ವಿದ್ಯಾರ್ಥಿಗಳಿಗೆ ಅಣ್ಣಾ ಕಿವಿಮಾತು:ಭ್ರಷ್ಟಾಚಾರ ವಿರುದ್ಧ ಹೋರಾಡಿ

7

ವಿದ್ಯಾರ್ಥಿಗಳಿಗೆ ಅಣ್ಣಾ ಕಿವಿಮಾತು:ಭ್ರಷ್ಟಾಚಾರ ವಿರುದ್ಧ ಹೋರಾಡಿ

Published:
Updated:

ಬೆಂಗಳೂರು: ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಅಣ್ಣಾ ಹಜಾರೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.ನಗರದ ಜಿಂದಾಲ್ ಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಮಕ್ಕಳ ಜತೆಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. `ಭ್ರಷ್ಟಾಚಾರದ ಪರಿಣಾಮ ಕುರಿತು ಎಲ್ಲರೂ ಅರಿತು ಕೊಳ್ಳಬೇಕು. ಪ್ರಾಮಾಣಿಕತೆಯನ್ನು ಸ್ವತಃ ಪಾಲಿಸಬೇಕು. ಕಷ್ಟ ಮತ್ತು ಅಪಮಾನಗಳನ್ನು ಸಹಿಸಿಕೊಳ್ಳುವ ಶಕ್ತಿ ಬೆಳೆಸಿಕೊಳ್ಳಬೇಕು~ ಎಂದು ಅವರು ಹೇಳಿದಾಗ ವಿದ್ಯಾರ್ಥಿಗಳು ಚಪ್ಪಾಳೆ ಮೂಲಕ ಅವರ ಮಾತನ್ನು ಸ್ವಾಗತಿಸಿದರು.`ನಾನು ಸೇನೆಯಲ್ಲಿದ್ದಾಗ ಪಾಕಿಸ್ತಾನದ ವಿರುದ್ಧ ನಡೆದ ಯುದ್ಧದಲ್ಲಿ ಪಾಲ್ಗೊಂಡಿದ್ದೆ. ನನ್ನ ಕಣ್ಣೆದುರೇ ಮೂರು ಮಂದಿ ನನ್ನ ಸ್ನೇಹಿತರು ಶತ್ರುಗಳ ಗುಂಡಿಗೆ ಹುತಾತ್ಮರಾದರು. ನನ್ನ ಹಣೆಗೂ ಗಾಯವಾಯಿತು. ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಒಮ್ಮೆ ಯೋಚಿಸಿದ್ದೆ. ಆದರೆ ಸ್ವಾಮಿ ವಿವೇಕಾನಂದರ ಪುಸ್ತಕ ಓದಿದ ನಂತರ ನನ್ನಲ್ಲಿ ಹೊಸ ಚೈತನ್ಯ ಬಂತು. ಸಮಾಜ ಸೇವೆ ಮಾಡಬೇಕು ಎಂಬ ಹಂಬಲ ಮೂಡಿತು. ಸಮಾಜ ಸೇವೆಯ ನನ್ನ ಜೀವನದ ಗುರಿಯಾಗಬೇಕು ಎಂದು ಅಂದು ನಾನು ನಿರ್ಧರಿಸಿದೆ~ ಎಂದು ಅವರು ಹೇಳಿದರು.ಜನ ಲೋಕಪಾಲ್ ಮಸೂದೆಯನ್ನು ಜಾರಿಗೆ ತರದಿದ್ದರೆ ಏನು ಮಾಡುತ್ತೀರ ಎಂಬ ವಿದ್ಯಾರ್ಥಿಯ ಪ್ರಶ್ನೆಗೆ ಉತ್ತರಿಸಿದ ಅಣ್ಣಾ, `ನನ್ನ ಕೊನೆಯ ಉಸಿರು ಇರುವವರೆಗೂ ಲೋಕ ಪಾಲ ಮಸೂದೆ ಜಾರಿಗೆ ಹೋರಾಟ ಮಾಡುತ್ತೇನೆ~ ಎಂದರು.ಯಾವುದೇ ಒಂದು ಕಾನೂನು ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಬಲ್ಲದೇ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, `ಕಾನೂನು ಎಂಬುದು ಪ್ರಥಮ ಚಿಕಿತ್ಸೆಯ ಹಾಗೆ. ಆದರೆ ಎಲ್ಲರೂ ಮೌಲ್ಯಗಳನ್ನು ವ್ಯಕ್ತಿಗತಗೊಳಿಸಿಕೊಳ್ಳಬೇಕು. ಈ ವಯಸ್ಸಿನಲ್ಲಿಯೇ ನೀವು ಪ್ರಾಮಾಣಿಕತೆಯನ್ನು ಬೆಳೆಸಿಕೊಳ್ಳಿ. ಪರೀಕ್ಷಾ ಕೊಠಡಿಯಿಂದಲೇ ಪ್ರಾಮಾಣಿಕತೆಯನ್ನು ರೂಢಿಸಿಕೊಳ್ಳಿ. ಜನ ಲೋಕಪಾಲ ಮಸೂದೆ ಬೇರೆ ಮಸೂದೆಗಳಿಂಗಿಂತ ಭಿನ್ನ ಜನರ ಸಹಕಾರ ಇದ್ದಾಗ ಇದು ಯಶಸ್ಸು ಕಾಣುತ್ತದೆ~ ಎಂದು ಉತ್ತರಿಸಿದರು.

 

ಮಕ್ಕಳ ವ್ಯಕ್ತಿತ್ವ ವಿಕಸನದ ಬಗ್ಗೆ ಹೆಚ್ಚಿನ ಗಮನ ನೀಡಬೇಕೆಂದು ಅಣ್ಣಾ ಶಿಕ್ಷಕರಿಗೆ ಕರೆ ನೀಡಿದರು.

ತಿರಸ್ಕರಿಸುವ ಹಕ್ಕು ಜಾರಿಗೆ ಒತ್ತಾಯಿಸಿ ಹೋರಾಟ ಮಾಡಲು ಅಣ್ಣಾ ತಂಡ ನಿರ್ಧರಿಸಿದೆ. ಚುನಾವಣೆಗೆ ಸ್ಪರ್ಧಿಸಿರುವವರಲ್ಲಿ ಯಾರೂ ಅರ್ಹರಿಲ್ಲ ಎಂದು ಗೊತ್ತಾದಾಗ ಅವರನ್ನು ತಿರಸ್ಕರಿಸುವ ಹಕ್ಕಿಗಾಗಿ ಹೋರಾಟ ಮಾಡಲಾಗುತ್ತದೆ ಎಂದು ತಂಡದ ಸದಸ್ಯರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry