ವಿದ್ಯಾರ್ಥಿಗಳು ಬೈಸಿಕಲ್ ತಳ್ಳದಿರಲಿ

ಭಾನುವಾರ, ಜೂಲೈ 21, 2019
27 °C

ವಿದ್ಯಾರ್ಥಿಗಳು ಬೈಸಿಕಲ್ ತಳ್ಳದಿರಲಿ

Published:
Updated:

ದಾವಣಗೆರೆ: ಪ್ರೌಢಶಾಲಾ ಮಕ್ಕಳಿಗೆ ವಿತರಿಸುವ ಬೈಸಿಕಲ್‌ಗಳು ಸುವ್ಯವಸ್ಥಿತವಾಗಿ ಸಿದ್ಧಪಡಿಸಿ ವಿತರಿಸಿ, ನೀವು ನೀಡಿದ ಬೈಸಿಕಲ್ ತಳ್ಳಿಕೊಂಡು ಶಾಲೆಗೆ ಬರುವಂತೆ ಆಗಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರವೀಂದ್ರನಾಥ್ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು.



ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಬೈಸಿಕಲ್ ಗುಣಮಟ್ಟಕ್ಕೆ ಒತ್ತು ನೀಡುವ ಜತೆಗೆ ಸರಿಯಾಗಿ ಜೋಡಿಸಿ, ವಿತರಣೆ ಮಾಡಿದ ತಕ್ಷಣ ವಿದ್ಯಾರ್ಥಿಗಳು ಅದನ್ನು ಉಪಯೋಗಿಸುವಂತೆ ಇರಬೇಕು ಎಂದು ತಾಕೀತು ಮಾಡಿದರು.



ಇಲಾಖೆಯ ವತಿಯಿಂದ ಈಗಾಗಲೇ ಶೇ. 95ರಷ್ಟು ಪಠ್ಯಪುಸ್ತಕ ವಿತರಿಸಲಾಗಿದೆ. ಕೇವಲ ಐದು ಶೀರ್ಷಿಕೆಯ ಪುಸ್ತಕಗಳ ವಿತರಣೆ ಬಾಕಿ ಇದೆ. ಈ ವರ್ಷ 9 ಮತ್ತು 10ನೇ ತರಗತಿಯ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೂ ಉಚಿತವಾಗಿ ಪುಸ್ತಕ ವಿತರಿಸಲಾಗಿದೆ. ಖಾಸಗಿ ಶಾಲೆಗಳ ಮಕ್ಕಳಿಗೆ ಬಿಇಒ ಕಚೇರಿಯಲ್ಲೇ ಕೌಂಟರ್ ತೆರೆದು ಪುಸ್ತಕ ನೀಡಲಾಗುತ್ತಿದೆ. ಸಮವಸ್ತ್ರ ವಿತರಿಸಲಾಗಿದೆ. ಶಾಲಾ ಬ್ಯಾಗ್ ಜೂನ್ ಅಂತ್ಯಕ್ಕೆ ವಿತರಿಸಲಾಗುವುದು ಎಂದು ಬಿಇಒ ಗಂಗಾಧರ ಸ್ವಾಮಿ ಮಾಹಿತಿ ನೀಡಿದರು.

ಹಿಂದಿನ ವರ್ಷ ಬೈಸಿಕಲ್ ವಿತರಿಸದ ಕಾರಣ ಈ ವರ್ಷ 8 ಮತ್ತು 9ನೇ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೂ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.



ಸಹಾಯಕ ಕೃಷಿ ನಿರ್ದೇಶಕ ಎಸ್.ಬಿ. ರಾಜಶೇಖರ್ ಮಾತನಾಡಿ, ತಾಲ್ಲೂಕಿನಲ್ಲಿ ಗೊಬ್ಬರದ ಸಮಸ್ಯೆ ಇಲ್ಲ ಈಗಾಗಲೇ 40 ಸಾವಿರ ಟನ್ ವಿತರಿಸಲಾಗಿದೆ. ಸುವರ್ಣಭೂಮಿ ಯೋಜನೆಯಲ್ಲಿ 6,341 ಅರ್ಜಿಗಳು ಸಲ್ಲಿಕೆಯಾಗಿದ್ದು, ಕೋರ್ಟ್ ಆದೇಶದ ನಂತರ 1,631 ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.



ವಿವಿಧ ತೋಟಗಾರಿಕಾ ಬೆಳೆಗಳಿಗೆ ಸಬ್ಸಿಡಿ ನೀಡಲಾಗುತ್ತಿದೆ. ಸಾಕಷ್ಟು ಫಲಾನುಭವಿಗಳಿಗೆ ಈಗಾಗಲೇ ಸೌಲಭ್ಯ ತಲುಪಿಸಲಾಗಿದೆ. ಹಸಿರು ಮನೆಗೆ 4.6 ಲಕ್ಷ ಸಹಾಯಧನ ನೀಡಲಾಗುತ್ತಿದ್ದು, ತಾಲ್ಲೂಕಿನ ಕೆಲ ಭಾಗಗಳಲ್ಲಿ ಅನುಷ್ಠಾನ ಗೊಳಿಸಲಾಗುತ್ತಿದೆ ಎಂದು ತೋಟಗಾರಿಕಾ ಸಹಾಯಕ ನಿರ್ದೇಶಕರು ವಿವರ ನೀಡಿದರು.

 

ಇದು ಶಾಲಾ ಕಟ್ಟಡ ಸ್ಥಿತಿ

ಗ್ರಾಮೀಣ ಪ್ರದೇಶದಲ್ಲಿ ಶಾಲೆಯ ಕಟ್ಟಡಗಳ ಸ್ಥಿತಿ ಹೇಗೆ ಇದೆ ಎನ್ನುವ ಕುರಿತು ಬಿಇಒ ಗಂಗಾಧರಸ್ವಾಮಿ ಮಾಹಿತಿ ನೀಡಿದರು.



ಬಹುತೇಕ ಶಾಲೆಗಳು ಶಿಥಿಲಾವಸ್ಥೆಯಲ್ಲಿವೆ. ಮಳೆಯಿಂದ 10 ಶಾಲೆಗಳಿಗೆ ಧಕ್ಕೆಯಾಗಿದೆ. ಹಳೆಯ ಹೆಂಚಿನ ಕಟ್ಟಡಗಳು ಇರುವ ಶಾಲೆಗಳ ಒಂದು ಕೊಠಡಿ ಕೆಡವಿದರೆ ಉಳಿದವೂ ಬೀಳುತ್ತವೆ. ಅದಕ್ಕಾಗಿ ವಿವಿಧ ಅನುದಾನದಲ್ಲಿ ಹೊಸ ಕೊಠಡಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.



ಶಾಲೆಯಲ್ಲಿ ಶಿಕ್ಷಕರ ಜಗಳ!

ಕೊಡಗನೂರು ಶಾಲೆಯಲ್ಲಿ ದೈಹಿಕ ಶಿಕ್ಷಕ ರಂಗಸ್ವಾಮಿ, ಶಿಕ್ಷಕಿ ಪರಿಮಳಾ ವಿದ್ಯಾರ್ಥಿಗಳ ಎದುರೇ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಜಗಳವಾಡಿದ್ದಾರೆ. ಈ ಇಬ್ಬರೂ ಶಿಕ್ಷಕರನ್ನು ಅಮಾನತುಗೊಳಿಸಬೇಕು ಎಂದು ಅಧ್ಯಕ್ಷೆ ಪ್ರತಿಭಾ ಬಿಇಒಗೆ ಸೂಚಿಸಿದರು.



ಇದಕ್ಕೆ ಪ್ರತಿಕ್ರಿಯಿಸಿದ ಬಿಇಒ, ಈಗಾಗಲೇ ದೂರು ಪಡೆಯಲಾಗಿದ್ದು, ಇಲಾಖಾ ತನಿಖೆಗೆ ಆದೇಶಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಯಾವುದೇ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು ಎಂದು ವಿವರ ನೀಡಿದರು.

ಎಸ್‌ಡಿಎಂಸಿ ಅಧ್ಯಕ್ಷರ ಬದಲಾವಣೆಗೆ ಸೂಚನೆ

ತಾಲ್ಲೂಕಿನ ಬಹುತೇಕ ಶಾಲೆಗಳಲ್ಲಿ ಅಧ್ಯಕ್ಷರ ಅವಧಿ ಮುಗಿದಿದ್ದು, ಕೂಡಲೇ ಹೊಸ ಅಧ್ಯಕ್ಷರ ಆಯ್ಕೆಗೆ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಸೂಚಿಸಿದರು. ಹಾಲಿ ಇರುವ ಸದಸ್ಯರಲ್ಲೇ ಹೊಸ ಅಧ್ಯಕ್ಷರ ಆಯ್ಕೆ ನಡೆಸಲು ಶೀಘ್ರ ಕ್ರಮ ಕೈಗೊಳ್ಳುವುದಾಗಿ ಬಿಇಒ ಭರವಸೆ ನೀಡಿದರು.

ಶಾಲೆ ಜಾಗ ಒತ್ತುವರಿ!

ತೋಳಹುಣಸೆ ಹಾಗೂ ಲೋಕಿಕೆರೆಯಲ್ಲಿ ಖಾಸಗಿ ವ್ಯಕ್ತಿಗಳು ಜಾಗ ಒತ್ತುವರಿ ಮಾಡಿದ್ದು, ಅದನ್ನು ತೆರವುಗೊಳಿಸುವಂತೆ ತಹಶೀಲ್ದಾರ್ ಹರೀಶ್ ಅವರಿಗೆ ಸಚಿವರು ಸೂಚಿಸಿದರು.



ತೋಳಹುಣಸೆಯಲ್ಲಿ ಶಾಲೆಯ ಸ್ಥಳದಲ್ಲಿ ಮನೆ ಕಟ್ಟಲಾಗಿದೆ. ಲೋಕಿಕೆರೆಯಲ್ಲಿ ಅಂಗಡಿ ಇಟ್ಟುಕೊಳ್ಳಲಾಗಿದೆ. ಈ ಬಗ್ಗೆ ನೋಟಿಸ್ ನೀಡಿದರೂ, ತೆರವುಗೊಳಿಸಿಲ್ಲ ಎಂದು ಬಿಇಒ ಅಳಲು ತೋಡಿಕೊಂಡರು. ಕೂಡಲೇ, ಪೊಲೀಸ್ ಸಹಕಾರ ಪಡೆದು ತೆರವುಗೊಳಿಸಬೇಕು ಎಂದು ಸಚಿವರು ತಾಕೀತು ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry