಣ್ಯಪುರ ಯಲಹಂಕದ ಬಳಿ ಬೆಂಗಳೂರಿನ ವಾಯವ್ಯ ಭಾಗದಲ್ಲಿದೆ. 1970ರಲ್ಲಿಯೇ ಈ ನೆಲೆಯನ್ನು ಗುರುತಿಸಲಾಗಿತ್ತು. ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಹಾಗೂ ಹಿಂದೂಸ್ತಾನ್ ಮಷಿನ್ ಟೂಲ್ಸ್ನಂಥ ಎರಡು ಬೃಹತ್ ಸರ್ಕಾರಿ ಕೈಗಾರಿಕೆಗಳಿಗೆ ನೆಲೆಯಾಗಿದೆ ವಿದ್ಯಾರಣ್ಯಪುರ. ಇಲ್ಲಿ ವಾಸಿಸುತ್ತಿರುವವರಲ್ಲಿ ಬಹು ಭಾಗ ಈ ಎರಡು ಕೈಗಾರಿಕೆಗಳ ನೌಕರರು ಇದ್ದಾರೆ. ಹೆಬ್ಬಾಳ ಮತ್ತು ಮಾನ್ಯತಾ ಟೆಕ್ ಪಾರ್ಕ್ಗೆ ವಿದ್ಯಾರಣ್ಯಪುರ ಸಮೀಪ ಇರುವುದರಿಂದ ಐಟಿ ಉದ್ಯಮಿಗಳೂ ಈ ಜಾಗಕ್ಕೆ ಆದ್ಯತೆ ನೀಡುತ್ತಿದ್ದಾರೆ.
ವ್ಯವಸ್ಥಿತ ವಸತಿ ಸ್ಥಳವಾಗಿ ಗುರುತಿಸಿಕೊಂಡಿರುವ ವಿದ್ಯಾರಣ್ಯಪುರ, ಅತಿ ಹೆಚ್ಚು ಬಂಡವಾಳ ಬೆಲೆ ಹೊಂದಿರುವ ಪ್ರದೇಶವಲ್ಲ. ಇಲ್ಲಿ ಭೂಮಿ ಲಭ್ಯತೆ ಕೊರತೆಯಿಂದ ಹೊಸ ಪ್ರಾಜೆಕ್ಟ್ಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಇಳಿಮುಖವಾಗಿದ್ದು, 2015ರಲ್ಲಿ ಕೆಲವೇ ಯೋಜನೆಗಳು ಅಡಿಇಟ್ಟವು. ಸ್ಥಳೀಯ ಸೌಲಭ್ಯಗಳು, ಶಿಕ್ಷಣ ಸಂಸ್ಥೆಗಳ ಇರುವಿಕೆ ಮತ್ತು ಹೋಲಿಕೆಯಲ್ಲಿ ಕಡಿಮೆ ಬೆಲೆ ಇರುವುದರಿಂದ ಇಲ್ಲಿನ ಬಾಡಿಗೆ ರಿಯಲ್ ಎಸ್ಟೇಟ್ ಮಾರುಕಟ್ಟೆ ಏಳಿಗೆ ಕಾಣುವ ನಿರೀಕ್ಷೆಯಿದೆ.
2013ರ ನಂತರ ಇಲ್ಲಿನ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗಿದ್ದು, ಅತಿ ಉನ್ನತ ದರದ ಹಂತವನ್ನು ತಲುಪಿ, ವಸತಿ ಪ್ರದೇಶಕ್ಕೆ ಚದರ ಅಡಿಗೆ ₹3,000–5,500ವರೆಗೂ ಬೆಲೆಯನ್ನು ಪಡೆದುಕೊಂಡಿತ್ತು. ಕಳೆದ ಒಂದು ವರ್ಷದಲ್ಲಿ ವಸತಿ ಭೂಮಿ ಶೇಕಡಾ 5ರಷ್ಟು ತೇಜಿ ಬೆಲೆಯನ್ನೂ ಗಳಿಸಿಕೊಂಡಿತ್ತು. ಈ ಪ್ರದೇಶದಲ್ಲಿ ಯಾವುದೇ ಪ್ರಮುಖ ವಾಣಿಜ್ಯ ಚಟುವಟಿಕೆಗಳು ಇಲ್ಲದಿದ್ದರೂ ಮಾರುಕಟ್ಟೆಯಲ್ಲಿನ ಕೆಲವು ವಾಣಿಜ್ಯ ಸ್ಥಳಗಳನ್ನು ಗಣನೆಗೆ ತೆಗೆದುಕೊಂಡು ದೊರೆತಿರುವ ಮಾಹಿತಿ ಪ್ರಕಾರ, ವಾಣಿಜ್ಯ ಸ್ಥಳಗಳಿಗೆ ಅಂದಾಜು ಚದರ ಅಡಿಗೆ ₹4,500ರಿಂದ 6,000ದ ನಡುವೆ ಬೆಲೆ ಇದೆ.
ನಿವೇಶನಗಳ ಲಭ್ಯತೆ ಕಡಿಮೆ ಇರುವುದರಿಂದ ನಿರ್ಮಾಣಗಾರರಿಗೆ ವಿದ್ಯಾರಣ್ಯಪುರ ಅಷ್ಟೇನೂ ಉತ್ತಮ ಆಯ್ಕೆಯಲ್ಲದಿದ್ದರೂ, ಹೋಲಿಕೆಯಲ್ಲಿ ಕಡಿಮೆ ಬೆಲೆ ಇರುವುದರಿಂದ ಹೂಡಿಕೆದಾರರು ಅನುಕೂಲಕರ ಆಯ್ಕೆಗಳಿಗಾಗಿ ಮರು ಮಾರುಕಟ್ಟೆಯತ್ತ ದೃಷ್ಟಿ ಹೊರಳಿಸಿದ್ದಾರೆ. ಭವಿಷ್ಯದಲ್ಲಿ ಇಲ್ಲಿ ಉತ್ತಮ ರೀತಿ ಬಾಡಿಗೆ ಲಭಿಸುವ ನಿರೀಕ್ಷೆಯಿದ್ದು, ಹೂಡಿಕೆದಾರರು ಬಾಡಿಗೆ ಆದಾಯದ ಈ ಅವಕಾಶವನ್ನು ಬಳಸಿಕೊಳ್ಳಲು ನೋಡುತ್ತಿದ್ದಾರೆ.
ಭಿನ್ನ ಬಡಾವಣೆಗಳೊಂದಿಗೆ ಒಂದು ಯೋಜಿತ ಪ್ರದೇಶವಾಗಿ ಗುರುತಿಸಿಕೊಂಡಿರುವ ಈ ಸ್ಥಳ ಉತ್ತಮ ಸಾಮಾಜಿಕ ಮೂಲಸೌಲಭ್ಯಗಳನ್ನೂ ಹೊಂದಿದೆ. ಭಾರತೀಯ ವಿಜ್ಞಾನ ಸಂಸ್ಥೆ, ಲಿಕ್ವಿಡ್ ಕ್ರಿಸ್ಟರ್ ರಿಸರ್ಚ್, ಕೃಷಿ ವಿಶ್ವವಿದ್ಯಾಲಯ, ನ್ಯಾಷನಲ್ ಸೆಂಟರ್ ಫಾರ್ ಬಯಲಾಜಿಕಲ್ ಸೈನ್ಸಸ್ ಮತ್ತು ಜವಹರಲಾಲ್ ನೆಹರು ಸೆಂಟರ್ ಫಾರ್ ಸೈಂಟಿಫಿಕ್ ರಿಸರ್ಚ್ನಂಥ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಈ ಪ್ರದೇಶ ಉತ್ತಮ ರಸ್ತೆ ಸಂಪರ್ಕವನ್ನೂ ಸಾಧಿಸಿರುವುದು ಬಹುಮುಖ್ಯ ಅಂಶ.
ಪರಿಪೂರ್ಣ ಹೂಡಿಕೆ ಉದ್ದೇಶಕ್ಕಿಂತ ಸ್ವಂತ ಇರಲು ಈ ಪ್ರದೇಶವನ್ನು ಹೆಚ್ಚು ಶಿಫಾರಸು ಮಾಡಲಾಗುತ್ತದೆ. ನಗರದ ಪರಿಧಿಯಲ್ಲಿ ಈ ಸ್ಥಳದ ಇರುವಿಕೆ ಮತ್ತು ಇದೇ ರೀತಿ ಅತ್ಯುತ್ತಮ ಸಂಪರ್ಕ ಸಾಧಿಸಿರುವ ಸ್ಥಳಗಳ ಸಾಮೀಪ್ಯ, ಈ ಜಾಗದ ಹೂಡಿಕೆ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಬಾಡಿಗೆ ಆದಾಯ ಬಯಸುವ ಮಂದಿಗೂ ಇದು ಉತ್ತಮ ಬಡಾವಣೆ. ಸಾವಿರ ಚದರ ಅಡಿ ಜಾಗದ ಎರಡು ಸ್ಟಾಂಡರ್ಡ್ ಬೆಡ್ರೂಮಿನ ಮನೆಗೆ ₹10,000ದಿಂದ 13,500ರವರೆಗೆ ಬೆಲೆ ಇದೆ. ಆದ್ದರಿಂದ ಶೇಕಡಾ ಮೂರರಷ್ಟು ವಾರ್ಷಿಕ ಬಾಡಿಗೆ ಆದಾಯವನ್ನು ಪಡೆದುಕೊಳ್ಳಬಹುದು.
ಈ ಮುನ್ನವೇ ಹೇಳಿದಂತೆ, ಸ್ಥಳದ ಬಂಡವಾಳ ಬೆಲೆ ಅಷ್ಟೇನೂ ಅಧಿಕವಿಲ್ಲ. ಜೊತೆಗೆ ಪ್ರಾಜೆಕ್ಟ್ಗಳು ಮತ್ತು ಇಲ್ಲಿನ ಮರು ಮಾರಾಟ ಬೆಲೆಯ ಮಾಹಿತಿ ಪ್ರಕಾರ, ಎರಡು ಬೆಡ್ರೂಮಿನ ವಸತಿ ಅಪಾರ್ಟ್ಮೆಂಟ್ನ ‘ಟಿಕೆಟ್ ಬ್ರ್ಯಾಕೆಟ್’ ಬೆಲೆ ₹25 ಲಕ್ಷದಿಂದ 45 ಲಕ್ಷದವರೆಗೂ ಇದೆ. ಇದು ನಗರದ ಇನ್ನಿತರ ಸ್ಥಳಗಳಿಗೆ ಹೋಲಿಸಿದರೆ ಕೈಗೆಟುಕುವ ದರವೇ ಆಗಿದೆ (ಥಣಿಸಂದ್ರ: ಚದರ ಅಡಿಗೆ ₹5,080, ಕೊಡಿಗೆಹಳ್ಳಿ: ಚದರ ಅಡಿಗೆ ₹5,200, ಯಲಹಂಕ: ಚದರ ಅಡಿಗೆ ₹5,050, ಹೆಣ್ಣೂರು ರಸ್ತೆ: ಚದರ ಅಡಿಗೆ ₹5,340ರೂಪಾಯಿ, ಯಶವಂತಪುರ: ಚದರ ಅಡಿಗೆ ₹6,700 ರೂಪಾಯಿ, ಎಚ್ಆರ್ಬಿಆರ್ ಲೇಔಟ್: ಚದರ ಅಡಿಗೆ ₹10,150 ರೂಪಾಯಿ).
ಮಾಹಿತಿ: commonfloor.com
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.