ಸೋಮವಾರ, ಮೇ 25, 2020
27 °C

ವಿದ್ಯಾರ್ಥಿಗಳ ಸ್ವ ಮೌಲ್ಯಮಾಪನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿದ್ಯಾರ್ಥಿಗಳ ಸ್ವ ಮೌಲ್ಯಮಾಪನ

ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಬೋಧನೆ ಮತ್ತು ಕಲಿಕೆಗಳು ತಮ್ಮದೇ ಆದ ಪಾತ್ರವನ್ನು ವಹಿಸುತ್ತವೆ. ಬೋಧನೆ ಪರಿಣಾಮಕಾರಿಯಾದಾಗ ಮಾತ್ರ ಕಲಿಕೆ ನೀರೀಕ್ಷಿತ ಫಲವನ್ನು ಕೊಡುತ್ತದೆ. ಬೋಧನೆಯ ಫಲಶ್ರುತಿಯನ್ನು ಅರಿಯಲು ಹಲವಾರು ವಿಧಾನಗಳನ್ನು ಅನುಸರಿಸುತ್ತೇವೆ. ಈ ವಿಧಾನಗಳ ಎಲ್ಲಾ ಪ್ರಕ್ರಿಯೆಗಳನ್ನು ಮೌಲ್ಯಮಾಪನ ಎಂದು ಸರಳವಾಗಿ ಹೇಳುತ್ತೇವೆ.ಶಿಕ್ಷಣ ಮತ್ತು ಮೌಲ್ಯಮಾಪನಗಳು ಒಂದಕ್ಕೊಂದು ಪೂರಕವಾಗಿವೆ. ಮಕ್ಕಳ ಬೆಳವಣಿಗೆಯ ಸಮಗ್ರ ವಿಕಾಸವನ್ನು ಸರ್ವ ರೀತಿಯಲ್ಲಿ ಅಳೆಯುವುದೇ ಶೈಕ್ಷಣಿಕ ಮೌಲ್ಯಮಾಪನ. ನಾವು ಸಾಮಾನ್ಯವಾಗಿ ಮೌಲ್ಯಮಾಪನ ಎಂದರೆ ಮಕ್ಕಳಿಂದ ಕೆಲ ಪ್ರಶ್ನೆಗಳಿಗೆ ಉತ್ತರ ಹೇಳಿಸುವುದು ಅಥವಾ ಬರೆಸುವ ಪರೀಕ್ಷೆಗೆ ಸೀಮಿತಗೊಳಿಸಿದ್ದೇವೆ. ಇದನ್ನು ಅಳತೆಗೆ ಸಮಾನವಾಗಿ ಬಳಸುತ್ತಿದ್ದೇವೆ. ಇದು ಸರಿಯಾದ ಕಲ್ಪನೆ ಅಲ್ಲ. ಅಳತೆಯು ನಿರ್ದಿಷ್ಟ ಭಾಗಕ್ಕೆ ಮಾತ್ರ ಸೀಮಿತವಾಗುತ್ತದೆ. ಆದರೆ ಮೌಲ್ಯಮಾಪನದ ವ್ಯಾಪ್ತಿ ಬಹಳ ವಿಶಾಲತೆ ಪಡೆದಿದೆ.ಸಮಗ್ರ ಪರಿಕಲ್ಪನೆ

ಮೌಲ್ಯಮಾಪನವು ಪಠ್ಯವಸ್ತುವನ್ನಷ್ಟೆ ಅಲ್ಲದೇ ವಿದ್ಯಾರ್ಥಿಗಳ ಸಾಧನೆ, ಅಭಿರುಚಿ, ಚಿಂತನೆ, ಬುದ್ಧಿಶಕ್ತಿ, ಸಾಮರ್ಥ್ಯ ಹಾಗೂ ಕೌಶಲಗಳನ್ನು ಅಳೆಯುವ ಮಾಪನ. ಹಾಗಾಗಿ ಇದು ಒಂದು ಸಮಗ್ರ ಪರಿಕಲ್ಪನೆಯಾಗಿದ್ದು, ಪರೀಕ್ಷೆಗಿಂತ ಭಿನ್ನವಾದ, ವಿಶಾಲವಾದ ಅರ್ಥವನ್ನು ನೀಡುತ್ತದೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯನ್ನು ಎಲ್ಲಾ ದೃಷ್ಟಿಕೋನಗಳಿಂದ ಗಮನಿಸುತ್ತಾ ಪ್ರಗತಿಯನ್ನು ಗುರುತಿಸುವುದು ನಿಜವಾದ ಮೌಲ್ಯಮಾಪನ.ಮೌಲ್ಯಮಾಪನವು ವಿವಿಧ ತಂತ್ರಗಳ ಮೂಲಕ ಮಕ್ಕಳಿಗೆ ಹೊರೆ ಎನಿಸದಂತಿರಬೇಕು. ಮಕ್ಕಳ ಪೂರ್ವ ಜ್ಞಾನವನ್ನು ಅದರಿಂದ ಸ್ಪಷ್ಟವಾಗಿ ಗುರುತಿಸಲು ಸಾಧ್ಯವಾಗಬೇಕು. ಮಕ್ಕಳಲ್ಲಿ ಕಲಿಕೆಯನ್ನು ಉಂಟುಮಾಡಲು ಮತ್ತು ಮಕ್ಕಳು ಗಳಿಸಿದ ಸಾಮರ್ಥ್ಯಗಳನ್ನು ಗುಣಾತ್ಮಕವಾಗಿ ಅಳೆಯುವ ನಿರಂತರ ಪ್ರಕ್ರಿಯೆಯಾಗಿರಬೇಕು. ಮೌಲ್ಯಮಾಪನವು ವಿದ್ಯಾರ್ಥಿ ಕೇಂದ್ರಿತವಾಗಿದ್ದು, ವಿವಿಧ ಆಸಕ್ತಿದಾಯಕ ಚಟುವಟಿಕೆಗಳನ್ನು ಒಳಗೊಂಡಿದ್ದರೆ ಮಕ್ಕಳು ಸ್ವಪ್ರೇರಣೆಯಿಂದ ಈ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಾರೆ.

 

ಇದನ್ನು ಮೌಖಿಕ, ಲಿಖಿತ, ಪ್ರಾಯೋಗಿಕ, ವೀಕ್ಷಣೆ, ಸಂದರ್ಶನ, ಸ್ವಯಂ ಅಧ್ಯಯನ ಮುಂತಾದವುಗಳನ್ನು ಅಳವಡಿಸಿದರೆ ಮಕ್ಕಳಿಗೆ ಹೆಚ್ಚು ಪ್ರಿಯವಾಗುತ್ತದೆ. ಅವುಗಳಿಂದ ಮಕ್ಕಳು ಪಡೆದ ಜ್ಞಾನ, ತಿಳಿವಳಿಕೆ, ಅರಿವು, ಅನ್ವಯ, ಕೌಶಲ, ಗ್ರಹಿಕೆ, ಅಭಿವ್ಯಕ್ತಿ, ಮನೋಭಾವ, ಆಸಕ್ತಿ, ಮೆಚ್ಚುಗೆ, ವಿಮರ್ಶಾತ್ಮಕ ಚಿಂತನೆ ಮುಂತಾದ ಉದ್ದೇಶಗಳ ಪ್ರಗತಿಯ ನೋಟವನ್ನು ತಿಳಿಯಬಹುದು. ಮೌಲ್ಯಮಾಪನವು ಉದ್ದೇಶ ಆಧಾರಿತವಾಗಿರಬೇಕು.ಕಲಿಕೆಯ ಒಂದು ಭಾಗವಾಗಿದ್ದರೆ ಹೆಚ್ಚು ಅನುಕೂಲ. ವಿದ್ಯಾರ್ಥಿಗಳಲ್ಲಿ ಯಾವುದೇ ಭಯವನ್ನು ಮೂಡಿಸುವಂತಿರಬಾರದು. ಈ ಗುಣಗಳನ್ನು ಹೊಂದಿರುವ ಮೌಲ್ಯಮಾಪನವು ಹೆಚ್ಚು ಪ್ರಭಾವಿಯಾಗಿರುತ್ತದೆ. ಮೌಲ್ಯಮಾಪನವು ಮಗುವಿನ ಗಮನಕ್ಕೆ ಬಾರದಂತೆ ಅಥವಾ ಕಲಿಕೆಯ ಒಂದು ಭಾಗವಾಗಿ ಮೌಲ್ಯಮಾಪನ ಚಟುವಟಿಕೆಗಳು-ಕಲಿಕೆ-ಬೋಧನೆ ಪ್ರಕ್ರಿಯೆಯಲ್ಲಿ ಸ್ವಾಭಾವಿಕವಾಗಿ ಬರಬೇಕು ಎನ್ನುವುದೊಂದು ಆಶಯ.ಇದು ನಿಜವಾಗಿಯೂ ಮಗುವಿಗೆ ಭಯ-ಆತಂಕಗಳನ್ನು ಸೃಷ್ಟಿಸದು ಎನ್ನುವುದು ಆರ್.ಟಿ.ಇ. 2009ರ ನಿರೀಕ್ಷೆ. ಮೌಲ್ಯಮಾಪನವನ್ನು ನಿರಂತರಗೊಳಿಸುವ ನಿಟ್ಟಿನಲ್ಲಿ ಪರೀಕ್ಷಾ ಸಾಂದ್ರತೆ ಹೆಚ್ಚಾಗಬೇಕು ಎಂಬ ಕೂಗಿಗೆ ಅದು ಮಗುವಿನ ಗಮನಕ್ಕೆ ಬಾರದಂತೆ ನಡೆಯಬೇಕು ಎಂಬುದು ಸೇರಿದೆ. ಇದು ನಿರಂತರ ಮತ್ತು ಸಮಗ್ರ ಮೌಲ್ಯಮಾಪನದ ಆಶಯ ಎಂದು ಎನ್.ಸಿ.ಎಫ್. 2005 ಒತ್ತಿ ಒತ್ತಿ ಹೇಳಿದೆ.5ನೇ ತರಗತಿಗಳಲ್ಲಿ ಜಾರಿ

ಪ್ರಸ್ತುತ ನಮ್ಮ ರಾಜ್ಯ ಸರ್ಕಾರ ಎನ್.ಸಿ.ಎಫ್.2005ರ ಆಧಾರದ ಮೇಲೆ ಪಠ್ಯಕ್ರಮ, ಪಠ್ಯವಸ್ತು ಮತ್ತು ಪಠ್ಯ ಪುಸ್ತಕಗಳನ್ನು ಸಿದ್ಧಪಡಿಸುವ ಕಾರ್ಯ ಕೈಗೆತ್ತಿಕೊಂಡಿದೆ. ಈ ಪ್ರಕ್ರಿಯೆಯಲ್ಲಿ ನಿರಂತರ ಮೌಲ್ಯಮಾಪನಕ್ಕೂ ಆದ್ಯತೆ ನೀಡಲಾಗುತ್ತಿದೆ. ಅದಕ್ಕೆ ಪೂರಕವಾಗಿ ರಾಷ್ಟ್ರಮಟ್ಟದಲ್ಲಿ ಜರುಗಿದ  ಸಭೆಯಲ್ಲಿ (SSA-plan approval board and budget 2010)ಹಿರಿಯ ತರಗತಿಗಳ ಮೌಲ್ಯಮಾಪನದಲ್ಲಿ ನಿರಂತರತೆಗೆ ಎಲ್ಲರೂ ಒಕ್ಕೊರಲಿನಿಂದ ಒತ್ತಾಯಿಸಿದ್ದಾರೆ. ಈ ಆಶಯವನ್ನು ಕಾರ್ಯರೂಪಕ್ಕಿಳಿಸಲು ರಾಜ್ಯ ಶಿಕ್ಷಣ ಇಲಾಖೆ ಗಂಭೀರವಾಗಿ ಚಿಂತನ ನಡೆಸಿತು.ಈ ಬೆಳವಣಿಗೆಯ ಫಲವಾಗಿ ನಮ್ಮ ರಾಜ್ಯದಲ್ಲಿ 2010-11ನೇ ಸಾಲಿನಿಂದ ಪ್ರಾಯೋಗಿಕವಾಗಿ 5 ನೇ ತರಗತಿಗೆ ಮಾತ್ರ ಮೌಲ್ಯಮಾಪನವನ್ನು ನಿರಂತರಗೊಳಿಸುವತ್ತ ಹೊಸ ಹೆಜ್ಜೆ ಇಡಲಾಗಿದೆ. ಅದರಲ್ಲಿ ಮಕ್ಕಳೇ ಸ್ವಮೌಲ್ಯಮಾಪನವನ್ನು ಮಾಡುವ ಮತ್ತು ಮಗುವಿನ ಸಂಪೂರ್ಣ ವಿವರಗಳ ದಾಖಲೆಗೆ ಆದ್ಯತೆ ನೀಡಲಾಗಿದೆ. ಈಗಾಗಲೇ ಕೆಳತರಗತಿಗಳಲ್ಲಿ ನಲಿ-ಕಲಿ ವಿಧಾನವಿರುವುದರಿಂದ ಅಲ್ಲಿ ಮೌಲ್ಯಮಾಪನ ನಿರಂತರ ಮತ್ತು ಸ್ವಾಭಾವಿಕವಾಗಿ ಜರುಗುತ್ತಲಿರುವುದು ಇಲ್ಲಿ ಪ್ರಸ್ತಾಪಿಸಲೇಬೆಕು.ಇನ್ನು ಕೆಲವೇ ದಿನಗಳಲ್ಲಿ ರಾಜ್ಯದ ಎಲ್ಲಾ ಶಾಲೆಗಳಲ್ಲಿ ವಾರ್ಷಿಕ ಪರೀಕ್ಷೆಗಳು (ಎರಡನೆ ಸೆಮಿಸ್ಟರ್) ಪ್ರಾರಂಭವಾಗಲಿವೆ. ಈ ಹಿನ್ನೆಲೆಯಲ್ಲಿ ಶಿಕ್ಷಕರು ಮಕ್ಕಳ ಮೌಲ್ಯಮಾಪನ ಕೈಗೊಳ್ಳುವ ಮುಂಚೆ ವಿದ್ಯಾರ್ಥಿಗಳ ಸ್ವಮೌಲ್ಯಮಾಪನ ಕುರಿತ ಎಲ್ಲಾ ಅಂಶಗಳನ್ನು ಮನನ ಮಾಡಿಕೊಂಡು ಕಾರ್ಯರೂಪಕ್ಕಿಳಿದಲ್ಲಿ ಸ್ವಮೌಲ್ಯಮಾಪನಕ್ಕೆ ನಿಜವಾದ ಮೌಲ್ಯ ದೊರೆಯುತ್ತದೆ. ಇಲ್ಲದಿದ್ದರೆ ಅದು ಇತರೆ ಎಲ್ಲಾ ಪರೀಕ್ಷೆಗಳ ಸಾಲಿಗೆ ಮತ್ತೊಂದು ಸೇರಿದಂತಾಗುವ ಅಪಾಯವೂ ಇದೆ.  ಘಟಕ ಪರೀಕ್ಷೆ ಮತ್ತು ವಿದ್ಯಾರ್ಥಿಗಳ ಸ್ವ ಮೌಲ್ಯಮಾಪನ ಎಂಬ ಎರಡು ಚಟುವಟಿಕೆಗಳನ್ನು ಮೌಲ್ಯಮಾಪನದಲ್ಲಿ ಅಳವಡಿಸಲಾಗುತ್ತಿದೆ. ಘಟಕ ಬೋಧನೆ ಮತ್ತು ಪುನರವಲೋಕನ ಮಗಿದ ನಂತರ ಮಕ್ಕಳು ತಮಗಾಗಿಯೇ ನೀಡಿರುವ ಮೌಲ್ಯಮಾಪನದ ದಾಖಲೆಯಲ್ಲಿ ತಮ್ಮ ಸಾಧನೆಯನ್ನು ಗುರುತಿಸಿಕೊಳ್ಳಬೇಕು. ಜೊತೆಗೆ ಆಯಾ ದಿನದ ಪಾಠದ ನಂತರ ಕಲಿಕೆಯ ಸಂಗತಿಗಳನ್ನು ಗುರುತಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಯಾವ ಕಲಿಕಾ ಕ್ಷೇತ್ರಗಳಲ್ಲಿ ಮಕ್ಕಳ ಸಾಧನೆ ಕೆಳ ಮಟ್ಟದಲ್ಲಿರುವುದೋ ಅಂತಹ ಭಾಗವನ್ನು ಮತ್ತೊಮ್ಮೆ ಶಿಕ್ಷಕರು ಚಟುವಟಿಕಾತ್ಮಕವಾಗಿ ಮನನ ಮಾಡಿಸಬೇಕು.

 

ನಂತರ ಪರೀಕ್ಷೆ ಮಾಡಿ, ಮಕ್ಕಳು ಹಿಂದುಳಿದ ಕ್ಷೇತ್ರಗಳನ್ನು ಗುರುತಿಸಿ ಪರಿಹಾರ ಬೋಧನೆಯನ್ನು ತಮ್ಮ ಅವಧಿಯಲ್ಲಿಯೇ ಮಾಡಬಹುದು. ಪ್ರತಿ ಘಟಕದಲ್ಲಿ ಮಗು ಗಳಿಸಿರುವ ಸಾಧನೆಯನ್ನು ಪರಿಗಣಿಸಿ ಕಿರು ಪರೀಕ್ಷೆಯ ಬದಲಾಗಿ ಅಂಕಗಳನ್ನು ಹಾಕಬೇಕು. ಸೆಮಿಸ್ಟರ್ ಪರೀಕ್ಷೆಗಳು ಮೊದಲಿನಂತೆ ಇರುತ್ತವೆ. ಸ್ವ ಮೌಲ್ಯಮಾಪನವು ಎ ಭಾಗದ ವಿಷಯಗಳಿಗೆ ಮಾತ್ರ ಅನ್ವಯವಾಗುತ್ತಿದೆ. ಈ ಮೌಲ್ಯಮಾಪನದಲ್ಲಿ ಮಗು ತನ್ನ ಕಲಿಕಾ ಹಂತವನ್ನು ತಾನೇ ಸ್ವತಃ ಗುರುತಿಸುವ ಸಾಮರ್ಥ್ಯ ಬೆಳೆಸಿಕೊಳ್ಳುತ್ತದೆ. ತನ್ನನ್ನು ತಾನೇ ಅವಲೋಕನ ಮಾಡಿಕೊಳ್ಳುತ್ತದೆ. ತಾನು ಎಲ್ಲಿರುವೆ ಮತ್ತು ಎಲ್ಲಿಗೆ ಸಾಗಬೇಕಿದೆ ಎಂದು ಅರಿತುಕೊಳ್ಳುತ್ತದೆ. ಮಕ್ಕಳಲ್ಲಿ ಕಲಿಯುವಿಕೆಯಲ್ಲಿ ಸ್ಪರ್ಧಾಮನೋಭಾವ ಜಾಗೃತವಾಗುತ್ತದೆ.ಪ್ರಸ್ತುತ ಜಾರಿಯಲ್ಲಿರುವ ಎರಡು ಕಿರು ಪರೀಕ್ಷೆಯ ಬದಲು ಘಟಕ ಪರೀಕ್ಷೆಯ ಸಾಧನೆಯನ್ನು ಉತ್ತೀರ್ಣತೆ ಮತ್ತು ಶ್ರೇಣಿ ನಿರ್ಧಾರಕ್ಕೆ ಬಳಸಲಾಗುತ್ತದೆ. ಘಟಕ ಪರೀಕ್ಷೆಗಳು ಕೇವಲ ಬರವಣಿಗೆಗೆ ಮಾತ್ರ ಸೀಮಿತವಾಗದೇ ಮೌಲ್ಯಮಾಪನದ ತಂತ್ರಗಳಾದ ವೀಕ್ಷಣೆ, ಯೋಜನೆ, ಕ್ಷೇತ್ರ ಭೇಟಿ ಮುಂತಾದ ತಂತ್ರಗಳನ್ನು ಬಳಸಲಾಗುತ್ತದೆ.ಮಹತ್ವದ ಮತ್ತೊಂದು ಅಂಶವೆಂದರೆ ಇಲ್ಲಿ ಪ್ರತಿ ಮಗುವಿನ ಸಂಪೂರ್ಣ ವಿವರವನ್ನು ಶಿಕ್ಷಕರು ಗಮನಿಸಬೇಕಿದೆ. ಮಗುವಿನ ಮತ್ತು ಆ ಕುಟುಂಬದ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ಧಾರ್ಮಿಕ ಮುಂತಾದ ರಂಗಗಳಲ್ಲಿನ ಸ್ಥಾನಗಳನ್ನು ಅವಲೋಕಿಸುತ್ತಾ ದಾಖಲಿಸಬೇಕು. ಕಾಲಕಾಲಕ್ಕೆ ಅದರಲ್ಲಾಗುವ ಬದಲಾವಣೆಗಳನ್ನು ಗುರುತಿಸಿ, ಅದಕ್ಕೆ ಪೂರಕವಾಗಿ ಮಗುವಿನ ಬೆಳವಣಿಗೆಗೆ ಬೇಕಾದ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ಇದರಿಂದ ಶಿಕ್ಷಕರಿಗೆ ಮಗುವಿನ ಎಲ್ಲಾ ಇತಿಹಾಸ ಗೊತ್ತಾಗುವುದರಿಂದ ಶೈಕ್ಷಣಿಕ ಗುಣಮಟ್ಟ ಹೆಚ್ಚಳಕ್ಕೆ ಹೆಚ್ಚು ಬಲ ತಂದು ಕೊಡುತ್ತದೆ.ಬರೀ ಪರೀಕ್ಷೆಯಲ್ಲ...

ಸ್ವ ಮೌಲ್ಯಮಾಪನದ ಪರಿಕಲ್ಪನೆಯು ಬೋಧನೆ-ಕಲಿಕೆಯಲ್ಲಾಗುವ ಕೊರತೆಗಳನ್ನು ನೀಗಿಸುವುದು ಹೇಗೆ? ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಚಿಕಿತ್ಸಕ ಅಂಶಗಳೂ ಈ ಮೌಲ್ಯಮಾಪನದ ವ್ಯಾಪ್ತಿಯಲ್ಲಿ ಬರುತ್ತವೆ.

ಹಾಗಾಗಿ ಮೌಲ್ಯಮಾಪನ ಕೇವಲ ಪರೀಕ್ಷೆಯಲ್ಲ ಅದನ್ನು ಮೀರಿದ್ದಾಗಿದೆ.  ಮಕ್ಕಳಲ್ಲಿ ಜ್ಞಾನಾತ್ಮಕ, ಭಾವನಾತ್ಮಕ, ಕ್ರಿಯಾತ್ಮಕ ವಲಯಗಳು ಸಮತೋಲನವಾಗಿ ರೂಪಗೊಳ್ಳಬೇಕಿದೆ. ಅದಕ್ಕೆ ಕಲಿಕೆಯಲ್ಲಿ ಎರಡು ಭಾಗಗಳನ್ನು ಮಾಡಲಾಗಿದೆ. ಪಾರ್ಟ್ ‘ಎ’ ನಲ್ಲಿ ಜ್ಞಾನಾತ್ಮಕ, ಪಾರ್ಟ್ ‘ಬಿ’ ನಲ್ಲಿ ಭಾವನಾತ್ಮಕ ಮತ್ತು ಕ್ರಿಯಾ ವಲಯಗಳು ವಿಕಸನವಾಗುತ್ತವೆ.ಸ್ವ ಮೌಲ್ಯಮಾಪನದಿಂದ ಅನೇಕ ಹೊಸ ಹೊಸ ಅಂಶಗಳು ಗೋಚರಿಸುತ್ತವೆ. ಅಂದರೆ ಶಿಕ್ಷಕರ ಬೋಧನೆಯು ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ ಎಂದು ಇದರಿಂದ ತಕ್ಷಣ ಕಂಡುಹಿಡಿಯಬಹುದು. ಇದು ಕಲಿಕಾ ಪ್ರಕ್ರಿಯೆಯಲ್ಲಿ ಮಕ್ಕಳ ಸಾಧನಾ ಮಟ್ಟವನ್ನು ತಿಳಿಸುತ್ತದೆ. ಕಲಿಕೆಯ ಉದ್ದೇಶಗಳು ಎಷ್ಟರ ಮಟ್ಟಿಗೆ ಸಾಧಿಸಲ್ಪಟ್ಟಿವೆ ಎಂಬುದನ್ನು ನಿರ್ಧರಿಸಬಹುದು. ಅದರ ಆಧಾರದ ಮೇಲೆ ಅವಶ್ಯವೆನಿಸಿದಲ್ಲಿ ಬೋಧನಾ ಕ್ರಮದಲ್ಲಿ ಬದಲಾವಣೆಗಳನ್ನು ಮಾಡಬಹುದಾಗಿದೆ.ವಿದ್ಯಾರ್ಥಿಗಳಲ್ಲಾಗಿರುವ ಜ್ಞಾನದ ಬೆಳವಣಿಗೆಯನ್ನು ಹೇಳಬಹುದು. ಕಲಿಕೆಯ ದೋಷಗಳನ್ನು ಗರುತಿಸಿ, ಅವುಗಳ ನಿವಾರಣೆಗೆ ಮಾರ್ಗಗಳನ್ನು ಕಂಡುಹಿಡಿಯಬಹುದು. ಮಕ್ಕಳಲ್ಲಿ ಸುಪ್ತವಾಗಿ ಅಡಗಿರುವ ಶಕ್ತಿ ಸಾಮರ್ಥ್ಯಗಳನ್ನು ಗುರುತಿಸಿ ಪ್ರೋತ್ಸಾಹ, ಕಲಿಕೆಯ ಪ್ರಮಾಣ ಮತ್ತು ಕಲಿಕೆಯ ಗುಣಮಟ್ಟ ಎರಡನ್ನೂ ಒರೆಗೆ ಹಚ್ಚಬಹುದು. ಮಗುವಿನ ಪಾಲಕರಿಗೆ ಕಲಿಕಾ ಪ್ರಗತಿಯನ್ನು ತೋರಿಸಬಹುದು. ಇಂತಹ ಅನೇಕ ಅಂಶಗಳನ್ನು ಸ್ವ ಮೌಲ್ಯಮಾಪನದಿಂದ ಹೊರತರಬಹುದು. ಇವುಗಳನ್ನು ಸರಿಯಾಗಿ ಶಿಕ್ಷಕರು ಮತ್ತು ಪಾಲಕರು ಬಳಸಿಕೊಂಡಲ್ಲಿ ಶಿಕ್ಷಣ ರಂಗದಲ್ಲಿ ಮಹತ್ತರ ಬದಲಾವಣೆ ನಿರೀಕ್ಷಿಸಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.