ಮಂಗಳವಾರ, ಜೂನ್ 15, 2021
26 °C

ವಿದ್ಯಾರ್ಥಿಗಳಿಗೆ ಟಂಟಂಗಳೇ ಆಧಾರ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಈ ಭಾಗದ ವಿದ್ಯಾರ್ಥಿಗಳಿಗೆ ಟಂಟಂಗಳೇ ಆಧಾರ. ಇಲ್ಲಿನ ವಿದ್ಯಾರ್ಥಿಗಳು ಶಾಲೆಗೆ ಹೋಗಬೇಕಾದರೆ, ಟಂಟಂಗಳ ಟಾಪ್‌ನಲ್ಲಿ ಕುಳಿತಾದರೂ ಪ್ರಯಾಣ ಮಾಡಲೇಬೇಕು. ಗಡಿ ಭಾಗದ ಗ್ರಾಮಗಳ ವಿದ್ಯಾರ್ಥಿಗಳಿಗೆ ನಿತ್ಯವೂ ಈ ಗೋಳು ತಪ್ಪುತ್ತಿಲ್ಲ.ತಾಲ್ಲೂಕಿನ ಗಡಿ ಭಾಗದ ಸೈದಾಪುರ ಹೋಬಳಿಯ ಹಲವಾರು ಗ್ರಾಮಗಳಿಗೆ ಬಸ್ ಸೌಕರ್ಯ ಇಲ್ಲದೇ ಶಾಲಾ ವಿದ್ಯಾರ್ಥಿಗಳು ಟಂಟಂ ವಾಹನಗಳನ್ನೇ ಅವಲಂಬಿಸಿದ್ದಾರೆ.ತಾಲ್ಲೂಕಿನ ಸೈದಾಪುರ ಗ್ರಾಮವು ಸುತ್ತಲಿನ ಜನರಿಗೆ ವ್ಯಾಪಾರ ಕೇಂದ್ರವಾಗಿದ್ದು, ಸರ್ಕಾರಿ ಶಾಲಾ-ಕಾಲೇಜುಗಳು, ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳಿವೆ. ಸುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳು ಅಭ್ಯಾಸ ಮಾಡಲು ಸೈದಾಪುರಕ್ಕೆ ಬರಬೇಕು. ನಿತ್ಯವೂ 15-20 ಕಿ.ಮೀ. ದೂರದ ಗ್ರಾಮಗಳಿಂದ ಶಾಲಾ ಕಾಲೇಜುಗಳಿಗೆ ಬರುವುದು ಸಾಮಾನ್ಯವಾಗಿದೆ. ಆದರೆ ಇಲ್ಲಿನ ವಿದ್ಯಾರ್ಥಿಗಳಿಗೆ ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದೇ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.ಟಂಟಂಗಳಲ್ಲಿ ಸಾಮಾನ್ಯವಾಗಿ 10-12 ಜನರು ಪ್ರಯಾಣಿಸಬಹುದು. 20 ರಿಂದ 25 ಜನರನ್ನು ಕೂಡ್ರಿಸಿಕೊಂಡು, ತೆಗ್ಗು ಬಿದ್ದ ರಸ್ತೆಗಳಲ್ಲಿ ಟಂಟಂಗಳನ್ನು ತೆಗೆದುಕೊಂಡು ಹೋಗಲಾಗುತ್ತದೆ. ಗಡಿ ಭಾಗದ ಗ್ರಾಮಗಳ ವಿದ್ಯಾರ್ಥಿಗಳಿಗೆ ಬಸ್‌ಗಳೇ ಇಲ್ಲದೇ ಇರುವುದರಿಂದ ಸರಿಯಾದ ಸಮಯಕ್ಕೆ ಶಾಲೆಗೆ ಹೋಗಲು ಟಂಟಂಗಳ ಟಾಪ್ ಮೇಲೆ ಕುಳಿತು ಪ್ರಯಾಣಿಸಬೇಕಾಗಿದೆ.“ಭಾಳ ಕಡೆ ಸ್ಕೂಲಿಗೆ ಹೋಗೋ ಮಕ್ಕಳಿಗೆ ಬಸ್ ಸೌಕರ್ಯ ಇಲ್ರಿ. ಹುಡಗೋರು ಜೀವಾ ಕೈಯಾಗ ಹಿಡಕೊಂಡ ಟಂಟಂ ಟಾಪ್ ಮ್ಯಾಲ ಕುಂತ ಹೋಗೋ ಹಂಗ ಆಗೈತಿ. ಕೆಎಸ್ಸಾರ‌್ಟಿಸಿಯವರಿಗೂ ಹೇಳಿ ಸಾಕಾಗಿ ಹೋತ್ರಿ. ಹುಡಗೋರಿಗೆ ಸಾಲಿ ಟೈಮಿಗೆ ಬಸ್ ವ್ಯವಸ್ಥಾ ಮಾಡಿದ್ರ ಭಾಳ ಒಳ್ಳೆದ ಆಗತೈತ್ರಿ. ಆರ್‌ಟಿಒದಾವ್ರ ಸ್ವಲ್ಪ ಬಿಗಿ ಮಾಡಿದ್ರ ಟಂಟಂದಾವ್ರ ಸ್ವಲ್ಪ ಎಚ್ಚರಕಿ ಮ್ಯಾಲ ಇರ‌್ತಾರ. ಹುಡಗೋರ ಜೀವಕ್ಕ ಏನರೆ ಆದ್ರ ಏನ ಗತಿರಿ” ಎಂದು ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಯುವ ವಿಭಾಗದ ತಾಲ್ಲೂಕು ಘಟಕದ ಅಧ್ಯಕ್ಷ ನಿಂಗು ಜಡಿ ಆಕ್ರೋಶ ವ್ಯಕ್ತಪಡಿಸುತ್ತಾರೆ.ವಿದ್ಯಾರ್ಥಿಗಳು ಪ್ರಾಣದ ಹಂಗು ತೊರೆದು ಟಂಟಂ ಮೇಲೆ ಪ್ರಯಾಣ ಮಾಡಬೇಕಾಗಿದೆ. ಶಾಲೆಗೆ ಹೋಗಿ ಅಕ್ಷರ ಜ್ಞಾನ ಪಡೆಯಬೇಕೆಂದರೆ, ಇದು ಅನಿವಾರ್ಯವೂ ಆಗಿದೆ. ಮೊದಲೇ ಹದಗೆಟ್ಟಿರುವ ರಸ್ತೆಗಳಲ್ಲಿ ಹೊಯ್ದಾಡುತ್ತ ಸಾಗುವ ಟಂಟಂಗಳು ಅಪಘಾತಕ್ಕೆ ಈಡಾದರೆ, ವಿದ್ಯಾರ್ಥಿ ಗತಿ ಏನು ಎಂಬ ಪ್ರಶ್ನೆಯನ್ನು ಪಾಲಕರು ಕೇಳುತ್ತಿದ್ದಾರೆ.ಸುಧಾರಿಸದ ಸಾರಿಗೆ ಇಲಾಖೆ: ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನ್ಯಾ. ಎಸ್.ಆರ್. ನಾಯಕರು, ಜಿಲ್ಲೆಯಲ್ಲಿ ಪ್ರವಾಸ ಮಾಡಿದ ಸಂದರ್ಭದಲ್ಲಿ ಟಂಟಂಗಳಲ್ಲಿ ಜನರ ಪ್ರಯಾಣ ನೋಡಿ ಆಕ್ರೋಶ ವ್ಯಕ್ತಪಡಿಸಿದ್ದರು.ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಪಾಷಾ ಅವರನ್ನು ತರಾಟೆಗೂ ತೆಗೆದುಕೊಂಡಿದ್ದರು. ಕೂಡಲೇ ಟಂಟಂಗಳ ಅಪಾಯದ ಪ್ರಯಾಣವನ್ನು ನಿಯಂತ್ರಿಸುವಂತೆ ಸೂಚನೆಯನ್ನೂ ನೀಡಿದ್ದರು. ಆದರೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಳ್ಳಲೇ ಇಲ್ಲ. ಈ ಬಗ್ಗೆಯೂ ಜನರು ತೀವ್ರ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರ ಮಾತಿಗೂ ಅಧಿಕಾರಿಗಳು ಬೆಲೆ ನೀಡುತ್ತಿಲ್ಲ. ಹೀಗಾದರೆ ಪರಿಸ್ಥಿತಿಯನ್ನು ಸುಧಾರಿಸುವವರು ಯಾರು ಎಂದು ಜನರು ಕೇಳುತ್ತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.