ವಿದ್ಯಾರ್ಥಿಗಳ ಶೈಕ್ಷಣಿಕ ದತ್ತು: ಗ್ರಾಮೀಣರಿಗೆ ಉಚಿತ ತಾಂತ್ರಿಕ ಶಿಕ್ಷಣ

7

ವಿದ್ಯಾರ್ಥಿಗಳ ಶೈಕ್ಷಣಿಕ ದತ್ತು: ಗ್ರಾಮೀಣರಿಗೆ ಉಚಿತ ತಾಂತ್ರಿಕ ಶಿಕ್ಷಣ

Published:
Updated:

ಬೆಂಗಳೂರು: ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ತಾಂತ್ರಿಕ ಶಿಕ್ಷಣವನ್ನು ಉಚಿತವಾಗಿ ನೀಡಿ, ಅವರಿಗೆ ಖಾತರಿ ಉದ್ಯೋಗವನ್ನು ಒದಗಿಸಿ ಸ್ವಾವಲಂಬಿಗಳನ್ನಾಗಿ ಮಾಡುವ ಉದ್ದೇಶದಿಂದ ವಿಧಾನ ಪರಿಷತ್ ಸದಸ್ಯ ದಯಾನಂದ ಅವರು `ದಯಾನಂದ ಎಜುಕೇಷನಲ್ ಅಂಡ್ ಎಂಪ್ಲಾಯ್‌ಮೆಂಟ್ ಫೋರಂ' ಎಂಬ ಸಂಸ್ಥೆಯನ್ನು ಅಸ್ತಿತ್ವಕ್ಕೆ ತಂದಿದ್ದಾರೆ.ತಮ್ಮ ಜನ್ಮ ದಿನಾಚರಣೆ ಅಂಗವಾಗಿ ಹೊಸೂರು ರಸ್ತೆಯಲ್ಲಿ ಗುರುವಾರ ಏರ್ಪಡಿಸಿದ್ದ ಶಾಲಾ ಮಕ್ಕಳ ಶೈಕ್ಷಣಿಕ ದತ್ತು ಸ್ವೀಕಾರ ಕಾರ್ಯಕ್ರಮದಲ್ಲಿ ಈ ವಿಷಯ ತಿಳಿಸಿದ ದಯಾನಂದ ಅವರು, `ನಮ್ಮ ಸಂಸ್ಥೆಯ ವತಿಯಿಂದ 2010-11ನೇ ಸಾಲಿನಲ್ಲಿ ಆನೇಕಲ್ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆಯ 8 ತರಗತಿಯ 1500 ವಿದ್ಯಾರ್ಥಿಗಳನ್ನು ದತ್ತು ಪಡೆಯಲಾಗಿದೆ. ಪ್ರಸಕ್ತ ಸಾಲಿನಲ್ಲಿ ಅಷ್ಟೇ ಸಂಖ್ಯೆಯ ವಿದ್ಯಾರ್ಥಿಗಳನ್ನು ದತ್ತು ಪಡೆಯಲಾಗಿದೆ' ಎಂದರು.`ದತ್ತು ಪಡೆದ ಮಕ್ಕಳ ಸಂಪೂರ್ಣ ಶಿಕ್ಷಣ ವೆಚ್ಚವನ್ನು ಸಂಸ್ಥೆಯ ವತಿಯಿಂದಲೇ ಭರಿಸಲಾಗುವುದು. 10ನೇ ತರಗತಿಯಲ್ಲಿ ತೇರ್ಗಡೆಯಾಗಿ ತಾಂತ್ರಿಕ ಶಿಕ್ಷಣವನ್ನು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ 2013-14 ನೇ ಸಾಲಿನಿಂದ ಉಚಿತ ತಾಂತ್ರಿಕ ಶಿಕ್ಷಣವನ್ನು ಸಹ ನೀಡಲಾಗುವುದು.`ಎಲೆಕ್ಟ್ರಾನಿಕ್ ಸಿಟಿ ಹಾಗೂ ಸುತ್ತಲಿನ ಕೈಗಾರಿಕಾ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚಾಗಿವೆ. ಆದರೆ, ಅದಕ್ಕೆ ಬೇಕಾದ ಶೈಕ್ಷಣಿಕ ಅರ್ಹತೆ ಇಲ್ಲದ ಕಾರಣ ಈ ಉದ್ಯೋಗಾವಕಾಶಗಳು ಬೇರೆ ರಾಜ್ಯದ ಅಭ್ಯರ್ಥಿಗಳ ಪಾಲಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕೈಗಾರಿಕಾ ಪ್ರದೇಶಗಳ ಒಂದು ಸಮೀಕ್ಷೆಯನ್ನು ನಡೆಸಲಾಗಿದ್ದು, ಮುಂದಿನ ಮೂರು ವರ್ಷಗಳ ನಂತರ ಸಿಗುವ ಉದ್ಯೋಗಾವಕಾಶಗಳು ಯಾವುವು ಎಂಬುದನ್ನು ಗುರುತಿಸಲಾಗಿದೆ. ಅದಕ್ಕೆ ಬೇಕಾದ ಅರ್ಹತೆಯನ್ನು ಪಡೆಯುವುದು ಹೇಗೆ ಎಂಬುದನ್ನು ಕಂಡುಕೊಳ್ಳಲಾಗಿದೆ. ವಿದ್ಯಾರ್ಥಿಗಳಿಗೆ ಅದರ ಬಗ್ಗೆ ಮಾಹಿತಿ ನೀಡಿ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವಂತೆ ಮಾಡುತ್ತಿದ್ದೇವೆ' ಎಂದು ಅವರು ವಿವರಿಸಿದರು.ಪರಿಸರ ಪ್ರಜ್ಞೆ ಮೂಡಿಸಲು ಪ್ರತಿ ವಿದ್ಯಾರ್ಥಿಯಿಂದಲೂ ಸಸಿ ನಡೆಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದೇ ವೇಳೆ 150 ಅಂಗವಿಕಲ ಮಕ್ಕಳಿಗೆ ತ್ರಿಚಕ್ರ ಮೊಪೆಡ್ ವಾಹನ ವಿತರಿಸಲಾಯಿತು. ಶಿಕ್ಷಕರನ್ನು ಸನ್ಮಾನಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry