ಮಂಗಳವಾರ, ಜನವರಿ 28, 2020
29 °C
ಲೈಂಗಿಕ ಕಿರುಕುಳ ನೀಡಿದ ಪ್ರಾಂಶುಪಾಲರ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸು

ವಿದ್ಯಾರ್ಥಿನಿ ಅಪ್ರಾಪ್ತೆ: ಆರೋಪಿಗೆ ನಿರೀಕ್ಷಣಾ ಜಾಮೀನು ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಾ: ಕಾಲೇಜು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೊಳಗಾಗಿ ತಲೆಮರೆಸಿ­ಕೊಂಡಿರುವ ಪಟ್ಟನಾಯಕನಹಳ್ಳಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಬಿ.ಪಿ.ಪಾಂಡುರಂಗಯ್ಯ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶನಾಲಯಕ್ಕೆ ಪತ್ರ ಬರೆಯಲಾಗಿದೆ ಎಂದು ಇಲಾಖೆ ಉಪ ನಿರ್ದೇಶಕ ಜಯಪ್ರಕಾಶ್ ತಿಳಿಸಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸಲು ಖುದ್ದು ಕಾಲೇಜಿಗೆ ಭೇಟಿ ನೀಡಿದ ವೇಳೆ ಆರೋಪಿ ಪಾಂಡುರಂಗಯ್ಯ ಎರಡು ದಿನ ರಜೆ ಹಾಕಿ ಹಿರಿಯ ಉಪನ್ಯಾಸಕರಿಗೆ ಪ್ರಭಾರ ಪ್ರಾಂಶುಪಾಲರಾಗುವಂತೆ ತಿಳಿಸಿರುವ ಪತ್ರ ಮಾತ್ರ ಪತ್ತೆಯಾಗಿದೆ. ಉಳಿದಂತೆ ಅವರದ್ದು ಅನಧಿಕೃತ ಗೈರು ಹಾಜರಿಯಾಗಿದೆ ಎಂದು ಸೋಮವಾರ  ‘ಪ್ರಜಾವಾಣಿ’ಗೆ ತಿಳಿಸಿದರು.ಈಗಾಗಲೇ ಪೊಲೀಸ್ ಠಾಣೆಗೂ ಭೇಟಿ ನೀಡಿ ಎಫ್‌ಐಆರ್ ಪಡೆದುಕೊಂಡಿದ್ದು, ಆ ಪ್ರತಿಯೂ ಸೇರಿದಂತೆ ಸೂಕ್ತ ದಾಖಲೆಯೊಂದಿಗೆ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಿ ಇಲಾಖೆ ನಿರ್ದೇಶನಾಲಯಕ್ಕೆ ಪತ್ರ ಬರೆಯಲಾಗಿದೆ. ಅವರನ್ನು ಅಮಾನತು ಮಾಡುವ ಅಧಿಕಾರ ಇಲಾಖೆ ನಿರ್ದೇಶಕರಿಗೆ ಹೊರತಾಗಿ ನನಗಿಲ್ಲ ಎಂದರು.ಎಫ್‌ಐಆರ್ ಮಾಹಿತಿ ಪ್ರಕಾರ ಲೈಂಗಿಕ ಕಿರುಕುಳ ಅನುಭವಿಸಿರುವ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಕೇವಲ ವಿದ್ಯಾರ್ಥಿನಿ ಮಾತ್ರವಲ್ಲ. ಅಪ್ರಾಪ್ತೆ. ಹೀಗಾಗಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಪ್ರಾಂಶುಪಾಲರಿಗೆ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ದೊರೆಯುವುದಿಲ್ಲ ಎಂದ ಅವರು, ಈಗಾಗಲೇ ಕಾಲೇಜಿನಲ್ಲಿ ಎಲ್ಲ ದಾಖಲೆಯ ಪಂಚನಾಮೆ ನಡೆಸಿ ಪ್ರಾಂಶುಪಾಲ ಹುದ್ದೆ ವಹಿಸಿಕೊಂಡು ಕಾರ್ಯ ನಿರ್ವಹಿಸುವಂತೆ ಅಲ್ಲಿಯ ಹಿರಿಯ ಉಪನ್ಯಾಸಕರಿಗೆ ಸೂಚಿಸಲಾಗಿದೆ ಎಂದರು.ಸತ್ಯಮೇವ ಜಯತೆ: ಪ್ರಕರಣಕ್ಕೆ ಸಂಬಂಧಿಸದಂತೆ ಜಾತಿ, -ರಾಜಕೀಯ ಒತ್ತಡಗಳು ಇದ್ದು, ಸತ್ಯಮೇವ ಜಯತೆ ಎಂದು ನಂಬಿ ಎಲ್ಲಾ ಮಾಹಿತಿಯನ್ನು ನಿರ್ದೇಶನಾಲಯಕ್ಕೆ ರವಾನಿಸಿದ್ದೇನೆ.ಇದರ ಜತೆಗೆ ಮಹಿಳಾ ಆಯೋಗ, ಮಕ್ಕಳ ಆಯೋಗ ಸೇರಿದಂತೆ ಮತ್ತಿತರ ಸಂಘ-ಸಂಸ್ಥೆಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಕೋರಿದ್ದು, ಮಂಗಳವಾರ ಕಳುಹಿಸಲಿದ್ದೇನೆ ಎಂದು ಡಿಡಿಪಿಐ ಜಯಪ್ರಕಾಶ್‌ ತಿಳಿಸಿದರು.

ಪ್ರತಿಕ್ರಿಯಿಸಿ (+)