ವಿದ್ಯಾರ್ಥಿಗಳಿಗೆಉಚಿತ ಪ್ರಸಾದ

7

ವಿದ್ಯಾರ್ಥಿಗಳಿಗೆಉಚಿತ ಪ್ರಸಾದ

Published:
Updated:

ಹಾವೇರಿ: ಬೆಳಗಾವಿ ರುದ್ರಾಕ್ಷಿಮಠದ ಮಾದರಿಯಲ್ಲಿ ಬಡ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಉದ್ದೆೀಶದಿಂದ ಶಿವಬಸವ ಉಚಿತ ವಿದ್ಯಾರ್ಥಿ ಪ್ರಸಾದ ನಿಲಯವನ್ನು ಶ್ರೀಮಠವು ಶೀಘ್ರ ಆರಂಭಿಸಲಿದೆ ಎಂದು ಹುಕ್ಕೇರಿ ಮಠದ ಸದಾಶಿವ ಶ್ರೀಗಳು ತಿಳಿಸಿದರು.ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಉಚಿತ ಪ್ರಸಾದ ನಿಲಯದಲ್ಲಿ 500 ಬಡ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗುವುದು. 5 ರಿಂದ ಪದವಿ ಶಿಕ್ಷಣದವರೆಗಿನ ವಿದ್ಯಾರ್ಥಿಗಳಿಗೆ ವಸತಿ ಮತ್ತು ಊಟದ ವ್ಯವಸ್ಥೆ ಮಾಡಲಾಗುವುದು ಎಂದರು.ಸರ್ಕಾರ ಶ್ರೀಮಠದ ದಾಸೋಹ ಭವನ ನಿರ್ಮಾಣಕ್ಕಾಗಿ ವಾಗ್ದಾನ ಮಾಡಿರುವ 2 ಕೋಟಿ ಹಣದಲ್ಲಿ ಈ ಉಚಿತ ಪ್ರಸಾದ ನಿಲಯ ನಿರ್ಮಿಸಲಾಗುತ್ತಿದೆ. ಇದರ ಜತೆಗೆ ಅತಿಥಿ ಗೃಹ, ದಾಸೋಹ ಭವನ ಕೂಡ ನಿರ್ಮಾಣವಾಗುತ್ತಿದೆ ಎಂದು ಅವರು ತಿಳಿಸಿದರು.ಸರ್ಕಾರ ಎರಡು ಕೋಟಿ ರೂ.ಗಳಲ್ಲಿ ಈಗಾಗಲೇ ಒಂದು ಕೋಟಿ ಬಿಡುಗಡೆ ಮಾಡಿದೆ. ಆದರೆ ಶ್ರೀಮಠ ಈ ಹಣ ನಂಬಿ ಕೈಗೊಂಡಿರುವ ದಾಸೋಹ ನಿಲಯ, ವಿದ್ಯಾರ್ಥಿ ಪ್ರಸಾದ ನಿಲಯ ಹಾಗೂ ಅತಿಥಿ ಗೃಹ ಕಾಮಗಾರಿಗೆ ಈಗಾಗಲೇ 3.50 ಕೋಟಿ ಹಣ ಖರ್ಚಾಗಿದೆ. ಸರ್ಕಾರ ಬಿಡುಗಡೆ ಮಾಡಿರುವ 1 ಕೋಟಿ ಹಣ ಅಲ್ಲದೇ ದಾನಿಗಳಿಂದ ಉಳಿದ ಹಣ ಸಂಗ್ರಹಿಸಿ ಕಾಮಗಾರಿ ಮುಂದುವರೆಸಲಾಗಿದೆ ಎಂದು ತಿಳಿಸಿದರು.ಈ ಹಣವನ್ನು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶ್ರೀಮಠವು ಕೆಲಸ ಮಾಡುತ್ತಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು. ಇದರ ಜೊತೆಗೆ ಶ್ರೀಮಠಕ್ಕೆ ಆಗಮಿಸುವ ಭಕ್ತಾದಿಗಳಿಗೆ ವಿವಿಧ ಸೌಲಭ್ಯ ಒದಗಿಸಲು ಅವಶ್ಯವಿರುವ ಎಲ್ಲಾ ಸಕಲ ಸಭಲಭ್ಯಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.ಶ್ರೀಮಠ ಈಗಾಗಲೇ ಹಲವಾರು ಜನಪರ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳುತ್ತಿದೆ, ಕೆಲ ದಿನಗಳ ಹಿಂದಷ್ಟೆ ಜಿಲ್ಲೆಯಲ್ಲಿ 40 ಸಾವಿರ ಮಂದಿಗೆ ರುದ್ರಾಕ್ಷಿ ಧಾರಣೆ ಮಾಡಲಾಗಿದೆ, ಅಲ್ಲದೇ ಜನರಲ್ಲಿ ಧಾರ್ಮಿಕ ಭಾವನೆ ಬೆಳೆಸಲು ಪಾದಯಾತ್ರೆ ಕೈಗೊಳ್ಳ ಲಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಮಠದ ಗೌರವ ಕಾರ್ಯದರ್ಶಿ ಈರಣ್ಣ ಅಂಗಡಿ, ಪ್ರಾಚಾರ್ಯ ಬಿ.ಬಸವರಾಜ, ಸಿ.ಎಸ್. ಮರಳಿಹಳ್ಳಿ, ಕೆ.ಆರ್. ನಾಶಿಪುರ ಅಲ್ಲದೇ ಅನೇಕರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry