ವಿದ್ಯಾರ್ಥಿಗಳಿಗೆ ಹೊರೆಯಾಗಲಿದೆ ಶಿಕ್ಷಣ!

7

ವಿದ್ಯಾರ್ಥಿಗಳಿಗೆ ಹೊರೆಯಾಗಲಿದೆ ಶಿಕ್ಷಣ!

Published:
Updated:

ಯಾದಗಿರಿ: ವಿದ್ಯಾರ್ಥಿಗಳ ಶುಲ್ಕ ಮರುಪಾವತಿಯಲ್ಲಿ ಗೊಂದಲಗಳ ನಿವಾರಣೆ ಮಾಡಲು ಹೋಗಿ ಶುಲ್ಕ ಮರುಪಾವತಿ ನಿಯಮಾವಳಿ ಬದಲಿಸಿರುವ ಸರ್ಕಾರ ಹೊಸ ಗೊಂದಲಕ್ಕೆ ನಾಂದಿ ಹಾಡಿದೆ. ಇದರಿಂದ ಆದಾಯ ಪ್ರಮಾಣಪತ್ರ ಸಲ್ಲಿಸಿ ಶುಲ್ಕ ವಿನಾಯಿತಿ ಪಡೆಯುತ್ತಿದ್ದ ವಿದ್ಯಾರ್ಥಿಗಳು ಈ ಶೈಕ್ಷಣಿಕ ವರ್ಷದಿಂದ ಪೂರ್ಣ ಶುಲ್ಕ ಪಾವತಿಸುವ ಅನಿವಾರ್ಯತೆ ಎದುರಾಗಿದೆ.ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ ನಿಯಮಗಳನ್ನು ಸರ್ಕಾರ ಬದಲಾಯಿಸಿದ್ದು, ವಾರ್ಷಿಕ ವರಮಾನದ ಮಿತಿ ಏರಿಸುವುದರ ಜೊತೆಗೆ ಕೆಲವೊಂದು ವರ್ಗದ ವಿದ್ಯಾರ್ಥಿಗಳ ಶುಲ್ಕ ಮರುಪಾವತಿಗೆ ಶರತ್ತುಗಳನ್ನು ವಿಧಿಸಿದೆ. ಇದರಿಂದಾಗಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಶಿಕ್ಷಣದಿಂದ ದೂರ ಉಳಿಯಬಹುದು ಎಂದು ಹೇಳಲಾಗುತ್ತಿದೆ.ಈ ಮೊದಲು ಪ್ರವರ್ಗ-1, 2ಎ, 3ಎ ಹಾಗೂ 3 ಬಿ ವರ್ಗದ ವಿದ್ಯಾರ್ಥಿಗಳು ಆಯಾ ಕಾಲೇಜಿನಲ್ಲಿ ಪ್ರವೇಶದ ಸಂದರ್ಭದಲ್ಲಿಯೇ ಶುಲ್ಕ ವಿನಾಯಿತಿ ಪಡೆಯುತ್ತಿದ್ದರು. ನಂತರ ಆಯಾ ಕಾಲೇಜುಗಳೇ ಬಿಸಿಎಂ ಇಲಾಖೆಯ ಮೂಲಕ ವಿನಾಯಿತಿ ನೀಡಿದ ಶುಲ್ಕವನ್ನು ಪಡೆದುಕೊಳ್ಳುತ್ತಿದ್ದವು. ಇದರಿಂದಾಗಿ ಪ್ರವೇಶ ಹಾಗೂ ಪರೀಕ್ಷಾ ಶುಲ್ಕ ಭರಿಸುವ ಸಮಯದಲ್ಲಿಯೇ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಕಡಿಮೆ ಶುಲ್ಕ ಪಾವತಿಸುತ್ತಿದ್ದರು. ಆರ್ಥಿಕ ಹೊರೆಯು ಕಡಿಮೆ ಆಗುತ್ತಿತ್ತು.ಆದರೆ 2012 ರ ಜೂನ್ 23 ರಂದು ಹೊರಡಿಸಿರುವ ಸರ್ಕಾರಿ ಆದೇಶ ಸಂಖ್ಯೆ ಸಕಇ 201 ಬಿಎಂಎಸ್ 2012 ಪ್ರಕಾರ ಶುಲ್ಕ ವಿನಾಯಿತಿಯ ನಿಯಮಾವಳಿಗಳನ್ನು ಪರಿಷ್ಕರಿಸಿದ್ದು, ಇದರಲ್ಲಿ ವಾರ್ಷಿಕ ವರಮಾನದ ಮಿತಿಯನ್ನು ಹೆಚ್ಚಿಸಲಾಗಿದೆ.ಹೊಸ ಆದೇಶದ ಪ್ರಕಾರ ಪ್ರವರ್ಗ-1ರ ವಿದ್ಯಾರ್ಥಿಗಳ ಆದಾಯದ ಮಿತಿಯನ್ನು ರೂ.ಒಂದು ಲಕ್ಷಕ್ಕೆ ಏರಿಸಲಾಗಿದ್ದು, ಪ್ರವರ್ಗ-2ಎ, 3ಎ ಹಾಗೂ 3ಬಿ ವಿದ್ಯಾರ್ಥಿಗಳ ವರಮಾನದ ಮಿತಿಯನ್ನು ರೂ.44,500ಕ್ಕೆ ಹೆಚ್ಚಿಸಲಾಗಿದೆ. ಈ ಮೊದಲು ಈ ಎಲ್ಲ ವಿದ್ಯಾರ್ಥಿಗಳ ಆದಾಯದ ಮಿತಿ ರೂ.11 ಸಾವಿರಕ್ಕೆ ನಿಗದಿಯಾಗಿತ್ತು.ಹೊಸ ನಿಯಮಾವಳಿಯಿಂದ ಗೊಂದಲ: ಶುಲ್ಕ ಮರುಪಾವತಿ ನಿಯಮಾವಳಿ ಪರಿಷ್ಕರಣೆ ಮಾಡುವ ಮೂಲಕ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಕೆಲ ಕಡ್ಡಾಯಗಳನ್ನು ಜಾರಿ ಮಾಡಿದ್ದು, ಇದರಿಂದ ಶುಲ್ಕ ಮರುಪಾವತಿ ಕನಸಿನ ಮಾತು ಎಂದು ವಿದ್ಯಾರ್ಥಿಗಳು ಹೇಳುತ್ತಿದ್ದಾರೆ.ಹೊಸ ನಿಯಮಾವಳಿಗಳ ಪ್ರಕಾರ ವಿದ್ಯಾರ್ಥಿಗಳು ಹಿಂದಿನ ವರ್ಷದ ಪಬ್ಲಿಕ್ ಪರೀಕ್ಷೆಯ ಎಲ್ಲ ವಿಷಯಗಳಲ್ಲಿ ತೇರ್ಗಡೆ ಆಗದಿದ್ದಲ್ಲಿ ಮುಂದಿನ ವರ್ಷದಲ್ಲಿ ಶುಲ್ಕ ಮರುಪಾವತಿಗೆ ಅರ್ಹರಾಗುವುದಿಲ್ಲ. ಮುಂದಿನ ವರ್ಷದಲ್ಲಿ ಹಿಂದಿನ ಬಾಕಿ ವಿಷಯಗಳೂ ಸೇರಿದಂತೆ ಎಲ್ಲ ವಿಷಯಗಳಲ್ಲಿ ಉತ್ತೀರ್ಣರಾಗಿದ್ದಲ್ಲಿ ಮಾತ್ರ ನಂತರದ ವರ್ಷದಲ್ಲಿ ಶುಲ್ಕ ಮರುಪಾವತಿಗೆ ಅರ್ಹರಾಗುತ್ತಾರೆ.ಮೆಟ್ರಿಕ್ ನಂತರದ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಪ್ರವೇಶ ಪಡೆಯುವ ಸಮಯದಲ್ಲಿ ಮೂಲ ಜಾತಿ ಮತ್ತು ಆದಾಯದ ಪ್ರಮಾಣಪತ್ರ ಸಲ್ಲಿಸಿದ ಅರ್ಹ ಪ್ರವರ್ಗ-1 ರ ವಿದ್ಯಾರ್ಥಿಗಳಿಂದ ಶಿಕ್ಷಣ ಸಂಸ್ಥೆಗಳು ಶುಲ್ಕ ಮರು ಪಾವತಿಸಬಹುದಾದ ಶುಲ್ಕಗಳನ್ನು ಪಡೆಯುವಂತಿಲ್ಲ. ಈ ಶುಲ್ಕವನ್ನು ಹಿಂದುಳಿದ ವರ್ಗಗಳ ಇಲಾಖೆಯಿಂದ ನಂತರ ಮರುಪಾವತಿಸಲಾಗುವುದು.ಆದರೆ 2ಎ, 3ಎ ಹಾಗೂ 3 ಬಿ. ವಿದ್ಯಾರ್ಥಿಗಳಿಂದ ನಿಗದಿತ ಶುಲ್ಕವನ್ನು ಆಯಾ ಶಿಕ್ಷಣ ಸಂಸ್ಥೆಗಳು ಪಡೆಯಬಹುದು. ವಿದ್ಯಾರ್ಥಿಗಳ ಅರ್ಹತೆ, ಮೆರಿಟ್ ಆಧರಿಸಿ, ಅನುದಾನದ ಲಭ್ಯತೆಗೆ ಒಳಪಟ್ಟು ಇಲಾಖೆಯಿಂದ ಮಂಜೂರಾತಿ ನೀಡಿದ ನಂತರ ಅರ್ಹ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಶುಲ್ಕ ಮರುಪಾವತಿಸಲಾಗುವುದು ಎಂದು ಹೇಳಲಾಗಿದೆ.ಇದರಿಂದ 2ಎ, 3ಎ ಹಾಗೂ 3ಬಿ ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶ ಪಡೆಯುವ ಸಂದರ್ಭದಲ್ಲಿ ಎಲ್ಲ ಶುಲ್ಕ ಪಾವತಿಸುವುದು ಅನಿವಾರ್ಯವಾಗಲಿದೆ. ಅರ್ಹತೆ, ಮೆರಿಟ್, ಅನುದಾನದ ಲಭ್ಯತೆಗಳು ಇದ್ದಲ್ಲಿ ಮಾತ್ರ ಬ್ಯಾಂಕ್ ಖಾತೆಗೆ ಶುಲ್ಕ ಮರುಪಾವತಿ ಸಾಧ್ಯವಾಗಲಿದೆ. ಹೀಗಾಗಿ ಈ ವರ್ಗದ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿಗೆ ಆಗುವುದೋ ಇಲ್ಲವೋ ಎಂಬ ಆತಂಕ ಕಾಡುತ್ತಿದೆ.ಅನುದಾನ ಲಭ್ಯವಾಗಿ ಇಲ್ಲದೇ ಇದ್ದಲ್ಲಿ ಶುಲ್ಕ ಮರುಪಾವತಿ ಅಸಾಧ್ಯ ಎಂಬ ಮಾತುಗಳು ಕೇಳಿ ಬರುತ್ತಿವೆ. ಇನ್ನೊಂದೆಡೆ ಅನುದಾನ ಲಭ್ಯ ಇಲ್ಲದೇ ಇದ್ದಲ್ಲಿ ಸ್ವೀಕರಿಸಿದ ಅರ್ಜಿಗಳು ಬಾಕಿ ಉಳಿದಲ್ಲಿ ಅಂಥವುಗಳನ್ನು ಲ್ಯಾಪ್ಸ್ ಎಂದು ಪರಿಗಣಿಸಲಾಗುತ್ತಿದೆ. ಇದರರ್ಥ ಆ ವಿದ್ಯಾರ್ಥಿಗಳ ಶುಲ್ಕ ಮರುಪಾವತಿ ಅಸಾಧ್ಯ.ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೂ ಬಿಸಿ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಪ್ರತ್ಯೇಕವಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಪ್ರವರ್ಗ 2ಬಿ (ಮುಸ್ಲಿಂ) ಹಾಗೂ ಇತರೇ ಅಲ್ಪಸಂಖ್ಯಾತ ಸಮುದಾಯಗಳಾದ ಕ್ರಿಶ್ಚಿಯನ್, ಜೈನ್, ಬೌದ್ಧ, ಪಾರ್ಸಿ ಹಾಗೂ ಸಿಖ್ ಸಮುದಾಯಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ಈ ಯೋಜನೆಯಡಿ ಶುಲ್ಕ ಮರುಪಾವತಿ ಮಾಡಲಾಗುವುದಿಲ್ಲ.ಈ ಸಮುದಾಯದ ವಿದ್ಯಾರ್ಥಿಗಳು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಜಾರಿಗೊಳಿಸುವ ಯೋಜನೆಗಳಿಂದ ಈ ಸೌಲಭ್ಯ ಪಡೆಯಬಹುದು ಎಂದು ತಿಳಿಸಲಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯರೊಬ್ಬರು ಹೇಳುವ ಪ್ರಕಾರ, ಈ ಹಿಂದೆ ಆದಾಯ ಪ್ರಮಾಣಪತ್ರ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಪ್ರವೇಶದ ಸಂದರ್ಭದಲ್ಲಿಯೇ ಶುಲ್ಕ ವಿನಾಯಿತಿ ನೀಡಲಾಗುತ್ತಿತ್ತು.

 

ನಂತರ ಬಿಸಿಎಂ ಇಲಾಖೆಯ ಮೂಲಕ ಕಾಲೇಜಿನ ಎಲ್ಲ ವಿದ್ಯಾರ್ಥಿಗಳ ಶುಲ್ಕ ಮರುಪಾವತಿಯನ್ನು ಕಾಲೇಜಿಗೆ ಮಾಡಲಾಗುತ್ತಿತ್ತು. ಇದು ಶಿಕ್ಷಣ ಸಂಸ್ಥೆ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಒಳ್ಳೆಯದಾಗಿತ್ತು. ಆದರೆ ಈ ವರ್ಷದಿಂದ ಜಾರಿಗೊಳಿಸಿರುವ ಶುಲ್ಕ ಮರುಪಾವತಿ ನಿಯಮಾವಳಿ ಬಹುತೇಕ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಮಾರಕವಾಗಿ ಪರಿಣಮಿಸಲಿದೆ.ಹೀಗಾಗಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಶುಲ್ಕ ಮರುಪಾವತಿ ವಿಷಯ ಶೈಕ್ಷಣಿಕ ಸಂಸ್ಥೆಗಳಿಗೆ ಕಗ್ಗಂಟಾಗಿ ಪರಿಣಮಿಸಿದೆ. ಅದರಲ್ಲಿಯೂ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ದಿಕ್ಕು ತೋಚದಂತಾಗಿದೆ.

ಹಿಂಪಡೆಯಲು ಆಗ್ರಹ: ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಶುಲ್ಕ ಮರುಪಾವತಿ ನಿಯಮಾವಳಿಗಳಲ್ಲಿ ಪರಿಷ್ಕರಣೆ ಮಾಡಿರುವ ಸರ್ಕಾರ, ಆದಾಯ ಪ್ರಮಾಣಪತ್ರ ಹೊಂದಿರುವ ವಿದ್ಯಾರ್ಥಿಗಳಲ್ಲಿ ಗೊಂದಲ ಸೃಷ್ಟಿಸಿದೆ.ಇದರಿಂದ ಬಹುತೇಕ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬೇಕಾಗುತ್ತದೆ. ಕೂಡಲೇ ಇಂತಹ ಅವೈಜ್ಞಾನಿಕ ನೀತಿಯನ್ನು ರಾಜ್ಯ ಸರ್ಕಾರ ಹಿಂದಕ್ಕೆ ಪಡೆಯಬೇಕು ಎಂದು ಯುವ ಜೆಡಿಎಸ್ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಶರಣಗೌಡ ಕಂದಕೂರ ಒತ್ತಾಯಿಸಿದ್ದಾರೆ.ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಿಲ್ಲೊಂದು ಅವೈಜ್ಞಾನಿಕ ನೀತಿಯನ್ನು ಜಾರಿಗೊಳಿಸುತ್ತಲೇ ಇದೆ. ಮೊದಲಿನಿಂದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಈ ಹಿಂದಿನ ಎಲ್ಲ ಸರ್ಕಾರಗಳು ಒತ್ತು ನೀಡಿವೆ.ಆದರೆ ಸದ್ಯದ ಬಿಜೆಪಿ ಸರ್ಕಾರ ಈ ವಿದ್ಯಾರ್ಥಿಗಳ ಶೈಕ್ಷಣಿಕ ಹಕ್ಕನ್ನು ಕಸಿದುಕೊಳ್ಳುವ ಕೆಲಸ ಮಾಡುತ್ತಿದೆ ಎಂದು ದೂರಿದ್ದಾರೆ. ಕೂಡಲೇ ಇದನ್ನು ಹಿಂಪಡೆಯಬೇಕು. ಮೊದಲಿನಂತೆ ಕಾಲೇಜಿನಲ್ಲಿ ಶುಲ್ಕ ವಿನಾಯಿತಿ ನೀಡಬೇಕು. ಇಲ್ಲವಾದಲ್ಲಿ ವಿದ್ಯಾರ್ಥಿಗಳ ಜೊತೆಗೂಡಿ ರಾಜ್ಯದಾದ್ಯಂತ ಉಗ್ರ ಹೋರಾಟ ಮಾಡುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry