ವಿದ್ಯಾರ್ಥಿಗಳಿಂದ ಸಭೆಗೆ ದಿಗ್ಬಂಧನ, ಪ್ರತಿಭಟನೆ

ಸೋಮವಾರ, ಜೂಲೈ 22, 2019
27 °C

ವಿದ್ಯಾರ್ಥಿಗಳಿಂದ ಸಭೆಗೆ ದಿಗ್ಬಂಧನ, ಪ್ರತಿಭಟನೆ

Published:
Updated:

ಬೆಂಗಳೂರು: ಪಿಎಚ್.ಡಿ ಕೋರ್ಸ್ ವರ್ಕ್‌ಗೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳದೇ ಇರುವುದನ್ನು ಖಂಡಿಸಿ ಬೆಂಗಳೂರು ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳು ಬುಧವಾರ ಜ್ಞಾನಜ್ಯೋತಿ ಸಭಾಂಗಣದ ಸೆಮಿನಾರ್ ಹಾಲ್‌ನಲ್ಲಿ ನಡೆಯುತ್ತಿದ್ದ ವಿ.ವಿ. ಶೈಕ್ಷಣಿಕ ಪರಿಷತ್ತಿನ ಸಭೆಗೆ ದಿಗ್ಬಂಧನ ಹಾಕಿ ಪ್ರತಿಭಟಿಸಿದರು. ಇದರಿಂದಾಗಿ ಒಂದು ಗಂಟೆ ಕಾಲ ಸಭೆ ನಡೆಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಯಿತು.`ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ನಿಯಮದ ಪ್ರಕಾರ ಪಿಎಚ್.ಡಿ ವಿದ್ಯಾರ್ಥಿಗಳು ಆರು ತಿಂಗಳ ಕೋರ್ಸ್ ವರ್ಕ್ ಮಾಡುವುದು ಕಡ್ಡಾಯವಾಗಿದೆ. ಕುಲಪತಿ ಪ್ರಭುದೇವ್ ಅವರು ಕೋರ್ಸ್ ವರ್ಕ್‌ನ ಅವಧಿಯನ್ನು ಏಕಾಏಕಿ ಆರು ತಿಂಗಳಿಂದ ಒಂದು ವರ್ಷಕ್ಕೆ ಹೆಚ್ಚಿಸಿದ್ದಾರೆ. 2009ರ ಜೂನ್‌ನಿಂದ ಇಲ್ಲಿಯವರೆಗೆ ಕೋರ್ಸ್ ವರ್ಕ್‌ನ ಪಠ್ಯಕ್ರಮವನ್ನು ಅಂತಿಮಗೊಳಿಸಿಲ್ಲ.ಇದೆಲ್ಲದರಿಂದ ವಿದ್ಯಾರ್ಥಿಗಳು ಪಿಎಚ್.ಡಿ. ಪದವಿ ಪಡೆಯುವುದು ವಿಳಂಬವಾಗುತ್ತಿದೆ~ ಎಂದು ವಿದ್ಯಾರ್ಥಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.`ಕಲಾ ವಿಭಾಗದ ವಿದ್ಯಾರ್ಥಿಗಳಿಗೂ ಸಂಖ್ಯಾಶಾಸ್ತ್ರವನ್ನು ಕಡ್ಡಾಯ ಮಾಡಲಾಗಿದೆ. ಸಂಖ್ಯಾಶಾಸ್ತ್ರ ಅಧ್ಯಯನ ಮಾಡುವುದಾಗಿದ್ದರೆ ನಾವೇಕೆ ಕಲಾ ವಿಭಾಗವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೆವು. ಶನಿವಾರದೊಳಗೆ ನಮ್ಮ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವುದಾಗಿ ಕುಲಪತಿ ಭರವಸೆ ನೀಡಿದ್ದರು. ನಾಲ್ಕು ದಿನ ಕಳೆದರೂ ನಮ್ಮ ಸಮಸ್ಯೆಗೆ ಸ್ಪಂದಿಸಿಲ್ಲ~ ಎಂದು ಅವರು ಆರೋಪಿಸಿದರು.ಕುಲಸಚಿವ (ಮೌಲ್ಯಮಾಪನ) ಆರ್.ಕೆ.ಸೋಮಶೇಖರ್ ಮಾತನಾಡಿ, `ಸಂಖ್ಯಾಶಾಸ್ತ್ರದ ಬಗ್ಗೆ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆ ಪರಿಷತ್ತು ಪಿಎಚ್.ಡಿ. ಅಧಿಸೂಚನೆಯನ್ನು ಎಲ್ಲ ವಿ.ವಿ.ಗಳಿಗೂ ಕಳುಹಿಸಿಕೊಟ್ಟಿದೆ. ಅದು ಜಾರಿಯಾದ ಮೇಲೆ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ~ ಎಂದರು.ಈ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ವಿದ್ಯಾರ್ಥಿಗಳು ಕುಲಪತಿಯವರೇ ನಮಗೆ ಉತ್ತರ ಕೊಡಬೇಕು ಎಂದು ಪಟ್ಟು ಹಿಡಿದರು.ಕೊನೆಗೆ ಪ್ರಭುದೇವ್ ಮಾತನಾಡಿ, `ಯುಜಿಸಿ ನಿಯಮದಂತೆ ಕೋರ್ಸ್ ವರ್ಕ್‌ಗೆ ಆರು ತಿಂಗಳ ಅವಧಿಯನ್ನೇ ನಿಗದಿ ಮಾಡಲಾಗುವುದು. ಉಳಿದ ಸಮಸ್ಯೆಗಳನ್ನು ಒಂದು ತಿಂಗಳ ಒಳಗೆ ಪರಿಹರಿಸಲಾಗುವುದು~ ಎಂದು ಭರವಸೆ ನೀಡಿದರು. ನಂತರ ವಿದ್ಯಾರ್ಥಿಗಳು ಹೊರ ನಡೆದರು.ಸಭೆಯ ಅವ್ಯವಸ್ಥೆ ಬಗ್ಗೆ ಪರಿಷತ್ತಿನ ಸದಸ್ಯರೂ ಬಾಗೇಪಲ್ಲಿ ಶಾಸಕರೂ ಆದ ಎನ್.ಸಂಪಂಗಿ ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಮುಖ್ಯಮಂತ್ರಿಯವರಿಗೆ ದೂರು ನೀಡುವೆ ಎಂದರು.ಸಭೆ ಬಳಿಕ ವರದಿಗಾರರೊಂದಿಗೆ ಮಾತನಾಡಿದ ಪ್ರಭುದೇವ್, `ಪ್ರತಿಭಟನೆ ನಡೆಸಿದವರಲ್ಲಿ ವಿದ್ಯಾರ್ಥಿಗಳಲ್ಲದ ಕೆಲವರೂ ಇದ್ದರು. ಈ ಬೆಳವಣಿಗೆ ಬಗ್ಗೆ ರಾಜ್ಯಪಾಲರ ಗಮನಕ್ಕೆ ತರಲಾಗುವುದು~ ಎಂದರು.ಸರ್ಕಾರಕ್ಕೆ ವರದಿ: ಮೈಲಾರಪ್ಪ

`ಕಾಲೇಜುಗಳ ಮಾನ್ಯತೆ ನವೀಕರಣ ಮತ್ತಿತರ ವಿಚಾರಗಳಿಗೆ ಸಂಬಂಧಿಸಿದಂತೆ ಸ್ಥಳೀಯ ಪರಿಶೀಲನಾ ಸಮಿತಿಗಳು (ಎಲ್‌ಎಸಿ) ನೀಡಿರುವ ವರದಿಗಳನ್ನು ಒಪ್ಪಿಕೊಳ್ಳಲಾಗಿದೆ. ಕುಂದುಕೊರತೆ ಇರುವ ಕಾಲೇಜುಗಳಿಗೆ ಮತ್ತೆ ಭೇಟಿ ನೀಡಿ ಪರಿಶೀಲಿಸುವಂತೆ ಸಂಬಂಧಪಟ್ಟ ಎಲ್‌ಎಸಿಗಳಿಗೆ ಸೂಚಿಸಲಾಗಿದೆ ಎಂದು ಸರ್ಕಾರಕ್ಕೆ ವರದಿ ಕಳುಹಿಸಿಕೊಡಲಾಗಿದೆ~ ಎಂದು ಕುಲಸಚಿವ (ಆಡಳಿತ) ಪ್ರೊ.ಬಿ.ಸಿ.ಮೈಲಾರಪ್ಪ ತಿಳಿಸಿದರು.ಶೈಕ್ಷಣಿಕ ಪರಿಷತ್ತಿನ ಸಭೆ ಬಳಿಕ ವರದಿಗಾರರೊಂದಿಗೆ ಮಾತನಾಡಿದ ಅವರು, `ಅರ್ಜಿ ಹಾಕಿದ ಕಾಲೇಜುಗಳಿಗೆ ಮಾತ್ರ ಹೆಚ್ಚುವರಿ ಪ್ರವೇಶಕ್ಕೆ ಅನುಮತಿ ನೀಡಲಾಗುವುದು. ರೋಸ್ಟರ್ ಪದ್ಧತಿಯನ್ನು ಕಡ್ಡಾಯವಾಗಿ ಅನುಸರಿಸುವಂತೆ ಎಲ್ಲ ಕಾಲೇಜುಗಳಿಗೆ ತಾಕೀತು ಮಾಡಲಾಗುವುದು~ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry