ವಿದ್ಯಾರ್ಥಿಗಳ ಕೊರತೆ: ಚಿಂತನೆ ನಡೆಯಲಿ

7

ವಿದ್ಯಾರ್ಥಿಗಳ ಕೊರತೆ: ಚಿಂತನೆ ನಡೆಯಲಿ

Published:
Updated:

ಬೆಂಗಳೂರು: `ವಿದ್ಯಾರ್ಥಿಗಳ ಕೊರತೆಯನ್ನು ಮುಂದಿಟ್ಟುಕೊಂಡು ಸರ್ಕಾರ ಕನ್ನಡ ಶಾಲೆಗಳನ್ನು ಮುಚ್ಚಲು ನಿರ್ಧರಿಸಿರುವುದು ಸರಿಯಾದ ಕ್ರಮವಲ್ಲ. ಬದಲಿಗೆ ವಿದ್ಯಾರ್ಥಿಗಳ ಕೊರತೆಗೆ ಕಾರಣ ಏನು? ಯಾಕಾಗಿ ವಿದ್ಯಾರ್ಥಿಗಳು ಶಾಲೆಗೆ ಬರುತ್ತಿಲ್ಲ ಎಂಬುದರ ಬಗ್ಗೆ ಸರ್ಕಾರ ಚಿಂತನೆ ನಡೆಸಲಿ~ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ `ಮುಖ್ಯಮಂತ್ರಿ~ ಚಂದ್ರು ಒತ್ತಾಯಿಸಿದರು.ಕನ್ನಡ ಅಭಿವೃದ್ಧಿ ಪ್ರಾಧಿಕಾರವು ನಗರದ ಸೆಂಟ್ರಲ್ ಕಾಲೇಜು ಆವರಣದಲ್ಲಿರುವ ಜ್ಞಾನಜ್ಯೋತಿ ಸಭಾಂಗಣದಲ್ಲಿ ಭಾನುವಾರ 2011-12ನೇ ಶೈಕ್ಷಣಿಕ ಸಾಲಿನಲ್ಲಿ ಬೆಂಗಳೂರು ವಿಭಾಗದಲ್ಲಿ ಎಸ್‌ಎಸ್‌ಎಸ್‌ಸಿ ಹಾಗೂ ಪಿಯುಸಿಯಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ ತಾಲ್ಲೂಕು ಮಟ್ಟದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಕನ್ನಡ ಮಾಧ್ಯಮ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.`ಶಾಲೆಗಳನ್ನು ಮುಚ್ಚುವುದರಿಂದ ವ್ಯಾಪಾರೀಕರಣ ಹೆಚ್ಚಲಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ತಜ್ಞರು ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ದುಡಿಯುತ್ತಿರುವ ಸ್ಥಳೀಯ ಪ್ರಮುಖರ ಜತೆ ಚರ್ಚಿಸಿ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಬೇಕು~ ಎಂದು ಅವರು ಆಗ್ರಹಿಸಿದರು.`ಸುಮಾರು 50 ವರ್ಷ ಕಳೆದರೂ ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಮಾಡಿಕೊಳ್ಳುವುದರಲ್ಲಿ ನಾವು ಅಸಮರ್ಥರಾಗಿದ್ದೇವೆ. ಇದಕ್ಕೆ ಭಾಷಾ ಪ್ರೇಮದ ಕೊರತೆ, ನಿರ್ಲಕ್ಷ್ಯ, ಉದ್ಧಟತನ ಕಾರಣ. ಜಾಗತೀಕರಣದ ಹಿನ್ನೆಲೆಯಲ್ಲಿ ಇಂಗ್ಲಿಷ್ ಭಾಷೆಯು ಪ್ರಾಂತೀಯ ಭಾಷೆಗಳ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತಿದೆ. ಇದರಿಂದ ಪ್ರಾಂತೀಯ ಭಾಷೆಗಳು ಮೂಲೆ ಗುಂಪಾಗುತ್ತಿವೆ. ಜಾಗತೀಕರಣದ ಹಿನ್ನೆಲೆಯಲ್ಲಿ ಇಂಗ್ಲಿಷ್ ಕಲಿಯುವ ಅನಿವಾರ್ಯತೆ ಇರಬಹುದು. ಆದರೆ, ಕನ್ನಡಕ್ಕೇ ಮೊದಲ ಆದ್ಯತೆ ಸಿಗಬೇಕಿದೆ~ ಎಂದು ಪ್ರತಿಪಾದಿಸಿದರು.ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಎನ್. ಪ್ರಭುದೇವ್, ಬೆಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ 625 ಕಾಲೇಜುಗಳಲ್ಲಿ ಪ್ರತಿ ದಿನ ಎರಡು ಕಾಲೇಜುಗಳಲ್ಲಿ ಒಂದು ಗಂಟೆ ಅವಧಿ ಕನ್ನಡ ಪ್ರಾಚೀನ ಸಾಹಿತ್ಯ ಹಾಗೂ ಭಾಷೆಯ ಬಗ್ಗೆ ಬೋಧನೆ ಮಾಡಲು ಕನ್ನಡ ಅಭಿವೃದ್ಧಿ ಪ್ರಾಧಿಕಾರದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ನವೆಂಬರ್ 1ರಿಂದ ಪ್ರಾರಂಭವಾಗುವ ಈ ಕಾರ್ಯಕ್ರಮ ಒಂದು ವರ್ಷ ಕಾಲ ನಡೆಯಲಿದೆ ಎಂದರು.ಸಮಾರಂಭದಲ್ಲಿ ಬೆಂಗಳೂರು ವಿಭಾಗ ಮಟ್ಟದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ ತಾಲ್ಲೂಕು ಮಟ್ಟದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ 368 ವಿದ್ಯಾರ್ಥಿಗಳಿಗೆ ಪ್ರಶಸ್ತಿ ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಯಿತು.ಮುಖ್ಯಮಂತ್ರಿಗಳ ಕಾರ್ಯದರ್ಶಿ ಎಂ.ಲಕ್ಷ್ಮೀನಾರಾಯಣ, ಐಎಫ್‌ಎಸ್, ಐಎಎಸ್, ಐಪಿಎಸ್‌ಗಳಂತಹ ಉನ್ನತ ಪರೀಕ್ಷೆಗಳನ್ನು ಕನ್ನಡ ಮಾಧ್ಯಮದಲ್ಲಿ ಬರೆದು ಉನ್ನತ ಸ್ಥಾನ ಗಳಿಸಿದವರಿದ್ದಾರೆ. ಮಾತೃ ಭಾಷೆಯಲ್ಲಿ ಶಿಕ್ಷಣ ಕಲಿಯುವುದರಿಂದ ಪ್ರತಿಭಾವಂತರಾಗಲು ಒಳ್ಳೆಯ ಅವಕಾಶವಿದೆ ಎಂದರು.ಪ್ರಾಧಿಕಾರದ ಸದಸ್ಯ ಬಿ. ಸುರೇಶ್ ಸ್ವಾಗತಿಸಿದರು. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕ ಡಿ.ವೆಂಕಟೇಶಯ್ಯ, ಸಾಹಿತಿ ವಿಷ್ಣುನಾಯಕ ಹಾಗೂ ಪ್ರಾಧಿಕಾರದ ಕಾರ್ಯದರ್ಶಿ ಎಸ್.ಎಂ. ಶಾಂತರಾಜು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry