ಭಾನುವಾರ, ಮಾರ್ಚ್ 7, 2021
22 °C

ವಿದ್ಯಾರ್ಥಿಗಳು ದೊಡ್ಡ ಕನಸು ಕಾಣಬೇಕು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿದ್ಯಾರ್ಥಿಗಳು ದೊಡ್ಡ ಕನಸು ಕಾಣಬೇಕು’

ಬೆಂಗಳೂರು: ‘ವಿದ್ಯಾರ್ಥಿಗಳು ದೊಡ್ಡ ಕನಸುಗಳನ್ನು ಕಾಣಬೇಕು. ಸಣ್ಣ ಸಣ್ಣ ಕೆಲಸಗಳನ್ನು ಸಾಧಿಸುವ ಮೂಲಕವೇ ಕನಸುಗಳನ್ನು ನನಸು ಮಾಡಿಕೊಳ್ಳಬೇಕು’ ಎಂದು ವಿಜ್ಞಾನಿ ಸಿಎನ್ಆರ್ ರಾವ್ ಹೇಳಿದರು.ಬಿಷಪ್ ಕಾಟನ್ ಬಾಲಕರ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ‘ಒಂದೇ ಬಾರಿಗೆ ಮೌಂಟ್ ಎವರೆಸ್ಟ್ ಶಿಖರವನ್ನು ಏರಲು ಸಾಧ್ಯವಿಲ್ಲ. ಕನಸು ನನಸಾಗಲಿಲ್ಲ ಎಂದು ನಿರಾಶರಾಗದೆ ಗುರಿ ಸಾಧಿಸಲು ಸತತ ಪ್ರಯತ್ನ ನಡೆಸಬೇಕು’ ಎಂದು ಹೇಳಿದರು.‘ಪ್ರಸ್ತುತ ಸಂದರ್ಭದಲ್ಲಿ ಸಾಕಷ್ಟು ಅವಕಾಶಗಳಿವೆ. ಉತ್ತಮ ಸ್ಥಾನಕ್ಕೆ ಹೋಗಬೇಕಾದರೆ ಕೌಶಲವನ್ನು ಬೆಳೆಸಿಕೊಳ್ಳಬೇಕು. ಅದನ್ನು ಶಾಲಾ ದಿನಗಳಲ್ಲಿಯೇ ಕಲಿಯಬೇಕು’ ಎಂದರು. ‘ಮುಂದಿನ 10 ವರ್ಷಗಳಲ್ಲಿ ದೇಶದ ಜನಸಂಖ್ಯೆ ಇನ್ನೂ ಹೆಚ್ಚಾಗಲಿದೆ. ಶಿಕ್ಷಣ, ತಂತ್ರಜ್ಞಾನ ಕ್ಷೇತ್ರದಲ್ಲಿ ಸವಾಲುಗಳು ಹೆಚ್ಚಲಿವೆ. ಅದನ್ನು ನಿರ್ವಹಿಸುವ ನಿಟ್ಟಿನಲ್ಲಿ ಇಂದಿನ ಮಕ್ಕಳು ಸನ್ನದ್ಧರಾಗಬೇಕು’ ಎಂದು ಹೇಳಿದರು.‘ನಾನು ಪ್ರತಿಷ್ಠಿತ ಶಾಲೆಯಲ್ಲಿ ಓದಲಿಲ್ಲ. ಆದರೆ, ನಮಗೆ ಉತ್ತಮ ಶಿಕ್ಷಕರಿದ್ದರು. ಅವರ ಮಾರ್ಗದರ್ಶನದಿಂದಾಗಿ ಈ ಮಟ್ಟಕ್ಕೆ ಬಂದಿದ್ದೇನೆ. ನನ್ನ ಹಲವು ಮಂದಿ ಸ್ನೇಹಿತರು ಬಿಷಪ್ ಕಾಟನ್ ಶಾಲೆಯಲ್ಲಿ ಓದಿದರು. ಆದರೆ, ನನಗೆ ಆ ಅವಕಾಶ ಸಿಗಲಿಲ್ಲ. ಅದಕ್ಕೆ ಬೇಸರ ಇದೆ’ ಎಂದರು. ‘ಚೀನಾದಿಂದ ಅತಿ ಹೆಚ್ಚು ವೈದ್ಯರು, ಎಂಜಿನಿಯರ್‌ಗಳು ಹೊರಬರುತ್ತಿದ್ದಾರೆ. ಭಾರತದಲ್ಲಿ ಪ್ರತಿ ವರ್ಷ 8 ಸಾವಿರ ಪಿಎಚ್‌ಡಿ ಪದವಿಗಳು ಪ್ರದಾನವಾದರೆ, ಚೀನಾದಲ್ಲಿ ಆ ಸಂಖ್ಯೆ 23 ಸಾವಿರ. ಆದರೆ, ಗುಣಮಟ್ಟದಲ್ಲಿ ಸಂಶೋಧನೆಯಲ್ಲಿ ಭಾರತ ಮುಂದಿದೆ’ ಎಂದು ಹೇಳಿದರು.ಶಾಲೆಯ ಪ್ರಾಂಶುಪಾಲ ಪ್ರೊ. ಜಾನ್ ಜಕಾರಿಯಾ ಮಾತನಾಡಿ, ‘ವಿದ್ಯಾರ್ಥಿ ಜೀವನ ಬದುಕಿನ ಮಹತ್ವದ ಘಟ್ಟ. ಇಲ್ಲಿ ಕಲಿಯುವ ಪ್ರತಿ ವಿಷಯಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗಲಿವೆ’ ಎಂದರು. ‘ವಿದ್ಯಾರ್ಥಿಗಳು ಸೋಲು, ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಸೋಲು ಬಂದಾಗ ಕುಗ್ಗದೆ, ತಪ್ಪನ್ನು ತಿದ್ದಿಕೊಂಡು ಸಾಧನೆಯತ್ತ ಮುನ್ನಡೆಯಬೇಕು’ ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.