ವಿದ್ಯಾರ್ಥಿಗಳಿಗೆ ಕಾಡಿನ ಹಣ್ಣುಗಳ ಪರಿಚಯ

ಶನಿವಾರ, ಜೂಲೈ 20, 2019
22 °C

ವಿದ್ಯಾರ್ಥಿಗಳಿಗೆ ಕಾಡಿನ ಹಣ್ಣುಗಳ ಪರಿಚಯ

Published:
Updated:

ಶಿರಸಿ: ನಿಸರ್ಗದ ಮಡಿಲಲ್ಲಿ ದೊರಕುವ ನೇರಳೆಹಣ್ಣು, ಹುಳಿಮಜ್ಜಿಗೆ ಹಣ್ಣು, ನುರುಕಲು ಹಣ್ಣು, ಸಳ್ಳೆಹಣ್ಣು, ಬಿಕ್ಕೆ ಹಣ್ಣು, ಹೊಳೆದಾಸವಾಳ, ಬಿಳಿಮುಳ್ಳೆ ಹಣ್ಣು ಹೀಗೆ ನೂರಕ್ಕೂ ಅಧಿಕ ಕಾಡಿನ ಹಣ್ಣುಗಳನ್ನು ವಿದ್ಯಾರ್ಥಿಗಳು ಪರಿಚಯ ಮಾಡಿಕೊಂಡರು.ಹಳ್ಳಿಯ ವಿದ್ಯಾರ್ಥಿಗಳಿಗೆ ಕಾಡಿನಹಣ್ಣುಗಳು ನಿತ್ಯ ಶಾಲೆಗೆ ಹೋಗುವಾಗ, ಶಾಲೆಯಿಂದ ಮನೆಗೆ ಮರಳುವಾಗ ದಾರಿಯ ದೂರ ಕಡಿಮೆ ಮಾಡುವ ಸಂಗಾತಿಗಳು. ಆದರೆ ನಗರದ ಮಕ್ಕಳಿಗೆ ಇಂತಹ ಹಣ್ಣುಗಳು ಅಪರೂಪ. ಅದಕ್ಕೆಂದೇ ನಗರದ ಮಕ್ಕಳಿಗೆ ಕಾಡುಹಣ್ಣುಗಳನ್ನು ಪರಿಚಯಿಸುವ ಕಾರ್ಯಕ್ರಮ ನಗರದ ಲಯನ್ಸ್ ಶಾಲೆಯಲ್ಲಿ ಇತ್ತೀಚೆಗೆ ನಡೆಯಿತು.ಉಮಾಪತಿ ಭಟ್ಟ ಕೆ.ವಿ. ಕಾಡುಹಣ್ಣುಗಳ ಮಾಹಿತಿ ನೀಡಿ, ನುರುಕಲು ಹಣ್ಣನ್ನು ಹಾವು, ಚೇಳು ಕಡಿದರೆ, ಮೂತ್ರಕೋಶದ ತೊಂದರೆಗೆ ಬಳಕೆ ಮಾಡುತ್ತಾರೆ. ಬೀಜ ಮಿದುಳಿಗೆ ಉತ್ತಮ ಟಾನಿಕ್ ಆಗಿದೆ ಎಂದರು.ಬಿಕ್ಕೆಹಣ್ಣಿನ ಅಂಟು ಬೇಧಿ, ಅಲ್ಸರ್ ಕಾಯಿಲೆಗೆ ಔಷಧಿಯಾಗಿದೆ. ನೇರಳೆ ಬೀಜದ ಹುಡಿ ಸಕ್ಕರೆ ಕಾಯಿಲೆಗೆ ಬಳಕೆಯಾದರೆ, ಎಲೆ ಕ್ಯಾನ್ಸರ್, ಕೆಮ್ಮು, ಮೂಲವ್ಯಾಧಿಗೆ ಔಷಧವಾಗಿ ಉಪಯೋಗವಾಗುತ್ತದೆ ಎಂದು ಅವರು ಹೇಳಿದರು. ನಿವೃತ್ತ ಪ್ರಾಚಾರ್ಯ ಎನ್.ವಿ.ಜಿ.ಭಟ್ಟ, ನಾಶದ ಅಂಚಿನಲ್ಲಿರುವ ಕಾಡುಹಣ್ಣುಗಳ ರಕ್ಷಣೆ ಆಗಬೇಕು ಎಂದರು.ಲಯನ್ಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕೆ.ವಿ.ಹೆಗಡೆ, ಲಯನ್ಸ್ ಕ್ಲಬ್ ಅಧ್ಯಕ್ಷ ವಿನಯ ಹೆಗಡೆ, ಹಿಂದು ಸೇವಾ ಪ್ರತಿಷ್ಠಾನ ಬಳಗ ಸ್ಥಳೀಯ ಘಟಕದ ಅಧ್ಯಕ್ಷೆ ಪವಿತ್ರಾ ಹೊಸೂರು ಉಪಸ್ಥಿತರಿದ್ದರು.  ಅರಣ್ಯ ಕಾಲೇಜಿನ ಶ್ರೀಕಾಂತ ಗುನಗಾ ಸ್ಲೈಡ್ ಮೂಲಕ ಕಾಡು ಹಣ್ಣು ಪರಿಚಯಿಸಿದರು.ಜಿ.ಎಸ್.ಹೆಗಡೆ ಬಸವನಕಟ್ಟೆ ಸ್ವಾಗತಿಸಿದರು. ಮುಖ್ಯಾಧ್ಯಾಪಕಿ ಗೀತಾ ಹೆಗಡೆ ವಂದಿಸಿದರು. ರೇಷ್ಮಾ ಮನಿಯಾರ ಕಾರ್ಯಕ್ರಮ ನಿರೂಪಿಸಿದರು. ನಂತರ ಶಾಲೆಯ ಆವರಣದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡಲಾಯಿತು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry