ಭಾನುವಾರ, ಏಪ್ರಿಲ್ 18, 2021
31 °C

ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊನ್ನಾಳಿ: ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣ ಅತ್ಯಗತ್ಯ ಎಂದು ಬೆಂಗಳೂರಿನ ರಾಮಕೃಷ್ಣಾಶ್ರಮದ ಸ್ವಾಮಿ ಧರ್ಮವ್ರತ ಸ್ವಾಮೀಜಿ ಪ್ರತಿಪಾದಿಸಿದರು.ಪಟ್ಟಣದ ಗುರುಭವನದಲ್ಲಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ 2012-13ನೇ ಸಾಲಿನ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದ ಪ್ರಯುಕ್ತ ಶುಕ್ರವಾರ ಹಮ್ಮಿಕೊಂಡ ಯುವಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತ ದೇಶ ನಮ್ಮದು ಎಂದು ಹೇಳಿಕೊಳ್ಳುವ ನಾವು ಈಚೆಗೆ ನಮ್ಮ ಆಚರಣೆ-ಸಂಸ್ಕೃತಿಗಳನ್ನು ಮರೆತು ಪಾಶ್ಚಿಮಾತ್ಯ ಸಂಸ್ಕೃತಿ ಮೈಗೂಡಿಸಿಕೊಳ್ಳುತ್ತಿದ್ದೇವೆ. ಆದರೆ, ಇದಕ್ಕೆ ವ್ಯತಿರಿಕ್ತವಾಗಿ ಪಾಶ್ಚಿಮಾತ್ಯರು ನಮ್ಮ ಸಂಸ್ಕೃತಿ, ಯೋಗ-ಧ್ಯಾನಾದಿಗಳನ್ನು ಕಲಿತು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಆರೋಗ್ಯವಂತರು ಆಗುತ್ತಿದ್ದಾರೆ. ನೈತಿಕವಾಗಿ ಶ್ರೀಮಂತರಾಗುತ್ತಿದ್ದಾರೆ ಎಂದು ಹೇಳಿದರು.

ಕ್ಷಣಿಕವಾದ ದೇಹ ಸೌಂದರ್ಯಕ್ಕೆ ನಾವು ಇನ್ನಿಲ್ಲದ ಮಹತ್ವ ನೀಡುತ್ತಿದ್ದೇವೆ. ಆದರೆ, ನಮ್ಮ ಜೀವಿತದ ಕೊನೆಯ ಉಸಿರು ಇರುವವರೆಗೂ ನಮ್ಮಂದಿಗೆ ಇರುವ ಮನಸ್ಸಿನ ಆರೋಗ್ಯದತ್ತ ನಾವು ಗಮನಹರಿಸುವುದೇ ಇಲ್ಲ. ಎಲ್ಲರೂ ಉತ್ತಮ ಗುಣಗಳನ್ನು ಬೆಳೆಸಿಕೊಳ್ಳೋಣ, ಬದುಕಿನಲ್ಲಿ ನೈತಿಕತೆ ಅಳವಡಿಸಿಕೊಳ್ಳೋಣ ಎಂದರು.ರಾಮಕೃಷ್ಣಾಶ್ರಮದ ವತಿಯಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಲ್ಲಿ ಈಚೆಗೆ ಹಮ್ಮಿಕೊಂಡ  ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ 28ರ ಹರೆಯದ ಕೈದಿಯೊಬ್ಬ `ಐದು ವರ್ಷಗಳ ಹಿಂದೆ ನಾನು ಇಂತಹ ಉಪನ್ಯಾಸ ಕೇಳಿದ್ದರೆ ಇಂದು ಜೈಲಿನಲ್ಲಿ ಇರುತ್ತಿರಲಿಲ್ಲ~ ಎಂದು ಹೇಳಿದ.

 

ಹಾಗಾಗಿ, ವಿದ್ಯಾರ್ಥಿಗಳಲ್ಲಿ ಧಾರ್ಮಿಕ ಜಾಗೃತಿ-ನೈತಿಕ ಬದುಕಿನ ಬಗ್ಗೆ ಅರಿವು ಉಂಟು ಮಾಡುವ ಯುವಜಾಗೃತಿ ಕಾರ್ಯಕ್ರಮವನ್ನು ರಾಜ್ಯದ ಆಯ್ದ 500 ಕಾಲೇಜುಗಳಲ್ಲಿ ನಡೆಸಲು ಆಶ್ರಮ ಮುಂದಾಯಿತು ಎಂದು ವಿವರಿಸಿದರು.ದಾವಣಗೆರೆ ಸಾಧನಾಶ್ರಮದ ಮಾತಾಜಿ ಯೋಗಾನಂದಮಯಿ ಉಪನ್ಯಾಸ ನೀಡಿ ಯಾವ ಬಗೆಯ ಶಿಕ್ಷಣದಿಂದ ಶೀಲ ರೂಪುಗೊಳ್ಳುವದೋ, ಮನಶ್ಯಾಂತಿ ವೃದ್ಧಿಯಾಗುವುದೋ, ಬುದ್ಧಿ ವಿಕಾಸಗೊಳ್ಳುವುದೋ ಮತ್ತು ಯಾವುದರಿಂದ ನಮ್ಮ ಸ್ವಂತ ಕಾಲ ಮೇಲೆ ನಾವು ನಿಂತುಕೊಳ್ಳಬಲ್ಲೆವೋ ಅಂತಹ ಶಿಕ್ಷಣ ನಮಗೆ ಅವಶ್ಯಕ ಎಂದು ತಿಳಿಸಿದರು.ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಸುಭಾಷ್ ಚಂದ್ರ ಬೋಸ್ ಅವರಂತಹ ದೇಶಭಕ್ತರು ನಮಗೆ ಮಾದರಿಯಾಗಬೇಕು ಎಂದು ಹೇಳಿದರು.ಪ್ರಾಚಾರ್ಯ ಡಾ.ಬಿ.ಜಿ. ಚನ್ನಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರೊ. ಎಂ. ರಾಜ್‌ಕುಮಾರ್, ರಾಘವೇಂದ್ರ, ಯು.ಬಿ. ಜಯಪ್ಪ ಇತರರು ಇದ್ದರು. ಪ್ರೊ. ಪಾಂಡುರಂಗ ಪ್ರಾಸ್ತಾವಿಕವಾಗಿ ಮಾತನಾಡಿದರು.ಅಶ್ವಿನಿ, ಹರ್ಷಿತಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಸಾಂಸ್ಕೃತಿಕ ವೇದಿಕೆ ಸಂಚಾಲಕ ಪ್ರೊ.ಎಂ.ಎನ್. ರಮೇಶ್ ಸ್ವಾಗತಿಸಿ-ಕಾರ್ಯಕ್ರಮ ನಿರೂಪಿಸಿದರು. ವಿದ್ಯಾ ಟಿ. ಪವಾರ್ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.