ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ವಿತರಣೆ

7

ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ವಿತರಣೆ

Published:
Updated:
ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ವಿತರಣೆ

ಬೆಂಗಳೂರು: `ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುವುದಿಲ್ಲ ಎನ್ನುವ ಅಪಸ್ವರ ಎತ್ತಿದ ಜನರಿಗೆ ಅತ್ಯುತ್ತಮ ಸಾಧನೆ ತೋರುವ ಮೂಲಕ ನಮ್ಮ ವಿದ್ಯಾರ್ಥಿಗಳು ಸರಿಯಾದ ಪ್ರತ್ಯುತ್ತರ ನೀಡಿದ್ದಾರೆ' ಎಂದು ರಾಜ್ಯ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಮಾನದಿಂದ ಹೇಳಿದರು.



ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಬುಧವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಕಂಪ್ಯೂಟರ್ ವಿತರಿಸಿ ಅವರು ಮಾತನಾಡಿದರು.



`ಶಿಕ್ಷಕರಿಗೂ ತರಬೇತಿ ಕೊಟ್ಟಿದ್ದೇವೆ. ಪರೀಕ್ಷಾ ಪದ್ಧತಿಯಲ್ಲಿ ಸುಧಾರಣೆ ತಂದಿದ್ದೇವೆ. ವಿಜ್ಞಾನದ ಆವಿಷ್ಕಾರದ ಲಾಭ ವಿದ್ಯಾರ್ಥಿಗಳಿಗೆ ಸಿಗುವಂತೆ ನೋಡಿಕೊಂಡಿದ್ದೇವೆ. ಅದೆಲ್ಲದರ ಫಲ ಈಗ ಸಿಗುತ್ತಿದೆ' ಎಂದು ತಿಳಿಸಿದರು.



`ರಾಜ್ಯದಲ್ಲಿ ಈ ಹಿಂದೆ ಎಂದಿಗೂ ಕಾಣದಂತಹ ಫಲಿತಾಂಶ ಕಳೆದ ಏಪ್ರಿಲ್‌ನಲ್ಲಿ ಬಂದಿದೆ. ಶೇ 76ರಷ್ಟು ಮಕ್ಕಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಇತಿಹಾಸದಲ್ಲೇ ಇದೊಂದು ದಾಖಲೆ' ಎಂದು ಹೇಳಿದರು.



`ಮುಂದಿನ ಮೂರು ವರ್ಷಗಳಲ್ಲಿ ಪಿಯುಸಿ ಫಲಿತಾಂಶವನ್ನೂ ಶೇ 70ಕ್ಕೆ ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ' ಎಂದು ಕಾಗೇರಿ ಮಾಹಿತಿ ನೀಡಿದರು.



ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಜಿ. ಕುಮಾರ ನಾಯಕ್, `ಕಂಪ್ಯೂಟರ್ ಕೊಡುವ ಮೂಲಕ ಸರ್ಕಾರ ಜ್ಞಾನದ ಕೀಲಿ ಕೈಯನ್ನೇ ನೀಡಿದೆ. ವಿದ್ಯಾರ್ಥಿಗಳು ಅದರ ಪ್ರಯೋಜನ ಪಡೆಯಬೇಕು' ಎಂದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ  ಪ್ರತಿ ತಾಲ್ಲೂಕಿನಲ್ಲಿ ಮೊದಲ ಸ್ಥಾನ ಪಡೆದ ಹಾಗೂ ಜಿಲ್ಲೆಗೆ ಮೊದಲ 3 ಸ್ಥಾನ ಪಡೆದ 324 ಜನ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ವಿತರಿಸಲಾಗುತ್ತಿದ್ದು, ಬುಧವಾರ ಸಾಂಕೇತಿಕವಾಗಿ ಕೆಲ ವಿದ್ಯಾರ್ಥಿಗಳಿಗಷ್ಟೇ ಕೊಡಲಾಯಿತು. ಕಂಪ್ಯೂಟರ್ ವಿತರಣೆಗೆ 1.71 ಕೋಟಿ ವ್ಯಯಿಸಲಾಗಿದೆ.



ಪ್ರತಿಭಾ ಕಾರಂಜಿ, ವಿಜ್ಞಾನ ಪ್ರದರ್ಶನ ಮತ್ತು ಕ್ರೀಡಾ ಸ್ಪರ್ಧೆಯಲ್ಲಿ ಸಾಧನೆ ಮೆರೆದ ವಿದ್ಯಾರ್ಥಿಗಳಿಗೂ ನಗದು ಬಹುಮಾನ ವಿತರಿಸಲಾಯಿತು. ಸರ್ವ ಶಿಕ್ಷಣ ಅಭಿಯಾನದ ಆಯುಕ್ತ ಎಸ್.ಆರ್. ಉಮಾಶಂಕರ್ ಮತ್ತು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕ ಡಿ.ವೆಂಕಟೇಶಯ್ಯ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry