ಸೋಮವಾರ, ನವೆಂಬರ್ 18, 2019
24 °C

`ವಿದ್ಯಾರ್ಥಿಗಳ ಸುಪ್ತ ಪ್ರತಿಭೆ ಅನಾವರಣಗೊಳ್ಳಲಿ'

Published:
Updated:

ಚಿಕ್ಕಮಗಳೂರು: ವಿದ್ಯಾರ್ಥಿಗಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆ ಹೊರ ತರಲು ಸಾಂಸ್ಕೃತಿಕ, ಕ್ರೀಡೆ ಮತ್ತು ಸೇವಾ ಯೋಜನೆ ಕಾರ್ಯಗಳು ಸಹಕಾರಿ ಯಾಗಿವೆ ಎಂದು ನಿವೃತ್ತ ಉಪನ್ಯಾಸಕ ಹಾಗೂ ಸಾಹಿತಿ ತಿಪ್ಪೇರುದ್ರಪ್ಪ ಅಭಿಪ್ರಾಯಪಟ್ಟರು.ಎಸ್‌ಟಿಜೆ ಮಹಿಳಾ ಪದವಿ ಕಾಲೇಜಿನಲ್ಲಿ ಸೋಮವಾರ ನಡೆದ ಸಾಂಸ್ಕೃತಿಕ, ಕ್ರೀಡಾ ಮತ್ತು ಎನ್‌ಎಸ್‌ಎಸ್ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಕೆ.ಎನ್.ಶಿವಣ್ಣ ಮಾತನಾಡಿ, ಕಾಲೇಜಿನಲ್ಲಿರುವ ಸೌಲಭ್ಯಗಳನ್ನು ಉತ್ತಮವಾಗಿ ಬಳಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಗುಣಾತ್ಮಕ ಶಿಕ್ಷಣ ಕಲಿಯಬೇಕು ಎಂದರು.ನಗರಸಭೆ ಸದಸ್ಯ ಎಚ್.ಡಿ.ತಮ್ಮಯ್ಯ ಮತ್ತು ಭಾರತಿ ಶಿವರುದ್ರಪ್ಪ ಅವರು ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು.

2011-12ನೇ ಸಾಲಿನಲ್ಲಿ ಕುವೆಂಪು ವಿಶ್ವವಿದ್ಯಾನಿಲಯದ ಅಂತಿಮ ಬಿ.ಎ. ಪರೀಕ್ಷೆಯಲ್ಲಿ 3ನೇ ರ‌್ಯಾಂಕ್ ಪಡೆದಿರುವ ಪ್ರಗತಿಗೆ ಬೆಳ್ಳಿ ಪದಕ ನೀಡುವುದರ ಮೂಲಕ ಪ್ರಾಂಶುಪಾಲರು ಸನ್ಮಾನಿಸಿದರು.ಪದವಿ ಬಿ.ಎ. ಮತ್ತು ಬಿ.ಕಾಂ ತರಗತಿಗಳಲ್ಲಿ ಅತೀ ಹೆಚ್ಚು ಅಂಕ ಪಡೆದವರಿಗೆ ನಗದು ಬಹುಮಾನ ನೀಡಲಾಯಿತು. ತರಳಬಾಳು ಜಗದ್ಗುರು ವಿದ್ಯಾ ಸಂಸ್ಥೆ ನಡೆಸುವ ವಚನ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದ ನಾಲ್ಕು ವಿದ್ಯಾರ್ಥಿನಿಯರಿಗೆ ಸಂಸ್ಥೆ ವತಿಯಿಂದ ನಗದು ಬಹುಮಾನ ನೀಡಲಾಯಿತು.ಉಪನ್ಯಾಸಕರಾದ ಬಿ.ಸಿ.ವಿಜಯ್‌ಕುಮಾರ್, ಪ್ರೊ.ಎಂ.ಹನುಮಂತಪ್ಪ, ಪ್ರೊ.ಎಚ್.ಎಂ.ಅಂಬುಜಾಕ್ಷಿ, ಆರ್.ಎಸ್.ದಿವ್ಯ ಇದ್ದರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿದರು.

ಪ್ರತಿಕ್ರಿಯಿಸಿ (+)