ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬುವ ಗುರುಗಳು ವಿರಳ

ಸೋಮವಾರ, ಮೇ 27, 2019
29 °C

ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬುವ ಗುರುಗಳು ವಿರಳ

Published:
Updated:

ಬೆಂಗಳೂರು: `ಸಾಧಾರಣ ಶಿಕ್ಷಕರು ಕೇವಲ ಪಾಠ ಹೇಳುತ್ತಾರೆ. ಒಳ್ಳೆಯ ಬೋಧಕರು ವಿವರಿಸುತ್ತಾರೆ. ಶ್ರೇಷ್ಠ ಶಿಕ್ಷಕರು ತಮ್ಮ ಕೌಶಲ್ಯವನ್ನು ಪ್ರದರ್ಶಿಸುತ್ತಾರೆ. ಆದರೆ ಮಹಾನ್ ಗುರುಗಳು ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬುತ್ತಾರೆ ಎನ್ನುವ ಮಾತಿದೆ.ಆದರೆ ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬುವ ಗುರುಗಳ ಸಂಖ್ಯೆ ಕಡಿಮೆ~ ಎಂದು ಸುಪ್ರಿಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಸ್.ರಾಜೇಂದ್ರ ಬಾಬು ಅಭಿಪ್ರಾಯಪಟ್ಟರು.ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ಭಾರತೀಯ ವಿದ್ಯಾ ಭವನ ಮತ್ತು ವಿನಾಯಕ ಗೋಕಾಕ್ ವಾಙ್ಮಯ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಶಿಕ್ಷಣ ತಜ್ಞರಾದ ಪ್ರೊ.ಎಲ್.ಎಸ್‌ಶೇಷಗಿರಿ ರಾವ್, ಪ್ರೊ. ಎಸ್.ಆರ್. ರೋಹಿಡೇಕರ್ ಹಾಗೂ ಪ್ರೊ. ಎಸ್.ಆರ್.ಮಳಗಿ ಅವರಿಗೆ `ಪ್ರೊ. ವಿ.ಕೃ.ಗೋಕಾಕ್ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.`ಚಕ್ರವರ್ತಿ ಅಲೆಕ್ಸಾಂಡರ್ ಒಂದು ಕಡೆ `ಹೇಗೆ ಬದುಕಬೇಕು ಎಂಬುದನ್ನು ನನ್ನ ತಂದೆ ತಿಳಿಸಿದರು. ಆದರೆ ಚೆನ್ನಾಗಿ ಹೇಗೆ ಬದುಕಬೇಕು ಎಂಬುದನ್ನು ನಮ್ಮ ಗುರುಗಳು ತಿಳಿಸಿದರು~ ಎಂದಿದ್ದಾನೆ. ಎಲ್ಲ ವ್ಯಕ್ತಿಗಳಿಗಿಂತಲೂ ಗುರುಗಳು ಬೇರೆಯದೇ ಸ್ಥಾನದಲ್ಲಿ ನಿಲ್ಲುತ್ತಾರೆ.ಆದ್ದರಿಂದಲೇ ತಂದೆ ತಾಯಿಗಳನ್ನು ಗೌರವಿಸುವಂತೆ ಗುರುಗಳನ್ನೂ ಗೌರವದಿಂದ ಕಾಣಲಾಗುತ್ತದೆ. ಗುರು ದೇವೋಭವ ಎಂದು ವಿಶಿಷ್ಟ ರೀತಿಯಲ್ಲಿ ಗುರುತಿಸಲಾಗಿದೆ~ ಎಂದರು.`ಕೆಲವು ವ್ಯಕ್ತಿಗಳನ್ನು ನೋಡಿದಾಗ ಮೇರು ಪರ್ವತವನ್ನು ನೋಡಿದಂತಾಗುತ್ತದೆ. ಎಲ್ಲರೂ ಉನ್ನತ ಶೃಂಗದಂತೆ ಭಾಸವಾಗುತ್ತಾರೆ. ಸಮುದ್ರದಂತೆ ಅವರ ಜ್ಞಾನ ಆಳವೂ ವಿಸ್ತಾರವೂ ಆದುದು. ಅಂತಹ ವ್ಯಕ್ತಿಗಳಲ್ಲಿ ಪ್ರಶಸ್ತಿ ಪುರಸ್ಕೃತರು ಸೇರುತ್ತಾರೆ. ಇವರು ಕೇವಲ ಗುರುಗಳಲ್ಲ, ಗುರುಗಳ ಗುರುಗಳು~ ಎಂದರು.ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರೊ.ಎಲ್.ಎಸ್.ಶೇಷಗಿರಿ ರಾವ್, `ನಾಗರಿಕತೆ ಸದಾ ನಾಶದ ಭೀತಿಯಲ್ಲಿರುತ್ತದೆ.  ಪೀಳಿಗೆಯಿಂದ ಪೀಳಿಗೆಗೆ ನಾಗರಿಕತೆಯನ್ನು ಬಹಳ ಜತನದಿಂದ ಸಾಗಿಸುವವರು ಶಿಕ್ಷಕರು. ಅವರು ಹೇಳಿಕೊಡುವುದನ್ನು ಮಾತ್ರವಲ್ಲದೇ ಅವರ ನಡವಳಿಕೆಯನ್ನು ಕೂಡ ವಿದ್ಯಾರ್ಥಿಗಳು ಪಾಲಿಸುತ್ತಿರುತ್ತಾರೆ~ ಎಂದು ಹೇಳಿದರು.`ಸೆಂಟ್ರಲ್ ಕಾಲೇಜಿನಲ್ಲಿ ಅಧ್ಯಯನ ಮಾಡುವಾಗ ಮಹಾನ್ ಮೇಧಾವಿ ಶಿಕ್ಷಕರು ಪಾಠ ಮಾಡುತ್ತಿದ್ದರು. ಜತೆಗೆ ಬದುಕಿಗೆ ಅಗತ್ಯವಾದ ವಿಷಯಗಳನ್ನು ಮನದಟ್ಟು ಮಾಡುತ್ತಿದ್ದರು. ಸಂಸಾರ ನಿಭಾಯಿಸಲಾರದಷ್ಟು ಸಂಬಳ ಕಡಿಮೆಯಿದ್ದರೂ ಶ್ರದ್ಧೆಯಿಂದ ನನಗೆ ಪಾಠ ಮಾಡಿದ ಅನೇಕ ಗುರುಗಳಿದ್ದರು.ಅವರಿಗೆ ನಾನು ಋಣಿಯಾಗಿದ್ದೇನೆ. ಗೋಕಾಕರ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವುದು ಸಂತಸದ ಸಂಗತಿ~ ಎಂದರು.ಪ್ರೊ. ಎಸ್.ಆರ್. ರೋಹಿಡೇಕರ್, ಪ್ರೊ.ಎಸ್.ಆರ್.ಮಳಗಿ ಮಾತನಾಡಿದರು. ಟ್ರಸ್ಟ್‌ನ ಅಧ್ಯಕ್ಷ ವೈ.ಎನ್.ಗಂಗಾಧರ ಸೆಟ್ಟಿ, ಭಾರತೀಯ ವಿದ್ಯಾ ಭವನದ ಅಧ್ಯಕ್ಷ ಎನ್.ರಾಮಾನುಜ, ಗೋಕಾಕ್ ಅವರ ಪುತ್ರ ಅನಿಲ್ ಗೋಕಾಕ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry