ಭಾನುವಾರ, ಏಪ್ರಿಲ್ 18, 2021
33 °C

ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಜಾಗೃತಿ; ಬಳ್ಳಾರಿಯಲ್ಲೊಂದು ವಿಜ್ಞಾನ ಕೇಂದ್ರ

ಪ್ರಜಾವಾಣಿ ವಾರ್ತೆ ಸಿದ್ದಯ್ಯ ಹಿರೇಮಠ Updated:

ಅಕ್ಷರ ಗಾತ್ರ : | |

ಬಳ್ಳಾರಿ: ನಗರದ ನಲ್ಲಚೆರುವು ಪ್ರದೇಶದಲ್ಲಿರುವ ಜಿಲ್ಲಾ ಕ್ರೀಡಾಂಗಣದ ಅನತಿ ದೂರದಲ್ಲಿರುವ ವಿಶಾಲ ಬಯಲು ಪ್ರದೇಶದಲ್ಲಿನ ಗಿಡ-ಮರಗಳ ಕೆಳಗೆ ಆದಿ ಮಾನವರು ಕುಳಿತು ಕೆಲಸ ಮಾಡುತ್ತಿದ್ದಾರೆ. ಆದರೆ, ಅವರಿಗೆ ಜೀವವಿಲ್ಲ. ಜೀವ ಇರುವವರಂತೆಯೇ ಕಂಡುಬಂದರೂ ಅವರು ಜಾಗ ಬಿಟ್ಟು ಕದಲುವುದಿಲ್ಲ. ಅವರೆಲ್ಲ ಪ್ರತಿಮೆಯ ರೂಪದಲ್ಲಿದ್ದಾರೆ.ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ, ಜಿಲ್ಲಾಡಳಿತದ ಸಹಯೋಗದಲ್ಲಿ ನಿರ್ಮಾಣವಾಗುತ್ತಿರುವ ಈ ಸುಸಜ್ಜಿತ ವಿಜ್ಞಾನ ಕೇಂದ್ರದ ಆವರಣದಲ್ಲೇ ಅವರೆಲ್ಲ ಕುಳಿತಿದ್ದು, ಕೇಂದ್ರಕ್ಕೆ ಬರುವವರನ್ನು ಥಟ್ಟನೆ ಸೆಳೆಯಲು ಸನ್ನದ್ಧರಾಗಿದ್ದಾರೆ.ವಿಶಿಷ್ಟ ಉಡುಗೆ- ತೊಡುಗೆ,  ಸಾಕುಪ್ರಾಣಿಗಳ ಪಳಗಿಸುವಿಕೆ, ಮಾಂಸಾಹಾರಕ್ಕಾಗಿ ಬೇಟೆ, ಕ್ರೂರ ಮೃಗಗಳಿಂದ, ಗಾಳಿ, ಮಳೆ, ಚಳಿ, ಅಗ್ನಿಯಿಂದ ರಕ್ಷಣೆಗೆ ಕ್ರಮ, ಗುಂಪುಗುಂಪಾಗಿ ಜೀವಿಸುತ್ತಿದ್ದ ಅವರ ಜೀವನಶೈಲಿ, ಆದಿ ಕಾಲದಿಂದ ವಿಕಾಸ ಹೊಂದಿದ ಮಾನವನ ಸಮಗ್ರ ವಿವರವನ್ನು ತಿಳಿಸುವುದಕ್ಕೆಂದೇ ಅವರು ಅಲ್ಲಿ ಪ್ರತಿಷ್ಠಾಪನೆ ಆಗಿದ್ದಾರೆ.ಮನುಷ್ಯನ ಉಗಮದಿಂದ ಜಗತ್ತಿನ ಈವರೆಗಿನ ಸಮಗ್ರ ಬೆಳವಣಿಗೆಯನ್ನು ಸಾರುವ ನಿಟ್ಟಿನಲ್ಲಿ ಆದಿ ಮಾನವನನ್ನೂ ಒಳಗೊಂಡ ಅಭಿವೃದ್ಧಿ, ವಿಜ್ಞಾನದ ಅವಲಂಬನೆ ಕುರಿತು ಸೂಕ್ತ ಮಾಹಿತಿ ನೀಡುವುದಕ್ಕೆಂದೇ ನಿರ್ಮಾಣವಾಗುತ್ತಿರುವ ವಿಜ್ಞಾನ ಕೇಂದ್ರ ಕೆಲವೇ ದಿನಗಳಲ್ಲಿ ಜಿಲ್ಲೆಯ ವಿದ್ಯಾರ್ಥಿವೃಂದಕ್ಕೆ ಅರ್ಪಿತವಾಗಲಿದೆ.ವಿಕಾಸ ವಾದವನ್ನು ಸಾರುವ, ವಿಜ್ಞಾನದ ಉಪಯುಕ್ತತೆಗೆ ಮಾರುಹೋಗಿ, ಅದರತ್ತ ವಾಲಿದ ಮನುಷ್ಯನ ಜೀವನದಲ್ಲಿ ಹಾಸುಹೊಕ್ಕಾಗಿರುವ ವಿಜ್ಞಾನ ಮತ್ತು ತಂತ್ರಜ್ಞಾನದ ಉಪಯೋಗ ಕುರಿತು ಆಬಾಲವೃದ್ಧರಾದಿಯಾಗಿ ಎಲ್ಲರಿಗೂ ತಿಳಿಸಲೆಂದೇ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ.ವಿಜ್ಞಾನ ಜಾಗೃತಿಯೇ ಉದ್ದೇಶ: ಮಕ್ಕಳಲ್ಲಿ ವಿಶೇಷವಾಗಿ ಪ್ರಾಥಮಿಕ ಹಂತದಿಂದ ಕಾಲೇಜು ಶಿಕ್ಷಣದವರೆಗಿನ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಅರಿವು ಮೂಡಿಸಲೆಂದೇ ವಿಶೇಷ ಯೋಜನೆ ಅಡಿ ಅಂದಾಜು ರೂ 4 ಕೋಟಿ ವೆಚ್ಚದಲ್ಲಿ ರೂಪುಗೊಂಡಿರುವ ಈ ಕೇಂದ್ರದಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಎಲ್ಲವೂ ಇದೆ.ಭೌತಶಾಸ್ತ್ರ, ರಸಾಯನ ಶಾಸ್ತ್ರ, ಜೀವಶಾಸ್ತ್ರ, ತಂತ್ರಜ್ಞಾನ, ಅಣು ವಿಜ್ಞಾನ,  ನ್ಯಾನೋ ತಂತ್ರಜ್ಞಾನ, ಮೂಲ ಸೌಕರ್ಯಗಳು, ಅತ್ಯಾಧುನಿಕ ಜೀವನ ಶೈಲಿ ಹೀಗೆ ಪ್ರತಿಯೊಂದನ್ನೂ ತಿಳಿಸುವುದಲ್ಲದೆ, ಮೂಢನಂಬಿಕೆ, ಅಂಧ ಆಚರಣೆಗಳ ಬಗ್ಗೆ ತಿಳಿವಳಿಕೆ ಮೂಡಿಸುವ ಎಲ್ಲ ವ್ಯವಸ್ಥೆಯನ್ನೂ ಈ ಕೇಂದ್ರ ಒಳಗೊಂಡಿರುತ್ತದೆ.ಪರಿಸರ ಪ್ರೇಮ, ಸ್ವಚ್ಛತೆಯ ಮಹತ್ವ, ವಾಯು, ನೀರು, ಬೆಳಕು, ಅಗ್ನಿಯ ಸಮರ್ಪಕ ಬಳಕೆ, ಗಿಡ- ಮರಗಳ ಅಗತ್ಯ, ಕ್ರಿಮಿ- ಕೀಟಗಳ ಕುರಿತ ವಿವರಣೆ ಸೇರಿದಂತೆ ವಿಜ್ಞಾನಕ್ಕೆ ಸಂಬಂಧಿಸಿದ ಪ್ರತಿ ಬೆಳವಣಿಗೆ, ಸಂಶೋಧನೆ, ಅವಲಂಬನೆ, ಅನಿವಾರ್ಯತೆ ಕುರಿತ ವಿವರವನ್ನು ಕೇಂದ್ರಕ್ಕೆ ಭೇಟಿ ನೀಡುವ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆಯ ಸಮೇತ ನೀಡಲು ಯೋಜನೆ ಸಿದ್ಧಗೊಂಡಿದೆ.ತಾರಾಲಯ: ಚುಕ್ಕಿ, ಚಂದ್ರಮ, ಸೂರ್ಯ, ಭೂಮಿ, ಗ್ರಹಗಳು, ಉಪಗ್ರಹಗಳು, ಧೂಮಕೇತು, ಗ್ರಹಣ ಮತ್ತಿತರ ಚಟುವಟಿಕೆಯನ್ನು ಕೃತಕವಾಗಿ ಕಣ್ಣಿಗೆ ಕಟ್ಟುವಂತೆ ನೋಡಬಹುದಾದ ಸುಂದರ ತಾರಾಲಯವನ್ನೂ ಇದೇ ಕೇಂದ್ರದಲ್ಲಿ ನಿರ್ಮಿಸಿ, ಮಕ್ಕಳನ್ನು ಬಾಹ್ಯಾಕಾಶ ಲೋಕಕ್ಕೆ ಕೊಂಡೊಯ್ಯಲು ಎಲ್ಲ ಸಿದ್ಧತೆಗಳು ನಡೆದಿವೆ. ಇದೇ 15ರಂದು ಕೇಂದ್ರದ ಉದ್ಘಾಟನೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್, ಉಪ ವಿಭಾಗಾಧಿಕಾರಿ ಶಶಿಕಾಂತ್ ಸೆಂಥಿಲ್  `ಪ್ರಜಾವಾಣಿ~ಗೆ ತಿಳಿಸಿದ್ದಾರೆ.ಬೆಂಗಳೂರು ಮತ್ತಿತರ ಕಡೆ ಇರುವ ತಾರಾಯಲದ ಮಾದರಿಯಲ್ಲೇ ಈ ತಾರಾಲಯವನ್ನೂ ಸಿದ್ಧಪಡಿಸಲು ರೂಪುರೇಷೆ ಸಿದ್ಧಪಡಿಸಲಾಗಿದೆ. ದೇಶದ ವೈಜ್ಞಾನಿಕ ಕ್ರಾಂತಿ, ಕೊಡುಗೆ, ಸಂಶೋಧನೆ, ಸಾಧಕರ ಪರಿಚಯವನ್ನೂ ಕೇಂದ್ರದಲ್ಲಿ ಚಿತ್ರ- ಬರಹ ಸಮೇತ ಪಡೆಯಬಹುದಾಗಿದೆ. ರಾಷ್ಟ್ರೀಯ ಗಣಿ ಅಭಿವೃದ್ಧಿ ಮಂಡಳಿ (ಎನ್‌ಎಂಡಿಸಿ) ತಾರಾಲಯಕ್ಕಾಗಿಯೇ ರೂ 1 ಕೋಟಿ ನೆರವು ನೀಡಿದ್ದು, ಜೆಎಸ್‌ಡಬ್ಲ್ಯೂ, ಆರ್ಸೆಲಾರ್ ಮಿತ್ತಲ್ ಕಂಪೆನಿಗಳೂ ಧನ ಸಹಾಯ ಮಾಡುತ್ತಿವೆ ಎಂದು ಅವರು ಹೇಳಿದ್ದಾರೆ.ಕೇವಲ ಆವರಣದ ಹೊರಗಡೆ ಮಾತ್ರವಲ್ಲದೆ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ರೂ 1.32 ಕೋಟಿ ಅನುದಾನದಲ್ಲಿ ಸಿದ್ಧಗೊಳ್ಳುತ್ತಿರುವ ಕೇಂದ್ರದ ಮುಖ್ಯ ಕಟ್ಟಡದೊಳಗೂ ಉಬ್ಬು ಚಿತ್ರಗಳ ಮೂಲಕ ಜೀವಸಂಕುಲದ ಪ್ರತಿ ಹಂತದ ಬೆಳವಣಿಗೆ, ನೈಸರ್ಗಿಕ ಸಂಪತ್ತು, ಜಲಾಶಯ, ಕೆರೆ-ಕಟ್ಟೆ, ಜಲಪಾತ, ಬೆಟ್ಟ, ಗುಡ್ಡ, ಅರಣ್ಯ, ಸಾಗರ, ಜಲಚರಗಳ ಸಂಕ್ಷಿಪ್ತ ಪರಿಚಯ ಮಾಡಿಕೊಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.ಆದಿ ಮಾನವನ ಮಾದರಿಯ ಪ್ರತಿರೂಪಗಳನ್ನು ಸಿಮೆಂಟ್‌ನಿಂದ ಸಿದ್ಧಪಡಿಸುತ್ತಿದ್ದು, ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಇದಕ್ಕಾಗಿ ಅನುದಾನ ಬಿಡುಗಡೆ ಮಾಡಿದ್ದು, ರೂ 82 ಲಕ್ಷ ವೆಚ್ಚದಲ್ಲಿ ಸಿದ್ಧವಾಗುತ್ತಿರುವ ಆದಿಮಾನವರು ಆ ಕಾಲದ ಪ್ರತಿ ಚಟುವಟಿಕೆಯನ್ನೂ ಪರಿಚಯಿಸಲಿದ್ದಾರೆ ಎಂದು  ಪ್ರತಿರೂಪಗಳನ್ನು ಸಿದ್ಧಪಡಿಸಿರುವ ಬಸವರಾಜ್ ಅನಗವಾಡಿ ವಿವರ ನೀಡಿದ್ದಾರೆ.ಎಂದು ಆಲಮಟ್ಟಿ ಜಲಾಶಯದ ಬಳಿಯ ಉದ್ಯಾನದಲ್ಲಿ ಇತಿಹಾಸ ಸಾರುವ ಪ್ರತಿರೂಪಗಳನ್ನು ಸಿದ್ಧಪಡಿಸಿದ್ದು, ಅದೇ ಮಾದರಿಯಲ್ಲಿ ಈ ವಿಜ್ಞಾನ ಕೇಂದ್ರದೆದುರು ಆದಿ ಮಾನವನ ವಿಕಾಸವನ್ನು ಚಿತ್ರಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.