ಭಾನುವಾರ, ಏಪ್ರಿಲ್ 11, 2021
25 °C

ವಿದ್ಯಾರ್ಥಿಗಳ ಪರಿಸರ ಕಾಳಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉತ್ತಮ ಉದ್ಯಾನ ನಿರ್ಮಾಣ ಮತ್ತು ನಿರ್ವಹಣೆಗೆ `ಪರಿಸರ ಮಿತ್ರ~ ಪ್ರಶಸ್ತಿ ಪಡೆದಿರುವ ಗೌರಿಬಿದನೂರು ತಾಲ್ಲೂಕಿನ ನಕ್ಕಲಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಒಮ್ಮೆ ಭೇಟಿ ನೀಡಲೇಬೇಕು.ಇಲ್ಲಿನ ವಾತಾವರಣ ಮನಸ್ಸಿಗೆ ಉಲ್ಲಾಸ ಮತ್ತು ಉತ್ಸಾಹ ನೀಡಲು ಕಾರಣ ಈ ಶಾಲೆಯ ವಿದ್ಯಾರ್ಥಿಗಳು. ಉದ್ಯಾನದಲ್ಲಿ ಬೆಳೆದಿರುವ ಸಣ್ಣಪುಟ್ಟ ಗಿಡಗಳನ್ನು ಮತ್ತು ಹೂವುಗಳನ್ನು ಸ್ನೇಹಿತರಂತೆ ಆರಾಧಿಸುವ ಮತ್ತು ಆರೈಕೆ ಮಾಡುವ ವಿದ್ಯಾರ್ಥಿಗಳತ್ತ ಗಮನಹರಿಯದೇ ಇರುವುದಿಲ್ಲ.ಪಠ್ಯಪುಸ್ತಕದ ಜೊತೆಗೆ ಪರಿಸರ ಪಾಠವೂ ಮುಖ್ಯ ಎಂಬ ಅಭಿಪ್ರಾಯವನ್ನು ಹೊಂದಿರುವ ಈ ಶಾಲೆ ಮುಖ್ಯಶಿಕ್ಷಕರು ಮತ್ತು ಸಹಶಿಕ್ಷಕರು ಪರಿಸರ ಪಾಠಕ್ಕೂ ಸಮಾನವಾದ ಆದ್ಯತೆ ನೀಡುತ್ತಾರೆ. ಈ ಕಾರಣದಿಂದಲೇ ಅಗತ್ಯ ಸಹಕಾರ ಮತ್ತು ಮಾರ್ಗದರ್ಶದನ ಮೂಲಕ ಮಕ್ಕಳಿಂದಲೇ ಉದ್ಯಾನ ನಿರ್ಮಿಸಿ, ಅವರಿಂದಲೇ ನಿರ್ವಹಣೆ ಸಹ ನಡೆಯುತ್ತಿದೆ.ಸಸಿಗಳನ್ನು ನೆಡುವುದರಲ್ಲಿ ಮತ್ತು ನಳನಳಿಸುವ ಹೂಗಳನ್ನು ಬೆಳೆಸುವುದರಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಮಕ್ಕಳು ದೈನಂದಿನ ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳಲ್ಲೂ ಮುಂದು.ಉತ್ತಮ ಶಿಕ್ಷಣಕ್ಕೆ ಪೂರಕವಾಗಬಲ್ಲ ವಾತಾವರಣವೂ ಇಲ್ಲಿದೆ. ಶಾಲಾ ಆವರಣದ ಸುತ್ತಲೂ ಎತ್ತರವಾದ ಗೋಡೆ ಹಾಗೂ ಗ್ರಂಥಾಲಯದ ಸೌಲಭ್ಯವಿದೆ.ಕುಡಿಯುವ ನೀರಿಗಾಗಿ ನೀರು ಶುದ್ಧೀಕರಣ ಸಾಧನವಿದ್ದು, ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆಯಿದೆ. ಅಷ್ಟೇ ಅಲ್ಲ, ಅಂಗವಿಕಲ ಮಕ್ಕಳಿಗೆ ತೊಂದರೆಯಾಗದಿರಲೆಯೆಂದು ವಿಶೇಷ ಶೌಚಾಲಯ ಸೌಲಭ್ಯ ಕಲ್ಪಿಸಲಾಗಿದೆ.ಶುಚಿ ಮತ್ತು ಹಸಿರಾದ ಪರಿಸರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ.ಜ್ಞಾನ ವೃದ್ಧಿಗಾಗಿ ವಾರ್ಷಿಕ ಪ್ರವಾಸ ಕೈಗೊಳ್ಳುವುದರ ಜೊತೆಗೆ ವಿದ್ಯಾರ್ಥಿಗಳನ್ನು ಸಮೀಪದ ಯಲ್ಲೋಡು ಆದಿನಾರಾಯಣ ಬೆಟ್ಟ , ಭೀಮೇಶನಬೆಟ್ಟ, ಗೊಟ್ಲಗುಂಟೆ ರಾಮದೇವರ ಬೆಟ್ಟ ಮುಂತಾದ ಕಡೆ ಕರೆದೊಯ್ಯಲಾಗುತ್ತದೆ. ಅಲ್ಲಿನ ಪರಿಸರ, ಕಲ್ಲು ಬಂಡೆ, ಗಿಡಮೂಲಿಕೆಗಳ ಬಗ್ಗೆ  ಶಿಕ್ಷಕರೇ ವಿವರಣೆ ನೀಡುತ್ತಾರೆ.ಕಲಾ, ವಿಜ್ಞಾನ, ಗಣಿತ, ಕ್ರೀಡಾ ಸಂಘಗಳನ್ನು  ರಚಿಸಲಾಗಿದ್ದು, ಆಯಾ ಸಂಘಗಳ ಮೂಲಕ ಚರ್ಚಾಸ್ಪರ್ಧೆ, ಪ್ರಬಂಧ ಸ್ಪರ್ಧೆ, ಆಶುಭಾಷಣ ಸ್ಪರ್ಧೆ, ಏಕಪಾತ್ರಾಭಿನಯ, ಚಿತ್ರಕಲೆ ಸ್ಪರ್ಧೆ ನಡೆಸಲಾಗುತ್ತದೆ.`ಶಾಲೆಯಲ್ಲಿ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದೇವೆ. ಸಕಾರಣವಿಲ್ಲದೇ ಗೈರುಹಾಜರಾಗಲು ವಿದ್ಯಾರ್ಥಿಗಳಿಗೆ ಅವಕಾಶ ನೀಡುವುದಿಲ್ಲ. ಒಂದು ವೇಳೆ ಗೈರುಹಾಜರಾದಲ್ಲಿ, ಆ ವಿದ್ಯಾರ್ಥಿ ತನ್ನ ಪೋಷಕರನ್ನು ಶಾಲೆಗೆ ಕರೆತರಬೇಕು. ಪೋಷರನ್ನು ಭೇಟಿ ಮಾಡಿದ ನಂತರವೇ ವಿದ್ಯಾರ್ಥಿಗಳಿಗೆ ತರಗತಿಯೊಳಗೆ ಪ್ರವೇಶ. ಇದು ನಮ್ಮ ಶಾಲೆಯ ಕಡ್ಡಾಯ ನಿಯಮಗಳಲ್ಲೊಂದು. ಇದು ಕೇವಲ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಎಂದು ಶಿಕ್ಷಕ ಶ್ರೀಧರ್ ತಿಳಿಸಿದರು.`ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ಅರಿವು ಮೂಡಿಸಲು ವರ್ಷಕ್ಕೆ ಎರಡು ಬಾರಿ ಮಕ್ಕಳಿಂದಲೇ ಅಣಕು ಸಂಸತ್ತು ಮತ್ತು ಅಣಕು ಮತದಾನ ಮಾಡಿಸುತ್ತೇವೆ. ಶಾಲೆಯ ಉದ್ಯಾನದಲ್ಲಿ ಬೆಳೆದ ತರಕಾರಿಯನ್ನೇ ಮಧ್ಯಾಹ್ನದ ಬಿಸಿಯೂಟಕ್ಕೆ ಬಳಸುತ್ತೇವೆ. ನಮ್ಮ ಶಾಲೆಯ ವಿದ್ಯಾರ್ಥಿಗಳು ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲೂ ಬಹುಮಾನಗಳನ್ನು ಗಳಿಸಿದ್ದಾರೆ~ ಎಂದು ಶಾಲೆಯ ಮುಖ್ಯ ಶಿಕ್ಷಕ ನೂರುಲ್ಲಾ ಸಾಹೇಬ್ ತಿಳಿಸಿದರು.   

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.