ವಿದ್ಯಾರ್ಥಿನಿಲಯ ಪ್ರವೇಶ: ಮಾರ್ಗಸೂಚಿಗೆ ಆದೇಶ

ಶನಿವಾರ, ಮೇ 25, 2019
33 °C

ವಿದ್ಯಾರ್ಥಿನಿಲಯ ಪ್ರವೇಶ: ಮಾರ್ಗಸೂಚಿಗೆ ಆದೇಶ

Published:
Updated:

ಬೆಂಗಳೂರು:  ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿನ ಏಳು ಸರ್ಕಾರಿ ವಿದ್ಯಾರ್ಥಿನಿಲಯಗಳಲ್ಲಿ ಪರ ಊರುಗಳ ವಿದ್ಯಾರ್ಥಿಗಳಿಗೂ ಪ್ರವೇಶ ನೀಡುವ ಸಂಬಂಧ ವಾರದ ಒಳಗೆ ಮಾರ್ಗಸೂಚಿ ರೂಪಿಸುವಂತೆ ಹೈಕೋರ್ಟ್ ಸರ್ಕಾರಕ್ಕೆ ಮಂಗಳವಾರ ಆದೇಶಿಸಿದೆ.ಪರ ಊರುಗಳ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸುತ್ತಿರುವುದಾಗಿ ಆರೋಪಿಸಿ ಶಿವಮೊಗ್ಗದ ಎಚ್. ದಾನಪ್ಪ ಎನ್ನುವವರು ಸಲ್ಲಿಸಿರುವ  ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಕ್ರಮ್‌ಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಎ.ಎಸ್. ಬೋಪಣ್ಣ ಅವರನ್ನು ಒಳಗೊಂಡ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ.ಎಸ್ಸೆಸ್ಸೆಲ್ಸಿ ನಂತರದ ಕೋರ್ಸ್‌ಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗಾಗಿ ಈ ನಿಲಯವಿದೆ. ಎಸ್ಸೆಸ್ಸೆಲ್ಸಿ ಅಥವಾ ನಂತರದ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಆದ್ಯತೆ ಮೇರೆಗೆ ಪ್ರವೇಶ ನೀಡಬೇಕು.ಆದರೆ, ಇದರ ನೇಮಕಾತಿ ಸಮಿತಿಯ ಅಧ್ಯಕ್ಷರೂ ಆಗಿರುವ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಸಾಗರದ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ನೀಡುತ್ತಿದ್ದಾರೆ.ಹೆಚ್ಚು ಅಂಕ ಗಳಿಸಿದರೂ ಪರಊರಿನ ವಿದ್ಯಾರ್ಥಿಗಳು ಪ್ರವೇಶ ವಂಚಿತರಾಗುತ್ತಿದ್ದಾರೆ ಎನ್ನುವುದು ಅರ್ಜಿದಾರರ ಆರೋಪವಾಗಿತ್ತು.ಈ ಬಗ್ಗೆ ಪೀಠ ಅಸಮಾಧಾನ ವ್ಯಕ್ತಪಡಿಸಿತು. ಪ್ರಸಕ್ತ ಸಾಲಿನಲ್ಲಿ ಈಗಾಗಲೇ ಪ್ರವೇಶ ಪ್ರಕ್ರಿಯೆ ಮುಗಿದಿರುವ ಹಿನ್ನೆಲೆಯಲ್ಲಿ ಮುಂದಿನ ವರ್ಷದಿಂದ ಅನ್ವಯ ಆಗುವಂತೆ ಮಾರ್ಗಸೂಚಿ ರೂಪಿಸುವಂತೆ ಅದು ಆದೇಶಿಸಿತು. ಅಂತೆಯೇ, ಈ ಬಾರಿ ಉತ್ತಮ ಅಂಕ ಪಡೆದರೂ ಪ್ರವೇಶ ದೊರಕದ ವಿದ್ಯಾರ್ಥಿಗೆ ಪ್ರವೇಶ ನೀಡುವ ಸಂಬಂಧ ಪರಿಶೀಲನೆ ನಡೆಸುವಂತೆ ನ್ಯಾಯಮೂರ್ತಿ ಸೂಚಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry