ವಿದ್ಯಾರ್ಥಿನಿಯರಿಗೆ ತಂಗಳನ್ನ; ಸಿಬ್ಬಂದಿ ಮನೆಗೆ ಅಕ್ಕಿ

7

ವಿದ್ಯಾರ್ಥಿನಿಯರಿಗೆ ತಂಗಳನ್ನ; ಸಿಬ್ಬಂದಿ ಮನೆಗೆ ಅಕ್ಕಿ

Published:
Updated:

ಶ್ರೀರಂಗಪಟ್ಟಣ: ಇಲ್ಲಿಗೆ ಸಮೀಪ ಗಂಜಾಂನಲ್ಲಿ ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ನಡೆಯುತ್ತಿರುವ ಸರ್ಕಾರಿ ಸಾರ್ವಜನಿಕ ಬಾಲಕಿಯರ ವಿದ್ಯಾರ್ಥಿ ನಿಲಯದ 20ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಕೆಮ್ಮು, ನೆಗಡಿ, ತಲೆಶೂಲೆಯಿಂದ ಬಳುತ್ತಿದ್ದಾರೆ.ಮಂಗಳವಾರ ಗಂಜಾಂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಅಮೀರ್ ಬೇಗ್ ಎದುರು ಹಾಸ್ಟೆಲ್ ವಿದ್ಯಾರ್ಥಿನಿಯರು ತಮ್ಮ ಸಮಸ್ಯೆ ತೋಡಿಕೊಂಡಿದ್ದಾರೆ. ತರಗತಿ ಕೊಠಡಿಯಲ್ಲಿ ಕೆಮ್ಮುತ್ತಿದ್ದ ವಿದ್ಯಾರ್ಥಿನಿಯರನ್ನು ಶಿಕ್ಷಕರು ಪ್ರಶ್ನಿಸಿದಾಗ ಅನಾರೋಗ್ಯದಿಂದ ಬಳಲುತ್ತಿರುವ ಅಂಶ ಬೆಳಕಿಗೆ ಬಂದಿದೆ. ‘ಹಾಸ್ಟೆಲ್‌ನಲ್ಲಿ ಕೊಡುವ ಕುಡಿಯುವ ನೀರಿನಲ್ಲಿ ಹುಳಹುಪ್ಪಟೆ ಇರುತ್ತವೆ.ಸ್ನಾನಕ್ಕೆ ಒಂದು ದಿನವೂ ಬಿಸಿನೀರು ಕೊಡಲ್ಲ. ಚಳಿಯಲ್ಲೂ ತಣ್ಣೀರು ಸ್ನಾನ ಮಾಡಬೇಕು. ಕುಡಿಯಲು ಬಿಸಿನೀರು ಕೇಳಿದರೆ ಕೊಡುವುದಿಲ್ಲ. ವಾರದಲ್ಲಿ ಒಂದೆರಡು ದಿನ ಬೆಳಗಿನ ತಿಂಡಿ ಬಿಟ್ಟರೆ ಉಳಿದ ದಿನ ತಂಗಳು ಅನ್ನ, ಸಾರು ಕೊಡುತ್ತಾರೆ. ಉಪ್ಪಿಟ್ಟು ಮಾಡಿದರೆ ಹರಳು ಉಪ್ಪು, ಕೂದಲು ಸಿಗುತ್ತವೆ. ಪ್ರಶ್ನಿಸುವವರನ್ನು ಅಡುಗೆಯವರು ಹೆದರಿಸುತ್ತಾರೆ’ ಎಂದು 7ನೇ ತರಗತಿ ವಿದ್ಯಾರ್ಥಿನಿ ಅನ್ನಪೂರ್ಣ ಅಳಲು ತೋಡಿಕೊಂಡರು.‘ನಲ್ಲಿಯಿಂದ ನೀರು ತುಂಬಿಕೊಡಬೇಕು. ಅಡುಗೆಯವರು ಹೇಳಿದಾಗ ಮಸಿ ಪಾತ್ರೆಗಳನ್ನು ತಿಕ್ಕಬೇಕು. ಇಲ್ಲದಿದ್ದರೆ ಬಾಯಿಗೆ ಬಂದಂತೆ ಬೈಯುತ್ತಾರೆ’ ಎಂದು 5ನೇ ತರಗತಿ ಓದುತ್ತಿರುವ ಪೂಜಾ ಕಣ್ಣೀರು ತುಂಬಿಕೊಂಡು ಹೇಳಿದಳು.‘ಒಬ್ಬರಿಗೆ ತಿಂಗಳಿಗೆ ರೂ.650 ಹಣ ಬರುತ್ತದೆ. ಆದರೆ ಅದರಲ್ಲಿ ಅರ್ಧದಷ್ಟನ್ನೂ ಖರ್ಚು ಮಾಡುವುದಿಲ್ಲ. ನಮ್ಮ ಹಾಸ್ಟೆಲ್‌ನಲ್ಲಿ ದಿನದಲ್ಲಿ ಒಮ್ಮೆ ಮಾತ್ರ ಒಲೆ ಉರಿಯುತ್ತದೆ. ವಾರ್ಡನ್ ಇಲ್ಲದ ವೇಳೆ ನಮಗೆ ಕಿರುಕುಳ ಹೆಚ್ಚುತ್ತದೆ’ ಎಂದು ಮತ್ತೊಬ್ಬ ವಿದ್ಯಾರ್ಥಿನಿ ಜ್ಯೋತಿ ಆರೋಪಿಸಿದರು.ಅಕ್ಕಿ, ಬೇಳೆ ಅಡುಗೆಯವರ ಪಾಲು: ಗಂಜಾಂ ಬಾಲಕಿಯರ ಹಾಸ್ಟೆಲ್‌ನ ಅಡುಗೆ ಸಿಬ್ಬಂದಿ ಅಕ್ಕಿ, ಬೇಳೆ, ಎಣ್ಣೆಯನ್ನು ಮನೆಗೆ ಕೊಂಡೊಯ್ಯುತ್ತಾರೆ ಎಂಬ ಸಂಗತಿಯನ್ನು ವಿದ್ಯಾರ್ಥಿಗಳು ಬಹಿರಂಗಪಡಿಸಿದ್ದಾರೆ. ಹಾಲು, ತೆಂಗಿನ ಕಾಯಿಯನ್ನೂ ಬಿಡುವುದಿಲ್ಲ. ನಮಗೆ ನೀರು ಕಾಫಿ ಕೊಡುತ್ತಿದ್ದು, ಗಟ್ಟಿ ಹಾಲು ಮನೆಗೆ ಸಾಗಿಸುತ್ತಾರೆ. ಸೋಮವಾರ ನಮ್ಮ ಎದುರಿನಲ್ಲೇ ಚೀಲದ ತುಂಬ ತೆಂಗಿನ ಕಾಯಿ ಕೊಂಡೊಯ್ದಿದ್ದಾರೆ.

 

ಇಂತಹ ವ್ಯವಹಾರ ಬಹಳ ದಿನಗಳಿಂದಲೂ ನಡೆಯುತ್ತಿದೆ. ಹಾಸ್ಟೆಲ್‌ನಲ್ಲಿ 49 ವಿದ್ಯಾರ್ಥಿನಿಯರಿದ್ದೇವೆ. ಕನಿಷ್ಠ ಎರಡು ಲೀಟರ್‌ನಷ್ಟು ಹಾಲು  ಕೂಡ ಬಳಸುವುದಿಲ್ಲ. ಅಡುಗೆಯವರು ಅಕ್ಕಿ, ಬೇಳೆ, ಹಾಲು ಸಾಗಿಸುವ ವಿಷಯವನ್ನು ವಾರ್ಡನ್ ದೊಡ್ಡ  ಕೆಂಪುರಂಗಮ್ಮ ಅವರಿಗೆ ಹೇಳಿದ್ದೇವೆ. ಆದರೆ ಅಡುಗೆಯವರು ಅವರನ್ನೇ ದಬಾಯಿಸುತ್ತಾರೆ’ ಎಂದು ವಿದ್ಯಾರ್ಥಿನಿಯರು ಹಾಸ್ಟೆಲ್‌ನ ಸ್ಥಿತಿಗತಿ ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry