ಮಂಗಳವಾರ, ಆಗಸ್ಟ್ 20, 2019
21 °C

ವಿದ್ಯಾರ್ಥಿಗಳ ಬಳಿಗೆ `ಕೌಶಲ ಯಾನ'

Published:
Updated:

ಮೈಸೂರು: ನಗರದ ಮಾನಸಗಂಗೋತ್ರಿಯ ಕೇಂದ್ರವೊಂದರಲ್ಲಿ ಕ್ಯಾಂಪಸ್ ಸಂದರ್ಶನ ನಡೆಯಿತು. ಅಲ್ಲಿ ಸಂದರ್ಶನಕ್ಕೆ ಹಾಜರಾದವರು ಅನೇಕರು. ಮೊದಲು ಎದುರಿಸಿದ ಪ್ರಶ್ನೆ ಎಂದರೆ ಸ್ವವಿವರ ಬರೆದುದು ಸರಿಯಾಗಿಲ್ಲ. ಜತೆಗೆ, ಸಂದರ್ಶನವನ್ನು ಕೂಡಾ ಸರಿಯಾಗಿ ಎದುರಿಸಲಿಲ್ಲ. ಹೀಗಾಗಿ, ಉದ್ಯೋಗಕ್ಕೆ ಆಯ್ಕೆಯಾಗದೆ ಸಪ್ಪೆ ಮುಖ ಮಾಡಿಕೊಂಡು ತೆರಳಿದವರೇ ಹೆಚ್ಚು. ಹೀಗಾಗಿ, ಸ್ವವಿವರ ಬರೆಯುವುದು ಹೇಗೆ?ಸಂದರ್ಶನ ಎದುರಿಸುವುದು ಹೇಗೆ? ಇದು ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದವರು ಎದುರಿಸುತ್ತಿರುವ ಸಮಸ್ಯೆ.

ಈ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಮಾನಸಗಂಗೋತ್ರಿಯಲ್ಲಿಯ ಸಿಪಿಡಿಪಿಎಸ್ (ಸಾಮರ್ಥ್ಯಾಭಿವೃದ್ಧಿ ಮತ್ತು ಉದ್ಯೋಗಾವಕಾಶಗಳ ಸೇವಾ ಕೇಂದ್ರ) ಸ್ವವಿವರ ಬರೆಯುವುದು ಹೇಗೆ? ಸಂದರ್ಶನ ಎದುರಿಸುವುದು ಹೇಗೆ? ಬದುಕಿನಲ್ಲಿ ಉತ್ಕೃಷ್ಠತೆ ಹೇಗೆ ಸಾಧಿಸಬೇಕು, ವೇಳೆ ಹಾಗೂ ಒತ್ತಡವನ್ನು ಹೇಗೆ ನಿಭಾಯಿಸಬೇಕು, ಮನುಷ್ಯ ಸಂಬಂಧಗಳನ್ನು ಹೇಗೆ ಸುಧಾರಿಸಬೇಕು ಎನ್ನುವ ತರಬೇತಿಯ ಜತೆಗೆ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿ ಜೀವನ ಕೌಶಲ ತರಬೇತಿ ನೀಡುತ್ತಿದೆ. ಇದರ ಲಾಭವನ್ನು ಮೈಸೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು, ಡಿಪ್ಲೊಮಾ, ಸಂಶೋಧನ ವಿದ್ಯಾರ್ಥಿಗಳು ಪಡೆಯುತ್ತಿದ್ದಾರೆ. ಇದಕ್ಕಾಗಿ ವಿದ್ಯಾರ್ಥಿಗಳು ಮಾನಸಗಂಗೋತ್ರಿಯಲ್ಲಿಯ ಸಿಪಿಡಿಪಿಎಸ್ ಕೇಂದ್ರಕ್ಕೆ ಹಾಜರಾಗಬೇಕು. ಹೊಸ ಯೋಜನೆ ಎಂದರೆ; ಎಲ್ಲ ವಿದ್ಯಾರ್ಥಿಗಳು ಮೈಸೂರಿಗೆ ಬರಲು ಸಾಧ್ಯವಾಗದು. ಇದಕ್ಕಾಗಿ ವಿದ್ಯಾರ್ಥಿಗಳ ಬಳಿಗೇ `ಕೌಶಲ ಯಾನ' ಆಗಸ್ಟ್ 5, 6, 7 ಹಾಗೂ 8ರಂದು ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ಸರಣಿಯು ಮೈಸೂರು, ಹಾಸನ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ನಡೆಯಲಿದೆ.

ಅಂತಿಮ ವರ್ಷದ ಪದವಿಯಲ್ಲಿ ಅಥವಾ ಸ್ನಾತಕೋತ್ತರ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ 30 ವಿದ್ಯಾರ್ಥಿಗಳು ತರಬೇತಿಯಲ್ಲಿ ಭಾಗವಹಿಸುತ್ತಾರೆ. ಉಳಿದ ವಿದ್ಯಾರ್ಥಿಗಳು ಮತ್ತೆ ನಡೆಯುವ ತರಬೇತಿಯಲ್ಲಿ ಭಾಗವಹಿಸುವ ಅವಕಾಶ ಪಡೆಯುತ್ತಾರೆ. ಹೀಗೆ ವರ್ಷದುದ್ದಕ್ಕೂ ನಡೆಯುತ್ತದೆ. ಈ ಕುರಿತು `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಸಿಪಿಡಿಪಿಎಸ್ ನಿರ್ದೇಶಕ ಡಾ.ನಿರಂಜನ ವಾನಳ್ಳಿ, ಇದುವರೆಗೆ ವಿದ್ಯಾರ್ಥಿಗಳೇ ಇಲ್ಲಿಗೆ ಬರಲು ಕಾಯುತ್ತಿದ್ದೆವು. ಆದರೆ, ಮೈಸೂರಿಗೆ ಸೀಮಿತವಾಗಬಾರದು ಎನ್ನುವ ಕಾರಣಕ್ಕೆ ವಿದ್ಯಾರ್ಥಿಗಳ ಬಳಿ ಹೋಗುತ್ತಿದ್ದೇವೆ ಎಂದರು.`ಪದವಿ, ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳಿಗೂ ಸ್ವವಿವರ (ಬಯೋಡಾಟಾ)ವನ್ನು ಸರಿಯಾಗಿ ಸಿದ್ಧಗೊಳಿಸಲು ಬರದು. ಸಂದರ್ಶನಕ್ಕೆ ಸಿದ್ಧತೆಗಳಿರುವುದಿಲ್ಲ. ಇದಕ್ಕಾಗಿ ಒಟ್ಟು ಎರಡೂವರೆ ಗಂಟೆ ಕಾರ್ಯಕ್ರಮದಲ್ಲಿ ತರಬೇತಿಯ ಮೂಲಕ ಟ್ಯೂನ್ ಮಾಡುತ್ತೇವೆ. ಒಟ್ಟು ನಾಲ್ಕು ದಿನಗಳಲ್ಲಿ ಎಂಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ.ಇದು ಮೊದಲ ಹಂತದ ಕಾರ್ಯಕ್ರಮ. ಇನ್ನು ಮುಂದೆ ಪ್ರತಿ ತಿಂಗಳು ವಿವಿ ವ್ಯಾಪ್ತಿಯಲ್ಲಿಯ ಕಾಲೇಜುಗಳಲ್ಲಿ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ಸರಣಿ ಮುಂದುವರಿಯುತ್ತದೆ' ಎಂದು ಅವರು ತಿಳಿಸಿದರು.`ಯುಜಿಸಿಯ ಯುಪಿಇ ಯೋಜನೆಯಡಿ ರೂ 50 ಕೋಟಿ ಮೈಸೂರು ವಿವಿಗೆ ಮಂಜೂರಾಗಿದೆ. ಇದರಲ್ಲಿ ಸಿಪಿಡಿಪಿಎಸ್‌ಗೆ ಎರಡು ಕೋಟಿ ರೂಪಾಯಿ ನೀಡಲಾಗಿದೆ. ಇದುವರೆಗೆ ನುಡಿಚಿತ್ರ ಬರವಣಿಗೆ ಶಿಬಿರ, ಮೂರು ವಾರಗಳವರೆಗೆ ನಿರೂಪಣಾ ಕೌಶಲ ಶಿಬಿರ, ನೆಟ್ ಪರೀಕ್ಷಾ ತರಬೇತಿ, ವ್ಯಕ್ತಿತ್ವ ವಿಕಸನ ತರಬೇತಿ, ಇಂಗ್ಲಿಷ್ ಸಂವಹನ ತರಬೇತಿ, ಮಾಧ್ಯಮ ಸಂಬಂಧಿ ಭಾಷಾಂತರವನ್ನು ತರಗತಿಯ ಮೂಲಕ ತರಬೇತಿ ನೀಡುತ್ತಿದ್ದೇವೆ. ಇವುಗಳನ್ನು ಇನ್ನು ಮುಂದೆ ಆಯೋಜಿಸುವ ಕಾಲೇಜುಗಳಲ್ಲಿ ಮುಂದುವರಿಸುತ್ತೇವೆ' ಎನ್ನುವ ಭರವಸೆಯನ್ನು ವಾನಳ್ಳಿ ನೀಡಿದರು.

ಎಲ್ಲೆಲ್ಲಿ ಯಾನ..?

ಆ.5ರಂದು ಬೆಳಿಗ್ಗೆ 10 ಗಂಟೆಗೆ ಹುಣಸೂರಿನ ಡಿ. ದೇವರಾಜ ಅರಸು ಸರ್ಕಾರಿ ಪ್ರಥಮದರ್ಜೆ ಕಾಲೇಜು, ಮಧ್ಯಾಹ್ನ 2.30 ಗಂಟೆಗೆ ಹುಣಸೂರಿನ ಮಹಿಳಾ ಸರ್ಕಾರಿ ಪ್ರಥಮದರ್ಜೆ ಕಾಲೇಜು.ಆ.6ರಂದು ಬೆಳಿಗ್ಗೆ 10 ಗಂಟೆಗೆ ಕೆ.ಆರ್. ನಗರ ತಾಲ್ಲೂಕಿನ ಸಾಲಿಗ್ರಾಮದ ಸರ್ಕಾರಿ ಪ್ರಥಮದರ್ಜೆ ಕಾಲೇಜು, ಮಧ್ಯಾಹ್ನ 2.30 ಗಂಟೆಗೆ ಕೆ.ಆರ್. ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜು.ಆ.7ರಂದು ಬೆಳಿಗ್ಗೆ 10 ಗಂಟೆಗೆ ಚಾಮರಾಜನಗರ ಜಿಲ್ಲೆಯ ಹನೂರು ಸರ್ಕಾರಿ ಪ್ರಥಮದರ್ಜೆ ಕಾಲೇಜು, ಮಧ್ಯಾಹ್ನ 2.30 ಗಂಟೆಗೆ ಕೊಳ್ಳೇಗಾಲದ ಮಲೆಮಹದೇಶ್ವರ ಸರ್ಕಾರಿ ಪ್ರಥಮದರ್ಜೆ ಕಾಲೇಜು.ಆ.8ರಂದು ಬೆಳಿಗ್ಗೆ 10 ಗಂಟೆಗೆ ಹಾಸನ ಜಿಲ್ಲೆಯ ಹೊಳೆನರಸೀಪುರ ಮಹಿಳಾ ಸರ್ಕಾರಿ ಪ್ರಥಮದರ್ಜೆ ಕಾಲೇಜು, ಮಧ್ಯಾಹ್ನ 2.30 ಗಂಟೆಗೆ ಹೊಳೆನರಸೀಪುರದ ಸರ್ಕಾರಿ ಪ್ರಥಮದರ್ಜೆ ಕಾಲೇಜು.

Post Comments (+)