ವಿದ್ಯಾರ್ಥಿಗಳಲ್ಲೂ ಕಲಾಸಕ್ತಿ ಬೆಳೆಸಿ

7

ವಿದ್ಯಾರ್ಥಿಗಳಲ್ಲೂ ಕಲಾಸಕ್ತಿ ಬೆಳೆಸಿ

Published:
Updated:

ಚಿಕ್ಕಮಗಳೂರು: ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೂ ಸಾಹಿತ್ಯ, ಸಂಗೀತ, ಕಲೆಯಲ್ಲಿ ಆಸಕ್ತಿ ಬೆಳೆಸುವ ವಾತಾವರಣ ನಿರ್ಮಿಸುವ ಅಗತ್ಯವಿದೆ ಎಂದು ಕಾದಂಬರಿಕಾರ, ಸರಸ್ವತಿ ಸಂಮ್ಮೋನ್ ಪ್ರಶಸ್ತಿ ಪುರಸ್ಕೃತ  ಎಸ್.ಎಲ್.ಭೈರಪ್ಪ ಆಶಯ ವ್ಯಕ್ತಪಡಿಸಿದರು.ನಗರದ ಆದಿಚುಂಚನಗಿರಿ ತಾಂತ್ರಿಕ ಕಾಲೇಜಿನಲ್ಲಿ ಶುಕ್ರವಾರ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಏರ್ಪಡಿಸಿದ್ದ ಕನ್ನಡ ಸಂಸ್ಕೃತಿ ವೈಭವ ಕಾರ್ಯಕ್ರಮದಲ್ಲಿ ಸನ್ಮಾನ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಎಂಜಿನಿಯರಿಂಗ್ ಕಾಲೇಜುಗಳಲ್ಲಿ ತಾಂತ್ರಿಕ ವಿಷಯ ಗಳನ್ನು ಹೊರತುಪಡಿಸಿ ಕಲಾ ವಿಷಯಗಳನ್ನು ಕಲಿಸಬಾರದೆಂಬ ಧೋರಣೆ ಒಳ್ಳೆಯದಲ್ಲ. ವಿದ್ಯಾರ್ಥಿಗಳು ಪಠ್ಯಕ್ಕೆ ಸೀಮಿತವಾದರೆ ಯಂತ್ರಗಳಂತಾಗುವ ಸಾಧ್ಯತೆ ಇರುತ್ತದೆ. ಅಗ್ಗದ ಸಾಹಿತ್ಯ, ಸಂಗೀತದತ್ತ ವಾಲುವ ಅಪಾಯವೂ ಇರುತ್ತದೆ.ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡ ಸಾಹಿತ್ಯ, ಸಂಗೀತ, ಕಲೆಗಳನ್ನು ವಿದ್ಯಾರ್ಥಿಗಳ ಬಿಡುವಿನಲ್ಲಿ ಅವರ ಮುಖ್ಯ ವಿಷಯ ಅಧ್ಯಯನಕ್ಕೆ ಸಮಸ್ಯೆಯಾಗದಂತೆ ಕಲಿಸುವುದು ಅಗತ್ಯವಿದೆ. ಒಬ್ಬ ವ್ಯಕ್ತಿ ಎಂಜಿನಿಯರ್ ಆಗಿ ಸಂಗೀತದ ಸಪ್ತಸ್ವರಗಳ ಕಂಪನ ಪ್ರಮಾಣ ಅಳೆಯಲು ಸಾಧ್ಯವಾಗುತ್ತದೆ. ಇದೇ ರೀತಿ ಬೇರೆ ಬೇರೆ ಕಲೆಗಳ ಬಗ್ಗೆ ಆಸಕ್ತಿಯಿರುವವರಿಗೆ ಅದನ್ನು ಪ್ರಾಥಮಿಕ ಹಂತದಲ್ಲಿ ಕಲಿಯಲು ಅವಕಾಶ ಕಲ್ಪಿಸುವುದು  ತರಬೇತಿ ಎನಿಸುತ್ತದೆ ಎಂದು ಅಭಿಪ್ರಾಯಪಟ್ಟರು.ಇಂದು ವಿಜ್ಞಾನವೂ ಬೇಕು, ತಂತ್ರಜ್ಞಾನವೂ ಅವಶ್ಯ. ಹಾಗೆಯೇ ಕಲೆ, ಸಾಹಿತ್ಯ, ಸಂಗೀತವೂ ಮುಖ್ಯ. ಸಾಹಿತ್ಯ, ಸಂಗೀತ, ಕಲೆ ಇಲ್ಲದೆ ಕೇವಲ ಪದವಿ ಗಳಿಸಿದರೆ ಜೀವನ ಬರಡಾಗುತ್ತದೆ. ಶಿಕ್ಷಣದ ಜತೆಗೆ ಲಲಿತ ಕಲೆಗಳ ಕಲಿಕೆಗೂ ಆಸಕ್ತಿ ತಳೆದರೆ ಬದುಕು ಸಮೃದ್ಧವಾಗಿ ರೂಪುಗೊಳ್ಳುತ್ತದೆ.

 

ಇಂದು ಪ್ರಾಮಾಣಿಕ ರಾಜಕಾರಣಿ, ಅಧಿಕಾರಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಒಂದು ಕಾಲದಲ್ಲಿ ವಿಶ್ವೇಶ್ವರಯ್ಯ, ಡಿ.ವಿ.ಗುಂಡಪ್ಪ ಅಂತಹ ವ್ಯಕ್ತಿಗಳು ಈ ನಾಡಿನಲ್ಲಿದ್ದರು. ಪ್ರಾಮಾಣಿಕತೆ ಅವರ ವ್ಯಕ್ತಿತ್ವದ ಭಾಗವಾಗಿತ್ತು. ಅದಕ್ಕೆ ಮುಖ್ಯ ಕಾರಣ ಅವರ ಯೋಚನೆ, ಚಿಂತನೆಗಳು ಸಮಾಜಕ್ಕೆ ಪೂರಕವಾಗಿದ್ದವು ಎಂದು ಹೇಳಿದರು.ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರಾಧ್ಯಾಪಕ ಡಾ.ಎನ್.ಎಸ್.ತಾರಾನಾಥ್ ಮಾತನಾಡಿ, ಭೈರಪ್ಪನವರ ಕೃತಿಗಳು ಒಮ್ಮೆ ಓದಿ ಮರೆಯುವ ಕೃತಿಗಳಲ್ಲ. ಮತ್ತೆ ಮತ್ತೆ ಓದಲು ತುಡಿಯುವಂತೆ ಮಾಡುತ್ತವೆ. ಮತ್ತೆ ಓದಿಸುವ ಗುಣ, ಮತ್ತೆ ವಿಶ್ಲೇಷಿಸುವಂತೆ ಪ್ರಚೋದಿಸುವ ಗುಣವಿರುವಂತಹವೇ ಶ್ರೇಷ್ಠ ಕೃತಿಗಳು ಎಂದರು.ಕಾದಂಬರಿ ಭೈರಪ್ಪ ಆರಿಸಿಕೊಂಡ ಸಾಹಿತ್ಯದ ಪ್ರಕಾರ. ಸಾಮಾನ್ಯ ಓದುಗ ಹಾಗೂ ವಿಮರ್ಶಕರಿಬ್ಬರನ್ನೂ ಸೆಳೆ ಯುವ ಗುಣ ಅವರ ಕಾದರಂಬರಿಯಲ್ಲಿವೆ. ಬದುಕಿನ ಅನ್ವೇಷಣೆ, ತಾಕಲಾಟಗಳು ಅಲ್ಲಿ ಕಾಣಿಸುತ್ತವೆ. ಅವರ ಕೃತಿ ಗಳು ಶ್ರೇಷ್ಠತೆ, ಸಾರ್ವಕಾಲಿಕತೆ ಪಡೆದುಕೊಂಡಿವೆ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ  ಮಹೇಶಪ್ಪ, ಭೈರಪ್ಪ ಬಹು ಆಯಾಮದ ಸೃಜನಶೀಲ ಸಾಹಿತಿ. ಬದುಕಿಗೆ ಹತ್ತಿರ ಮತ್ತು ಸಂಕೀರ್ಣ ಸಾಹಿತ್ಯ ಸೃಷ್ಟಿಸಿದ್ದಾರೆ. ಮನುಷ್ಯನ ಕಷ್ಟ ಹಾಗೂ ಆಳ ಅನುಭವಗಳು ಕೃತಿಯಲ್ಲಿ ಜೀವಂತಿಕೆ ಪಡೆದಿವೆ ಎಂದರು.ಮೌಂಟೆನ್‌ವ್ಯೆ ವಿದ್ಯಾಸಂಸ್ಥೆ ಸಂಸ್ಥಾಪಕಿ ಆಜ್ರಾ, ಸಮಾಜ ಸೇವಕಿ ಗೌರಮ್ಮ ಬಸವೇಗೌಡ ಅವರನ್ನು ವಿಶ್ವವಿದ್ಯಾಲಯದ ವತಿಯಿಂದ ಸನ್ಮಾನಿಸಲಾಯಿತು. ಆದಿಚುಂಚನಗಿರಿ ಶೃಂಗೇರಿ ಶಾಖಾಮಠಾಧೀಶ ಗುಣನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ  ಸಿ.ಕೆ.ಸುಬ್ಬರಾಯ, ಸಿ.ಟಿ. ಜಯದೇವ, ಕೆ.ಆರ್.ಮೋಹನ್ ಇದ್ದರು.ಭೈರಪ್ಪ ಹಾಗೂ ಮುಖ್ಯ ಅತಿಥಿಗಳಿಗೆ ಮಂಗಳವಾದ್ಯ, ವೀರಗಾಸೆ ಮತ್ತು ಪೂರ್ಣ ಕುಂಭದೊಂದಿಗೆ ಕಾಲೇಜು ವಿದ್ಯಾರ್ಥಿಗಳು ಭವ್ಯ ಸ್ವಾಗತ ನೀಡಿದರು. ವಿದ್ಯಾರ್ಥಿಗಳಾದ ಎಸ್.ಬಿ.ಚೈತ್ರ ಮತ್ತು ಸಂಪತ್ ಸಿರಿಮನೆ ಭೈರಪ್ಪನವರೊಂದಿಗೆ ಸಾಹಿತ್ಯ ಸಂವಾದ ನಡೆಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry