ವಿದ್ಯಾರ್ಥಿನಿಯರ ಅಪಹರಣಕ್ಕೆ ಯತ್ನ

7

ವಿದ್ಯಾರ್ಥಿನಿಯರ ಅಪಹರಣಕ್ಕೆ ಯತ್ನ

Published:
Updated:

ಬೆಂಗಳೂರು: ತರಗತಿ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ವಿದ್ಯಾರ್ಥಿನಿಯರಿಬ್ಬರನ್ನು ದುಷ್ಕರ್ಮಿಗಳು ಅಪಹರಿಸಲು ಯತ್ನಿಸಿರುವ ಘಟನೆ ಮಲ್ಲೇಶ್ವರದಲ್ಲಿ ಸೋಮವಾರ ಸಂಜೆ ನಡೆದಿದೆ.ಮಲ್ಲೇಶ್ವರ ಎಂಟನೇ ಅಡ್ಡರಸ್ತೆಯಲ್ಲಿರುವ ಬಿಇಎಸ್ ಶಾಲೆಯ ಆರನೇ ತರಗತಿಯ ವಿದ್ಯಾರ್ಥಿನಿಯರು ಸಂಜೆ 4.30ರ ಸುಮಾರಿಗೆ ಮನೆಗೆ ಹೋಗುತ್ತಿದ್ದಾಗ ಘಟನೆ ನಡೆದಿದೆ.`ಮಾರುತಿ ಕಾರ್‌ನಲ್ಲಿ ಬಂದ ಅಪರಿಚಿತರು, ಮನೆವರೆಗೆ ಬಿಡುವುದಾಗಿ ಹೇಳಿ ವಾಹನಕ್ಕೆ ಹತ್ತಿಸಿಕೊಂಡು ಹಲ್ಲೆ ನಡೆಸಿ, ಮೂಗಿಗೆ ರಾಸಾಯನಿಕದಿಂದ ಕೂಡಿದ ಕರವಸ್ತ್ರ ಹಿಡಿದು ಪ್ರಜ್ಞೆ ತಪ್ಪಿಸಿದರು. ಕಾರು ಮಲ್ಲೇಶ್ವರ ರೈಲು ನಿಲ್ದಾಣದ ಬಳಿ ನಿಂತಿದ್ದಾಗ ನಮಗೆ ಎಚ್ಚರವಾಯಿತು. ಅಪಹರಿಸಿದವರು ಕಾರಿನಿಂದ ಹೊರಗೆ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರು. ಆಗ ನಾವು ಕಾರಿನಿಂದ ಇಳಿದು ತಪ್ಪಿಸಿಕೊಂಡೆವು' ಎಂದು ವಿದ್ಯಾರ್ಥಿನಿಯರು ಹೇಳಿದ್ದಾರೆ.`ನಾವು ಕಾರಿನಿಂದ ಇಳಿದು ಓಡಲಾರಂಭಿಸಿದೆವು. ಈ ವೇಳೆ ದುಷ್ಕರ್ಮಿಗಳು ನಮ್ಮನ್ನು ಹಿಂಬಾಲಿಸಿದರು. ರಸ್ತೆಯಲ್ಲಿ ಜನರಿದ್ದ ಕಾರಣ ನಮ್ಮನ್ನು ಹಿಡಿದುಕೊಳ್ಳಲಿಲ್ಲ. ಅಲ್ಲದೆ, ಕಾರಿನಲ್ಲಿ ಕೈಕಾಲು ಕಟ್ಟಿ ಹಾಕಿದ ಸ್ಥಿತಿಯಲ್ಲಿ ಇನ್ನಿಬ್ಬರು ಹುಡುಗಿಯರಿದ್ದರು' ಎಂದು ವಿದ್ಯಾರ್ಥಿನಿಯರು ಹೇಳಿಕೆ ವೇಳೆ ತಿಳಿಸಿದ್ದಾರೆ.ವಿದ್ಯಾರ್ಥಿನಿಯರ ವೈದ್ಯಕೀಯ ಪರೀಕ್ಷೆ ಮಾಡಿಸಲಾಗಿದೆ. `ಕ್ಲೊರೊಫಾರ್ಮ್ ಅಥವಾ ಇನ್ನಾವುದೇ ರಾಸಾಯನಿಕ ಬಳಸಿ ವಿದ್ಯಾರ್ಥಿಯರ ಪ್ರಜ್ಷೆ ತಪ್ಪಿಸಿಲ್ಲ. ಅವರ ಮೇಲೆ ಹಲ್ಲೆಯೂ ನಡೆದಿಲ್ಲ' ಎಂದು ಕೆ.ಸಿ.ಜನರಲ್ ಆಸ್ಪತ್ರೆಯ ವೈದ್ಯರು ವರದಿ ನೀಡಿದ್ದಾರೆ.ಅಪಹರಣ ಯತ್ನ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry