`ವಿದ್ಯಾರ್ಥಿಗಳೇ ಪರಿಸರ ಸಂರಕ್ಷಣಾ ರಾಯಭಾರಿಗಳಾಗಿ'

7

`ವಿದ್ಯಾರ್ಥಿಗಳೇ ಪರಿಸರ ಸಂರಕ್ಷಣಾ ರಾಯಭಾರಿಗಳಾಗಿ'

Published:
Updated:

ಬೆಂಗಳೂರು: `ದೇಶದ ಸುಸ್ಥಿರ ಅಭಿವೃದ್ಧಿಗೆ ಪರಿಸರ ರಕ್ಷಿಸುವ ನಿಟ್ಟಿನಲ್ಲಿ ಪ್ರತಿವರ್ಷ ಪ್ರತಿ ವಿದ್ಯಾರ್ಥಿ 10 ಗಿಡಗಳನ್ನು ನೆಟ್ಟು ಪೋಷಿಸುವ ಮೂಲಕ ಪರಿಸರ ರಾಯಭಾರಿಗಳಾಗಬೇಕು' ಎಂದು ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಕಿವಿಮಾತು ಹೇಳಿದರು.

ಗೋಥೆ ಇನ್ಸ್‌ಟಿಟ್ಯೂಟ್ ಆಶ್ರಯದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)ಯ ಸತೀಶ್ ಧವನ್ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ `ಗೋಥೆಯೊಂದಿಗೆ ಹಸಿರೀಕರಣ: ಪರಿಸರ-ಯುವ ಸಮಾವೇಶ'ದಲ್ಲಿ ವಿದ್ಯಾರ್ಥಿ ಸಂವಾದದಲ್ಲಿ ಅವರು ಮಾತನಾಡಿದರು.

`ಜನಸಂಖ್ಯಾ ಹೆಚ್ಚಳ, ಜಾಗತಿಕ ತಾಪಮಾನದ ಏರಿಕೆ, ತೀವ್ರಗತಿಯ ಅಭಿವೃದ್ಧಿ ಮತ್ತಿತರ ಕಾರಣಗಳಿಂದಾಗಿ ಪರಿಸರ ನಾಶ ಉಂಟಾಗುತ್ತಿದೆ. ಪರಿಸರ ರಕ್ಷಣೆ ಎಲ್ಲರ ಜವಾಬ್ದಾರಿ. ಈ ನಿಟ್ಟಿನಲ್ಲಿ ಪರಿಸರ ರಕ್ಷಣೆ ಬಗ್ಗೆ ವಿದ್ಯಾರ್ಥಿ ಹಂತದಲ್ಲೇ ಜಾಗೃತಿ ಮೂಡಬೇಕು' ಎಂದರು.

`ಗ್ರಾಮೀಣ ಹಾಗೂ ನಗರದ ಶಾಲೆಗಳಲ್ಲಿ ಕಾಲ ಕಾಲಕ್ಕೆ ಗಿಡ ನೆಡುವ ಕಾರ್ಯಗಳನ್ನು ನಡೆಸಬೇಕು. ಗ್ರಾಮೀಣ ಶಾಲೆಗಳಲ್ಲಿ ಸುಸ್ಥಿರ ಅಭಿವೃದ್ಧಿಯ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸುವ ಅಗತ್ಯ ಇದೆ. ನೀರು ಹಾಗೂ ಇತರ ಮೂಲಗಳ ಪುನರ್‌ಬಳಕೆ ಮಾಡಬೇಕು' ಎಂದು ಅವರು ಸಲಹೆ ನೀಡಿದರು.

`ದೇಶದ ಜಿಡಿಪಿ ಬೆಳವಣಿಗೆ ಈಗ ಶೇ 5.5ಕ್ಕೆ ಇಳಿದಿದ್ದು, 2020ರ ವೇಳೆ ಜಿಡಿಪಿ ಬೆಳವಣಿಗೆ ಶೇ 10ಕ್ಕೆ ಏರಬೇಕು. ದೇಶ ಶ್ರೇಷ್ಠ ರಾಷ್ಟ್ರವಾಗಲು ವಿದ್ಯಾರ್ಥಿಗಳು ಕಠಿಣ ಪರಿಶ್ರಮಿಗಳಾಗಬೇಕು. ದೇಶದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಕಡಿಮೆ ಆಗಬೇಕು. ವಿದ್ಯಾರ್ಥಿಗಳ ಜ್ಞಾನ ದಾಹ ಹೆಚ್ಚಾಗಬೇಕು' ಎಂದು ಅವರು ಕಿವಿಮಾತು ಹೇಳಿದರು.

`ತರಗತಿಯ ದಡ್ಡ ವಿದ್ಯಾರ್ಥಿಗಳು ಅಧಿಕ ಅಂಕ ಗಳಿಸುವಂತೆ ಮಾಡುವವರೇ ಉತ್ತಮ ಶಿಕ್ಷಕರು. ಅವರ ಕಲಿಕಾ ಸಾಮರ್ಥ್ಯ ಹೆಚ್ಚಿಸುವುದು ದೊಡ್ಡ ಸವಾಲು' ಎಂದರು. ಐಐಎಸ್‌ಸಿ ಸಹಾಯಕ ನಿರ್ದೇಶಕ ಪ್ರೊ.ಎನ್.ಬಾಲಕೃಷ್ಣನ್, ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿಯ ಕಾನ್ಸುಲ್ ಜನರಲ್ ಡಾ.ಇಂಗೋ ಕರ್ಸ್ಟನ್, ಗೋಥೆ ಇನ್ಸ್‌ಟಿಟ್ಯೂಟ್ ನಿರ್ದೇಶಕ ಕ್ರಿಸ್ಟೋಫರ್ ಬರ್‌ಟ್ರ್ಯಾಮ್ಸ ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry