ಭಾನುವಾರ, ಡಿಸೆಂಬರ್ 8, 2019
25 °C

ವಿದ್ಯಾರ್ಥಿನಿಗೆ ಹಿಂಸೆ: ಶಾಲಾ ಶುಲ್ಕ ಪಾವತಿಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿದ್ಯಾರ್ಥಿನಿಗೆ ಹಿಂಸೆ: ಶಾಲಾ ಶುಲ್ಕ ಪಾವತಿಗೆ ಸೂಚನೆ

ಬೆಂಗಳೂರು: `ಚಂದ್ರಾ ಲೇಔಟ್‌ನ ಲಕ್ಷ್ಮೀ ರಂಗನಾಥ ಶಾಲೆಯಲ್ಲಿ ಎಲ್‌ಕೆಜಿ ಓದುತ್ತಿರುವ ರಶ್ಮಿ ಎಂಬಾಕೆಯನ್ನು ಆಯಾ ಚಂದ್ರಕಲಾ ಶೌಚಾಲಯದಲ್ಲಿ ಕೂಡಿ ಹಾಕಿ ಹಿಂಸೆ ನೀಡಿರುವುದು ಅಕ್ಷಮ್ಯ. ಈ ವಿದ್ಯಾರ್ಥಿನಿ ಪಾವತಿಸಿರುವ 5,000 ರೂಪಾಯಿ ಶಾಲಾ ಶುಲ್ಕವನ್ನು ಮರಳಿಸಬೇಕು. ಬೇರೆ ಶಾಲೆಯಲ್ಲಿ ಸೇರ್ಪಡೆಯಾದ ಸಂದರ್ಭದಲ್ಲಿ ಈ ವಿದ್ಯಾರ್ಥಿಯ ಶಾಲಾ ಶುಲ್ಕವನ್ನು ಲಕ್ಷ್ಮೀ ರಂಗನಾಥ ಶಾಲೆಯ ಆಡಳಿತ ಮಂಡಳಿಯೇ ಪಾವತಿಸಬೇಕು' ಎಂಬ ನಿರ್ದೇಶನ ನೀಡಲಾಗಿದೆ.`ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ 2009' ಹಾಗೂ `ಕರ್ನಾಟಕ ಶಿಕ್ಷಣ ಹಕ್ಕು ನಿಯಮಗಳು-2012' ಪರಿಣಾಮಕಾರಿ ಅನುಷ್ಠಾನ ಸಂಬಂಧ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಲ್ಲಿ ದಾಖಲಾದ ದೂರುಗಳ ತ್ವರಿತ ಇತ್ಯರ್ಥಕ್ಕಾಗಿ ನಗರದ ಶಿಕ್ಷಕರ ಸದನದಲ್ಲಿ ಶನಿವಾರ ನಡೆದ ಸಾರ್ವಜನಿಕ ಅಹವಾಲು ಸ್ವೀಕಾರದಲ್ಲಿ ತೀರ್ಪುದಾರರಾದ ನ್ಯಾ.ಎ.ಜೆ.ಸದಾಶಿವ, ನ್ಯಾ. ಚಂದ್ರ ಶೇಖರಯ್ಯ ಹಾಗೂ ಶಿಕ್ಷಣ ತಜ್ಞ ಡಾ.ವಿ.ಪಿ.ನಿರಂಜನಾರಾಧ್ಯ ಈ ಸೂಚನೆ ನೀಡಿದರು. ಶನಿವಾರ 15 ಪ್ರಕರಣಗಳ ವಿಚಾರಣೆ ನಡೆಸಲಾಯಿತು.`ಮಗುವಿಗೆ ಹಿಂಸೆ ನೀಡಿಲ್ಲ ಎಂಬುದು ತನಿಖೆಯಿಂದ ಗೊತ್ತಾಗಿದೆ' ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಉತ್ತರಿಸಿದರು. ಇದನ್ನು ಒಪ್ಪದ ತೀರ್ಪುದಾರರು, `ಮಗು ಹಾಗೂ ಪೋಷಕರನ್ನು ವಿಚಾರಿಸದೆ ನೀವು ತನಿಖೆ ನಡೆಸಿದ್ದು ಹೇಗೆ' ಎಂದು ತರಾಟೆಗೆ ತೆಗೆದುಕೊಂಡರು. `ಶಾಲೆಯಲ್ಲಿ ಸಿಸಿಟಿವಿ ಕ್ಯಾಮೆರಾ ಹಾಕಲಾಗಿದೆ. ಹಿಂಸೆ ನೀಡಿದ್ದು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿಲ್ಲ' ಎಂದು ಆಡಳಿತ ಮಂಡಳಿಯ ಕಾರ್ಯದರ್ಶಿ ಸಮಜಾಯಿಷಿ ನೀಡಿದರು.`ಹಿಂಸೆ ನೀಡಿರುವ ಬಗ್ಗೆ ವೈದ್ಯಕೀಯ ಪ್ರಮಾಣಪತ್ರ ಇದೆ. ಶೌಚಾಲಯಗಳಿಗೂ ಸಿಸಿಟಿವಿ ಕ್ಯಾಮೆರಾ ಹಾಕಿದ್ದೀರಾ. ಆಯಾ ಅವರನ್ನು ರಕ್ಷಿಸಿಕೊಳ್ಳುವ ಭರದಲ್ಲಿ ದಾರಿ ತಪ್ಪಿಸಬೇಡಿ. ಅವರೇನು ನಿಮ್ಮ ಮನೆ ಕೆಲಸಕ್ಕೂ ಬರುತ್ತಾರಾ' ಎಂದು ನ್ಯಾ.ಎ.ಜೆ.ಸದಾಶಿವ ಕಟುವಾಗಿ ಪ್ರಶ್ನಿಸಿದರು. ಪೊಲೀಸ್ ಅಧಿಕಾರಿಗೆ ತರಾಟೆ: ನಾಗರಬಾವಿ 10 ನೇ ಬ್ಲಾಕಿನಲ್ಲಿರುವ ಸೇಂಟ್ ಸೋಫಿಯಾ ಶಾಲಾ ವಾಹನದ ಕ್ಲೀನರ್ ಸಾಬಣ್ಣ ಎಂಬಾತ ಎಲ್‌ಕೆಜಿ ಓದುತ್ತಿರುವ ನಾಲ್ಕು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆಯೋಗ ಬರೆದ ಎರಡು ಪತ್ರಗಳಿಗೆ ಸೂಕ್ತ ಮಾಹಿತಿ ನೀಡದ ಸಬ್ ಇನ್‌ಸ್ಪೆಕ್ಟರ್ ಅವರನ್ನು ತೀರ್ಪುದಾರರು ತರಾಟೆಗೆ ತೆಗೆದುಕೊಂಡರು.`ಪೊಲೀಸ್ ಇಲಾಖೆ ಹಾಗೂ ಆಯೋಗ ಪರಸ್ಪರ ಪೂರಕವಾಗಿ ಕೆಲಸ ಮಾಡಬೇಕಿದೆ. ಆದರೆ, ಇಲ್ಲಿ ಸಬ್ ಇನ್‌ಸ್ಪೆಕ್ಟರ್ ಅವರು ಆಯೋಗದ ಪತ್ರಕ್ಕೆ ಉತ್ತರಿಸುವ ಸೌಜನ್ಯವನ್ನೇ ತೋರಿಲ್ಲ. ಇಂತಹ ವ್ಯಕ್ತಿ ಸಾಮಾನ್ಯ ಜನರಿಗೆ ನೆರವು ಮಾಡುತ್ತಾನೆ ಎಂದು ನಿರೀಕ್ಷಿಸುವುದು ಹೇಗೆ' ಎಂದು ಅವರು ಪ್ರಶ್ನಿಸಿದರು. ಆರ್‌ಟಿಇ ಅಡಿ ಸೀಟು: ಭದ್ರಾವತಿಯ ವಿಶ್ವೇಶ್ವರಯ್ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮೋನಿಶಾ ಎಂಬ ವಿದ್ಯಾರ್ಥಿಯನ್ನು ಆರ್‌ಟಿಇ ಅಡಿ ದಾಖಲು ಮಾಡಿಕೊಳ್ಳಬೇಕು ಎಂದು ಆಡಳಿತ ಮಂಡಳಿಗೆ ತೀರ್ಪುಗಾರರು ನಿರ್ದೇಶನ ನೀಡಿದರು.

`ಶಾಲೆಯಲ್ಲಿ 15 ಮಕ್ಕಳನ್ನು ಆರ್‌ಟಿಇ ಅಡಿ ದಾಖಲಿಸಲಾಗಿದೆ. ಕೋಟಾ ಭರ್ತಿಯಾಗಿದೆ' ಎಂದು ಮುಖ್ಯ ಶಿಕ್ಷಕಿ ಸಮಜಾಯಿಷಿ ನೀಡಿದರು. `ಕಾಯ್ದೆ ಬಗ್ಗೆ ಜಾಗೃತಿ ಮೂಡಿಸಲು ಯಾವ ಕ್ರಮ ಕೈಗೊಂಡಿದ್ದೀರಿ' ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅವರನ್ನು ನಿರಂಜನಾ ರಾಧ್ಯ ಅವರು ಪ್ರಶ್ನಿಸಿದರು. `ಇಲಾಖೆಯ ಅಧಿಕಾರಿಗಳ ಸಭೆ ನಡೆಸಲಾಗಿದೆ. ಕಚೇರಿಯ ಎದುರು ಮಾಹಿತಿ ಫಲಕ ಹಾಕಲಾಗಿದೆ' ಎಂದು ಕ್ಷೇತ್ರ ಶಿಕ್ಷಣಾಧಿಕಾರಿಯವರು ಉತ್ತರಿಸಿದರು.ಈ ಹೇಳಿಕೆಗೆ ಅತೃಪ್ತಿ ವ್ಯಕ್ತಪಡಿಸಿದ ಅವರು, `ಅಧಿಕಾರಿಗಳ ಸಭೆ ನಡೆಸಿದರೆ ಜನರಲ್ಲಿ ಜಾಗೃತಿ ಮೂಡುವುದು ಹೇಗೆ? ನಿಮ್ಮ ಕಚೇರಿ ಎದುರು ಎಷ್ಟು ಮಂದಿ ಬರುತ್ತಾರೆ? ಕಾಯ್ದೆ ಪರಿಣಾಮಕಾರಿ ಅನುಷ್ಠಾನ ಮಾಡುವ ಇಚ್ಛಾಶಕ್ತಿ ಅಧಿಕಾರಿಗಳಿಗೆ ಇಲ್ಲ. ಜಾಥಾ ಮತ್ತಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜಾಗೃತಿ ಮೂಡಿಸಬೇಕು' ಎಂದು ಕಿವಿಮಾತು ಹೇಳಿದರು. `ಆರ್‌ಟಿಇ ಅಡಿ ದಾಖಲಾದ ಇಬ್ಬರು ವಿದ್ಯಾರ್ಥಿಗಳು ವರ್ಗಾವಣೆ ಪತ್ರ ಪಡೆದು ತೆರಳಿದ್ದಾರೆ' ಎಂದು ತಾಯಿ ದೀಪಾ ಗಮನ ಸೆಳೆದರು. `ಈಗ ಎರಡು ಸೀಟುಗಳು ಖಾಲಿಯಾಗಿವೆ. ಈ ಮಗುವಿಗೆ ಸೀಟು ನೀಡಿ. ಪೋಷಕರಿಂದ ಪಡೆದಿರುವ ಶುಲ್ಕವನ್ನು ಮರಳಿಸಿ' ಎಂದು ಆಡಳಿತ ಮಂಡಳಿಗೆ ಸೂಚಿಸಿದರು.ಶಾಲಾ ಮಾನ್ಯತೆ ರದ್ದತಿಗೆ ಶಿಫಾರಸು: `ಮೈಸೂರು ಜಿಲ್ಲೆಯ ಸರಗೂರು ಪ್ರಗತಿ ಶಿಕ್ಷಣ ವಿದ್ಯಾಸಂಸ್ಥೆಯಲ್ಲಿ 18 ವಿದ್ಯಾರ್ಥಿಗಳು ಪ್ರವೇಶ ಶುಲ್ಕ ಪಾವತಿಸಿದ್ದರೂ ತರಗತಿಯಿಂದ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಲಾಗಿದೆ. ಇಂತಹ ಘಟನೆ ಇಡೀ ಸಮಾಜಕ್ಕೆ ನೋವು ತರುವಂತಹುದು. ಅಹವಾಲು ಸ್ವೀಕಾರಕ್ಕೂ ಆಡಳಿತ ಮಂಡಳಿಯ ಪ್ರತಿನಿಧಿಗಳು ಬಂದಿಲ್ಲ. ಇಲ್ಲಿ ಶಾಲೆಯ ಕಡೆಯಿಂದ ತಪ್ಪು ಆಗಿದೆ. ಈ ಶಾಲೆಯ ಮಾನ್ಯತೆಯನ್ನು ಇಲಾಖೆಯು ಕೂಡಲೇ ರದ್ದುಪಡಿಸಬೇಕು' ಎಂದು ತೀರ್ಪು ದಾರರು ಶಿಫಾರಸು ಮಾಡಿದರು.

ಪ್ರತಿಕ್ರಿಯಿಸಿ (+)