ವಿದ್ಯಾರ್ಥಿಗಳಿಗೆ ಜೆರಾಕ್ಸ್ ಪ್ರತಿಯೇ ಪಠ್ಯಪುಸ್ತಕ!

7

ವಿದ್ಯಾರ್ಥಿಗಳಿಗೆ ಜೆರಾಕ್ಸ್ ಪ್ರತಿಯೇ ಪಠ್ಯಪುಸ್ತಕ!

Published:
Updated:
ವಿದ್ಯಾರ್ಥಿಗಳಿಗೆ ಜೆರಾಕ್ಸ್ ಪ್ರತಿಯೇ ಪಠ್ಯಪುಸ್ತಕ!

ಚಾಮರಾಜನಗರ: ಪಠ್ಯಪುಸ್ತಕ ಹಾಗೂ ಶಿಕ್ಷಕರ ಕೊರತೆಯಿಂದ ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ತಮಿಳುನಾಡಿನ ತಾಳವಾಡಿ ಫಿರ್ಕಾದ ಕನ್ನಡ ಮಾಧ್ಯಮ ಶಾಲೆ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸುವಂತಾಗಿದೆ.ತಾಳವಾಡಿ ಫಿರ್ಕಾದಲ್ಲಿ ಕನ್ನಡ ಭಾಷಿಕರು ಹೆಚ್ಚಿದ್ದಾರೆ. ಈ ಪ್ರದೇಶದಲ್ಲಿ ಕನ್ನಡ ಮಾಧ್ಯಮದ 28 ಸರ್ಕಾರಿ ಪ್ರಾಥಮಿಕ ಶಾಲೆ, 9 ಮಾಧ್ಯಮಿಕ ಶಾಲೆ, 3 ಪ್ರೌಢಶಾಲೆ ಹಾಗೂ 2 ಪದವಿಪೂರ್ವ ಕಾಲೇಜು ಇವೆ. ಸುಮಾರು 1,700ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಆದರೆ, ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಪ್ರಸಕ್ತ ಶೈಕ್ಷಣಿಕ ಸಾಲಿನಡಿ ಇಲ್ಲಿಯವರೆಗೂ ಪಠ್ಯಪುಸ್ತಕ ಪೂರೈಕೆಯಾಗಿಲ್ಲ.ತಮಿಳುನಾಡು ಸರ್ಕಾರವೇ ಕನ್ನಡ ಮಾಧ್ಯಮ ಶಾಲೆ, ಕಾಲೇಜುಗಳಿಗೆ ಪಠ್ಯಪುಸ್ತಕ ಪೂರೈಸಬೇಕಿದೆ. ಆದರೆ, ತಮಿಳು ಮಾಧ್ಯಮದ ವಿದ್ಯಾರ್ಥಿಗಳಿಗೆ ಮಾತ್ರ ಪುಸ್ತಕ ಸರಬರಾಜು ಮಾಡಲಾಗಿದೆ.`2011-12ನೇ ಶೈಕ್ಷಣಿಕ ಸಾಲಿನಡಿಯೂ 1ರಿಂದ 10ನೇ ತರಗತಿ ಮಕ್ಕಳಿಗೆ ನಿಗದಿತ ಅವಧಿಯಲ್ಲಿ ಪಠ್ಯಪುಸ್ತಕ ಪೂರೈಕೆಯಾಗಿರಲಿಲ್ಲ. ಅರ್ಧದಷ್ಟು  ಮಕ್ಕಳಿಗೆ ಮಾತ್ರ ಪಠ್ಯಪುಸ್ತಕ ನೀಡಲಾಗಿತ್ತು. ಪಿಯುಸಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕವೇ ಸರಬರಾಜಾಗಿಲ್ಲ.ತಮಿಳು ಭಾಷೆಯಲ್ಲಿರುವ ಪಾಠಗಳನ್ನು ಉಪನ್ಯಾಸಕರು ಕನ್ನಡಕ್ಕೆ ಭಾಷಾಂತರಿಸಿದ್ದರು. ವಿದ್ಯಾರ್ಥಿಗಳಿಗೆ ಭಾಷಾಂತರಿಸಿದ ಜೆರಾಕ್ಸ್ ಪ್ರತಿ ನೀಡಿದ್ದರು. ಈ ಬಾರಿಯೂ ಪಠ್ಯಪುಸ್ತಕ ಪೂರೈಕೆಯಾಗಿಲ್ಲ. ಹೀಗಾಗಿ, ಹಳೆಯ ಜೆರಾಕ್ಸ್ ಪ್ರತಿಗಳನ್ನೇ ಕಾಲೇಜಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ~ ಎಂದು ತಮಿಳುನಾಡು ಪ್ರಾಥಮಿಕ ಶಿಕ್ಷಕರ ಸಂಘದ ತಾಳವಾಡಿ ಘಟಕದ ಕಾರ್ಯದರ್ಶಿ ಚನ್ನಂಜಮೂರ್ತಿ `ಪ್ರಜಾವಾಣಿ~ಗೆ ತಿಳಿಸಿದರು.

 

ಶಿಕ್ಷಕರ ಕೊರತೆ: ತಾಳವಾಡಿ ಫಿರ್ಕಾದ ಎಲ್ಲ ಮಾಧ್ಯಮಿಕ ಶಾಲೆಗಳು ಉನ್ನತೀಕರಣಗೊಂಡ ಶಾಲೆಗಳಾಗಿವೆ. ಸರ್ವಶಿಕ್ಷಣ ಅಭಿಯಾನದ ಮಾನದಂಡದ ಅನ್ವಯ ಈ ಶಾಲೆಗಳಿಗೆ ಪದವೀಧರ ಸಹ ಶಿಕ್ಷಕರನ್ನು ನೇಮಿಸಬೇಕು. ಆದರೆ, 9 ವರ್ಷದಿಂದಲೂ ಮಾಧ್ಯಮಿಕ ಹಾಗೂ ಪ್ರೌಢಶಾಲೆಯಲ್ಲಿ ಖಾಲಿ ಇರುವ  17 ಸಹ ಶಿಕ್ಷಕರ ಹುದ್ದೆಗಳ ಭರ್ತಿಗೆ ತಮಿಳುನಾಡು ಸರ್ಕಾರ ಮುಂದಾಗಿಲ್ಲ. ಶಾಲೆಗಳಿಗೆ ಭೇಟಿ ನೀಡುವ ಜನಪ್ರತಿನಿಧಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಈ ಕುರಿತು ಪೋಷಕರು ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.2011-12ನೇ ಸಾಲಿನಡಿ ತಿಗಣಾರೆ ಗ್ರಾಮದಲ್ಲಿದ್ದ ಕನ್ನಡ ಮಾಧ್ಯಮಿಕ ಶಾಲೆಯನ್ನು ಪ್ರೌಢಶಾಲೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಆದರೆ, ಒಂದು ವರ್ಷ ಉರುಳಿದರೂ ಅಗತ್ಯ ಶಿಕ್ಷಕರನ್ನು ನೇಮಿಸಿಲ್ಲ.

ಚಿಕ್ಕಹಳ್ಳಿ, ತಾಳವಾಡಿಯ ಪ್ರೌಢಶಾಲೆಯಲ್ಲೂ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರಿಲ್ಲ. ಹಾಲಿ ಕರ್ತವ್ಯದಲ್ಲಿರುವ ಶಿಕ್ಷಕರನ್ನೇ ನಿಯೋಜನೆ ಮೇರೆಗೆ ನೇಮಿಸಲಾಗುತ್ತಿದೆ. ಇದರಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ ಎಂದು ಪೋಷಕರು ಆತಂಕ ವ್ಯಕ್ತಪಡಿಸುತ್ತಾರೆ.`ತಾಳವಾಡಿಯಲ್ಲಿ ಕನ್ನಡ ಮಾಧ್ಯಮದ ಸರ್ಕಾರಿ ಪದವಿಪೂರ್ವ ಕಾಲೇಜು ಇದೆ. ಆದರೆ, ಏಳು ವರ್ಷದಿಂದಲೂ ಕನ್ನಡ ಭಾಷಾ ಉಪನ್ಯಾಸಕರ ಹುದ್ದೆ ಖಾಲಿ ಇದೆ. ಈ ಭಾಗದಲ್ಲಿ ಪ್ರಥಮ ದರ್ಜೆ ಕಾಲೇಜು ತೆರೆದಿಲ್ಲ. ಹೀಗಾಗಿ, ಕನ್ನಡ ಮಾಧ್ಯಮದ ಮಕ್ಕಳ ಶೈಕ್ಷಣಿಕ ಬದುಕು ಪದವಿಪೂರ್ವ ಶಿಕ್ಷಣಕ್ಕೆ ಮೊಟಕುಗೊಳ್ಳುತ್ತಿದೆ.

ಈ ಸಂಕಷ್ಟ ಅರಿತಿರುವ ಪೋಷಕರು ಮಕ್ಕಳನ್ನು ಪ್ರಾಥಮಿಕ ಹಂತದಲ್ಲಿಯೇ ತಮಿಳು ಮಾಧ್ಯಮ ಶಾಲೆಗಳಿಗೆ ಸೇರಿಸುತ್ತಿದ್ದಾರೆ.ಇದರ ಪರಿಣಾಮ ಭವಿಷ್ಯದಲ್ಲಿ ಕನ್ನಡ ಶಾಲೆಗಳು ಬಾಗಿಲು ಮುಚ್ಚುವ ಸ್ಥಿತಿಗೆ ತಲುಪಲಿವೆ~ ಎಂದು ಚನ್ನಂಜಮೂರ್ತಿ ಆತಂಕ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry