ಶನಿವಾರ, ಜೂನ್ 12, 2021
28 °C
ಮೋಜಿನ ನೆಪದಲ್ಲಿ ಚೀಟಿ ವ್ಯಾಪಾರಿ ಅಪಹರಣ

ವಿದ್ಯಾರ್ಥಿಗಳು ಸೇರಿ ಆರು ಮಂದಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಚೀಟಿ ವ್ಯವಹಾರ ನಡೆಸುವ ಅತ್ತಿಬೆಲೆಯ ರಾಜಣ್ಣರೆಡ್ಡಿ (55) ಎಂಬುವರನ್ನು ಅಪಹರಿಸಿ ರೂ. 50 ಲಕ್ಷ ನೀಡುವಂತೆ ಬೆದರಿಕೆ ಹಾಕಿದ್ದ ಇಬ್ಬರು ಎಂಬಿಬಿಎಸ್‌ ವಿದ್ಯಾರ್ಥಿಗಳು, ಮಹಿಳೆ­ಯರು  ಸೇರಿದಂತೆ ಆರು ಮಂದಿ ಆರೋಪಿಗಳನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ.ಎಂಬಿಬಿಎಸ್‌ ವಿದ್ಯಾರ್ಥಿಗಳಾದ ಕೆಂಗೇರಿಯ ಮಣಿಕಂಠ (24), ರಾಜೇಶ್‌ (25), ಮಲೆ ಮಹದೇಶ್ವರ ಮಹಿಳಾ ಕ್ಷೇಮಾಭಿವೃದ್ಧಿ ಸಂಘದ ಸುಗುಣ (30), ಗೀತಾ (27), ಕೋಡಿಪಾಳ್ಯದ ಅನಿಲ್‌ (27)  ಹಾಗೂ ಕತ್ತರಿಗುಪ್ಪೆಯ ಅರುಣ್‌ಕುಮಾರ್ ಬಂಧಿತರು. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊ­ಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.ಅತ್ತಿಬೆಲೆಯ ತಿಲಕ್‌ನಗರ ನಿವಾಸಿಯಾದ ರಾಜಣ್ಣರೆಡ್ಡಿ ಬಡ್ಡಿ ಹಾಗೂ ಚೀಟಿ ವ್ಯವಹಾರ ನಡೆಸುತ್ತಿದ್ದರು. ಅವರ ಮನೆಯಲ್ಲಿ ಆರೋಪಿ ಸುಗುಣಳ ಸಂಬಂಧಿಕ­ರೊಬ್ಬರು ಬಾಡಿಗೆಗೆ ಇದ್ದರು. ಆಗಾಗ ಸಂಬಂಧಿಕರ ಮನೆಗೆ ಬಂದು ಹೋಗುತ್ತಿದ್ದ ಸುಗುಣ, ರಾಜಣ್ಣರೆಡ್ಡಿ ಅವರನ್ನು ಪರಿಚಯ ಮಾಡಿ­ಕೊಂಡಿದ್ದಳು. ಅವರ ಬಳಿ ಸಾಕಷ್ಟು ಹಣ ಇರುವ ಬಗ್ಗೆ ಅರಿತ ಆಕೆ, ಅಪಹರಣ ಮಾಡುವ ಸಂಚು ರೂಪಿಸಿದಳು. ಕೃತ್ಯಕ್ಕೆ ಇತರೆ ಆರೋಪಿಗಳ ನೆರವು ಕೋರಿದ್ದಳು ಎಂದು ಪೊಲೀಸರು ಹೇಳಿದ್ದಾರೆ.ಸಂಚಿನಂತೆ ಗುರುವಾರ ಸಂಜೆ 4 ಗಂಟೆ ಸುಮಾರಿಗೆ ರಾಜಣ್ಣರೆಡ್ಡಿ ಅವರ ಮೊಬೈಲ್‌ಗೆ ಕರೆ ಮಾಡಿದ ಆಕೆ, ‘ನಿಮ್ಮೊಂದಿಗೆ ಮಾತನಾಡಬೇಕಿದೆ. ಅತ್ತಿಬೆಲೆ ಬಸ್‌ ನಿಲ್ದಾಣಕ್ಕೆ ಬನ್ನಿ’ ಎಂದು ಕರೆಸಿಕೊಂಡಿದ್ದಾಳೆ. ನಂತರ ಅವರ ಬೈಕ್‌ ಹತ್ತಿದ ಸುಗುಣ, ಮೋಜಿನ ಸುತ್ತಾಟ ಹೋಗೋಣವೆಂದು ಚಿಕ್ಕಬಳ್ಳಾಪುರ ಜಿಲ್ಲೆಯ ಕೈವಾರಕ್ಕೆ ಕರೆದುಕೊಂಡು ಹೋಗಿದ್ದಾಳೆ. ಪೂರ್ವನಿಯೋಜಿತ ಸಂಚಿನಂತೆ ಉಳಿದ ಆರೋಪಿಗಳು ವಿದ್ಯಾರ್ಥಿ ಮಣಿಕಂಠನ ಕಾರಿನಲ್ಲಿ ಅವರನ್ನು ಹಿಂಬಾಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಸಂಚಿನ ಬಗ್ಗೆ ಅರಿವಿಲ್ಲದ ರಾಜಣ್ಣರೆಡ್ಡಿ, ಸುಗುಣಳ ಮಾತಿನಂತೆ ಕೈವಾರದಲ್ಲಿ ವಸತಿ ಗೃಹದ  (ಲಾಡ್ಜ್‌) ಕೋಣೆಯನ್ನು ಬಾಡಿಗೆ ಪಡೆದಿದ್ದಾರೆ. ಆಕೆಯ ಸೂಚನೆಯಂತೆ ಇತರೆ ಆರೋಪಿ­ಗಳು ಸಂಜೆ 7 ಗಂಟೆ ಸುಮಾರಿಗೆ ಕೋಣೆಗೆ ನುಗ್ಗಿದ್ದಾರೆ. ನಂತರ ರಾಜಣ್ಣರೆಡ್ಡಿ ಅವರಿಂದ ಎರಡು ಚಿನ್ನದ ಉಂಗುರ ಹಾಗೂ ರೂ.  5,200 ನಗದನ್ನು ಕಿತ್ತುಕೊಂಡಿದ್ದಾರೆ. ಅಲ್ಲದೆ, ರೂ. 50 ಲಕ್ಷ ಹಣ ನೀಡುವಂತೆ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಈ ವೇಳೆ ಕಂಗಾಲಾದ ರಾಜಣ್ಣರೆಡ್ಡಿ, ಆರೋಪಿಗಳಲ್ಲಿ ಮನವಿ ಮಾಡಿ ರೂ. 5 ಲಕ್ಷ ಕೊಡಲು ಒಪ್ಪಿದ್ದಾರೆ. ನಂತರ ಸ್ನೇಹಿತ ಸುಬ್ರಹ್ಮಣ್ಯ ಎಂಬುವರಿಗೆ ಕರೆ ಮಾಡಿ, ‘ಬೈಕ್‌ ಅಪಘಾತದಿಂದ ಗಾಯ­ಗೊಂಡು ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲಾಗಿದ್ದೇನೆ. ರೂ. 5 ಲಕ್ಷ ತೆಗೆದುಕೊಂಡು ಆಸ್ಪತ್ರೆ ಬಳಿ ಬಾ’ ಎಂದಿದ್ದಾರೆ. ಆದರೆ, ರಾತ್ರೋರಾತ್ರಿ ಅಷ್ಟೊಂದು ಹಣ ಹೊಂದಿಸಲು ಸಾಧ್ಯವಾಗದ ಸುಬ್ರಹ್ಮಣ್ಯ, ಖಾಲಿ ಕೈಲಿ ಆಸ್ಪತ್ರೆ ಬಳಿ ಬಂದು ಸ್ನೇಹಿತ ರಾಜಣ್ಣರೆಡ್ಡಿ ಅವರಿಗೆ ಕರೆ ಮಾಡಿದ್ದಾರೆ. ಆದರೆ, ಅವರ ಮೊಬೈಲ್‌ ಸ್ವಿಚ್‌ ಆಫ್‌ ಆಗಿದ್ದರಿಂದ ಅನುಮಾನಗೊಂಡು ಕೆಂಗೇರಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.ಆಗ ಕಾರ್ಯಪ್ರವೃತ್ತರಾದ ಪೊಲೀಸರು, ಮಫ್ತಿಯಲ್ಲಿ ಆಸ್ಪತ್ರೆ ಬಳಿ ಬಂದಿದ್ದಾರೆ. ಆಗ ಕಾರಿನಲ್ಲಿ ರಾಜಣ್ಣರೆಡ್ಡಿ ಅವರೊಂದಿಗೆ ಬಂದ ಆರೋಪಿಗಳು, ಪೊಲೀಸರಿಗೆ ಬಲೆಗೆ ಬಿದ್ದಿದ್ದಾರೆ.ವಿವಸ್ತ್ರಗೊಳಿಸಿ ಬೆದರಿಕೆ

‘ಆರೋಪಿಗಳು ಮೊದಲು ರಾಜಣ್ಣರೆಡ್ಡಿ ಅವರನ್ನು ವಿವಸ್ತ್ರಗೊಳಿಸಿದ್ದಾರೆ. ನಂತರ ಸುಗುಣ ಸಹ

ಬಟ್ಟೆಗಳನ್ನು ಕಳಚಿ ಅವರನ್ನು ತಬ್ಬಿಕೊಂಡಿದ್ದಾಳೆ.ಈ ದೃಶ್ಯವನ್ನು ಇತರೆ ಆರೋಪಿಗಳು ಮೊಬೈಲ್‌ನಲ್ಲಿ ವಿಡಿಯೊ ಚಿತ್ರೀಕರಣ ಮಾಡಿದ್ದಾರೆ. ನಂತರ

ಹಣ ನೀಡದಿದ್ದರೆ ಆ ದೃಶ್ಯಾವಳಿಯನ್ನು ಸುದ್ದಿ ವಾಹಿನಿಗಳಿಗೆ ಕೊಡುವುದಾಗಿ ಬೆದರಿಕೆ ಹಾಕಿದ್ದಾರೆ’ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.