ವಿದ್ಯಾರ್ಥಿನಿಯರು, ಮಹಿಳೆಯರ ಪ್ರತಿಭಟನೆ

7
ಮಹಿಳೆಯರ ಸುರಕ್ಷತೆ; ಕೇಂದ್ರ, ರಾಜ್ಯ ಸರ್ಕಾರ ವಿಫಲ: ಆರೋಪ

ವಿದ್ಯಾರ್ಥಿನಿಯರು, ಮಹಿಳೆಯರ ಪ್ರತಿಭಟನೆ

Published:
Updated:

ಬಾಗೇಪಲ್ಲಿ: ಮಹಿಳೆಯರು, ವಿದ್ಯಾರ್ಥಿನಿಯರಿಗೆ ರಕ್ಷಣೆ ಕಲ್ಪಿಸುವುದರಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿಫಲವಾಗಿವೆ ಎಂದು ಆರೋಪಿಸಿದ ವಿದ್ಯಾರ್ಥಿಗಳು ಸೋಮವಾರ ತರಗತಿ ಬಹಿಷ್ಕರಿಸಿ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್‌ಎಫ್‌ಐ) ನೇತೃತ್ವದಲ್ಲಿ ಪಟ್ಟಣದ ಸಾರಿಗೆ ಸಂಸ್ಥೆ ನಿಲ್ದಾಣದ ಮುಂದೆ ಮಾನವ ಸರಪಳಿ ರಚಿಸಿ ಪ್ರತಿಭಟಿಸಿದರು.ತಾಲ್ಲೂಕು ಜನವಾದಿ ಮಹಿಳೆ ಸಂಘಟನೆ ಸದಸ್ಯೆಯರು, ಪಟ್ಟಣದ ನ್ಯಾಷನಲ್ ಪದವಿ ಪೂರ್ವ ಕಾಲೇಜು, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ವರದಾದ್ರಿ ಕಾಲೇಜಿನ ವಿದ್ಯಾರ್ಥಿಗಳು ತರಗತಿಗೆ ಬಹಿಷ್ಕಾರ ಹಾಕಿ ಬೀದಿಗಿಳಿದು ಪ್ರತಿಭಟಿಸಿದರು.ಮಹಿಳೆಯರು, ವಿದ್ಯಾರ್ಥಿನಿಯರ ಮೇಲಿನ ದೌರ್ಜನ್ಯ ತಡೆಗಟ್ಟಲು ವಿಫಲವಾಗಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಪಟ್ಟಣದ ಸಾರಿಗೆ ಸಂಸ್ಥೆ ನಿಲ್ದಾಣ ಮುಂದೆ ಕೆಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಪ್ರತಿಭಟನಾ ನಿರತರು ತಹಶೀಲ್ದಾರ್ ಟಿ.ಎನ್.ಕೃಷ್ಣಮೂರ್ತಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಬಿ.ಸಾವಿತ್ರಮ್ಮ ಮಾತನಾಡಿ, 2012ರ ಅಂಕಿ- ಅಂಶದ ಪ್ರಕಾರ ಕಳೆದ 3 ವರ್ಷಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ವರದಕ್ಷಿಣೆ ಕೊಲೆ ಹಾಗೂ ವರದಕ್ಷಿಣೆ ದೌರ್ಜನ್ಯ-48, ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಸಾಮೂಹಿಕ ಅತ್ಯಾಚಾರ-60, ಅಪಹರಣಗಳು-20, ಹತ್ಯೆ-1, ದಲಿತ ಮಹಿಳೆಯರ ಮೇಲಿನ ದೌರ್ಜನ್ಯ-71, ಬಾಲ್ಯ ವಿವಾಹ-2, ಮಹಿಳೆಯರ ಆತ್ಯಹತ್ಯೆ-80 ಪ್ರಕರಣಗಳು ದಾಖಲಾಗಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ವಿಶೇಷ ಗೌರವ ಇದೆ. ಸಮಾಜದಲ್ಲಿ  ಸ್ತ್ರೀಯರಿಗೆ ಸಮಾನ ಗೌರವ ಸಿಗಬೇಕು. ಎಲ್ಲಾ ರಂಗದಲ್ಲಿ ಮಹಿಳೆಯರು ಮುಂದೆ ಇದ್ದಾರೆ. ಇಂತಹ ಸಮಾಜದಲ್ಲಿ ಮಹಿಳೆಯರು, ವಿದ್ಯಾರ್ಥಿನಿಯರು ಒಂಟಿಯಾಗಿ ನಡೆಯುವುದೇ ಕಷ್ಟವಾಗಿದೆ. ಮಹಿಳೆಯರಿಗೆ ಸೂಕ್ತ ರಕ್ಷಣೆ ಕಲ್ಪಿಸುವುದರಲ್ಲಿ ಸರ್ಕಾರಗಳು ವಿಫಲವಾಗಿವೆ ಎಂದು ಆರೋಪಿಸಿದರು.ಸಿಪಿಎಂ ಜಿಲ್ಲಾ ಘಟಕದ ಕಾರ್ಯದರ್ಶಿ ಎಂ.ಪಿ.ಮುನಿವೆಂಕಟಪ್ಪ, ನವದೆಹಲಿಯಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮಾಡಿದ ಆರೋಪಿಗಳಿಗೆ ಗಲ್ಲುಶಿಕ್ಷೆ ಜಾರಿಯಾಗಬೇಕು. ಮಹಿಳೆ ಹಾಗೂ ವಿದ್ಯಾರ್ಥಿನಿಯರ ರಕ್ಷಣೆಗಾಗಿ ಕಾನೂನು ರೂಪಿಸಬೇಕು. ರಾಜ್ಯ ಮಹಿಳಾ ಆಯೋಗ ಮಹಿಳೆಯರ ಹಿತಾಸಕ್ತಿಯನ್ನು ಕಾಪಾಡಬೇಕು ಎಂದು ಒತ್ತಾಯಿಸಿದರು.ಜಿಲ್ಲಾ ಪಂಚಾಯಿತಿ ಸದಸ್ಯೆ ನಾರಾಯಣಮ್ಮ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮುನಿರತ್ನಮ್ಮ, ಸದಸ್ಯೆ ಶೋಭಾರಾಣಿ, ಹಾಲು ಒಕ್ಕೂಟ ಸದಸ್ಯೆ ಶೋಭಾ, ಜನವಾದಿ ಮಹಿಳೆ ಸಂಘಟನೆ ತಾಲ್ಲೂಕು ಉಪಾಧ್ಯಕ್ಷೆ  ಜೈನಾಭೀ, ಭಾರತ ವಿದ್ಯಾರ್ಥಿ ಫೆಡರೇಷನ್ ತಾಲ್ಲೂಕು ಮುಖಂಡರಾದ ಶ್ರೀನಿವಾಸ್, ರಾಜಶೇಖರ್, ಸಿಪಿಎಂ ತಾಲ್ಲೂಕು ಕಾರ್ಯದರ್ಶಿ ರಘುರಾಮರೆಡ್ಡಿ, ಮುಖಂಡರಾದ ರಾಮಲಿಂಗಪ್ಪ, ಗೋವರ್ಧನಚಾರಿ, ಕಂಚುಕೋಟೆ ಮೂರ್ತಿ, ರೂಪಾ, ವಾಣಿ, ಮಂಜುಳಾ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry