ಶುಕ್ರವಾರ, ನವೆಂಬರ್ 15, 2019
20 °C
ವಿಶ್ರಾಂತ ಕುಲಪತಿ ಪ್ರೊ.ಎಸ್.ಎನ್.ಹೆಗ್ಡೆ ಬೇಸರ

ವಿದ್ಯಾರ್ಥಿಗಳ ಜ್ಞಾನಮಟ್ಟ ಕುಸಿತಕ್ಕೆ ಶಿಕ್ಷಕರೇ ಹೊಣೆ

Published:
Updated:

ಮೈಸೂರು: ವಿದ್ಯಾರ್ಥಿಗಳ ಜ್ಞಾನ ಮಟ್ಟ ಕುಸಿಯಲು ಶಿಕ್ಷಕರೇ ಕಾರಣ. ಬೋಧಕ ವರ್ಗದಲ್ಲಿ ವೃತ್ತಿಪರತೆ, ಶ್ರದ್ಧೆ, ಆಸಕ್ತಿ ಕಡಿಮೆಯಾಗುತ್ತಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಎಸ್.ಎನ್.ಹೆಗ್ಡೆ ಬೇಸರ ವ್ಯಕ್ತಪಡಿಸಿದರು.ನಗರದ ಮಹಾರಾಣಿ ಎನ್‌ಟಿಎಂ ಶಾಲಾ ಆವರಣದಲ್ಲಿ ಜ್ಞಾನಬುತ್ತಿ ಸಂಸ್ಥೆ ಸೋಮವಾರ ಏರ್ಪಡಿಸಿದ್ದ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಯ ಉಚಿತ ತರಬೇತಿ ಶಿಬಿರಾರ್ಥಿಗಳಿಗೆ ಶುಭ ಹಾರೈಕೆ ಸಮಾರಂಭದಲ್ಲಿ `ಜ್ಞಾನ ಸಿಂಚನ' ಅಧ್ಯಯನ ಪುಸ್ತಕ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.ಈಚೆಗೆ ಬಿಡುಗಡೆಯಾದ ವಾರ್ಷಿಕ ಶೈಕ್ಷಣಿಕ ಸಮೀಕ್ಷಾ ವರದಿಯಲ್ಲಿ ವಿದ್ಯಾರ್ಥಿಗಳ ಜ್ಞಾನಮಟ್ಟ ಕುಸಿತವಾಗಿರುವುದು ಬೆಳಕಿಗೆ ಬಂದಿದೆ. 1 ರಿಂದ 8ನೇ ತರಗತಿಯ 14 ಸಾವಿರ ವಿದ್ಯಾರ್ಥಿಗಳನ್ನು ಸಮೀಕ್ಷೆ ಮಾಡಿ ತಯಾರಿಸಿದ ವರದಿ ಶಿಕ್ಷಕರ ಕಾರ್ಯ ಕ್ಷಮತೆಗೆ ಕನ್ನಡಿ ಹಿಡಿಯುವಂತಿದೆ. 5ನೇ  ತರಗತಿಯ ಶೇ 64 ವಿದ್ಯಾರ್ಥಿಗಳು 2ನೇ ತರಗತಿಯ ಪಠ್ಯ ಓದುವಷ್ಟು ಸಮರ್ಥರಾಗಿಲ್ಲ. ಬಹುತೇಕ ಮಕ್ಕಳು ಗಣಿತದಲ್ಲಿ ಹಿಂದುಳಿದಿದ್ದಾರೆ ಎಂದು ಹೇಳಿದರು.ಯುಜಿಸಿ, ಬಿಇಎಂಎಲ್, ಸಿಎಸ್‌ಆರ್‌ಗಳ ವಿಸ್ತೃತ ರೂಪ ಬಹುಪಾಲು ಶಿಕ್ಷಕರಿಗೆ ತಿಳಿದಿಲ್ಲ ಎಂಬುದು ವರದಯಲ್ಲಿ ಉಲ್ಲೇಖವಾಗಿದೆ. ಆದರೆ ಅವರಿಗೆ ಚಿನ್ನ, ಬೆಳ್ಳಿ ಬೆಲೆಯ ಏರಿಳಿತ, ನಿವೇಶನಗಳ ಮೌಲ್ಯ, ಎಲ್‌ಐಸಿ (ಜೀವ ವಿಮಾ ನಿಗಮ)ದ ಕುರಿತು ಗೊತ್ತಿದೆ. ನಿರಂತರ ಅಧ್ಯಯನ, ಸಂಶೋಧನೆ ಸಾಧ್ಯವಾಗದಿರು ವುದಕ್ಕೆ ಸಮಯದ ಅಭಾವ, ಕೌಟುಂಬಿಕ ಸಮಸ್ಯೆಯ ಕಾರಣ ನೀಡಿದ್ದಾರೆ. ವೃತ್ತಿಗೆ ಸೇರಿದ ಬಳಿಕ ಶಿಕ್ಷಕರು ಅಧ್ಯಯನ ಪ್ರವೃತ್ತಿ ಯನ್ನೇ ಮರೆತು ಬಿಡುತ್ತಾರೆ. ಆಸಕ್ತಿಯೂ ಕಡಿಮೆಯಾಗುತ್ತಿದೆ ಎಂದರು.ಇದು ಶೈಕ್ಷಣಿಕ ವ್ಯವಸ್ಥೆಯನ್ನು ಹದಗೆಡಿಸುತ್ತಿದೆ. ಮಕ್ಕಳು ಸರ್ಕಾರಿ ಶಾಲೆಯಿಂದ ವಿಮುಖರಾಗಲು ಶಿಕ್ಷಕರ ಜ್ಞಾನಮಟ್ಟದಲ್ಲಾದ ಕುಸಿತವೂ ಕಾರಣ. ಸರ್ಕಾರಿ ಶಾಲೆಗಳ ಕುರಿತು ಪೋಷಕರಲ್ಲಿ ಭಯವಿದೆ. ಮಕ್ಕಳಲ್ಲಿ ಅಂಜಿಕೆ ಮೂಡಿದೆ. ಕಲಿಯುವ ವಾತಾವರಣ ಶೂನ್ಯವಾಗಿದ್ದು, ಮೂಲ ಸೌಲಭ್ಯಗಳ ಕೊರತೆ ಬಾಧಿಸುತ್ತಿದೆ. ಕುಡಿಯುವ ನೀರು, ಶೌಚಾಲಯ, ಸ್ವಚ್ಛತೆ ಸರ್ಕಾರಿ ಶಾಲೆಯಲ್ಲಿ ಕಾಣೆಯಾಗಿವೆ. ಹೀಗಾಗಿ ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ಎದುರಾಗಿದೆ ಎಂದು ಹೇಳಿದರು.ದೇಶದಲ್ಲಿ 80 ಲಕ್ಷ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಶಾಲೆಗೆ ದಾಖಲಾಗುವ ಮಕ್ಕಳ ಪೈಕಿ ಶೇ 45 ವಿದ್ಯಾರ್ಥಿಗಳು ಪ್ರೌಢಶಾಲೆ ಪ್ರವೇಶಿ ಸುತ್ತಿಲ್ಲ. ಎಲ್ಲ ಕ್ಷೇತ್ರದ ವೃತ್ತಿಪರರನ್ನು ಸೃಷ್ಟಿಸುವ ಶಿಕ್ಷಕರ ಮೇಲೆ ಗುರುತರ ಜವಾಬ್ದಾರಿ ಇದೆ. ಶಿಕ್ಷಕ ವೃತ್ತಿಯ ಗೌರವ ಕಾಪಾಡುವ ಹೊಣೆ ಬೋಧಕ ವರ್ಗದ ಮೇಲಿದೆ. ವೃತ್ತಿಪರ ಕೌಶಲ ಮೈಗೂಡಿಸಿಕೊಂಡು ಮಕ್ಕಳ ಏಳಿಗೆಗಾಗಿ ಶ್ರಮಿಸ ಬೇಕು. ಈ ಸಂಬಂಧ ಅಜೀಂ ಪ್ರೇಮ್‌ಜಿ ಫೌಂಡೇಷನ್ ಜತೆಗೆ ರಾಜ್ಯ ಸರ್ಕಾರ ಶಿಕ್ಷಕರಿಗೆ ತರಬೇತಿ ನೀಡುತ್ತಿದೆ. ಇದರ ಪ್ರತಿಫಲ ಇನ್ನಷ್ಟೇ ಲಭಿಸಬೇಕು ಎಂದರು.ಎನಪೋಯಾ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಸೈಯದ್ ಅಖಿಲ್ ಅಹಮ್ಮದ್, ಪ್ರೊ.ಎಂ.ಕೃಷ್ಣೇ ಗೌಡ, ಜ್ಞಾನಬುತ್ತಿ ಬಳಗದ ಶಿಕ್ಷಣ ತರಬೇತಿ ವಿಭಾಗದ ಅಧ್ಯಕ್ಷ ಎಚ್.ಎಸ್. ಮಲ್ಲಿಕಾರ್ಜುಶಾಸ್ತ್ರಿ, ಜ್ಞಾನಬುತ್ತಿ ಸಂಚಾಲಕ ಜೈನಹಳ್ಳಿ ಸತ್ಯನಾರಾಯಣ ಹಾಜರಿದ್ದರು.

ಪ್ರತಿಕ್ರಿಯಿಸಿ (+)